ADVERTISEMENT

ಬೆಳದಿಂಗಳಲ್ಲಿ ಕಂಡ ಅಮಾವಾಸ್ಯೆಯ ಚಿತ್ರಗಳು

ಕವಿತೆ

ಟಿ.ಯಲ್ಲಪ್ಪ
Published 15 ಜೂನ್ 2013, 20:00 IST
Last Updated 15 ಜೂನ್ 2013, 20:00 IST

1
ಅಮ್ಮನ
ಸಿಲ್ವಾರದ ತಟ್ಟೆಯ ಮೇಲೆ
ನಾನು
ಕಲ್ಲಿಜ್ಜಲಿನಿಂದ ಬರೆದ
ನನ್ನದೇ ಕನಸುಗಳು
ಈ ಹುಣ್ಣಿಮೆಯ ಬೆಳದಿಂಗಳಲ್ಲಿ
ಕಾಣುತ್ತಿದೆ ನನಗೆ
ಅವರಿವರ ಕೆಂಗಣ್ಣ ಉರಿಯಲ್ಲಿ
ಸುಟ್ಟು ಕರಿಕಲಾದ
ನನ್ನಪ್ಪ ಅವ್ವಂದಿರ
ಜೀವಂತ ಶವಗಳಂತೆ!

2
ಅಮ್ಮನ
ಗುಡಿಸಲ ಗೋಡೆ
ಗೂಡುಗಳ ಸುತ್ತೆಲ್ಲಾ
ಗೂಡು ಕಟ್ಟಿರುವ ನವುಲುಗಳ
ಕೆಮ್ಮಣ್ಣ ಚಿತ್ತಾರ
ಈ ಬೆಳದಿಂಗಳ ಬೆಳಕಲ್ಲಿ
ಕಾಣುತ್ತಿದೆ ನನಗೆ
ನೆತ್ತರಲೇ ಅದ್ದಿ ತೆಗೆದಂತೆ!
ಅವಳೇ ಬಿಡಿಸಿರುವ
ಮರಿ ನವುಲ ಸಂತತಿ
ಸರ್ಪಗಳ ಬಾಯಿಗೆ
ಸಿಕ್ಕಿ ಬಿಕ್ಕುತ್ತಿರುವಂತೆ

3
ಗುಡಿಸಲ ತಡಿಕೆಯ ಹಿಂದೆ
ತಳಮಳಗೊಂಡು
ತಲೆಬಾಗಿ ಕುಂತಿರುವ
ಅವಳ ಪ್ರಾಯಕ್ಕೆ ಬಂದ ಮಗಳ
ಎದೆಯ ಮೇಲಿನ ಸೆರಗು
ಕಣ್ಣ ಒಳಗಿನ ಕನಸು
ಎಲ್ಲವೂ ರಕ್ತಸಿಕ್ತವಾದಂತೆ
ಕಾಣುತ್ತಿದೆ ನನಗೆ
ಆ ಬೆಳದಿಂಗಳ ರಾತ್ರಿಯಲ್ಲಿ!

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.