ADVERTISEMENT

ಪವಿತ್ರ ಕಣಿವೆಯ ದಾರಿಯಲ್ಲಿ...

ಎಚ್.ಎಸ್.ಅನುಪಮಾ
Published 10 ಜೂನ್ 2017, 19:30 IST
Last Updated 10 ಜೂನ್ 2017, 19:30 IST
ಪವಿತ್ರ ಕಣಿವೆಯ ವಿಹಂಗಮ ನೋಟ
ಪವಿತ್ರ ಕಣಿವೆಯ ವಿಹಂಗಮ ನೋಟ   

ಕ್ಷಿಣ ಅಮೆರಿಕಾ, ಪೆರು ಅಂದಕೂಡಲೇ ಇಂಕಾ ಸಾಮ್ರಾಜ್ಯ ನೆನಪಾಗುತ್ತದೆ. ಪವಿತ್ರ ಕಣಿವೆಯ ಹೆಸರು ನೆನಪಿನಲ್ಲಿ ತೇಲಿಹೋಗುತ್ತದೆ. ಏನಿದು ಪವಿತ್ರ ಕಣಿವೆ? ಆಂಡೀಸ್ ಪರ್ವತಶ್ರೇಣಿಯ ಉರುಬಂಬಾ, ವಿಲ್ಕಮಾಯು, ವಿಲ್ಕನೋಟಾ ನದಿಗಳ ಕಣಿವೆ ಪ್ರದೇಶ ‘ಪವಿತ್ರ’ ಆದದ್ದು ಏಕೆ?
ಪವಿತ್ರವನ್ನು ತಿಳಿಯುವುದು ಸುಲಭವೇ? ಅದಕ್ಕೆ ಪಂಚೇಂದ್ರಿಯಗಳನ್ನು ಮುಕ್ತವಾಗಿ ತೆರೆದಿಟ್ಟುಕೊಳ್ಳಬೇಕು. ಸುತ್ತಲನ್ನು ನಿನ್ನೆ ನಾಳೆಯೊಂದಿಗೆ, ಅದರೆಲ್ಲ ಅಂದಚಂದ ಬಣ್ಣಗಳೊಂದಿಗೆ ಒಳಗಿಳಿಸಿಕೊಳ್ಳಬೇಕು. ಹಾಗೊಂದು ಸಣ್ಣಪ್ರಯತ್ನವಾಗಿ ಇಂಕಾ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಆಂಡೀಸ್ ತಪ್ಪಲಿನ ಕೊಸ್ಕೊ ನಗರ, ಅದರ ಬುಡದ ಆ ಕಣಿವೆಯಲ್ಲಿ ಕೆಲಕಾಲ ಸುಳಿದಾಡಿದೆವು.

ಪೆರು ಕೃಷಿಕರ ದೇಶ. ಕೊಸ್ಕೊ ಪೆರುವಿನ ಧಾನ್ಯ ಕಣಜ. ಕೃಷಿಯೇ ಅಲ್ಲಿನ ಸಂಸ್ಕೃತಿ. ಕೃಷಿಯೇ ಜೀವನಾಡಿ. ಭೂಮಿಯ ಹೊಕ್ಕುಳೆಂದು ಬಣ್ಣಿಸಲಾದ ಕೊಸ್ಕೊ ಸಮುದ್ರಮಟ್ಟದಿಂದ 11,200 ಅಡಿ ಎತ್ತರದಲ್ಲಿ, ಆಕಾಶದಲ್ಲಿದ್ದಂತೆ ಇದೆ. ಆ ದಿನ್ನೆ ಊರಿನ ಸುತ್ತಲ ಬೆಟ್ಟದ ಕಣಿವೆಗಳಲ್ಲಿ ಫಲವತ್ತಾದ ಕೃಷಿಭೂಮಿಯಿದೆ. ಸದಾ ಹರಿವ ಉರುಬಂಬಾ, ವಿಲ್ಕಮಾಯು, ವಿಲ್ಕನೋಟಾ ನದಿಗಳಿವೆ. ವಿಲ್ಕನೋಟಾ ಎಂದರೆ ಅಯ್ಮಾರಾ ಭಾಷೆಯಲ್ಲಿ ‘ಪವಿತ್ರ ನದಿ.

ವಿಲ್ಕಮಾಯು ಎಂದರೆ ಕೆಚುಆ ಭಾಷೆಯಲ್ಲಿ ನಕ್ಷತ್ರ ನದಿ. ಇವೆರೆಡೂ ಒಂದೇ ನದಿಯ ಎರಡು ಹೆಸರುಗಳು. ಅದೇ ಮುಂದೆ ಪಾತಾಕಂಚಾ ಹೊಳೆ ಕೂಡಿಕೊಂಡು ಉರುಬಂಬಾ ನದಿಯಾಗುತ್ತದೆ. ಪೂರ್ವಪಶ್ಚಿಮಕ್ಕೆ 60 ಕಿಲೋಮೀಟರು ಉದ್ದಕ್ಕೆ ಈ ನದಿಯಗುಂಟ ಇರುವ ಕಣಿವೆ ಪ್ರದೇಶವನ್ನು ಪವಿತ್ರ ಕಣಿವೆ ಎನ್ನುತ್ತಾರೆ. ಕಣಿವೆ ಪವಿತ್ರ ಏಕೆಂದರೆ ಅದು ಹವಾಮಾನ, ನೆಲದ ಫಲವತ್ತತೆ, ಸುರಕ್ಷೆ, ನೀರಿನ ಲಭ್ಯತೆಗಳಿಂದಾಗಿ ಮನುಷ್ಯ ವಾಸಕ್ಕೆ ಅತ್ಯಂತ ಸಮಂಜಸವಾಗಿರುವ ಪ್ರದೇಶ. ಅದು ಅವರ ಅನ್ನ ಬೆಳೆವ, ಅವರ ರಾಜರ ಕಾಪಿಟ್ಟ ನೆಲ.

