ADVERTISEMENT

ಬಾಡಿಗೆ ತಾಯ್ತನ

ಹೊಲಿಗೆಯಂತ್ರದಿಂದ ಹೆರಿಗೆ ಮಂತ್ರದೆಡೆಗೆ...

ಶರ್ಮಿಳಾ ರುದ್ರಪ್ಪ
Published 19 ಜನವರಿ 2013, 19:59 IST
Last Updated 19 ಜನವರಿ 2013, 19:59 IST
ಬಾಡಿಗೆ ತಾಯ್ತನ
ಬಾಡಿಗೆ ತಾಯ್ತನ   

ಕಡಿಮೆ ಸಂಬಳ ಹಾಗೂ ಸಮೃದ್ಧ ಮಾನವ ಸಂಪನ್ಮೂಲದ ಕಾರಣದಿಂದಾಗಿ ಪಶ್ಚಿಮ ದೇಶಗಳ ಅನೇಕ ಉದ್ಯೋಗಾವಕಾಶಗಳು ಭಾರತದ ಪಾಲಾಗುತ್ತಿವೆ. ಕಡಿಮೆ ವೆಚ್ಚದ ಕಾರಣದಿಂದಾಗಿ `ಆರೋಗ್ಯ ಪ್ರವಾಸೋದ್ಯಮ'ದ ಪ್ರಮುಖ ನೆಲೆಯಾಗಿಯೂ ಭಾರತ ಗುರ್ತಿಸಿಕೊಂಡಿದೆ. ಈ ಸಾಲಿಗೆ `ಬಾಡಿಗೆ ತಾಯ್ತನ' ಕೂಡ ಸೇರಿಕೊಂಡಿದೆ.

ಅಮೆರಿಕ, ಇಂಗ್ಲೆಂಡ್, ಇಸ್ರೇಲ್, ಆಸ್ಟ್ರೇಲಿಯಾ ಮತ್ತಿತರ ದೇಶಗಳ ದಂಪತಿ ಇಲ್ಲಿಗೆ ಬಂದು ಮಕ್ಕಳನ್ನು ಪಡೆಯುತ್ತಿದ್ದಾರೆ. `ಬಾಡಿಗೆ ತಾಯ್ತನ' ನಮ್ಮ ಹೆಣ್ಣುಮಕ್ಕಳ ನೈತಿಕ ಪರಿಕಲ್ಪನೆಯಲ್ಲಿನ ಬದಲಾವಣೆಯನ್ನು ಸೂಚಿಸುವಂತೆಯೇ ಬದುಕಿನ ಕಟು ವಾಸ್ತವದ ಅನಿವಾರ್ಯತೆಗಳ ಸಂಕೇತವೂ ಆಗಿದೆ.
                                 -----------------------

`ಎರಡು ವರ್ಷಗಳ ಹಿಂದೆ, ಹಣಕ್ಕಾಗಿ ಮಗುವನ್ನು ಹೆರಬೇಕು ಎಂದು ನೀವು ಹೇಳಿದ್ದರೆ ಅದು ನನಗೆ ಅವಮಾನ ಅನ್ನಿಸುತ್ತಿತ್ತು. ನಿಮ್ಮ ಕಪಾಳಕ್ಕೆ ಬಾರಿಸುತ್ತಿದ್ದೆ!'. ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡುವ ಮೂವತ್ತು ವರ್ಷದ ಸುಗುಣ ಅವರ ಮಾತು ಎರಡು ವರ್ಷಗಳಲ್ಲಿ ಆಕೆಯ ಬದುಕು-ನಂಬಿಕೆಗಳಲ್ಲಿ ಆದ ಬದಲಾವಣೆಯನ್ನು ಸೂಚಿಸುವಂತಿತ್ತು.

ADVERTISEMENT

ಬೆಂಗಳೂರಿನ ಕಮಲಾನಗರದಲ್ಲಿ ವಾಸಿಸುವ ಆಕೆ ಈಗ ಅವಳಿ ಮಕ್ಕಳನ್ನು ಹೆತ್ತು ಮಕ್ಕಳಾಗದ ಅಮೆರಿಕನ್ ದಂಪತಿಗೆ ನೀಡಿದ್ದಾರೆ.ಅಮೆರಿಕ ಬಾಡಿಗೆ ತಾಯ್ತನಕ್ಕೆ ಹೆಸರುವಾಸಿಯಾದ ದೇಶ. ಭಾರತ `ದೇಶಾಂತರ ಬಾಡಿಗೆ ತಾಯ್ತನ'ದ ಪ್ರಮುಖ ನೆಲೆಯಾಗಿ ಹೊರಹೊಮ್ಮುತ್ತಿರುವ ದೇಶ. ಅಮೆರಿಕ ಮಾತ್ರವಲ್ಲದೆ ಇಂಗ್ಲೆಂಡ್, ಇಸ್ರೇಲ್, ಆಸ್ಟ್ರೇಲಿಯಾ ಮತ್ತಿತರ ದೇಶಗಳಿಂದ ದಂಪತಿ ಹಾಗೂ ವ್ಯಕ್ತಿಗಳು ಇಲ್ಲಿಗೆ ಬಂದು ಮಕ್ಕಳನ್ನು ಪಡೆಯುತ್ತಿದ್ದಾರೆ.

