ADVERTISEMENT

ಪುಟ್ಟಿ, ಚಿಟ್ಟೆ ಮತ್ತು ಜೇನುಕುಟುಕ

ಮಕ್ಕಳ ಕಥೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2016, 19:30 IST
Last Updated 2 ಜುಲೈ 2016, 19:30 IST
ಪುಟ್ಟಿ, ಚಿಟ್ಟೆ ಮತ್ತು ಜೇನುಕುಟುಕ
ಪುಟ್ಟಿ, ಚಿಟ್ಟೆ ಮತ್ತು ಜೇನುಕುಟುಕ   

ಒಂದು ಭಾನುವಾರದ ಬೆಳಗ್ಗೆ ಜೋರಾಗಿ ಮಳೆ ಬಂದು ನಿಂತಿತ್ತು. ಮನೆಯ ಮುಂದಿನ ಕೈತೋಟದ ಮಧ್ಯದಲ್ಲಿನ ಪುಟ್ಟ  ಹೊಂಡದಲ್ಲಿ ಮೊಳಕಾಲು ಮುಳುಗುವಷ್ಟು ನೀರು ತುಂಬಿತ್ತು. ಆ ಹೊಂಡದಲ್ಲಿ ಇಳಿದ ಪುಟ್ಟಿ ನೀರನ್ನು ಅತ್ತಿತ್ತ ಹೂವಿನ ಗಿಡಗಳಿಗೆ ಚಿಮುಕಿಸಿ ಆಟವಾಡುತ್ತಿದ್ದಳು.

ಅದೇ ವೇಳೆ ಅವಳ ಕಣ್ಣಿಗೆ ಏರೋಪ್ಲೇನ್ ಚಿಟ್ಟೆಗಳು ಕಣ್ಣಿಗೆ ಬಿದ್ದವು. ಅವು ಒಂದು ಹೂವಿನ ಗಿಡದಿಂದ ಮತ್ತೊಂದು ಹೂವಿನ ಗಿಡಕ್ಕೆ ಹಾರಿ ಹೋಗಿ ಕುಳಿತುಕೊಳ್ಳುತ್ತಿದ್ದವು. ಅವು ಬಣ್ಣ ಬಣ್ಣದ ಏರೋಪ್ಲೇನ್ ಚಿಟ್ಟೆಗಳಾಗಿದ್ದವು.

ನೀರಿನ ಹೊಂಡದಿಂದ ಆಚೆಗೆ ಬಂದ ಪುಟ್ಟಿ ಏರೋಪ್ಲೇನ್ ಚಿಟ್ಟೆಗಳ ಬೆನ್ನಿಗೆ ಬಿದ್ದಳು. ಅವು ಮುಂದೆ ಮುಂದೆ ಹಾರಿ ಹೋಗುತ್ತಿದ್ದವು. ಪುಟ್ಟಿ ಅವುಗಳನ್ನ ಹಿಂಬಾಲಿಸುತ್ತ ನಿಧಾನವಾಗಿ ಹೆಜ್ಜೆ ಇಡುತ್ತ, ಮೆಲ್ಲಗೆ ಬಲಗೈ  ಮುಂದುಮಾಡಿ ಚಿಟ್ಟೆ ಹಿಡಿಯುವ ಪ್ರಯತ್ನ ನಡೆಸಿದಳು.

ಸುಮಾರು ಹೊತ್ತು ಕಳೆಯಿತು. ಆದರೆ ಒಂದೂ ಏರೋಪ್ಲೆನ್ ಚಿಟ್ಟೆ ಪುಟ್ಟಿಯ ಕೈಗೆ ಸಿಗಲಿಲ್ಲ. ‘ಎಷ್ಟೊತ್ತಾಯಿತು? ಪುಟ್ಟಿ ಎಲ್ಲಿಗೆ ಹೋದಳು?’ ಎಂದು ಯೋಚಿಸುತ್ತ ಪುಟ್ಟಿಯ ಅಪ್ಪ ಮುಂಬಾಗಿಲು ದಾಟಿ ಹೊರಬಂದರು. ಪುಟ್ಟಿ ಕೈತೋಟದಲ್ಲಿ ಮೆಲ್ಲಮೆಲ್ಲಗೆ ಹೆಜ್ಜೆ ಇಡುತ್ತ ಅಡ್ಡಾಡುವುದನ್ನ ನೋಡಿ ಕುತೂಹಲ ತಡೆಯಲಾರದೇ ಮಗಳ ಹತ್ತಿರಕ್ಕೆ ಹೋದರು.

