ಅಪ್ಪ ಬೆಳಗಿನ ಜಾವ ಕಸ ಗುಡಿಸುವಾಗ
ಅಂಗಳದ ತುಂಬಾ ಬಾಗಿದ ಪೊರಕೆಯ ಗೀಟುಗಳು
ಅಂಗಳವ ಕತ್ತರಿಸಿ ನಿಲ್ಲಿಸಿದರೆ ಅದೊಂದು ಕಾಲಾಕೃತಿ
ರಭಸದ ಬಿರುಗಾಳಿ, ಭೋರ್ಗರೆತ ಮಳೆ
ಅಪ್ಪನ ಮಾತಿನ ವೇಗದ ರೈಲು
**
ಸೇತುವೆ ಅಡಿ ನೀರ ನಡಿಗೆ ನಿಧಾನ
ತೇಲಿ ಹೋಗುತಿರುವ ಹಸಿದ ದೋಣಿಗಳಿಗೆ
ಮೊಲೆಯೂಡಿಸುವ ಅವ್ವ
ಬೀಸಿದ ಬಲೆಗೆ ಬೀಳಲಿರುವ ಮೀನುಗಳ
ಮೈದಡವಿ ಮಾತನಾಡಿಸುವುದರಲ್ಲಿ ಮಗ್ನ
**
ಮಳೆ ಬಳ್ಳಿಯ ಹಿಡಿದು ಜೋಕಾಲಿ ಕಟ್ಟಿ ಮಲಗಿ
ನಿದ್ದೆ ಮಾಡುವ ಕನಸ ಹೊತ್ತ ರೈಲಿಗೆ ಎಂಥಾ ಅವಸರ
ಮಿಂಚನ್ನು ಹಿಂದಿಕ್ಕಿ ಓಡುವ ತವಕ
ಆಕಾಶವನ್ನೂ ಸೀಳುವ ರಭಸವೇತಕ್ಕೋ ಈ ರೈಲಿಗೆ..
ಬಾನಿನಾಚೆಯೂ ಹಳಿಯ ಹಾಕಿದವರಾರೋ.
ಅಲ್ಲೊಂದು ದೇವರ ನಿಲ್ದಾಣವಿರಬಹುದೇ?
**
ಅವನ ಸೇರಬೇಕೆನ್ನುವ ಅವಳ ಪ್ರೀತಿಗೆ ಅದೆಂತಹ ಶಕ್ತಿಯೋ.
ರೈಲನ್ನೇ ಇಷ್ಟು ವೇಗದಲ್ಲಿ ಕರೆದೊಯ್ಯುತ್ತಿದೆ..
ಪ್ರಯಾಣ ತಂಪಾಗಿರಲಿ, ಮಿಂಚು ಕಾಯುತಿರಲಿ, ಗಾಳಿ ನೇವರಿಸಲೆಂದು
ಯಾವ ಕಾಲದಿಂದ ದೇವರಿಗೆ ಮೊರೆ ಇಟ್ಟಿದ್ದನೋ ಅವನು
ಅವಳು ರೈಲು ಹತ್ತಿದಾಕ್ಷಣ ಮೋಡ ನಲಿನಲಿದು ಮಳೆಯಾಗಿ ಸುರಿಯತೊಡಗಿತು..
ಗಾಳಿ ಮತ್ತೇರಿ ಅವಳ ಕೂದಲ ನೇವರಿಸಲೆಂದು ಹುಚ್ಚು ಹಿಡಿದ ಹಾಗೆ ಬೀಸಿ
ಸನಿಹದಲಿ ಹೆಜ್ಜೆ ಸಪ್ಪಳವಿರದಂತೆ ಮೆಲ್ಲಗೆ ದಾಟುತ್ತಿದೆ..
**
ದೂರದ ನಿಲ್ದಾಣದಲಿ ನಿಂತವಳ ಕಾಯುವಿಕೆಗೆ ಅದೆಂತಹ ಮಾಯೆಯೋ
ತಡವಾಗಿ ತಾಳ್ಮೆಗೆಡಿಸಿ ಅವಳ ನಗೆ ಬಾಡಬಾರದೆಂಬ
ತವಕಕೆ ರೈಲು ಓಡುತ್ತಲೇ ಇದೆ
ನಾನು ಮಿಂಚನ್ನು ಹಿಂದಿಕ್ಕಿ ಓಡುವ ರೈಲಿನ ಒಳಗೆ ಕೂತು
ಸೋತ ಮಿಂಚಿನ ಮೈದಡವಿ ಸಮಾಧಾನ ಮಾಡುತ್ತಿದ್ದೇನೆ..
**
ನಾವಿಬ್ಬರೂ ಪುಟ್ಟ ದೋಣಿಯಲಿ ಕುಳಿತು
ಬಿರುಗಾಳಿ ಕೂದಲುಗಳ ಜಡೆ ಹೆಣೆದು
ಹೂ ಮುಡಿಸುವ ಸಾಹಸ ಮಾಡುತ್ತಿದ್ದೇನೆ..