ಇದಕ್ಕೆ ಕಾರಣ ಹಣದ ಮಿಗಿತಾಯ. ಪ್ರತಿ ಮಗುವಿಗೆ ಇಲ್ಲಿ ಅಂದಾಜು 35-40 ಸಾವಿರ ಡಾಲರ್ ಖರ್ಚಾಗುತ್ತದೆ. ಆದರೆ ಅಮೆರಿಕದಲ್ಲಿ 80 ಸಾವಿರ ಡಾಲರ್ ತೆರಬೇಕು. ಉತ್ತಮ ವೈದ್ಯಕೀಯ ಸೌಲಭ್ಯ, ದುಬಾರಿಯಲ್ಲದ ವೈದ್ಯಕೀಯ ವಸ್ತುಗಳು, ಅದರಲ್ಲೂ ಮುಖ್ಯವಾಗಿ ಹೆಚ್ಚು ಹಣ ಬಯಸದ ವಿಧೇಯ ಗರ್ಭಿಣಿಯರು ಭಾರತದಲ್ಲಿ ದೊರೆಯುತ್ತಾರೆ. ಪ್ರಸ್ತುತ ಮುಂಬೈ, ಆನಂದ್, ದೆಹಲಿ, ಹೈದರಾಬಾದ್ ಹಾಗೂ ಬೆಂಗಳೂರು ಬಾಡಿಗೆ ತಾಯ್ತನದ ಕೇಂದ್ರಗಳಾಗಿ ಬೆಳೆಯುತ್ತಿವೆ. ಇಂತಹ  ತಾಯ್ತನ ದುಬಾರಿಯಾಗದೇ ಇರಲು ಸುಗುಣರಂತಹ ತಾಯಂದಿರು ಕಾರಣ.

ಗಾರ್ಮೆಂಟ್‌ನಿಂದ ಪಾರಾಗಿ...
ನಾನು ಸುಗುಣ ಅವರನ್ನು ಭೇಟಿ ಮಾಡಿದ್ದು 2011ರ ಮಾರ್ಚ್‌ನಲ್ಲಿ. ಆಗ ಆಕೆ ತನ್ನ ಮನೆಗೆ ಹತ್ತಿರವಿರುವ ಕಮಲಾನಗರದ ಬಾಡಿಗೆ ತಾಯ್ತನ ಕೇಂದ್ರವೊಂದರಲ್ಲಿ ಗರ್ಭಿಣಿಯಾಗಿದ್ದರು. ಆಗಸ್ಟ್ ವೇಳೆಗೆ ಸುಗುಣ ಭೇಟಿ ಮಾಡಿಸಿದ ಸುಮಾರು 70 ಮಂದಿ ಬಾಡಿಗೆ ತಾಯಂದಿರೊಂದಿಗೆ ನಾನು ಮಾತುಕತೆ ನಡೆಸಿದೆ. ಅದರಲ್ಲಿ ಹಲವರು ಗಾರ್ಮೆಂಟ್ ನೌಕರರಾಗಿದ್ದು, ಬಾಡಿಗೆ ತಾಯ್ತನದ ಹೊಣೆ ಮುಗಿದ ಬಳಿಕ ತಮ್ಮ ಕೆಲಸಗಳಿಗೆ ಮರಳುವವರಾಗಿದ್ದರು.

ಅವರಲ್ಲಿ ಅನೇಕರು ಮೊದಲು ತಮ್ಮ ಅಂಡಾಶಯಗಳನ್ನು ಮಾರಾಟ ಮಾಡಿ ನಂತರ ಬಾಡಿಗೆ ತಾಯಂದಿರಾಗುತ್ತಿದ್ದರು. ಈ ಗಾರ್ಮೆಂಟ್ ಹಾಗೂ ಸಂತಾನೋತ್ಪತ್ತಿ ಹೊಂದಾಣಿಕೆ ಬೆಂಗಳೂರಿನ ಮಟ್ಟಿಗೆ ಅನನ್ಯವಾದುದು. ಏಕೆಂದರೆ ದೇಶದ ಉಳಿದೆಡೆ ಶೇ 60ರಷ್ಟು ಮಹಿಳೆಯರು ಗಾರ್ಮೆಂಟ್ ಉದ್ಯೋಗದಲ್ಲಿದ್ದರೆ ಬೆಂಗಳೂರಿನಲ್ಲಿ ಅವರ ಸಂಖ್ಯೆ ಶೇ 90ರಷ್ಟಿದೆ.

ಪ್ರಪಂಚದ ಬೇರೆಡೆಗೆ ಹೋಲಿಸಿದರೆ ಕಡಿಮೆ ಸಂಬಳಕ್ಕೆ ಹೆಚ್ಚು ದುಡಿಮೆ ಮಾಡಬೇಕಾದ ಸ್ಥಿತಿ ಬೆಂಗಳೂರಿನ ಗಾರ್ಮೆಂಟ್ ನೌಕರರದು. ಜಾಗತಿಕ ಬೇಡಿಕೆಗೆ ತಕ್ಕಂತೆ ಹೆಚ್ಚು ಉತ್ಪನ್ನಗಳನ್ನು ತಯಾರಿಸಬೇಕಾದ ಒತ್ತಡದಲ್ಲಿರುವ ಅವರನ್ನು ಅಮಾನವೀಯ ನೆಲೆಯಲ್ಲಿ ನಡೆಸಿಕೊಳ್ಳುವುದೂ ಇದೆ. ಕಡಿಮೆ ವಿಶ್ರಾಂತಿ ಅಥವಾ ಕೆಲವೊಮ್ಮೆ ವಿಶ್ರಾಂತಿಯೇ ದೊರೆಯದ ಸ್ಥಿತಿ ಅವರದು.