ADVERTISEMENT

ಕೊಸ್ಕೊ-ಲೀಮಾ ಹೈವೇಯಲ್ಲಿ ಕೊಸ್ಕೊನಿಂದ ಮಾಚುಪಿಚು ಕಡೆಗೆ ಹೋಗುವಾಗ ಪವಿತ್ರ ಕಣಿವೆಯ ಮೇಲೇ ಹಾದು ಹೋಗಬೇಕು. ಕೊಸ್ಕೊ ದಾಟುತ್ತಿದ್ದ ಹಾಗೆ ರಸ್ತೆಯ ಎರಡೂ ಕಡೆ ನೋಡಿದಷ್ಟು ದೂರದವರೆಗೂ ಹಸಿರು ಹೊದ್ದು ಬಣ್ಣಬಣ್ಣದ ಹೂ ಮುಡಿದ ವಿಸ್ತಾರ ಹೊಲಗಳು, ಮೆಟ್ಟಿಲುಗಳ ಕಡೆದುಕೊಂಡು ನಿಂತ ಬೃಹದಾಕಾರದ ಪರ್ವತಗಳು ಎದುರುಗೊಂಡವು. ಒಂದಿಂಚು ನೆಲವನ್ನೂ ಪಾಳು ಬಿಡದೇ, ನೆಲದ ಮೇಲ್ಮೈಯ ಉಬ್ಬುತಗ್ಗುಗಳಿಗೆ ಸರಿಯಾಗಿ ಹೊಲದ ಹಾಳೆಗಳು ಹರಡಿಕೊಂಡಿದ್ದವು.

ರೇಖಾಗಣಿತದ ಆಕೃತಿಗಳನ್ನು ಹಸಿರಿನಿಂದ ನೆಲದ ಮೇಲೆ ಬರೆದಂತೆ ಬಯಲು ಕಂಗೊಳಿಸುತ್ತಿತ್ತು. ಹಸಿರು ಸಮೃದ್ಧಿಗೆ ಮೈಮರೆತು ಹೀಗೇ ಒಂದಷ್ಟು ದೂರ ಕ್ರಮಿಸಿದ ಮೇಲೆ ನಿರ್ಜನ ಬೆಟ್ಟದ ತುತ್ತತುದಿಯ ಒಂದು ಬಿಂದು ಮುಟ್ಟಿದೆವು. ಕಣ್ಣೆದುರು ಅಜೇಯವೆಂಬಂತೆ ಉದ್ದಾನುದ್ದ ಹರಡಿದ ಬೃಹತ್ ಪರ್ವತ ಸಾಲು. ಬೆಟ್ಟಗಳ ಇಳಿಜಾರುಗಳಲ್ಲಿ, ತಪ್ಪಲ ಬಯಲಲ್ಲಿ ಬೆಳೆದುನಿಂತ ವೈವಿಧ್ಯಮಯ ಹೊಲಗಳು. ಬಣ್ಣಬಣ್ಣದ ಇರುವೆಗಳಂತೆ ಚಲಿಸುವ ಮೋಟುಲಂಗ ಹಾಕಿದ ಎರಡು ಜಡೆಯ ಹೆಂಗಸರು. ಲಾಮಾ, ಅಲ್ಪಾಕ, ಕುರಿ ಹಿಂಡುಗಳ ಮೇಯಿಸುವ ಹುಡುಗರು, ಅವರ ಜೊತೆಗೇ ಹಿಂಡಿನಿಂದ ಅಷ್ಟು ದೂರದಲ್ಲಿ ಜೂಲು ನಾಯಿಗಳು.

ಬೀಸುವ ಸುಂಯ್ಞ್ ಎಂಬ ಗಾಳಿಸದ್ದಿನ ಹೊರತು ನೆಲಬಯಲುಗಳ ಯಾವ ಶಬ್ದಗಳೂ ಕೇಳದ ಎತ್ತರ. ಈ ಬೆಟ್ಟಗಳಾಚೆ ಅಕೋ ಇನ್ನಷ್ಟು ಎತ್ತರದಲ್ಲಿ ಹಿಮ ಹೊದ್ದ ಆಂಡೀಸ್ ಶ್ರೇಣಿ.. ಯಾರು ನೋಡಲಿ, ಬಿಡಲಿ, ಉಪಕ್ರಮಿಸಲಿ, ಅತಿಕ್ರಮಿಸಲಿ, ಬಾವುಟ ಹಾರಿಸಲಿ, ಬೇಲಿ ಹಾಕಿಕೊಳ್ಳಲಿ - ತಾನು ಮಾತ್ರ ತಾನಿರುವ ಹಾಗೆಯೇ ಇರುವ; ಹಾಗಲ್ಲದಿದ್ದರೆ ಇಲ್ಲವಾಗುವೆನೆನುವ ಪ್ರಕೃತಿ! ಪರ್ವತಗಳೆದುರು ನಿಂತಾಗ ಈ ಎಲ್ಲ ಸಹಸ್ರಮಾನಗಳಲ್ಲಿ ಅಲ್ಲಿ ಬದುಕಿದ, ಆಡಿ ನಲಿದ, ರಕ್ತ ಹರಿಸಿದ, ಸೋತ, ಗೆದ್ದ, ಜನಸಮುದಾಯಗಳ ಚೇತನ; ಅವರ ಬದುಕಿನ ಸತ್ಯ-ಸೌಂದರ್ಯಗಳು ಕಣ್ಣೆದುರು ಬಂದು ನಿಂತಂತಾಯಿತು. ಇರುವುದ ಇರುವ ಹಾಗೇ ಅರಿಯುವ ಅರಿವು ಕೊಡು ಎಂದು ಮನಸು ಆರ್ತವಾಗಿ ಪ್ರಾರ್ಥಿಸಿತು.

