ADVERTISEMENT

ಬೀಜ ಸಾರ್ವಭೌಮತ್ವದ ಪ್ರಕಾಶ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 19:30 IST
Last Updated 3 ಮಾರ್ಚ್ 2012, 19:30 IST

“ಆರೇಳು ದಶಕದ ಹಿಂದೆ ಕೃಷಿ ವಿಶ್ವವಿದ್ಯಾಲಯಗಳು ಇರಲಿಲ್ಲ; ಸಂಶೋಧನಾ ಕೇಂದ್ರಗಳೂ ಇರಲಿಲ್ಲ. ಪೀಳಿಗೆಯಿಂದ ಪೀಳಿಗೆಗೆ ಕೃಷಿ ಜ್ಞಾನ ವರ್ಗಾವಣೆ ಆಗುತ್ತಿತ್ತು. ಈಗೇನಿದೆ ಎಂದರೆ, ಮೆಟ್ರಿಕ್ ನಂತರದ ಐದಾರು ವರ್ಷ ಕೊಠಡಿಯಲ್ಲಿ ಕುಳಿತು, ಮಣ್ಣಿನ ಸಂಪರ್ಕವೇ ಇರದಂತೆ ಅಭ್ಯಾಸ ಮಾಡುವ ಪದವೀಧರನೊಬ್ಬ ಕಾಲೇಜಿನಿಂದ ಹೊರ ಬರುತ್ತಲೇ ರೈತರಿಗೆ ಸಲಹೆ ಕೊಡಲು ಶುರು ಮಾಡುತ್ತಾನೆ! ಆತನ ಸಲಹೆಯನ್ನು ರೈತರು ಪಾಲಿಸಬೇಕು. ತಂತ್ರಜ್ಞಾನದ ಹೆಸರಿನಲ್ಲಿ ಕಾಲಿಡುವ ಜ್ಞಾನವೂ ರೈತರನ್ನು ಬಿಕ್ಕಟ್ಟಿನತ್ತ ತಳ್ಳುತ್ತಿದೆ. ಭಾರತದ ಕೃಷಿ ಕ್ಷೇತ್ರ ಹಾಳಾಗಲು ಇಂಥ ಅಧ್ವಾನ ಸಾಕಷ್ಟಿವೆ...”

ತನ್ನಷ್ಟೇ ಎತ್ತರದ ಗೋಧಿ ತಳಿ `ಕುದರತ್~ ಹಿಂದೆ ನಿಂತು ಪ್ರಕಾಶ ಸಿಂಗ್ ರಘುವಂಶಿ ಹೇಳುವಾಗ ಅವರ ಮುಖ ಮುದುಡುತ್ತದೆ. ತಲೆತಲಾಂತರದಿಂದ ಸಾಗುತ್ತ ಬಂದಿರುವ ರೈತ ಜ್ಞಾನ, ಇನ್ನು ಕೆಲ ವರ್ಷಗಳಲ್ಲೇ ಮಣ್ಣುಗೂಡುವುದು ನಿಶ್ಚಿತ. `ನಮ್ಮ ಹೊಲ- ನಮ್ಮ ಬೀಜ- ನಮ್ಮ ಆಹಾರ~ ಎಂಬ ಉದ್ದೇಶದಿಂದ ಕೃಷಿ ಮಾಡದೇ ಹೋದರೆ ಭಾರತ ಕೃಷಿಕರ ದೇಶವಾಗಿ ಉಳಿಯದು ಎನುವುದು ಅವರ ಆತಂಕ.