ಈ ಬಗೆಯ ಮಿತಿಮೀರಿದ ದುಡಿಮೆಯಿಂದಾಗಿ ಆಗಾಗ ತಲೆಶೂಲೆ, ಎದೆನೋವು, ಕಿವಿ ಹಾಗೂ ಕಣ್ಣಿನ ನೋವು, ಮೂತ್ರ ಸಂಬಂಧಿ ಸೋಂಕು ಮತ್ತಿತರ ಕಾಯಿಲೆಗಳು ಅವರಲ್ಲಿ ಕಾಣಿಸಿಕೊಳ್ಳುತ್ತಿವೆ. ದುಡಿಯುವ ಸ್ಥಳದಲ್ಲಿ ಲೈಂಗಿಕ ಕಿರುಕುಳ ಹಾಗೂ ನಿಂದನೆಯೂ ವ್ಯಾಪಕವಾಗಿದೆ. ಮಹಿಳೆಯರಿಂದ ನಿರಂತರ ದುಡಿಮೆ ಸಾಧ್ಯವಾಗದಿದ್ದಾಗ, ಬಹುತೇಕ ಪುರುಷರೇ ಆಗಿರುವ ಅಲ್ಲಿನ ಮೇಲ್ವಿಚಾರಕರು ಮಹಿಳಾ ಉದ್ಯೋಗಿಗಳನ್ನು ತೀರಾ ಕೀಳು ನೆಲೆಯಲ್ಲಿ ದಂಡಿಸುತ್ತಾರೆ. ಕೆಲವೊಮ್ಮೆ ಮೇಲ್ವಿಚಾರಕರು ಅವರ ದೇಹ ತಡವುತ್ತ ಕೆಲಸ ಕುರಿತು ಮಾರ್ಗದರ್ಶನ ಮಾಡುತ್ತಾರೆ.

`ಉಡುಪಿನ ತುಣುಕುಗಳ ರಾಶಿ ಎದುರಿದ್ದಾಗ ಕೆಲವೊಮ್ಮೆ ಊಟ ಮಾಡಲು ಬಿಡುವು ಸಿಗುತ್ತಿರಲಿಲ್ಲ. ನನಗೆ ಎಲ್ಲರ ಮುಂದೆ ಅವಮಾನಕ್ಕೆ ಒಳಗಾಗುವುದು ಇಷ್ಟ ಇರಲಿಲ್ಲ. ಮೇಲ್ವಿಚಾರಕರ ದೃಷ್ಟಿಗೆ ಬೀಳದಂತೆ ಆದಷ್ಟೂ ದೂರ ಇದ್ದೇ ಕೆಲಸ ನಿರ್ವಹಿಸುತ್ತಿದ್ದೆ' ಎನ್ನುತ್ತಾರೆ ಸುಗುಣ. ಲೈಂಗಿಕ ಶೋಷಣೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ ಆಕೆ ಅತಿ ಹೆಚ್ಚು ದುಡಿಮೆಯಲ್ಲಿ ತೊಡಗುತ್ತಿದ್ದರು ಹಾಗೂ ಕಡಿಮೆ ಇಲ್ಲವೇ ಬಿಡುವೇ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದರು.

ಉನ್ನತ ಸಂಶೋಧನೆಯೊಂದು ಹೇಳುವಂತೆ- ಮನೆಯಲ್ಲಿ ಅಡುಗೆ, ಬಟ್ಟೆ ಶುಚಿ, ಮಕ್ಕಳ ಪಾಲನೆ ಮತ್ತಿತರ ಗೃಹ ಕೆಲಸಗಳನ್ನು ಮುಗಿಸಿ ಕೆಲಸಕ್ಕೆ ಹೊರಡುವ ಬೆಂಗಳೂರಿನ ಗಾರ್ಮೆಂಟ್ ಉದ್ಯೋಗಿಗಳು ತಮ್ಮ ಕಾರ್ಖಾನೆಗಳಲ್ಲಿ ದಿನಕ್ಕೆ ಸರಾಸರಿ ಹದಿನಾರು ಗಂಟೆಗಳವರೆಗೆ ದುಡಿಯುತ್ತಾರೆ. ಕಾರ್ಖಾನೆಯಲ್ಲೂ ಶ್ರಮವಹಿಸಿ ನಂತರ ಮನೆಗೆ ತೆರಳಿ ಅಲ್ಲಿಯೂ ದುಡಿಯುವುದು ಮಹಿಳೆಯರ ಪಾಲಿಗೆ ಇನ್ನಿಲ್ಲದ ಬಳಲಿಕೆಯನ್ನು ತಂದೊಡ್ಡಿದೆ.

ಸಾಲದ ಋಣ ಮತ್ತಿತರ ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರು ಬಾಡಿಗೆ ತಾಯ್ತನದತ್ತ ವಾಲುತ್ತಿದ್ದಾರೆ ಎಂಬುದು ಸಾಮಾನ್ಯ ಗ್ರಹಿಕೆ. ನಾನು ಭೇಟಿ ಮಾಡಿದ ಎಪ್ಪತ್ತು ತಾಯಂದಿರು ಕಡುಬಡವರಾಗಿದ್ದರು ಎನ್ನುವಂತಿಲ್ಲ. ಹಲವರ ಮನೆಗಳಲ್ಲಿ ಒಬ್ಬರಿಗಿಂತಲೂ ಹೆಚ್ಚು ದುಡಿಯುವ ಸದಸ್ಯರು ಇದ್ದರು.