ಎಲ್ಲೇ ಹೋದರೂ, ಎಷ್ಟು ಬಾರಿ ನೋಡಿದರೂ ಪರ್ವತಗಳೆದುರು ನಿಂತರೆ ಒಳಗೊಂದು ಅಂತಃಸ್ಫುರಣೆಯುಂಟಾಗುತ್ತದೆ. ಪ್ರಕೃತಿಯಲ್ಲಿ, ಅದರ ಸೌಂದರ್ಯದಲ್ಲಿ, ಅದು ಹೇಳುವ ಸತ್ಯದಲ್ಲಿ ನೀನು ಲೀನವಾಗು; ‘ಸ್ವ’ವನ್ನು ಕಳೆದುಕೊ ಎಂದು ಯಾರೋ ಪಿಸುಗುಡುವ ಭಾಸವಾಗುತ್ತದೆ. ಘಟ್ಟಕಣಿವೆಯೆದುರು, ಜಲಪಾತದೆದುರು ಮಾತು ಮರೆತು ಹೋಗಿ ಇದು ಅನುಭವಕ್ಕೆ ನಿಲುಕುತ್ತದೆ. ಅವತ್ತು ಅಲ್ಲಿ, ಆ ಕ್ಷಣದಲ್ಲಿ, ಪವಿತ್ರ ಕಣಿವೆಯ ಪರ್ವತ ದೃಶ್ಯ ತನ್ನ ಮನಮೋಹಕ, ಘನತೆವೆತ್ತ ಸೌಂದರ್ಯದಿಂದ ಒಳಹೊರಗುಗಳ ತುಂಬಿಕೊಂಡಿತು. ‘ನಾನು’ ಕರಗಿ ಹರಡಿ ಆವಿಯಾದಂತೆನಿಸಿತು.

ಆಗ, ಅರೆ, ಈಗ ಬಿಸಿಲಿದ್ದದ್ದು ಈಗ ಮೋಡವಾಗಿ ಆವರಿಸಿ ಸೋನೆಮಳೆ ಶುರುವಾಗಿಬಿಟ್ಟಿತು. ಅದೋ ಅದೋ, ನೋಡನೋಡುವುದರಲ್ಲಿ ಕಾಮನಬಿಲ್ಲು ಕಣ್ಣೆದುರು ಅರಳಿಬಿಟ್ಟಿತು. ಸುತ್ತಲ ಪರ್ವತಗಳ ಚೂಪಾದ ಶಿಖರಗಳ ತುದಿಯಿಂದ ನೆಲದವರನ್ನು ಮಾತನಾಡಿಸಲು ಇಳಿದು ಬಂದವೋ ಎನ್ನುವಂತೆ ಮೋಡಗಳು ಸರಸರ ಕೆಳಗಿಳಿಯತೊಡಗಿದವು. ಮೆಲ್ಲನೆ ಬೀಸುವ, ಒಳಗೆಲ್ಲ ನಡುಕ ಹುಟ್ಟಿಸುವ ತಣ್ಣನೆಯ ಗಾಳಿ, ಸಣ್ಣ ಮಳೆ, ದೂರದ ಶಿಖರಗಳ ಮೇಲೆ ನೆರಳುಬಿಸಿಲಿನ ಆಟವಾಡುತ್ತಿರುವ ಸೂರ್ಯ.

ಕಣ್ಣು ಹಾಯಿಸಿದಲ್ಲೆಲ್ಲ ಕಾಣುವ ಹಸಿರು

ಇಲ್ಲಿ ದೇವರಿರದೆ ಇನ್ನೆಲ್ಲಿರಲು ಸಾಧ್ಯವಿದೆ? ಇಂಥ ಬೃಹತ್ತನ್ನು ನಮ್ಮೆದುರು ತೆರೆದಿಡುವ ಪ್ರಕೃತಿಗಿಂತ ಇನ್ನಾವ ದೇವರಿರಲು ಸಾಧ್ಯವಿದೆ? ಈ ಸಾಕ್ಷಾತ್ಕಾರವನ್ನು ಹುಲುಮಾನವರಲ್ಲಿ ಮೂಡಿಸುವ ಇದು ಪವಿತ್ರ ಕಣಿವೆಯೇ ಸೈ.