ಉತ್ತರ ಪ್ರದೇಶದ ವಾರಣಾಸಿ ಪ್ರಸಿದ್ಧ ಯಾತ್ರಾ ಸ್ಥಳ. ಅದಕ್ಕೆ ಸುಮಾರು 20 ಕಿ.ಮೀ. ದೂರದಲ್ಲಿದೆ ತಾಂಡಿಯಾ ಎಂಬ ಹಳ್ಳಿ. ಗ್ರಾಮದ ಹೊರವಲಯದಲ್ಲಿ ಬಣ್ಣಬಣ್ಣದ ಧ್ವಜಗಳು ಹಾರಾಡುವ ಹೊಲದತ್ತ ಸಾಗಿದರೆ, ಅದೇ ರಘುವಂಶಿ ಸಾಧನೆ ಕ್ಷೇತ್ರ. ಎರಡು ಹೆಕ್ಟೇರ್ ಜಮೀನಿನ್ಲ್ಲಲಿ ತಲೆದೂಗುವ ಹತ್ತಾರು ತಳಿ ಗೋಧಿ, ತೊಗರಿ, ಕಡಲೆ, ಸಾಸಿವೆ ಕಣ್ಮನ ಸೆಳೆಯುತ್ತವೆ. ಒಂದು ತಳಿ ಅಭಿವೃದ್ಧಿಪಡಿಸಲು ಕೋಟಿಗಟ್ಟಲೇ ಹಣ ವೆಚ್ಚ ಮಾಡುವ ಕೃಷಿ ಸಂಶೋಧನಾ ಕೇಂದ್ರಗಳಿಗಿಂತ, ಅಲ್ಪ ವೆಚ್ಚದಲ್ಲೇ ಹತ್ತಾರು ತಳಿ ಅಭಿವೃದ್ಧಿಪಡಿಸುವ ರಘುವಂಶಿ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವೇ?

ರೈತ ಕುಟುಂಬದ ಪ್ರಕಾಶಸಿಂಗ್ ರಘುವಂಶಿ, ಬೀಜೋತ್ಪಾದನೆ ಜ್ಞಾನ ಪಡೆದಿದ್ದು ತಂದೆಯಿಂದ. ಒಂಬತ್ತನೇ ತರಗತಿಯಲ್ಲಿ ಓದುವಾಗ ಜ್ವರಕ್ಕೆ ತುತ್ತಾದರು. ಆಗ ನೀಡಿದ ಚುಚ್ಚುಮದ್ದು ವ್ಯತಿರಿಕ್ತ ಪರಿಣಾಮ ಬೀರಿತು. ಮೈಯೆಲ್ಲ ಉರಿ ಉರಿ. ಚರ್ಮ ಸುಲಿಯಿತು. ದೃಷ್ಟಿ ಕ್ಷೀಣಿಸಿತು. ಶಾಲೆಗೆ ಗುಡ್‌ಬೈ ಹೇಳಬೇಕಾಯಿತು. `ಮೂರ್ನಾಲ್ಕು ವರ್ಷ ದೃಷ್ಟಿ ಸರಿಯಾಗಿ ಇರಲೇ ಇಲ್ಲ. ಆಯುಷ್ಯ ಮುಗಿಯಿತು ಎಂದುಕೊಂಡಿದ್ದೆ. ದೇವರ ದಯೆ... ಬದುಕಿದೆ~- ನಿಟ್ಟುಸಿರು ಬಿಡುತ್ತಾರೆ ರಘುವಂಶಿ. ಹಾಗೆಂದು ಅವರು ಸಂಪೂರ್ಣ ಗುಣಮುಖರಾಗಿಲ್ಲ. ಕಣ್ಣಿಗೆ ತಂಪು ಕನ್ನಡಕ ಇರಲೇ ಬೇಕು. ಬಿಸಿಲಲ್ಲಿ ಸ್ವಲ್ಪ ತಿರುಗಾಡಿದರೂ ಮೈಯೆಲ್ಲ ಉರಿತ. `ಈ ನೋವಿನೊಂದಿಗೆ ಬದುಕುವುದನ್ನು ರೂಢಿಸಿಕೊಂಡಿದ್ದೇನೆ~- ನಸುನಗುತ್ತ ಹೇಳುತ್ತಾರೆ ಸಿಂಗ್.