ಗಾರ್ಮೆಂಟ್ ನೌಕರರನ್ನು ಆಯ್ದುಕೊಳ್ಳುವ ಏಜೆಂಟರು, ಸಂತಾನೋತ್ಪತ್ತಿಗೆ ಸೂಕ್ತ ವಯಸ್ಸಿನಲ್ಲಿರುವ ಮಹಿಳೆಯರನ್ನು ಅವರ ಸಂಬಂಧಿಕರು ಪರಿಚಯಸ್ಥರ ಕಡೆಯಿಂದ ಪುಸಲಾಯಿಸಿ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದರು. ಆಹಾರ, ಶಿಕ್ಷಣ, ವೈದ್ಯಕೀಯ ಸಬ್ಸಿಡಿ ಮತ್ತಿತರ ಸೌಲಭ್ಯಗಳ ಕೊರತೆ, ಜಾಗತಿಕ ಆರ್ಥಿಕ ಕುಸಿತ, ಮಾರುಕಟ್ಟೆ ಏರಿಳಿತ, ಕಾರ್ಖಾನೆ ಉದ್ಯೋಗದ ಅನಿಶ್ಚಿತತೆಯಿಂದಾಗಿ ಕೆಲವು ಹೆಣ್ಣುಮಕ್ಕಳು ಬಾಡಿಗೆ ತಾಯ್ತನದಂತಹ, ಈಗಷ್ಟೇ ಹೊರಹೊಮ್ಮುತ್ತಿರುವ ಹೆರಿಗೆ ಉದ್ಯಮಕ್ಕೆ ಕಾಲಿಡುತ್ತಿದ್ದಾರೆ.

ಮಕ್ಕಳನ್ನು ಹೆರುವ ಉದ್ಯೋಗ
ಸುಗುಣ ಅವರ ಕಥೆಯನ್ನೇ ಕೇಳಿ. ಹದಿನೆಂಟು ವರ್ಷದವರಿದ್ದಾಗ ಅವರು ಆಟೊರಿಕ್ಷಾ ಚಾಲಕರೊಬ್ಬರ ಕೈ ಹಿಡಿದರು. ಇಬ್ಬರು ಪುಟಾಣಿ ಮಕ್ಕಳಿರುವ ಅವರಿಗೆ ಸಂಸಾರದ ಸಮಸ್ಯೆಗಳು ಬಹಳಷ್ಟಿದ್ದವು. ಸ್ವಂತಕ್ಕೆ ಆಟೊ ಖರೀದಿಸಲು ಸಂಬಂಧಿಕರೊಬ್ಬರ ಬಳಿ ಸಾಲ ಕೇಳಿದಾಗ ಅವರ ಕಷ್ಟಗಳು ಮತ್ತಷ್ಟು ಉಲ್ಬಣಿಸಿದವು. ಸಾಲ ತೀರಿಸಲು ದಂಪತಿಯಿಂದ ಆಗಲೇ ಇಲ್ಲ.

ಸಂಬಳದ ದಿನ ಗಾರ್ಮೆಂಟ್ ಕಾರ್ಖಾನೆಗೆ ಬರುತ್ತಿದ್ದ ಸುಗುಣರ ಸಂಬಂಧಿ, ಕೈಯಲ್ಲಿದ್ದ ಐದಾರು ಸಾವಿರ ರೂಪಾಯಿ ಚೆಕ್ ಅನ್ನು ಕಿತ್ತುಕೊಂಡು ಕಳಿಸುತ್ತಿದ್ದರು. ಆಕೆ ಹೇಳುವಂತೆ, `ನಾನು ಎಲ್ಲ ಶೋಷಣೆಗಳನ್ನು ಸಹಿಸಿಕೊಂಡು ಕಷ್ಟಪಟ್ಟು ದುಡಿಯುತ್ತಿದ್ದೆ. ಆದರೆ ಕೊನೆಗೆ ನಾನು ದುಡಿದ ಹಣ ಕೈಗೆ ಬರುತ್ತಿರಲಿಲ್ಲ. ಹೀಗಾಗಿ ಒಮ್ಮಮ್ಮೆ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದವು'.  ಸಹೋದ್ಯೋಗಿ ಮಹಿಳೆಯೊಬ್ಬರು ರೂಪಾಯಿ 25 ಸಾವಿರದಷ್ಟು ಮೊತ್ತಕ್ಕೆ ಅಂಡಾಣುಗಳನ್ನು ಮಾರುತ್ತಿರುವುದಾಗಿ ತಿಳಿಸಿದರು. ಆಗ ಸುಗುಣ ಪಾಲಿಗೆ ಅವಕಾಶದ ಬಾಗಿಲೊಂದು ತೆರೆಯಿತು.

ಅಂಡಾಣುಗಳನ್ನು ದಾನ ಮಾಡುವ ಜೊತೆಗೆ ಸುಗುಣ ಬಾಡಿಗೆ ತಾಯ್ತನಕ್ಕೂ ಮುಂದಾದರು. `ವಿಟ್ರೋ ಫರ್ಟಿಲೈಸೇಷನ್' ವಿಧಾನದಲ್ಲಿ ಮೊದಲ ಬಾರಿಗೆ ಅವರು ಅವಳಿ ಮಕ್ಕಳಿಗೆ ಗರ್ಭಿಣಿಯಾದರು. ಅತೀವ ಅಂಡ ವಿಸರ್ಜನೆಯಿಂದಾಗುವ ದೂರಗಾಮಿ ಪರಿಣಾಮಗಳ ಕುರಿತು ಮಾತನಾಡಿದಾಗ ಆಕೆ ಅದನ್ನು ಸಂಪೂರ್ಣವಾಗಿ ಅಲ್ಲಗಳೆದರು. `ಮೊದಲು ಬಡತನದಿಂದ ಹೊರಬರಬೇಕು. ಅನಾರೋಗ್ಯದಂಥ ಸಮಸ್ಯೆಗಳು ಆಮೇಲಿನ ಮಾತು' ಎಂಬುದು ಆಕೆಯ ಧೋರಣೆ.