ಮಳೆ ಬಳ್ಳಿಯ ಹೆಣೆದು ಬಲೆ ಮಾಡಿ
ಓಡುವ ರೈಲನ್ನು ಹಿಡಿವ ಕನಸಿಗೀಗ ಎಚ್ಚರವಾಗಿದೆ.
**
ಬಿರುಗಾಳಿಯ ರಭಸಕ್ಕೆ ಮುಳುಗಲಿರುವ ಪುಟ್ಟ ದೋಣಿಯ
ತಿರುಗಿಸಿ ಹಾಕಿದ ಗಾಂಧಿ ಟೋಪಿಯಲಿ ಮಳೆಗೆ ಶಾಂತಿ ಪಾಠ ಹೇಳುವಾಗ
ಸೀಳಿಬರುವ ರೈಲಿನ ಕರ್ಕಶ ಧ್ವನಿಯ ಕಾಲುಗಳಿಗೆ ಮುಳ್ಳು ತಾಕದಿರಲಿ
ದೋಣಿಯಲಿ ಕುಳಿತ ನಾವು ರೈಲಿನ ವೇಗದೊಂದಿದೆ ಸ್ಪರ್ಧೆ ಮಾಡಲಾರೆವು
ನೀರ ಮೇಲಣ ಪಯಣಿಸುವ ಕನಸು ಕಾಣಲು
ಹೆದರುವ ರೈಲಿನ ಬಗ್ಗೆ ನಮಗೆ ಕನಿಕರವಿದೆ..
**
ಬೆಟ್ಟವನೇರಿ ನೆಲದಲ್ಲಿ ಓಡುವ ರೈಲು ನೋಡುವಾಗಲೆಲ್ಲಾ
ನನ್ನ ಬಾಲ್ಯದ ಕೊಳಲಿಗೆ ಗಾಲಿ ಬಂದಂತೆಯೂ..
ಗೆಳತಿಗೆ ಸಂದೇಶ ಕಳಿಸುವ ಕೊಳಲ ನಾದ
ರಕ್ಕಸಿಯ ಧ್ವನಿಪೆಟ್ಟಿಗೆ ಸೇರಿ ಕೂದಲೆಳೆ ಮೈ ಆನೆಗಾತ್ರವಾದಂತೆ
ಕಣ್ಣಿಗೆ ಕಟ್ಟಿ ತಲೆತಿರುಗುತ್ತಿತ್ತು
ಸದ್ಯ ಬೆಟ್ಟದ ಪ್ರೀತಿಯ ಅಪ್ಪುಗೆಯಿಂದಾಗಿ ಬೀಳಲಿಲ್ಲವಷ್ಟೆ!
**
ನನ್ನ ಕನಸಿನ ಕ್ಯಾನ್ವಾಸಿನಲ್ಲಿ ಮೂಡಿಸಿದ ಚಿತ್ರ ಇದೇ ಎಂದಾದರೆ
ಬೆನ್ನಿಗೆ ಕಟ್ಟಿದ ನೆನಪುಗಳ ಮೂಟೆಯಲ್ಲಿ ಹರಿದ ಮಾತುಗಳಿವೆ
ನನ್ನ ದೇಶದ ಸಂಪತ್ತು ಕೊಳ್ಳೆಯಾದದ್ದೂ ಇದೇ ರೈಲಿನಲ್ಲಿ..
ಇಷ್ಟು ವೇಗದ ಓಡಾಟದಲ್ಲಿ ಅದೆಷ್ಟು ಸಂಪತ್ತು ಕರಗಿ ಹೋಯಿತೋ
ಭಾರತವ್ವನಿಗೂ ಲೆಕ್ಕ ಸಿಕ್ಕಂತಿಲ್ಲ..ಸಿಕ್ಕಿಬಿದ್ದ ಕಳ್ಳ ಜೀವಭಯದಿಂದ ಓಡುವಂತಿದೆ ಈ ರೈಲಿನ ವೇಗ
**
ದೇವರಿಗೆ ನೀರ ಗುಳ್ಳೆ ಹಳಿಯ ಮೇಲೆ ರೈಲಿನೋಟದ ಕನಸು ಬಿದ್ದು
ಕಳವಳಗೊಂಡು ಮನುಷ್ಯನಾಗುವ ಕಸರತ್ತು ಮಾಡುತ್ತಿದೆ
ದಟ್ಟ ಗಾಳಿಯ ತುದಿಗೆ ಕತ್ತಿಯ ಮೊನಚು ಬಂದದ್ದು
ಕನಸಲ್ಲವೆಂದು ಬೆದರಿ ಪುಟ್ಟ ಮೊಲ ಓಡುತಿದೆ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.