ಬೀಜ ಸಂರಕ್ಷಣೆ
ಕೃಷಿಯ ಜೀವಾಳವೇ ಬಿತ್ತನೆ ಬೀಜ. ಅನಾದಿ ಕಾಲದಿಂದಲೂ ಬೀಜ ಸ್ವಾತಂತ್ರ್ಯವನ್ನು ರೈತರು ತಮ್ಮ ವಶದಲ್ಲೇ ಇಟ್ಟುಕೊಂಡು ಬಂದಿದ್ದಾರೆ. ಯಾವಾಗ ಈ ಸ್ವಾತಂತ್ರ್ಯ ಕಳೆದುಕೊಳ್ಳುತ್ತಾರೋ, ಅಂದಿಗೆ ಕೃಷಿ ಅವನತಿ ಆರಂಭ. ಈ ಮುನ್ನೆಚ್ಚರಿಕೆಯಿಂದಲೇ ರಘುವಂಶಿ ಬೀಜ ಸಂರಕ್ಷಣೆಗೆ ಗಮನ ಹರಿಸಿದರು. `ಹೇಗಿದ್ದರೂ ಶಾಲೆಗೆ ಹೋಗುವ ಆಸೆ ಬಿಟ್ಟಿದ್ದೆ. ತಂದೆ ಜತೆ ಹೊಲದಲ್ಲಿ ಕೆಲಸ ಮಾಡುತ್ತಿದ್ದೆ. ಶುದ್ಧ ತಳಿ ಗುರುತಿಸುವುದು, ಅದನ್ನು ಪ್ರತ್ಯೇಕವಾಗಿ ಬೆಳೆಸುವುದು, ಮತ್ತೆ ಶುದ್ಧಗೊಳಿಸಿ, ಬೀಜೋತ್ಪಾದನೆ ಮಾಡುವುದು... ಹೀಗೆ ಅವರ ಒಂದೊಂದೇ ಕೆಲಸವನ್ನು ಗಮನಿಸುತ್ತ ಕಲಿತೆ. ನಮ್ಮ ಹೊಲವೇ ಶಾಲೆಯಾಯಿತು; ತಂದೆಯೇ ಗುರು. ಅವರ ಜತೆಗಿನ ಅನುಭವದಿಂದ ಕಲಿತಿದ್ದು ಬೆಲೆ ಕಟ್ಟಲಾಗದ ವಿದ್ಯೆ~- ನೆನಪಿಸಿಕೊಳ್ಳುತ್ತಾರೆ ರಘುವಂಶಿ.

ಬನಾರಸ್ ಹಿಂದೂ ವಿ.ವಿ. ನಿವೃತ್ತ ಪ್ರಾಧ್ಯಾಪಕ ಮಹಾತ್ಮ ಸಿಂಗ್ ಒಮ್ಮೆ ರಘುವಂಶಿಗೆ ಬೊಗಸೆ ಗೋಧಿ ಬೀಜ ನೀಡಿದರು. ಅದನ್ನು ಒಂದೆಡೆ ಬಿತ್ತಿದ ಅವರು, ಉತ್ತಮ ತೆನೆ ಆಯ್ದು ಇನ್ನೊಂದೆಡೆ ಬೆಳೆಸಿದರು. ಐದು ವರ್ಷಗಳ ಬಳಿಕ ಇದಕ್ಕೆ `ಕುದರತ್~ (ಪ್ರಕೃತಿ) ಎಂದು ನಾಮಕರಣ ಮಾಡಿದರು. ಈ ತಳಿಯಿಂದಲೇ ಇನ್ನಷ್ಟು ತಳಿಗಳನ್ನು ಅಭಿವೃದ್ಧಿಪಡಿಸಿದರು. `ಸದ್ಯ ನಾನು ಗೋಧಿಯಲ್ಲಿ 80 ತಳಿ ಅಭಿವೃದ್ಧಿಪಡಿಸಿದ್ದೇನೆ.

ಇದರೊಂದಿಗೆ ಭತ್ತದ 25 ತಳಿ, ತೊಗರಿ, ಸಾಸಿವೆ, ಟೊಮ್ಯಾಟೊ, ಪಪ್ಪಾಯ, ಬೆಂಡೆ ಇತ್ಯಾದಿ ಹಲವಾರು ತಳಿಗಳಿವೆ. ಮರದಂತೆ ಬೆಳೆಯುವ `ಮರ ತೊಗರಿ~ಯ ಕೆಲವು ವಿಶೇಷ ತಳಿ ನನ್ನ ಸಂಗ್ರಹದ ವೈಶಿಷ್ಟ್ಯ. ಪ್ರತಿ ತಳಿ ಅಭಿವೃದ್ಧಿಗೆ ಏಳೆಂಟು ವರ್ಷ ಬೇಕಾಗುತ್ತವೆ. ಹೀಗಾಗಿ ನನ್ನ ಜಮೀನಿನ ಹಲವು ಭಾಗಗಳಲ್ಲಿ ಯಾವುದೇ ಕಾಲಕ್ಕೂ ತಳಿ ಸಂಶೋಧನೆ ಮಾಡುತ್ತಲೇ ಇರುತ್ತೇನೆ~ ಎನ್ನುತ್ತಾರೆ.