ನಾವು ರಸ್ತೆಮೇಲೆ ಚಲಿಸತೊಡಗಿದಂತೆ ನಮ್ಮ ಮುಂದೆಮುಂದೆ ಕಾಮನಬಿಲ್ಲೂ ಚಲಿಸತೊಡಗಿತು. ನಿಜ, ನಂಬಿ. ಅದೋ, ಅಲ್ಲೇ ರಸ್ತೆ ಮೇಲೇ ಅದರ ಬುಡ ಇತ್ತು! ಈಗ ಇನ್ನೇನು ನಮ್ಮ ವಾಹನ ಈ ಬೆಟ್ಟದ ಬುಡಕ್ಕೆ, ಕಾಮನಬಿಲ್ಲಿನೊಳಗೇ ಹೋಗುತ್ತದೆ ಎಂಬ ರೋಮಾಂಚನದೊಂದಿಗೆ ಮುಂಬರಿದೆವು. ಆದರೆ ಎಷ್ಟು ದೂರ ಚಲಿಸಿದರೂ ಕಾಮನಬಿಲ್ಲು ನಮ್ಮಿಂದ ಅಷ್ಟೇ ಮುಂದೆ ಚಲಿಸುತ್ತಿತ್ತು. ಎಂದೂ ಮುಟ್ಟಲಾಗದ, ಎಂದೂ ಕಣ್ಮರೆಯೂ ಆಗದ ಕ್ಷಿತಿಜದಂಚಿನಂತೆಯೇ ನಿಲುಕದಾಯಿತು..

ಈ ಅದ್ಭುತ ರಮ್ಯ ಪ್ರಕೃತಿಯನ್ನೂ, ಸಕಲ ಚರಾಚರಗಳನ್ನೂ ಸೃಷ್ಟಿಸಿ ಪೊರೆವ ಪಚಮಾಮಾ, ವಿರಕೋಹಾ, ನಿಮಗೆ ಶರಣು..
ಈ ಚೆಲುವ ಭೂಮಿಯನ್ನೂ; ಸೂರ್ಯ, ಚಂದ್ರ, ಮುಗಿಲು, ತಾರೆಯರನ್ನೂ; ಮಳೆ,ಗುಡುಗು ಸಿಡಿಲನ್ನೂ; ಪವಿತ್ರ ನದಿಯನ್ನೂ ಸೃಜಿಸಿದ ವಿಶ್ವಹೃದಯವೇ ನಿನಗೆ ಶರಣು ಶರಣು..

ಅಡರುವ ಕಾಡಿನ ಪರಿಮಳ
ಚಿಟಿಕೆ ಸದ್ದೂ ಮಾರ್ದನಿಗೊಳುವ
ರಮ್ಯ ಏಕಾಂತ, ನಿಶ್ಶಬ್ದ.

ಹಕ್ಕಿಯನ್ನು ಹಾವನ್ನು
ಬೆಟ್ಟದ ಹುಲಿಯನ್ನು
ಪೂಜಿಸುವವರ ನಡುವೆ ನಿಂತಿದ್ದೇನೆ

ನೆಲಮುಗಿಲ ಚೆಲುವು ದೇಹಆತ್ಮಗಳ ಬೆಸೆದಿದೆ
ಎದೆ ತುಂಬಿರುವ ಕುಂದಿರದ ಈ ಚೆಲುವೆಲ್ಲ
ಭಾರತೀ, ನೀನಿತ್ತ ಮೊದಲ ಉಸಿರಿಗೇ ಅರ್ಪಣೆ

ಯಾವುದೋ ಆದಿಮ ಲೋಕದ
ಧೂಳಿನ ನಡುವೆ ಪಾದ ಚಲಿಸುವಾಗಲೂ
ನೋಟ ನಿನ್ನೊಳಗೇ ಇದೆ

ಎಷ್ಟು ಸಾವಿರ ಮೈಲು ದೂರವಿದ್ದರೇನು
ನಿನ್ನ ನೆನೆಯದಿರಬಹುದೇ ನಾನು?
ರಾಜರ ಹೊಲ ಪಿಸಾಕ್
ಕೊಸ್ಕೊನಿಂದ ಘಟ್ಟ ಇಳಿದಿಳಿದು ಕೆಳಬಂದೆವು. ಪವಿತ್ರ ಕಣಿವೆಯಲ್ಲಿ ಮೊದಲು ವಿಲ್ಕನೋಟಾ ನದಿ ಸಿಕ್ಕಿತು. ಅದರ ಎರಡೂ ದಂಡೆಗಳಲ್ಲಿ ಏ..ತ್ತರ ಬೆಳೆದುನಿಂತ ಮೆಕ್ಕೆಜೋಳದ ಹೊಲಗಳಿದ್ದವು. ಆ ಊರು ಪಿಸಾಕ್.