ಗರ್ಭಿಣಿಯಾಗುತ್ತಿದ್ದಂತೆ ಮನೆಯಿಂದ ದೂರ ಉಳಿದ ಆಕೆ, ಬಾಡಿಗೆ ತಾಯ್ತನಕ್ಕೆಂದು ಮೀಸಲಿಟ್ಟಿದ್ದ ಕೇಂದ್ರದಲ್ಲಿ (ಡಾರ್ಮಿಟರಿ) ವಾಸಿಸತೊಡಗಿದರು. ಮೊದಲೆಲ್ಲಾ ಆಕೆಗೆ ತನ್ನ ಪುಟ್ಟ ಮಕ್ಕಳ ಬಗ್ಗೆ ಆತಂಕ ಉಂಟಾಗುತ್ತಿತ್ತು. ಕ್ರಮೇಣ ಡಾರ್ಮಿಟರಿ ಬದುಕಿಗೆ ಹೊಂದಿಕೊಳ್ಳತೊಡಗಿದರು. ಅಲ್ಲಿ ಮಕ್ಕಳು, ಮನೆಯವರಿಗಾಗಿ ಬೆಳಿಗ್ಗೆ ಐದಕ್ಕೆ ಏಳುವ ಒತ್ತಡ ಇರಲಿಲ್ಲ. ಬಸ್ಸು ಹಿಡಿದು ಮಕ್ಕಳನ್ನು ಶಾಲೆಗೆ ತಲುಪಿಸಿ ಅಲ್ಲಿಂದ ಕಾರ್ಖಾನೆಗೆ ದೌಡಾಯಿಸಬೇಕಿರಲಿಲ್ಲ.

ಅದೇ ಮೊದಲ ಬಾರಿಗೆ ಜೀವನದ ಎಲ್ಲ ಜವಾಬ್ದಾರಿಗಳಿಂದ ಮುಕ್ತರಾಗಿದ್ದ ಅವರಿಗೆ ಎಷ್ಟೋ ಬಾರಿ ಸಮಯ ನೆನಪಾಗುತ್ತಲೇ ಇರಲಿಲ್ಲವಂತೆ. ಸಂಬಂಧಿಕರು ಅಥವಾ ಬಾಲ್ಯದ ಗೆಳತಿಯರಿಗಿಂತಲೂ ಅನ್ಯೋನ್ಯವಾಗಿ ಬದುಕು ಸಾಗಿಸುತ್ತಿದ್ದೇವೆ ಎಂಬುದು ಡಾರ್ಮಿಟರಿಯಲ್ಲಿ ಬಾಡಿಗೆ ತಾಯ್ತನದ ಹೊಣೆ ಹೊತ್ತಿದ್ದ ಬಹುತೇಕ ಹೆಣ್ಣುಮಕ್ಕಳ ಮಾತು. ಹೆರುವ ಮಕ್ಕಳನ್ನು ಮುಂದೆ ಕಳೆದುಕೊಂಡರೂ, ನೂರಾರು ಅಕ್ಕ ತಂಗಿಯರನ್ನು ಪಡೆದಿದ್ದೇವೆ ಎಂದು ಅವರು ಹೇಳಿಕೊಂಡಿದ್ದುಂಟು.

ಗರ್ಭಿಣಿಯಾಗಿ 36 ಅಥವಾ 37ನೇ ವಾರದಲ್ಲಿ ದೂರದೇಶದ ಪೋಷಕರು ಬಯಸಿದ ದಿನ ಶಸ್ತ್ರಚಿಕಿತ್ಸೆ ಮೂಲಕ ಮಗು ಹೊರಬಂದ ಮೇಲೆ ತಾಯಂದಿರ ಡಾರ್ಮಿಟರಿ ಜೀವನ ಅಂತ್ಯಗೊಳ್ಳುತ್ತಿತ್ತು. ಅವಳಿ ಮಕ್ಕಳನ್ನು ಹೆತ್ತದ್ದಕ್ಕೆ ಕನಿಷ್ಠ 7000 ಡಾಲರ್ (ಅಂದಾಜು ಮೂರುವರೆ ಲಕ್ಷ ರೂಪಾಯಿ) ಗಳಿಸಬೇಕಿದ್ದ ಸುಗುಣ ಪಡೆದದ್ದು ನಾಲ್ಕು ಸಾವಿರ ಡಾಲರ್ (ಸುಮಾರು ಎರಡು ಲಕ್ಷ ರೂಪಾಯಿ). ಇದಕ್ಕಾಗಿ ಆಕೆ ಕಾನೂನಾತ್ಮಕ ಹೋರಾಟ ನಡೆಸಿದರೂ ಫಲಕಾರಿಯಾಗಲಿಲ್ಲ.

ಹೆರಿಗೆ ಪೂರ್ವ ಒಪ್ಪಂದ ಮಾಡಿಕೊಂಡಿದ್ದರಿಂದ ಬಂದಷ್ಟೇ ಹಣಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ತಾಯ್ತನಕ್ಕೆ ನೇಮಿಸಿಕೊಳ್ಳುವ ಮಧ್ಯವರ್ತಿಗಳಿಗೆ 200 ಡಾಲರ್ (ಸುಮಾರು ಹತ್ತಿರ ಸಾವಿರ ರೂಪಾಯಿ) ಕೊಡಬೇಕಾದ್ದರಿಂದ ಆಕೆಗೆ ಸಿಕ್ಕಿದ್ದು ಎರಡು ಲಕ್ಷ ರೂಪಾಯಿಗಿಂತಲೂ ಕಡಿಮೆ ಮೊತ್ತದ ಹಣ. ಹೆರಿಗೆ ನಂತರ ಕೆಲ ದಿನಗಳ ಕಾಲ ಡಾರ್ಮಿಟರಿಯಲ್ಲಿಯೇ ಆಕೆ ಉಳಿಯಬಹುದಿತ್ತು. ಆದರೆ ಬೇರೆ ತಾಯಂದಿರಂತೆ ಆಕೆಯೂ ಆ ಕೆಲಸಕ್ಕೆ ಮುಂದಾಗಲಿಲ್ಲ.