ಗುಟ್ಟು ರಟ್ಟು!
ತಳಮಟ್ಟದ ಸಂಶೋಧಕರನ್ನು ಗುರುತಿಸಿ, ಪ್ರೋತ್ಸಾಹಿಸುವ `ರಾಷ್ಟ್ರೀಯ ಅನುಶೋಧನಾ ಪ್ರತಿಷ್ಠಾನ~ (ಎನ್.ಐ.ಎಫ್.) ಪ್ರಕಾಶಸಿಂಗ್ ರಘುವಂಶಿಯನ್ನು ತನ್ನ ಬಳಗಕ್ಕೆ ಸೇರಿಸಿಕೊಂಡ ದಿನದಿಂದಲೇ, ಅವರ ಕಾರ್ಯಕ್ಕೆ ಹೆಚ್ಚಿನ ಬಲ ಬಂದಿದೆ. ಹಣಕಾಸಿನ ನೆರವು ನೀಡಿರುವ ಪ್ರತಿಷ್ಠಾನವು, ದೇಶದ ಎಲ್ಲೆಡೆ ಸಂಚರಿಸಿ ಬೀಜ ಸಂಪತ್ತು ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ಮನವಿ ಮಾಡಿತು. ಇದರನ್ವಯ ವಿವಿಧ ರಾಜ್ಯಗಳ ಹಳ್ಳಿಗೆ ಭೇಟಿ ನೀಡಿದ ರಘುವಂಶಿ, ರೈತರ ಸಭೆಗಳಲ್ಲಿ ಜೀಜ ಸಂಪತ್ತು ಕಾಯ್ದಿಟ್ಟುಕೊಳ್ಳುವ ಬಗ್ಗೆ ಉಪನ್ಯಾಸ ನೀಡಿದ್ದಾರೆ. ದೇಶದ ವಿವಿಧ ಸಂಘ-ಸಂಸ್ಥೆಗಳು ತಮ್ಮ ರೈತರನ್ನು ರಘುವಂಶಿ ಅವರ ಬಳಿಗೆ ಕಳಿಸುತ್ತಲೇ ಇರುತ್ತವೆ. ಹೀಗೆ ಭೇಟಿ ನೀಡುವವರಿಗೆ ಅವರು ತಳಿ ಶುದ್ಧತೆ ಹಾಗೂ ಉತ್ತಮ ತಳಿ ಆಯ್ಕೆ- ಅಭಿವೃದ್ಧಿಪಡಿಸುವ ಗುಟ್ಟನ್ನು ಬಿಚ್ಚಿಡುತ್ತಾರೆ!

`ಅಧಿಕ ಇಳುವರಿ ನೀಡಲು ಬೀಜಗಳು ಶುದ್ಧವಾಗಿರಬೇಕು. ರೈತರು ತಳಿ ಶುದ್ಧತೆ ಮರೆತೇ ಬಿಟ್ಟಿದ್ದಾರೆ. ಅಂಗಡಿಯಿಂದ ಬೀಜದ ಪ್ಯಾಕೆಟ್ ತರುವುದಕ್ಕಷ್ಟೇ ರೈತರ ಜ್ಞಾನ ಸೀಮಿತವಾಗಿದೆ. ನಾನು ಮಾಡಿದ್ದು ಇಷ್ಟೇ: ಒಂದು ಬೆಳೆಯಲ್ಲಿ ಅತ್ಯುತ್ತಮ ತಳಿ ಆಯ್ಕೆ ಮಾಡುವುದು, ಅದನ್ನು ಅಭಿವೃದ್ಧಿಪಡಿಸುವುದು ಹೇಗೆ? ಗಮನಿಸಬೇಕಾದ ಅಂಶಗಳೇನು? ಎಂಬೆಲ್ಲ ಮಾಹಿತಿ ರೈತರಿಗೆ ವಿವರಿಸುತ್ತಾ ಹೋದೆ. ನನ್ನಿಂದ ಬೊಗಸೆ ಬೀಜಗಳನ್ನು ಒಯ್ದ ಮಹಾರಾಷ್ಟ್ರದ ರೈತರು, ಈಗ ಲಕ್ಷಾಂತರ ವಹಿವಾಟು ನಡೆಸುತ್ತಿದ್ದಾರೆ. ರೈತರಿಗೆ ಸಾಧ್ಯವಾಗದ್ದು ಏನಿದೆ?~ ಎಂಬ ಪ್ರಶ್ನೆ ಅವರದು!