ಅಷ್ಟರಲ್ಲಿ ಅವಳು, ‘ಅಪ್ಪಾ... ಅಲ್ಲೇ ನಿಲ್ಲು, ಹತ್ತಿರಕ್ಕೆ ಬರಬೇಡ’ ಅಂತ ಮೆಲುಧ್ವನಿಯಲ್ಲಿ ಹೇಳಿದಳು. ಅಪ್ಪ ಸ್ವಲ್ಪ ದೂರ ಹಿಂದಕ್ಕೆ ತೆಪ್ಪಗೆ ನಿಂತುಕೊಂಡರು. ಅವಳು ಏನನ್ನ ಹಿಡಿಯುವ ಪ್ರಯತ್ನ ನಡೆಸಿದ್ದಾಳೆ ಅಂತ ಸೂಕ್ಷ್ಮವಾಗಿ ಗಮನಿಸತೊಡಗಿದರು. ನೋಡನೋಡುತ್ತಿದ್ದಂತೆಯೇ ಏರೋಪ್ಲೇನ್ ಚಿಟ್ಟೆಯ ಬಾಲವನ್ನು ಪುಟ್ಟಿ ಹಿಡಿದುಬಿಟ್ಟಿದ್ದಳು. ಆ ಚಿಟ್ಟೆ ಚಿಟಪಿಟ ಅಂತ ರೆಕ್ಕೆ ಬಡಿದು ತಪ್ಪಿಸಿಕೊಳ್ಳಲು ಒದ್ದಾಡುತ್ತಿತ್ತು.

‘ಅಪ್ಪಾ ನೋಡಿಲ್ಲಿ. ಚಿಟ್ಟೆ ಎಷ್ಟು ಚೆಂದ ಇದೆ. ರೆಡ್ ಕಲರ್, ಸೂಪರ್ ಅಲ್ವಾ...?! ಇದರ ಬಾಲಕ್ಕೆ ದಾರ ಕಟ್ಟಿಕೊಡಪ್ಪ. ಹಾರಾಡಿಸಬೇಕು’ ಅಂದಳು.

‘ಪುಟ್ಟಿ, ಇದಕ್ಕೆ ದಾರ ಕಟ್ಟಿದರೆ ಸತ್ತು ಹೋಗುತ್ತದೆ. ಪಾಪ ಅಲ್ವಾ? ಈ ಪುಟ್ಟ ಚಿಟ್ಟೆಯನ್ನು ಬಿಟ್ಟುಬಿಡು’ ಅಂತ ಅಪ್ಪ ಹೇಳಿದರು.

‘ಇಲ್ಲಾ ಬಿಡಲ್ಲ. ನಮ್ಮ ಸ್ಕೂಲ್ ಫ್ರೆಂಡ್ಸ್ ಈ ಚಿಟ್ಟೆಯ ಬಾಲಕ್ಕೆ ದಾರ ಕಟ್ಟಿ ಆಟ ಆಡುತ್ತಾರೆ’ ಅಂತ ಮೆಲ್ಲಗೆ ಕಾಲುಗಳನ್ನು ನೆಲಕ್ಕೆ ಕುಟ್ಟುತ್ತಲೇ ಹಟದಿಂದ ಹೇಳಿದಳು ಪುಟ್ಟಿ.
ಹೇಗಾದರೂ ಮಾಡಿ ಪುಟ್ಟಿ ಕೈಯಿಂದ ಆ ಪುಟ್ಟ ಏರೋಪ್ಲೇನ್ ಚಿಟ್ಟೆಯನ್ನು ಬಿಡಿಸಲೇಬೇಕೆನ್ನುವ ಉದ್ದೇಶ ಅಪ್ಪನದ್ದಾಗಿತ್ತು.  ಅವರು ಮಗಳಿಗೊಂದು ಪ್ರಶ್ನೆ ಕೇಳಿದರು– ‘ನಿನ್ನ ಕಾಲುಗಳನ್ನು ಕಟ್ಟಿ ಹಾಕಿ ಮನೆಯಲ್ಲಿಯೇ ಇರು ಅಂದರೆ ಖುಷಿಯಾಗುತ್ತಾ?’