ಅಲ್ಲಿಯೇ ಉಳಿದಿದ್ದರೆ ಆಕೆಯ ಬಾಣಂತನ, ವಸತಿ ಹಾಗೂ ಆಹಾರಕ್ಕೆಂದು ಡಾರ್ಮಿಟರಿ ನಡೆಸುವವರಿಗೆ ಹಣ ತೆರಬೇಕಿತ್ತು. ಕಷ್ಟ ಪಟ್ಟು ಸಂಪಾದಿಸಿದ್ದನ್ನು ಕಳೆದಕೊಳ್ಳುವ ಮನಸ್ಸಿಲ್ಲದೆ ಆಕೆ ಮನೆಯಲ್ಲಿ ಬಾಕಿ ಉಳಿದಿದ್ದ ಕೆಲಸಗಳನ್ನು ಮಾಡಲು ಮುಂದಾದರು. ಮನೆಗೆ ಬಂದ ಒಂದು ವಾರದೊಳಗೆ ಸಾಲಗಾರನ ಕೈಗೆ ಹಣ ಹೋಯಿತು. ಋಣಭಾರದಿಂದ ಮುಕ್ತವಾದ ಖುಷಿಯಲ್ಲಿ ಆಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ತಾನು ಹೆತ್ತ ಅವಳಿ ಮಕ್ಕಳೊಂದಿಗೆ ಯಾವುದೇ ಬಾಂಧವ್ಯ ಇಲ್ಲ ಎಂಬುದು ಆಕೆಯ ಮಾತು. `ಅವು ಒಪ್ಪಂದದ ಮಕ್ಕಳು. ಅವುಗಳ ಬಗ್ಗೆ ನಾನಾಗಿಯೇ ಯಾವುದೇ ಭಾವನೆ ವ್ಯಕ್ತಪಡಿಸುವುದು ಸಾಧ್ಯವಿಲ್ಲ' ಎನ್ನುವ ಅವರು `ನನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಂಡರೆ ಅಷ್ಟೇ ಸಾಕು. ನಾನು ಆ ಮಕ್ಕಳ ಬಗ್ಗೆ ಚಿಂತಿಸುತ್ತೇನೆ ಎಂದು ನೀವು ಯಾಕೆ ಅಂದುಕೊಳ್ಳುತ್ತೀರಿ? ಆ ಇಬ್ಬರಿಂದ ನಾನೇನು ಮಾಡಲಿ?' ಎಂದು ಪ್ರಶ್ನಿಸುತ್ತಾರೆ. ಬಡತನದಿಂದ ಬಂದ ಆಕೆಗೆ ಮಕ್ಕಳು ಅನಗತ್ಯ ಹೊರೆ ಎಂಬ ಭಾವನೆಯಿದೆ.

ಮೌಲ್ಯಗಳ ಸೃಷ್ಟಿ
ಬಾಡಿಗೆ ತಾಯಂದಿರು ತಮಗಾಗುತ್ತಿರುವ ಶೋಷಣೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿಲ್ಲ. ಉದ್ಯೋಗ ಕೈ ಹಿಡಿಯದಿದ್ದಾಗ ಒಂದಿಷ್ಟು ಚೈತನ್ಯ ತುಂಬಿದ ಬಾಡಿಗೆ ತಾಯ್ತನ ಅವರಿಗೆ ಉತ್ತಮ ಆಯ್ಕೆಯಾಗಿ ತೋರಿದೆ. ಸಿದ್ಧ ಉಡುಪು ಕಾರ್ಖಾನೆಗೂ ಮಕ್ಕಳ ಕಾರ್ಖಾನೆಗೂ ಇರುವ ವ್ಯತ್ಯಾಸ ಸುಗುಣರಿಗೆ ಗೊತ್ತು. `ನೀವು ನಿಮ್ಮ ಉಡುಪನ್ನು ಒಂದಷ್ಟು ತಿಂಗಳು ಬಳಸಿದ ನಂತರ ಬಿಸಾಡುತ್ತೀರಿ. ಆದರೆ ನಾನು ನಿಮಗೆ ನೀಡಿದ ಮಗು? ಅದನ್ನು ನೀವು ಜೀವನಪೂರ್ತಿ ಉಳಿಸಿಕೊಳ್ಳುತ್ತೀರಿ.

ನಾನು ಕಾರ್ಖಾನೆಯಲ್ಲಿ ಮಾಡಬಹುದಾದ ಒಳ್ಳೆಯ ಕೆಲಸಕ್ಕಿಂತಲೂ ಉತ್ತಮವಾದದ್ದನ್ನು ಮಾಡಿದ್ದೇನೆ' ಎನ್ನುವುದು ಅವರ ಆತ್ಮವಿಶ್ವಾಸದ ನುಡಿ. ಸಂತಾನೋತ್ಪತ್ತಿ ಸಾಧ್ಯವಾಗದ ಹೆಣ್ಣುಮಗಳೊಬ್ಬಳಿಗೆ ತಾಯ್ತನದ ಸುಖ ನೀಡಿದ್ದೇನೆ ಎಂಬ ಸಂತಸದ ಭಾವ ಆಕೆಯದು. ಅದೇ ಹೊತ್ತಿಗೆ ತನ್ನ ಕುಟುಂಬದ ಭವಿಷ್ಯವನ್ನೂ ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ದು ಸ್ವಂತದ ಖುಷಿಯನ್ನೂ ಪಡೆದ ತೃಪ್ತಿ ಇದೆ.