ರಘುವಂಶಿ ಅವರ ಹೊಲ ಈಗ ಹಲವು ನಾಟಿ ತಳಿಗಳ ಸೃಷ್ಟಿಯ ಲೋಕ. ಇರುವ ಸುಮಾರು ಮೂರು ಎಕರೆ ಜಾಗದಲ್ಲೇ ವರ್ಷವಿಡೀ ಹತ್ತಾರು ತಳಿ ಪ್ರಯೋಗ ನಡೆಯುತ್ತಲೇ ಇರುತ್ತವೆ. `ಇದು ಗೋಧಿಯ ಕುದರತ್-71 ತಳಿ. ನಿಮ್ಮ ಬಲಗಡೆ ಇದೆಯಲ್ಲ.. ಅದು ಕುದರತ್-64. ಇದರ ತೆನೆ ಎಷ್ಟು ಉದ್ದ ಇದೆ ಗೊತ್ತೇ?~ ಎಂದು ರಘುವಂಶಿ ಕೇಳುತ್ತ ಸ್ಕೇಲ್ ಹಿಡಿದು ಅಳತೆ ಮಾಡಿ ತೋರಿಸಿದರು. ಬರೋಬ್ಬರಿ 24 ಇಂಚು! ಜಮೀನಿನ ಕೊನೆಯ ಭಾಗದಲ್ಲಿ ಅರ್ಧ ಎಕರೆ ಜಾಗದಲ್ಲಿ ಮಿರಿಮಿರಿ ಮಿಂಚುವ ಬೆಳ್ಳನೆಯ ತೆನೆ ಹೊತ್ತು ನಿಂತಿರುವ ಗೋಧಿಯತ್ತ ನೋಡಿದಾಗ, `ಇಟಲಿಯಲ್ಲಿ ನಡೆದ ರೈತರ ಸಮಾವೇಶಕ್ಕೆ ಹೋದಾಗ ತಂದಿದ್ದ ಒಂದು ತೆನೆಯನ್ನು ಅಭಿವೃದ್ಧಿಪಡಿಸಿದ್ದೇನೆ. ಮುಂದಿನ ವರ್ಷ ರೈತರಿಗೆ ವಿತರಿಸುವ ಉದ್ದೇಶವಿದೆ. ಅದಕ್ಕಿನ್ನೂ ಯಾವುದೇ ಹೆಸರು ಇಟ್ಟಿಲ್ಲ. ಇಟಲಿಯ ತಳಿ, ಬಣ್ಣ ಬಿಳಿ... ನೀವೇ ಒಂದು ಹೆಸರು ಹೇಳಿ~ ಎಂದು ಕಣ್ಣುಮಿಟುಕಿಸಿದರು. ಬೀಜ ಕಂಪೆನಿಗಳ ಕಪಿಮುಷ್ಠಿಯಿಂದ ರೈತರನ್ನು ಪಾರು ಮಾಡಲು ಛಲ ತೊಟ್ಟಿರುವ ರಘುವಂಶಿ, ಎರಡು ಸಲ `ರಾಷ್ಟ್ರೀಯ ರೈತ ಅನುಶೋಧನಾ ಪ್ರಶಸ್ತಿ~ಗೆ ಭಾಜನರಾಗಿದ್ದಾರೆ. ನವದೆಹಲಿಯಲ್ಲಿ ನಡೆದ `ಎನ್.ಐ.ಎಫ್.~ನ ಸಮಾರಂಭದಲ್ಲಿ ಇವರು ಪ್ರದರ್ಶಿಸಿದ್ದ ಗೋಧಿ ಹಾಗೂ ಭತ್ತದ ತಳಿಗಳನ್ನು ಕಂಡ ಅಂದಿನ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಖುಷಿಯಿಂದ ಎಲ್ಲ ಮಾಹಿತಿ ಪಡೆದು, ಬೆನ್ನು ತಟ್ಟಿದ್ದರು. ರಾಷ್ಟ್ರಪತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರು ಕೂಡ ಗೋಧಿ-ಭತ್ತದ ತೆನೆ ನೋಡಿ, ವಿಸ್ಮಯಗೊಂಡು `ರಘುವಂಶಿ ಜ್ಞಾನವನ್ನು ರೈತರು ಬಳಸಿಕೊಳ್ಳಬೇಕು~ ಎಂದು ಕರೆ ನೀಡಿದ್ದರು. ದೇಶದ ವಿವಿಧ ಕಡೆ ನಡೆದ ಸಮಾವೇಶದಲ್ಲಿ ರಘುವಂಶಿ ಸ್ವೀಕರಿಸಿದ ಪ್ರಶಸ್ತಿ-ಸನ್ಮಾನಗಳಿಗಂತೂ ಲೆಕ್ಕವಿಲ್ಲ...