‘ಅದು ಹೇಗೆ ಖುಷಿಯಾಗುತ್ತೆ? ನಂಗೆ ಅಳುವೇ ಬರುತ್ತೆ’ ಎಂದಳು ಪುಟ್ಟಿ. ‘ಹಾಗೇನೆ ಏರೋಪ್ಲೇನ್ ಚಿಟ್ಟೆಗೂ ಹಿಂಸೆ ಆಗುತ್ತೆ. ನಿನ್ನ ಫ್ರೆಂಡ್ಸ್ ದಾರ ಕಟ್ಟಿ ಆಡೋದು ಸರಿಯಲ್ಲ. ಅವುಗಳನ್ನು ನೋಡಿ ಖುಷಿ ಪಡಬೇಕು’ ಎಂದರು ಅಪ್ಪ. ತಾನು ಮಾಡುತ್ತಿರುವುದು ತಪ್ಪೆಂದು ತಿಳಿಯುತ್ತಿದ್ದಂತೆಯೇ ಪುಟ್ಟಿ ಚಿಟ್ಟೆಯನ್ನು ಬಿಟ್ಟುಬಿಟ್ಟಳು. ಆಗಲೇ ಅರೆಜೀವವಾಗಿದ್ದ ಏರೋಪ್ಲೇನ್ ಚಿಟ್ಟೆ ನೆಲಕ್ಕೆ ಬಿದ್ದು, ಒಮ್ಮೆ ಗಿರಕಿ ಹೊಡೆದು ಮೇಲಕ್ಕೆ ಹಾರಿತು.

ಅರೆಕ್ಷಣದಲ್ಲಿ ಎಲ್ಲಿಂದಲೋ ಬಂದ ಜೇನುಕುಟುಕ (ಬೀ ಈಟರ್) ಹಕ್ಕಿ ಗಬಕ್ಕನೆ ಏರೋಪ್ಲೇನ್ ಚಿಟ್ಟೆಯನ್ನು ಹಿಡಿದುಬಿಟ್ಟಿತು. ಬಳಿಕ ಸ್ವಲ್ಪ ದೂರದಲ್ಲಿಯೇ ಇದ್ದ ಒಣಗಿಡದ ಟೊಂಗೆಯೊಂದರ ಮೇಲೆ ಕುಳಿತಿತು. ನೋಡನೋಡುತ್ತಿದ್ದಂತೆ ಏರೋಪ್ಲೇನ್ ಚಿಟ್ಟೆ ಜೇನುಕುಟುಕ ಹಕ್ಕಿಯ ಬಾಯಿಯಿಂದಲೂ ತಪ್ಪಿಸಿಕೊಂಡಿತು. ಮತ್ತೆ ಗಿರಕಿ ಹೊಡೆಯುತ್ತಲೇ ನೆಲಕ್ಕೆ ಬಿತ್ತು. ಆಗ ಜೇನುಕುಟುಕ ಹಕ್ಕಿ ಮೇಲಿಂದ ನೆಲದತ್ತ ನುಗ್ಗಿತು. ಇನ್ನೇನು ಚಿಟ್ಟೆ ಮತ್ತೆ ಜೇನುಕುಟುಕ ಹಕ್ಕಿಯ ಬಾಯಿಗೆ ಸಿಕ್ಕಿತು ಎನ್ನುವಷ್ಟರಲ್ಲಿ, ‘ಅಪ್ಪಾ, ನನ್ನ ಏರೋಪ್ಲೇನ್ ಚಿಟ್ಟೆ..... ಚಿಟ್ಟೆ.....’ ಅಂತ ಕೂಗುತ್ತ ಪುಟ್ಟಿ ಚಿಟ್ಟೆಯತ್ತ ಓಡಿದಳು.

ಆಗ ಜೇನುಕುಟುಕ ಹಕ್ಕಿ ಹೆದರಿ ಪುರ್ರನೆ ಎತ್ತಲೋ ಹಾರಿ ಮಾಯವಾಯಿತು. ಬಳಿಕ ಪುಟ್ಟಿ ಚಿಟ್ಟೆಯತ್ತ ನೋಡಿದಳು. ಆದರೆ ಏರೋಪ್ಲೇನ್ ಚಿಟ್ಟೆ ನೆಲದ ಮೇಲೆ ಇರಲಿಲ್ಲ! ಪುಟ್ಟಿ ಕಂಗಾಲಾದಳು. ಕಣ್ಣು ಅಗಲಿಸಿ ಅತ್ತಿತ್ತ ನೋಡಿದಳು. ಚಿಟ್ಟಿ ಅವಳ ಪಕ್ಕದಲ್ಲಿಯೇ ಇದ್ದ ಗುಲಾಬಿ ಗಿಡದ ಮೊಗ್ಗಿನ ಮೇಲೆ ಕುಳಿತಿತ್ತು. ಅದನ್ನು ನೋಡಿದ ಪುಟ್ಟಿಯ ಮುಖ ಅರಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.