ADVERTISEMENT

ಫರ್‍ಹಾನ್ ಪ್ರತಿಭೆ

ಮಿನುಗು ಮಿಂಚು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 19:30 IST
Last Updated 8 ಮಾರ್ಚ್ 2014, 19:30 IST

ಚಿತ್ರಸಾಹಿತಿ ಜಾವೆದ್‌ ಅಖ್ತರ್‌ ಮಗನಾದ ಫರ್‍ಹಾನ್ ಅಖ್ತರ್‌ಗೆ ಸಿನಿಮಾ ಮಾಧ್ಯಮದ ಮೇಲಿನ ಪ್ರೀತಿ ರಕ್ತಗತವಾಗಿ ಬಂದಿದ್ದು. ಮಿಲ್ಖಾ ಸಿಂಗ್‌ ಜೀವನವನ್ನು ಆಧರಿಸಿದ ‘ಭಾಗ್‌ ಮಿಲ್ಖಾ ಭಾಗ್‌’ ಚಿತ್ರದಲ್ಲಿನ ಅವರ ಅಭಿನಯ, ಆ ಪಾತ್ರಕ್ಕಾಗಿ ದೇಹವನ್ನು ರೂಪಿಸಿಕೊಂಡ ರೀತಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

ಫರ್‍್ಹಾನ್‌ ಅಖ್ತರ್‌ ಚಿತ್ರರಂಗಕ್ಕೆ 17ನೇ ವಯಸ್ಸಿಗೇ ಕಾಲಿಟ್ಟರು. ‘ಲಮ್ಹೆ’ ಹಿಂದಿ ಚಿತ್ರದ ಸಹಾಯಕ ನಿರ್ದೇಶಕರಾಗಿ ಅವರು ಆರಿಸಿಕೊಂಡದ್ದು ಯಶ್‌ ಚೋಪ್ರಾ ಅವರ ಗರಡಿಯನ್ನು. ಆಮೇಲೆ ಜಾಹೀರಾತು ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಸ್ನೇಹಿತ ರಿತೇಶ್‌ ಸಿಧ್ವಾನಿ ಅವರೊಟ್ಟಿಗೆ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯನ್ನು 1999ರಲ್ಲಿ ಅವರು ಪ್ರಾರಂಭಿಸಿದರು.

ಹೊಸ ಸಹಸ್ರಮಾನವನ್ನು ಅವರು ಭರ್ಜರಿಯಾಗಿಯೇ ಆರಂಭಿಸಿದರು. 2001ರಲ್ಲಿ ಅವರ ನಿರ್ದೇಶನದ ಮೊದಲ ಚಿತ್ರ ‘ದಿಲ್‌ ಚಾಹ್ತಾ ಹೈ’ ತೆರೆಕಂಡಿತು. ಸ್ನೇಹವನ್ನು ವಸ್ತುವಾಗಿ ಉಳ್ಳ ಆ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಸಂದಿತು.

2006ರಲ್ಲಿ ಹಳೆಯ ‘ಡಾನ್‌’ ಚಿತ್ರವನ್ನು ಮರುಸೃಷ್ಟಿಸಿ ಅದೇ ಶೀರ್ಷಿಕೆಯಲ್ಲಿ ಬಿಡುಗಡೆ ಮಾಡಿದರು. ಶಾರುಖ್‌ ಖಾನ್‌ ಅಭಿನಯಿಸಿದ್ದ ಆ ಚಿತ್ರಕ್ಕೆ ಉತ್ತಮ ವಿಮರ್ಶೆ ಸಿಗಲಿಲ್ಲವಾದರೂ ಬಾಕ್ಸಾಫೀಸ್‌ನಲ್ಲಿ ಅದು ಗೆದ್ದಿತು. 2008ರಲ್ಲಿ ‘ರಾಕ್‌ಆನ್‌’ ಚಿತ್ರದ ಮೂಲಕ ಅವರು ನಟರಾದರು. ಆಮೇಲೆ ‘ಲಕ್‌ ಬೈ ಚಾನ್ಸ್‌’, ‘ಕಾರ್ತಿಕ್‌ ಕಾಲಿಂಗ್‌ ಕಾರ್ತಿಕ್‌’, ‘ಜಿಂದಗಿ ನಾ ಮಿಲೇಗಿ ದೊಬಾರಾ’ ಚಿತ್ರಗಳಲ್ಲಿ ಅಭಿನಯಿಸಿದರು.

‘ಭಾಗ್‌ ಮಿಲ್ಖಾ ಭಾಗ್‌’ ಅವರಿಗೆ ನಟನಾಗಿ ದೊಡ್ಡ ಹೆಸರು ತಂದುಕೊಟ್ಟಿತು. ಪಾತ್ರ ನಿರ್ವಹಣೆಯ ಬಗೆಗೆ ಅವರಿಗಿರುವ ಬದ್ಧತೆಗೂ ಕನ್ನಡಿ ಹಿಡಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.