`ನಮ್ಮ ಹೊಲ; ನಮ್ಮ ಬೀಜ. ನಮ್ಮ ಆಹಾರ; ನಮ್ಮ ಆರೋಗ್ಯ~- ಇದು ರಘುವಂಶಿ ಧ್ಯೇಯವಾಕ್ಯ. ಬೀಜ ಸಾರ್ವಭೌಮತ್ವ ಮರಳಿ ಪಡೆಯಲು ಒಂದು ಹಿಡಿ ಬಿತ್ತನೆ ಬೀಜ ಸಾಕು. ಇದೇ ಅವರ ಬಿಡುಗಡೆಗೆ ದಾರಿ ಎನ್ನುವ ಅವರು, `ಒಂದೊಳ್ಳೆ ಅವಕಾಶ ಕೊಟ್ಟು ನೋಡಿ... ರೈತರನ್ನು ಸಂಕಷ್ಟಕ್ಕೆ ದೂಡಿ, ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆಯುವ ಬೀಜ ಕಂಪೆನಿಗಳು ದೇಶದಿಂದ ತಾವೇ ಓಡಿ ಹೋಗುವಂತೆ ಮಾಡುತ್ತೇನೆ~ ಎಂದು ಸವಾಲು ಹಾಕುತ್ತಾರೆ. 

ಬೀಜ ದಾನ
ಬೀಜಗಳನ್ನು ರೈತರೇ ಉತ್ಪಾದಿಸಿಕೊಳ್ಳಬೇಕು; ಈ ಸ್ವಾತಂತ್ರ್ಯ ಯಾವತ್ತೂ ರೈತರ ಕೈಯಿಂದ ಕಂಪೆನಿಗಳ ಕಪಿಮುಷ್ಠಿಗೆ ಸಿಲುಕಬಾರದು ಎಂಬುದು ರಘುವಂಶಿ ಎಚ್ಚರಿಕೆ. ಇದಕ್ಕಾಗಿಯೇ ಅವರು ಸಾವಿರಾರು ರೈತರಿಗೆ ಉಚಿತವಾಗಿ ಬೀಜ ನೀಡಿದ್ದಾರೆ; ನೀಡುತ್ತಲೇ ಇದ್ದಾರೆ. ಇವರ ಹೊಲದಲ್ಲಿ ಅಭಿವೃದ್ಧಿಗೊಂಡ ವಿವಿಧ ತಳಿಗಳ ಬೀಜಗಳು ಮಹಾರಾಷ್ಟ್ರ, ಛತ್ತೀಸಗಢ, ಬಿಹಾರ, ಉತ್ತರಾಖಂಡ, ಒರಿಸ್ಸಾ ಇತರ ರಾಜ್ಯಗಳ ರೈತರ ಗಮನ ಸೆಳೆದಿವೆ.