ಒಂದೊಂದು ಸ್ಥಳೀಯ ಬುಡಕಟ್ಟು ಕುಲ ಗೆದ್ದ ಮೇಲೂ ಇಂಕಾಗಳು ಅಲ್ಲೊಂದೊಂದು ಊರು ಕಟ್ಟಿದರು. ಹಾಗೆ 1440ರಲ್ಲಿ ಕುಯೊ ಕುಲದ ಮೇಲಿನ ವಿಜಯದ ನಂತರ ಕಟ್ಟಿದ ಊರು ಇದು. ಚಿಂಚೆರೊ, ಒಲ್ಲಂಟಾಯ್ ಟ್ಯಾಂಬೊಗಳ ಹಾಗೆ ಫಲವತ್ತಾದ ಈ ಪ್ರದೇಶ ಇಂಕಾರಾಜನ ವೈಯಕ್ತಿಕ ಆಸ್ತಿಯಾಗಿತ್ತು. ಇಲ್ಲಿಯ ಮೆಕ್ಕೆಜೋಳ ಅತ್ಯಂತ ಪ್ರಸಿದ್ಧ ಮತ್ತು ತುಟ್ಟಿ. ಪಿಸಾಕ್ ಕಾರ್ನ್ ಬಗ್ಗೆ ಕೇಳಿನೋಡಿ, ಪೆರುವಿಯನರು ಅದರ ಗುಣಗಳ ಬಗ್ಗೆ ಹಾಡು ಕಟ್ಟಿ ಒಂದೇ ಸಮ ಹಾಡತೊಡಗುತ್ತಾರೆ.

ಕ್ರಿ. ಶ. 1530ರಲ್ಲಿ ಸ್ಪ್ಯಾನಿಶ್ ದಾಳಿಕೋರ, ಕೊನೆಯ ಇಂಕಾನನ್ನು ಮೋಸದಿಂದ ಕೊಂದ ಫ್ರಾನ್ಸಿಸ್ಕೊ ಪಿಜಾರೊ ಪಿಸಾಕನ್ನು ನಾಶಪಡಿಸಿದ್ದ. 1570ರಲ್ಲಿ ವೈಸರಾಯ್ ಟಾಲೆಡೊ ಮತ್ತೆ ಕಟ್ಟಿದ. ಈಗ ಅದು ತನ್ನ ಮಾರುಕಟ್ಟೆಗೆ, ಸಂತೆಗೆ ಪ್ರಖ್ಯಾತ. ವಾರಕ್ಕೆ ಮೂರು ದಿನ ಅಲ್ಲಿ ಸಂತೆ ನೆರೆಯುತ್ತದೆ. ಅದರಲ್ಲಿ ವ್ಯಾಪಾರ ಮಾಡಲು ಕೊಸ್ಕೊದಿಂದಲೂ ವ್ಯಾಪಾರಿಗಳು, ಪ್ರವಾಸಿಗರು ಬರುವರಂತೆ; ಅದು ಇಂಕಾ ಕಾಲದಿಂದಲೂ ಹಳ್ಳಿಗರು ಸಂತೆಯಲ್ಲಿ ಸಾಮಾನು ಮಾರುವ ಜಾಗವಾಗಿತ್ತಂತೆ. ನಾವೂ ಪಿಸಾಕ್ ಮಾರ್ಕೆಟ್ ಪ್ರವೇಶಿಸಿದೆವು. ಕಣ್ಣಿಗೆ ರಸದೌತಣ.. ಪರ್ಸಿಗೆ ಕನ್ನ!

ಒಲ್ಲಂಟಾಯ್ ಟ್ಯಾಂಬೊ
ಕೊಸ್ಕೊನಿಂದ 60 ಕಿಮೀ ದೂರದಲ್ಲಿ, ಸಮುದ್ರಮಟ್ಟದಿಂದ 2500 ಮೀಟರ್ ಎತ್ತರದಲ್ಲಿ, ಪಾತಾಕಂಚಾ ಎಂಬ ಪುಟ್ಟನದಿ ವಿಲ್ಕನೋಟಾ ನದಿಯನ್ನು ಸೇರುವಲ್ಲಿ ಒಲ್ಲಂಟಾಯ್ ಟ್ಯಾಂಬೊ ಎಂಬ ವಿವಿಧೋದ್ದೇಶ ಹೊತ್ತ ಇಂಕಾಗಳ ಊರು ಇದೆ. ಅದು ಆಡಳಿತಾತ್ಮಕ, ರಕ್ಷಣಾತ್ಮಕ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಕೇಂದ್ರವಾಗಿದ್ದದ್ದು.

ಪಚಕುಟಿ ಎಂಬ ಇಂಕಾರಾಜನ ಕಾಲದಲ್ಲಿ ದೊರೆಯ ಖಾಸಗಿ ಜಮೀನಾಗಿ ರೂಪುಗೊಂಡ ಸ್ಥಳಗಳಲ್ಲಿ ಇದೂ ಒಂದು. ಟ್ಯಾಂಬೊ ಕುಲದವರ ಗೆದ್ದು ಪಚಕುಟಿ ಒಲ್ಲಂಟಾಯ್ ಟ್ಯಾಂಬೊ ಅಭಿವೃದ್ಧಿಪಡಿಸಿದ. ಅಲ್ಲಿ ಜಗಲಿ ಕೃಷಿ, ಮೆಟ್ಟಿಲು ಕೃಷಿ ಪದ್ಧತಿಯನ್ನು ಜಾರಿಗೊಳಿಸಿದ. ಹೊಸಹೊಸ ಕಟ್ಟಡಗಳ ಕಟ್ಟಿದ. ಪೂಜಾಸ್ಥಳ, ಶಸ್ತ್ರಾಸ್ತ್ರ ಸಂಗ್ರಹಾಗಾರ, ಧಾನ್ಯ ಸಂಗ್ರಹಾಗಾರಗಳನ್ನು ಹತ್ತಿರ ಇರುವ ಬೆಟ್ಟಗಳ ಮೇಲೆ ರೂಪಿಸಿದ.

