ADVERTISEMENT

ನೃತ್ಯ ನಾಟಕ ಕಲೆ ಕೂಡಿಯಾಟ್ಟಂ

ಮಿನುಗು ಮಿಂಚು

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 19:59 IST
Last Updated 20 ಜುಲೈ 2013, 19:59 IST
ನೃತ್ಯ ನಾಟಕ ಕಲೆ ಕೂಡಿಯಾಟ್ಟಂ
ನೃತ್ಯ ನಾಟಕ ಕಲೆ ಕೂಡಿಯಾಟ್ಟಂ   

ಕೂಡಿಯಾಟ್ಟಂ ಎಂದರೇನು?
ಕೇರಳದ ಪ್ರಾಚೀನ ನೃತ್ಯ ನಾಟಕದ ಪ್ರಕಾರ ಇದು. ಪ್ರಮುಖ ದೇವಸ್ಥಾನಗಳ ಪ್ರಾಂಗಣದಲ್ಲಿ ಇರುವ ರಂಗಮಂಟಪದಲ್ಲಿ ಈ ನೃತ್ಯ ನಾಟಕ ಪ್ರದರ್ಶಿಸುವುದು ಹೆಚ್ಚು. ರಂಗಮಂಟಪವನ್ನು ಕೇರಳಿಗರು `ಕುಟ್ಟಂಬಲಂ' ಎಂದು ಕರೆಯುತ್ತಾರೆ. ಕೂಡಿಯಾಟ್ಟಂ ನೃತ್ಯ ನಾಟಕೋತ್ಸವವು 16 ದಿನಗಳ ಕಾಲ ನಡೆಯುತ್ತದೆ.

ಅದು ಶುರುವಾದದ್ದು ಯಾವಾಗ?
ಸುಮಾರು ಕ್ರಿ.ಶ. 9ನೇ ಶತಮಾನದಲ್ಲಿ ಈ ಕಲೆಯು ಹುಟ್ಟಿತು. ಪ್ರದರ್ಶನ ಕಲಾವಿದರ ಮುಖಂಡ ಕತೆ ಹೇಳುವ ಕ್ರಮವನ್ನು `ಕೂತ್ತು' ಎಂದು ಕರೆಯುತ್ತಾರೆ. ಕತೆ ಹೇಳುವ ಮುಖಂಡವನ್ನು `ಚಾಕ್ಯಾರ್' ಎನ್ನುತ್ತಾರೆ. ಖುದ್ದು ನಟ, ನಾಟಕಕಾರನಾಗಿದ್ದ ಪೆರುಮಾಳ್ ದೊರೆ ಕುಲಶೇಖರ ಹಾಗೂ ಅವನ ಆಸ್ಥಾನದಲ್ಲಿದ್ದ ಮಂತ್ರಿ, ಕವಿ ತೋಲನ್ `ಕೂತ್ತು' ಕಲೆಯನ್ನು ಕೂಡಿಯಾಟ್ಟಂ ಆಗಿ ಪರಿವರ್ತಿಸಿದವರಲ್ಲಿ ಪ್ರಮುಖರು.

ಈ ನೃತ್ಯ ನಾಟಕದಲ್ಲಿ ಎಂತೆಂಥ ನೃತ್ಯಗಳನ್ನು ಪ್ರದರ್ಶಿಸುತ್ತಾರೆ?
ಪುರಾಣಗಳ ಹಲವು ಕತೆಗಳನ್ನು ಪ್ರದರ್ಶಿಸುತ್ತಾರೆ. ಪುರುಷ ಪಾತ್ರಗಳನ್ನು ಚಾಕ್ಯಾರ್‌ಗಳು ನಿರ್ವಹಿಸಿದರೆ, ಚಾಕ್ಯಾರ್‌ಗಳ ಪತ್ನಿಯರಾದ ನಂಗ್ಯಾರ್‌ಗಳು ಮಹಿಳಾ ಪಾತ್ರಗಳನ್ನು ಕಳೆಗಟ್ಟಿಸುತ್ತಾರೆ. ಸಂಸ್ಕೃತ ಹಾಗೂ ಮಲಯಾಳಿ ಭಾಷೆಯಲ್ಲಿ ಈ ನೃತ್ಯ ನಾಟಕಗಳಿವೆ. ಬಾಯಿಂದ ಬಾಯಿಗೆ ಹರಿದುಬಂದ ಕಲೆ ಇದು. ವಿದೂಷಕನ ಪಾತ್ರ ತುಂಬಾ ಆಸಕ್ತಿ ಕೆರಳಿಸಿರುವಂಥದ್ದು. ನಾಯಕನ ಸಂಸ್ಕೃತ ಸಂಭಾಷಣೆಯನ್ನು ಅವನು ಮಲಯಾಳ ಭಾಷೆಯಲ್ಲಿ ವಿವರಿಸುತ್ತಾನೆ. ತನ್ನ ಪ್ರಿಯೆಯನ್ನು ಹೊಗಳಲು ನಾಯಕ ಹೇಳುವ ಪದ್ಯಗಳನ್ನು ಅಣಕು ಮಾಡಿ ವಿದೂಷಕ ಬೇರೆಯದೇ ಪದ್ಯ ಹೇಳಿ ರಂಜಿಸುವುದೂ ಇದೆ.

ADVERTISEMENT

ಕೂಡಿಯಾಟ್ಟಂನ ದೊಡ್ಡ ಹೆಸರು ಯಾವುದು?
ಅಮ್ಮನ್ನೂರ್ ಮಾಧವ ಚಕ್ಯಾರ್.

ಈಗ ಕೂಡಿಯಾಟ್ಟಂ ಎಷ್ಟು ಜನಪ್ರಿಯ?
ಇತರೆ ನೃತ್ಯ ಪ್ರಕಾರಗಳು ಜನಪ್ರಿಯವಾಗಿರುವ ಈ ದಿನಮಾನದಲ್ಲಿ ಇದು ತನ್ನ ಮೊದಲ ಆಕರ್ಷಣೆಯನ್ನು ಕಳೆದುಕೊಂಡಿದೆ. ಅದರಲ್ಲೂ ಕಥಕ್ಕಳಿ ಜನಪ್ರಿಯವಾದ ನಂತರ ಕೂಡಿಯಾಟ್ಟಂ ಹಿಂದೆ ಸರಿಯಿತು. ಕೂಡಿಯಾಟ್ಟಂ ಪಾರಂಪರಿಕ ನೃತ್ಯ ಪ್ರಕಾರ ಎಂದು ಯುನೆಸ್ಕೋ ಘೋಷಿಸಿರುವುದರಿಂದ ಮುಂದೆ ಅದು ಮರಳಿ ತನ್ನ ವೈಭವ ಪಡೆಯುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.