ಜೀವನವಿಡೀ ಬೇಕಾಗುವ ಮಕ್ಕಳು, ಕಾರ್ಖಾನೆಯ ಉಡುಪಿನಂತೆ ತಾತ್ಕಾಲಿಕವಲ್ಲ. ಬಾಡಿಗೆ ತಾಯ್ತನ ಒಂದು `ಸೃಷ್ಟಿಶೀಲ ಉದ್ಯೋಗ'ವೇ ಸರಿ. ಕಳೆದ ಬಾರಿ ಸುಗುಣ ಅವರನ್ನು ಭೇಟಿ ಮಾಡಿದಾಗ ಆಕೆ ಹೇಳಿದ್ದು- `ಯಾರಾದರೂ ಬಾಡಿಗೆ ತಾಯ್ತನ ಬೇಕೆಂದು ಕೇಳಿದರೆ ನಿಮಗೆ ನನ್ನ ನೆನಪಾಗುತ್ತದೆ ಅಲ್ಲವೆ? ನಾನು ಮತ್ತೆ ಅದಕ್ಕೆ ಸಿದ್ಧ'.

ಏನಿದು `ಬೇಬಿ ಎಂ'?
ಕಳೆದ ಶತಮಾನದ ಎಪ್ಪತರ ದಶಕದಲ್ಲಿ ಬಾಡಿಗೆ ತಾಯ್ತನದ ಕಲ್ಪನೆ ಹುಟ್ಟಿಕೊಂಡಿತು. ಇದಕ್ಕೆ ಮುಖ್ಯ ಕಾರಣ ಏನು ಗೊತ್ತೆ? ದತ್ತು ತೆಗೆದುಕೊಳ್ಳಲು ವಿಶ್ವದ ಕೆಲವೆಡೆ ಮಕ್ಕಳ ಅಭಾವ ಸೃಷ್ಟಿಯಾದದ್ದು. 1986ರ ಮಾರ್ಚ್ 6ರಂದು ಅಮೆರಿಕದಲ್ಲಿ ಹುಟ್ಟಿದ ಮಗುವೇ `ಬೇಬಿ ಎಂ'. ಬಾಡಿಗೆ ತಾಯ್ತನದ ಫಲವಾಗಿ ಈ ಮಗು ಜನಿಸಿತು.

ವಿಲಿಯಂ ಸ್ಟರ್ನ್ ಹಾಗೂ ಎಲಿಜಬೆತ್ ಸ್ಟರ್ನ್ ದಂಪತಿಗೆ ಬಹುಕಾಲ ಮಕ್ಕಳಾಗಲಿಲ್ಲ. ಹೀಗಾಗಿ ಅವರು ಬಾಡಿಗೆ ತಾಯ್ತನದ ಮೊರೆ ಹೋದರು. ಅದರಂತೆ ಮೇರಿಬೆತ್ ವೈಟ್‌ಹೆಡ್ ಎಂಬ ಮಹಿಳೆ ಬಾಡಿಗೆ ತಾಯ್ತನಕ್ಕೆ ಮುಂದಾದರು. ಹೆರಿಗೆಯಾದ ಬಳಿಕ ಆಕೆ ಮಗು ತನ್ನದೆಂದು ವಾದಿಸಲಾರಂಭಿಸಿದರು. ಆಕೆಯೇ ಮಗುವಿಗೆ `ಬೇಬಿ ಎಂ' ಎಂದು ನಾಮಕರಣ ಮಾಡಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲೇರಿತು.

ಪ್ರಕರಣದ ಸೂಕ್ಮತೆಯನ್ನು ಅರಿತ ನ್ಯೂಜೆರ್ಸಿ ಕೋರ್ಟ್ ಮೇರಿಬೆತ್‌ರನ್ನು ಮಗುವಿನ ಅಧಿಕೃತ ತಾಯಿಯೆಂದೂ ವಿಲಿಯಂರನ್ನು ತಂದೆಯೆಂದೂ ಘೋಷಿಸಿತು. ಆದರೆ ಮಗುವಿನ ಬೆಳವಣಿಗೆಯ ಹಿತದೃಷ್ಟಿಯಿಂದ ಅದನ್ನು ದಂಪತಿಯ ಪಾಲನೆಗೆ ಒಪ್ಪಿಸಲಾಯಿತು. ಮಗುವನ್ನು ಆಗಾಗ ನೋಡಿಬರಲು ಮೇರಿಬೆತ್‌ರಿಗೆ ಅವಕಾಶ ಕಲ್ಪಿಸಲಾಯಿತು. ದಾವೆಯಲ್ಲಿ ಗೆದ್ದ ಬಳಿಕ  ದಂಪತಿ, ಮೆಲಿಸ್ಸಾ ಸ್ಟರ್ನ್ ಎಂದು ಮಗುವಿಗೆ ಮರುನಾಮಕರಣ ಮಾಡಿದರು.