ರಾಜಧಾನಿ ಕೊಸ್ಕೊಗಿಂತ ಹೆಚ್ಚು ಉರುಬಂಬಾ ಕಣಿವೆಯಲ್ಲಿ ತಾನು ಕಟ್ಟಿದ ಈ ನಗರದಲ್ಲಿಯೇ ಪಚಕುಟಿ ಇರುತ್ತಿದ್ದ. ಸ್ಪ್ಯಾನಿಶ್ ಆಕ್ರಮಣದ ನಂತರ ಮ್ಯಾಂಕೊ ಎಂಬ ಕೊನೆಗಾಲದ ಇಂಕಾರಾಜ ಮತ್ತೊಮ್ಮೆ ಕಟ್ಟಹೊರಟ ಹೊಸ ಇಂಕಾ ಸಾಮ್ರಾಜ್ಯಕ್ಕೆ ಇದೇ ಕೇಂದ್ರವಾಗಿತ್ತು.
ತಲೆಯನ್ನು 90 ಡಿಗ್ರಿ ಪೂರ್ತಿ ಮೇಲೆತ್ತಿದರೆ ಮಾತ್ರ ಆಕಾಶ ಕಂಡೀತು, ಅಷ್ಟೆತ್ತರದ ಬೃಹತ್ ಪರ್ವತಗಳ ತಪ್ಪಲಲ್ಲಿ ಈ ಊರು ಇದೆ. ಆಸುಪಾಸಿನ ಪರ್ವತಗಳ ಮೇಲೆ ವಿಸ್ತೃತವಾಗಿ ನಿರ್ಮಿಸಲ್ಪಟ್ಟ ಕೃಷಿ ಟೆರೇಸುಗಳಿವೆ. ಪರ್ವತಗಳ ಮೇಲೆ ಬೆಳೆ ಸಂಗ್ರಹಿಸುವ ಗೋದಾಮುಗಳು ಕೂಡಾ ಕಲಾತ್ಮಕವಾಗಿ ಕಟ್ಟಲ್ಪಟ್ಟಿವೆ.

ಈಗ ಮಾಚುಪಿಚುವಿಗೆ ಹೋಗುವ ಹೆಬ್ಬಾಗಿಲು ಒಲ್ಲಂಟಾಯ್ ಟ್ಯಾಂಬೊ. ಮಾಚುಪಿಚುವಿನ ರೈಲು ಹೊರಡುವುದು, ನಾಲ್ಕುದಿನಗಳ ಇಂಕಾ ಟ್ರೇಲ್ ಟ್ರೆಕಿಂಗ್ ಶುರುವಾಗುವುದು ಎಲ್ಲ ಅಲ್ಲಿಂದಲೇ. ಎಂದೇ ಅದು ಪ್ರವಾಸಿಗರಿಂದ ತುಂಬಿದ ಜನದಟ್ಟಣೆಯ ಊರಾಗಿದೆ. ಊರು ಪ್ರವೇಶಿಸಿದ ಕೂಡಲೇ ಇಂಕಾರಾಜನ ವೇಷಧಾರಿ ಎದುರಾದ. ಮುಂದೆ ಹೋದಂತೆ ಇನ್ನಷ್ಟು ಇಂಕಾ ವೇಷಧಾರಿಗಳು ಸೆಲ್ಫೀಗಳಿಗೆ ಪ್ರವಾಸಿಗರ ಜೊತೆ ಪೋಸು ಕೊಡುತ್ತ ನಿಂತಿದ್ದರು. ಪ್ರವಾಸ ಉದ್ಯಮವಾದ ಫಲ ನಾವಿಲ್ಲಿ ಪೆರುವಿನಲ್ಲಿದ್ದೇವೆ. ಹಸಿದ ಪ್ರವಾಸಿ ಕಂಗಳಿಗೆ ಏನನ್ನು ಉಣಬಡಿಸಬಹುದೆಂದು ಪೆರುವಿನ ಜನ ಬಲು ಚೆನ್ನಾಗಿ ಅರಿತಿದ್ದಾರೆ.

ಊರೊಳಗೆ ಹಲವು ಇಂಕಾ ಕಾಲದ ರಚನೆಗಳಿವೆ. ಇನ್ನೂ ಉತ್ಖನನಗೊಳ್ಳುತ್ತಿರುವ ರಚನೆಗಳಿವೆ. ಊರಿನ ಅಂಚಿನಲ್ಲಿರುವ ಎತ್ತರದ ಪರ್ವತದ ಮೇಲೆ ಆಚರಣಾತ್ಮಕ-ಧಾರ್ಮಿಕ ಸ್ಥಳವಾಗಿದ್ದ ಸೂರ್ಯ ದೇವಾಲಯವಿದೆ. ಕೆಳನಿಂತು ನೋಡಿದರೆ ಆಕಾಶದತನಕ ಇರುವಂತೆ ಕಾಣುವ ಕಡಿದಾದ ಮೆಟ್ಟಿಲುಗಳ ಹತ್ತಿ ಅಲ್ಲಿ ಹೋಗಬೇಕು.