ಸಾಂಪ್ರದಾಯಿಕ ತಳಿಗಳಿಗೆ ಹೋಲಿಸಿದರೆ ಹೈಬ್ರಿಡ್ ತಳಿಗಳು ಹೆಚ್ಚು ಇಳುವರಿ ಕೊಡುತ್ತವೆ ಎಂಬ ನಂಬಿಕೆ ರೈತರಲ್ಲಿ ಬಲವಾಗಿ ಬೇರೂರಿದೆ. ಕೃಷಿ ವಿಜ್ಞಾನಿಗಳೂ ಪದೇ ಪದೇ ಇದೇ ಮಾತು ಹೇಳುತ್ತ, ರೈತರ ಮನದಲ್ಲಿ ಆ ಭಾವನೆ ಮೂಡಿಸಿದ್ದಾರೆ. ಆದರೆ ಇದೆಲ್ಲ ಬರೀ ಭ್ರಮೆ; ವಿಜ್ಞಾನಿಗಳು ಸೃಷ್ಟಿಸಿದ ಕಟ್ಟುಕತೆ ಎಂಬುದು ರಘುವಂಶಿ ವ್ಯಂಗ್ಯ.
“ನಾನು ಅಭಿವೃದ್ಧಿಪಡಿಸಿ, ಅಂತಿಮವಾಗಿ ರೈತರಿಗೆ ಕೊಡುತ್ತಿರುವ ಯಾವುದೇ ತಳಿ ನೋಡಿ. ಅದು ಈಗ ಮಾರುಕಟ್ಟೆಯಲ್ಲಿ ಸಿಗುವ ತಳಿಗಿಂತ ಶೇ 20-40ರಷ್ಟು ಅಧಿಕ ಇಳುವರಿ ಕೊಡುತ್ತಿದೆ. ಭತ್ತದಲ್ಲಿ ನನ್ನ ಕುದರತ್-1, 2 ಹಾಗೂ ಲಾಲ್ ಬಾಸ್ಮತಿ ತಳಿಗಳು ಕ್ರಮವಾಗಿ 25ರಿಂದ 30, 20ರಿಂದ 22 ಹಾಗೂ 15ರಿಂದ 17 ಕ್ವಿಂಟಲ್ ಇಳುವರಿ ನೀಡುತ್ತವೆ. ಪ್ರಾಕೃತಿಕ ವಿಕೋಪಗಳನ್ನು ಎದುರಿಸಿ, ಕೀಟ-ರೋಗ ನಿರೋಧಕ ಶಕ್ತಿಯೊಂದಿಗೆ ಕಡಿಮೆ ನೀರಿನಲ್ಲಿ ಇಷ್ಟೊಂದು ಅಧಿಕ ಪ್ರಮಾಣದ ಇಳುವರಿ ಕೊಡುವ ಹೈಬ್ರಿಡ್ ತಳಿ ಎಲ್ಲಿದೆ ಹೇಳಿ?~ ಎಂದವರು ಸವಾಲು ಹಾಕುತ್ತಾರೆ.
ಕರ್ನಾಟಕದಲ್ಲೂ ರಘುವಂಶಿ!

ಕರ್ನಾಟಕದಲ್ಲಿ ಹಲವು ರೈತರು ರಘುವಂಶಿ ಅವರಿಂದ ಈ ಪೈಕಿ ಗೋಧಿಯ ಕುದರತ್-1, 2, 3 ಹಾಗೂ 7 ತಳಿಗಳ ಬೀಜ ತರಿಸಿಕೊಂಡಿದ್ದಾರೆ. ಹಾವೇರಿ ಜಿಲ್ಲೆ ಹಿರೇಯಡಚಿಯ ನಾಗಪ್ಪ ನಿಂಬೆಗೊಂದಿ, ಈಶ್ವರಪ್ಪ ಬಣಕಾರ್, ಸಿಂದಗಿಯ ನಿಂಗೊಂಡಪ್ಪ ಈ ತಳಿ ಬೆಳೆದಿದ್ದಾರೆ. `ನಮ್ಮಲ್ಲಿ ಕುದರತ್-4 ತಳಿ ಇಳುವರಿ ಎಕರೆಗೆ 30 ಕ್ವಿಂಟಲ್‌ನಷ್ಟು ಬಂದಿರುವುದು ಅಚ್ಚರಿ ಮೂಡಿಸಿದೆ~ ಎಂದು ನಾಗಪ್ಪ ಹೇಳಿದರೆ, `ಭತ್ತದ ಕುದರತ್-7 ತಳಿಯು ಕಡಿಮೆ ನೀರಿನಲ್ಲಿ ಬೆಳೆಯುವ ಸಾಮರ್ಥ್ಯ ಪಡೆದಿದ್ದು ನಮ್ಮ ವಾತಾವರಣಕ್ಕೆ ಸೂಕ್ತವಾಗಿದೆ~ ಎಂದು ಸುರಪುರ ತಾಲ್ಲೂಕಿನ ಕಕ್ಕೇರಾ ಗ್ರಾಮದ ದೇದೇಂದ್ರಪ್ಪ ಬೋಯಿ ಹೇಳುತ್ತಾರೆ. ಇವರೆಲ್ಲ ರಘುವಂಶಿ ಅವರ ಕಾರ್ಯಕ್ಷೇತ್ರಕ್ಕೆ ಭೇಟಿ ನೀಡಿ ಬಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.