ಧರ್ಮದ ವಿಷಯ
ಬಾಡಿಗೆ ತಾಯ್ತನ ಕುರಿತಂತೆ ಬೇರೆ ಬೇರೆ ಧರ್ಮಗಳು ವಿಭಿನ್ನ ನಿಲುವು ತಳೆದಿವೆ. ಸಾಂಪ್ರದಾಯಿಕ ಯಹೂದಿ ಧರ್ಮದಲ್ಲಿ ಅದರಲ್ಲಿಯೂ ಇಸ್ರೇಲ್‌ನ ಯಹೂದಿಗಳಲ್ಲಿ ಯಾವುದೇ ಧರ್ಮದ ತಾಯಿಗೆ ಹುಟ್ಟುವ ಮಗು ಕೂಡ ಯಹೂದಿ ಧರ್ಮಕ್ಕೆ ಸೇರುತ್ತದೆ ಎಂಬ ನಿಲುವಿದೆ.

ಕನ್ಸರ್ವೇಟೀವ್ ಯಹೂದಿಗಳಲ್ಲಿ ಅಂಡಾಣುಗಳನ್ನು ದಾನ ಮಾಡಲು ಹಾಗೂ ಬಾಡಿಗೆ ತಾಯ್ತನಕ್ಕೆ ಕೆಲವು ನಿರ್ಬಂಧಗಳೊಂದಿಗೆ ಅನುಮತಿ ನೀಡಲಾಗಿದೆ. ವಂಶವಾಹಿ ತಾಯಿಗಿಂತಲೂ ಹೆತ್ತತಾಯಿಗೆ ಇಲ್ಲಿ ಹಕ್ಕು ಅಧಿಕ. ಅಂಡಾಣುಗಳನ್ನು ಶೀತಲ ಘಟಕಗಳಲ್ಲಿ ಸಂರಕ್ಷಿಸಿ ದಾನ ಮಾಡಲು ಕೂಡ ಅವಕಾಶವಿದೆ.

ಇಸ್ಲಾಮ್‌ನಲ್ಲಿ ಎಲ್ಲ ಬಗೆಯ ಬಾಡಿಗೆ ತಾಯ್ತನ ನಿಷಿದ್ಧ. ಕ್ಯಾಥೋಲಿಕ್ ಚರ್ಚುಗಳಲ್ಲಿ ಬಾಡಿಗೆ ತಾಯ್ತನಕ್ಕೆ ವಿರೋಧವಿದೆ. ಚರ್ಚಿನ ನಿಯಮಗಳ ಪ್ರಕಾರ ವಿವಾಹವಾದ ದಂಪತಿಗೆ ಹುಟ್ಟುವ ಮಗು ಮಾತ್ರ ಧರ್ಮದ ಮಾನ್ಯತೆ ಪಡೆಯುತ್ತದೆ. ಉಳಿದದ್ದೆಲ್ಲಾ ಅನೈತಿಕ ಎಂಬ ಅಭಿಪ್ರಾಯವಿದೆ.

ಜನಪ್ರಿಯ ಸಂಸ್ಕೃತಿಯಲ್ಲಿ...
`ಬೇಬಿ ಎಂ' ಕುರಿತಂತೆ ಎಬಿಸಿ ಸುದ್ದಿಜಾಲ ಸಣ್ಣದೊಂದು ಟಿವಿ ಸರಣಿ ಕಾರ್ಯಕ್ರಮ ತಯಾರಿಸಿತು. 1988ರಲ್ಲಿ ಇದು ಅಮೆರಿಕದಾದ್ಯಂತ ಪ್ರಸಾರವಾಯಿತು. ಮಗುವಿನ ಜನನ, ಹೆತ್ತ ತಾಯಿಯ ಸಂಕಟ, ಪೋಷಕರ ತೊಳಲಾಟ ಇದನ್ನೆಲ್ಲಾ ಇಟ್ಟುಕೊಂಡು ಒಂದೊಳ್ಳೆ ದೃಶ್ಯರೂಪಕ ತಯಾರಿಸಲಾಯಿತು. ಅತ್ಯುತ್ತಮ ಸರಣಿ ಎಂಬ ಹೆಗ್ಗಳಿಕೆ ಪಡೆದು `ಎಮ್ಮಿ' ಪ್ರಶಸ್ತಿಗೆ ನಾಮಕರಣವೂ ಆಯಿತು. ಪ್ರಶಸ್ತಿ ಗೆಲ್ಲದಿದ್ದರೂ ಆ ಕಾಲಕ್ಕೆ ಸಾಕಷ್ಟು ಸುದ್ದಿ ಮಾಡಿದ ಕಾರ್ಯಕ್ರಮ ಎಂಬ ಹೆಸರು ಪಡೆಯಿತು.

1989ರಲ್ಲಿ `ಬೇಬಿ ಎಂ'ರನ್ನು ಹೆತ್ತ ತಾಯಿ ಮೇರಿಬೆತ್ ತನ್ನ ಅನುಭವಗಳನ್ನು ಪುಸ್ತಕ ರೂಪಕ್ಕೆ ತಂದರು. `ಎ ಮದರ್ಸ್‌ ಸ್ಟೋರಿ: ಟ್ರುತ್ ಅಬೌಟ್ ಬೇಬಿ ಎಂ ಕೇಸ್' ಎಂಬ ಹೆಸರಿನೊಂದಿಗೆ ಜನಪ್ರಿಯವಾಯಿತು. ಆಮೇಲೆ ಮಾರ್ಥಾ ರೋಸ್ಲರ್ ಎಂಬಾಕೆ ಮತ್ತೊಂದು ಸಾಕ್ಷ್ಯಚಿತ್ರವನ್ನು ತಯಾರಿಸಿದರು. ಪಾಶ್ಚಾತ್ಯ ದೇಶಗಳಲ್ಲಿ ಬಾಡಿಗೆ ತಾಯ್ತನ ಕುರಿತು ಸಾಕಷ್ಟು ಸಾಕ್ಷ್ಯಚಿತ್ರಗಳು ಮೂಡಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.