ಒಂದುಕಡೆ ಎತ್ತರದ ಮೆಟ್ಟಿಲುಗಳ ನೋಡಿ ಆಸ್ಟಿಯೋ ಆರ್ಥ್ರೈಟಿಸ್ ಕಾಲು ಹೆದರುತ್ತಿದ್ದರೆ; ಇನ್ನೊಂದೆಡೆ ಕುಡಿಯುವ ನೀರಿನ ಚಿಲುಮೆಗಳು, ಕೋಣೆಗಳು, ಮರಣಾನಂತರ ವಿಧಿ ನಡೆಸುವ ಜಾಗ, ಅಪೂರ್ಣ ಸೂರ್ಯ ದೇವಾಲಯ ಎಲ್ಲವೂ ಮೇಲಿದೆ, ನೋಡಲು ಬಾ ಎನ್ನುತ್ತ ಮಕ್ಕಳು ಪುಸಲಾಯಿಸುತ್ತಿದ್ದವು.

ಮೇಲೆ ಹತ್ತತೊಡಗಿದಂತೆ ಕಾಣುವ ಸುಂದರ ದೃಶ್ಯಗಳು ಕಾಲನ್ನೂ, ನೋವನ್ನೂ ಮರೆಸಿಬಿಟ್ಟವು. ಹತ್ತಿಹತ್ತಿ ಹತ್ತುವಾಗ ಆಕಾಶದವರೆಗೆ ಬೆಳೆದು ನಿಂತ ಪರ್ವತಗಳು ನಮ್ಮೊಡನೇ ಏರುತ್ತ ಹೋಗುತ್ತವೆ. ಸುತ್ತಮುತ್ತಲ ಬೃಹತ್ ಶಿಖರಗಳು, ‘ನಮ್ಮ ಸಮಕ್ಕೆ ಬಂದೆನೆಂಬ ಹೆಮ್ಮೆಯೆ ನಿಮಗೆ? ಎಂದು ನಮ್ಮ ಕಡೆ ನೋಡಿ ನಗುತ್ತವೆ. ಹರಿವ ನದಿ, ಕಣಿವೆ, ಮೆಟ್ಟಿಲು ಕೃಷಿ, ಸೂರ್ಯನ ನೆರಳು ಬೆಳಕಿನಾಟಗಳು ದೂರದತನಕ ಕಾಣಿಸುತ್ತವೆ.
ಗೋಡೆ ಕಟ್ಟಿಟ್ಟಂತೆ ನಿಂತ ಪರ್ವತಸಾಲು ಇದ್ದರೂ, ಉರುಬಂಬಾ ನದಿ ಮೇಲಿನ ಗಾಳಿ ರುಮುರುಮು ಬೀಸುತ್ತ ಮೇಲೆ ಬಂದೇಬಿಟ್ಟಿತು.

ಬಿಸಿಲಿದ್ದರೂ ಕೊರೆವ ಚಳಿ. ಅರೆಬರೆ ಕೆತ್ತಿದ, ಕಟ್ಟಲು ಸಾಗಿಸಿ ಈಗ ಚದುರಿಬಿದ್ದ, ಕಟ್ಟಲ್ಪಟ್ಟು ನಂತರ ಕೆಡವಲ್ಪಟ್ಟ ಕಲ್ಲುಗಳೆಲ್ಲ ಎಲ್ಲೆಂದರಲ್ಲಿ ಬಿದ್ದಿದ್ದವು. ಈ ಕಲ್ಲು, ನದಿ, ಬಂಡೆ, ಗಾಳಿಗೆ ಮಾತು ಬಂದರೆ ನಿಜವಾಗಿ ಏನು ನಡೆಯಿತು? ಯಾರದು ನ್ಯಾಯ, ಯಾವುದು ಅನ್ಯಾಯ? ಯಾಕವರೆಲ್ಲ ಈ ಊರು ಬಿಟ್ಟುಹೋದರು? ಯಾವಾಗ ಹೋದರು? ಯಾಕೆ ಕಟ್ಟಿದರು? ಎಂಬ ನಿಜ ಗೊತ್ತಾಗಬಹುದೆ?

ಎದುರುಗಡೆ ಕಾಣುವ ಪರ್ವತದ ಮೇಲೆ ಧಾನ್ಯ-ಶಸ್ತ್ರಾಸ್ತ್ರ ಸಂಗ್ರಹಾಗಾರಗಳನ್ನು ಗೈಡ್ ತೋರಿಸಿದರು. ಅಷ್ಟೇ ಅಲ್ಲದೆ ಎದುರಿನ ಪರ್ವತದ ಬಂಡೆಗಳಲ್ಲಿ ಮನುಷ್ಯ ಮುಖದ ಆಕಾರ ಕಾಣುತ್ತದೆ, ನೋಡಿ ಎಂದರು. ಬೆಟ್ಟದ ಒಂದು ಪಾರ್ಶ್ವದಲ್ಲಿ ಕಲ್ಪಿಸಿಕೊಳ್ಳಬಹುದಾದ ಬೃಹತ್ ಮುಖರೂಪವಿದೆ, ಅದು ಸೃಷ್ಟಿಕರ್ತ ವಿರಕೋಚಾನ ಮುಖ ಎಂದು ನಂಬಲಾಗಿದೆ. ಆ ಮುಖದ ಆಕಾರ ಕಾಣುವವರೆಗೂ ಗೈಡ್ ಬಿಡುವುದಿಲ್ಲ ಅಥವಾ ಕಾಣದಿದ್ದರೂ ನೀವು, ‘ಹ್ಞಾಂಹ್ಞಾಂ, ಕಂಡೆ, ಓಹೋಹೋ ಎನ್ನುವವರೆಗೂ ಅವರು ಬಿಡುವುದಿಲ್ಲ. 

ಮೇಲುಗಡೆ ಆರು ದೊಡ್ಡ ಬಂಡೆಕಲ್ಲುಗಳ ನಿಲ್ಲಿಸಿ ಒಂದರ ಮೇಲೆ ಅಸ್ಪಷ್ಟವಾಗಿ ಪಚಮಾಮಾ (ಭೂಮ್ತಾಯಿ) ಸಂಕೇತವಾದ ಮೆಟ್ಟಿಲು (ಪಾತಾಪಾತಾ) ಕೆತ್ತಲಾಗಿದೆ. ಅದು ಸೂರ್ಯ ದೇವಾಲಯ ಎಂದರು ಗೈಡ್! ಬಾಗಿಲಿರದ, ಕೆತ್ತನೆಯಿರದ ಅದನ್ನು ದೇವಾಲಯ ಎಂದು ಊಹಿಸಿಕೊಳ್ಳುವುದೇ ನಮಗೆ ಕಷ್ಟವಾಯಿತು. ಅದು ಅರೆಬರೆಯಾದದ್ದಿರಬೇಕು ಅಲ್ಲವೇ ಎಂದೆವು.

ಅಲ್ಲ, ಅದು ಪೂರ್ಣ ದೇವಾಲಯ. ಅದುವೇ ಸೂರ್ಯನ ದೇವಾಲಯ. ಸೂರ್ಯನ ಪೂಜಿಸುವ ಆಲಯ ಬಯಲಲ್ಲದೆ ಬೇರಿನ್ನೇನು ಆಗಿರಲು ಸಾಧ್ಯ ಎಂದರು. ಇಂಕಾಗಳ, ಆಂಡಿಯನ್ನರ ಪೂಜಾಸ್ಥಳ ಬಾಗಿಲಿರುವ ಮುಚ್ಚಿದ ರಚನೆಗಳಲ್ಲ. ಬಟಾಬಯಲೇ ಅವರ ಪೂಜೆಗೆ ಪ್ರಶಸ್ತ ಸ್ಥಳ ಎಂದರು.

ಅರೆ, ಹೌದಲ್ಲವೆ? ಮೇಲೆ ನೀಲಿ ಆಕಾಶ, ಸುತ್ತ ಬೆಟ್ಟ, ಬೀಸುವ ತಣ್ಣನೆಯ ಗಾಳಿ, ಕಣ್ಣೆದುರೇ ಪ್ರತ್ಯಕ್ಷ ಕಾಣುವ ಸೂರ್ಯ-ಚಂದ್ರ-ನೀಹಾರಿಕೆಗಳು... ಚಾವಣಿಯಿರದ ತೆರೆದ ಬಯಲಿನಲ್ಲಿ ಬಾನಿನಡಿ ನಿಲ್ಲುವುದಕಿಂತ ದೇವರನ್ನು ಪೂಜಿಸಲು ಇನ್ಯಾವ ಪ್ರಶಸ್ತ ಸ್ಥಳವಿದೆ? ಚೆಲುವಿನ, ಒಲವಿನ ಸಾಕ್ಷಾತ್ಕಾರ!! ಇದು ಪವಿತ್ರ ಕಣಿವೆಯೇ ಸೈ.  

****
ತಲುಪಿದ ದಾರಿ

ಬೆಂಗಳೂರು-ಮುಂಬೈ-ಅಬುಧಾಬಿ-ಸಾವೊ ಪಾಲೊ ಮೂಲಕ ಒಂದೇ ಸಮ 22 ಗಂಟೆಗಳ ಪಯಣ ಮಾಡಿ ದಕ್ಷಿಣ ಅಮೆರಿಕ ಪ್ರವೇಶಿಸಿದೆವು. ಬ್ರೆಜಿಲ್, ಅರ್ಜೆಂಟೀನಾ, ಚಿಲಿ ನೋಡಿದ ನಂತರ ಸೆಂಟಿಯಾಗೊನಿಂದ ಲೀಮಾ ಮುಟ್ಟಿದೆವು.

ಪೆರು ರಾಜಧಾನಿ ಲೀಮಾದಿಂದ ಹೊರಟು ಅತ್ಯದ್ಭುತ ದೃಶ್ಯಾವಳಿ ಇರುವ, 70 ನಿಮಿಷದ ವಿಮಾನ ಪ್ರಯಾಣದಲ್ಲಿ ಕೊಸ್ಕೊ ತಲುಪಿದ್ದು. ವಿಮಾನದಿಂದ ಕಾಣುವ ದೃಶ್ಯ ವೈಭವ, ಆಹಾ! ಉದಯ ಸೂರ್ಯ, ಹೊಂಗಿರಣಗಳಿಂದ ಫಳಫಳ ಹೊಳೆಯುವ ಆಂಡೀಸ್ ಪರ್ವತದ ಹಿಮಾವೃತ ಶಿಖರ - ಕಣಿವೆಗಳ ನೋಡುವುದು ಕಣ್ಣಿಗೆ ಹಬ್ಬವೇ ಸರಿ.

ಹಾಗಲ್ಲದೆ ಬೆಂಗಳೂರು-ಪ್ಯಾರಿಸ್-ಸಾವೊ ಪಾಲೊ-ಲೀಮಾ ಮೂಲಕವೂ ತಲುಪಬಹುದು.                                        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.