
ಪಾತಾಳಕೂ ಇಳಿಯದ ವ್ಯೋಮಕೂ ನೆಗೆಯದ
ಸತ್ತ ಲಿಫ್ಟ್ ಶವದ ಮನೆಯಂತಿರುವಾಗ
ಅಪಾರ್ಟ್‌ಮೆಂಟಿನ ಹನ್ನೊಂದು ಮಹಡಿಗಳ ಹತ್ತಿ ಹೋಗುವ
ಬೊಜ್ಜಿನ ಶಿಲಾಬಾಲಿಕೆಯ ಪೃಷ್ಠದಲಿ ಜಕಣಾಚಾರಿ
ಜೋಕರ್‌ನಂತೆ ಇಸ್ಪೀಟ್ ಎಲೆ ಕಲೆ ಕಲೆಸಿ
ಅಂದರ್ ಬಹಾರ್‌ಗೆ ಆಹ್ವಾನಿಸುವ
ದಣಿಯದ ಬೆವರದ ರೆಪ್ಪೆ ಬಡಿಯದ
ಬೆತ್ತಲೆ ಮಾಂಸ ಪರ್ವತಗಳನೆದುರಿಗಿಟ್ಟುಕೊಂಡು
ಕೆತ್ತುವನು ಮುಖ ನಗು ಮೊಲೆಗಳ
ಯುದ್ಧವಿಲ್ಲದೆ ಲೋಕಗೆಲ್ಲುವ ಹತಾರುಗಳ
ಯಾವುದದು ಮುಖದ ಮೇಲಿಹ ದೈವಕಳೆಯೊಂದು
ಮುಟ್ಟಲು ಮೆಲ್ಲನಾವಿಯಾಗುವ ಘಳಿಗೆ?
ಯಾವುದದು ಮುಪ್ಪಾದ ಮೇಲೆ ಮೈಯೆಲ್ಲಾ ಇಂದ್ರಿಯವಲ್ಲ ಅತೀಂದ್ರಿಯವಾಗುವ ಘಳಿಗೆ?
ವ್ರಣ ಕೀವು ರಾಗ ರೋಗ ಕಾಯ ಮಾಯದ ಕೂಗು ಸಾಕು ಸಾಕಿನ್ನು
ಪರುಷದ ಮಣಿಯಾಡಿದ ಮೇಲೆ
ಕಿಲುಬು ಸೂರ್ಯನೂ ಸ್ವರ್ಣವಾಗಬೇಕು
ಹರುಷದ ಬೆರಳಾಡಿದ ಮೇಲೆ
ನಾಭಿಯಾಳದಿಂದ ನಾದ ಹೊಮ್ಮಬೇಕು
ಕಟಕಟಕಟಕಟಕಟಕಟ
ದಿನಾ ಆಕಾರ ನಿರಾಕಾರಗಳಲಿ ಮುಳುಗಿ ಸಾಕಾರಗೊಳ್ಳುವನು
ಕಲ್ಲು ಕಟೆಯುವ ಕಲ್ಲುಕುಟಿಗ ಜಕಣಾಚಾರಿ
ಶಿವನ ಹೆಂಗಸುತನ ಶಿವೆಯ ಗಂಡಸುತನ ಒಂದಾಗಿ
ಕರೆಂಟು ಬಂತೋ ಅಂಗೋಪಾಂಗಗಳಿಗೆ
ಮುಗಿಯಿತು ಕಲಾಸೃಷ್ಟಿ ವಿದ್ಯುತ್ ಸಂಚಾರ
ನೆಲ ಬಿಟ್ಟೇಳುವ ಲಿಫ್ಟಿನ ಶಿಲಾಬಾಲಿಕೆಯ ಸಂಸಾರ
ಕಲೆಯ ಮೊಲೆ ಕಂಪನಕೆ ಭೂಕಂಪನವಾದಂತೆ
ಮಲ ಮೂತ್ರ ಅವಸರವಿರದ ಸ್ವರ್ಗಾರೋಹಣ...
ಥತ್ !
ನಾಯಿಗೆ ಹುಟ್ಟಿದ ನರಕದವ
ಬೀಸಿ ಬಿಟ್ಟ ಉಳಿಯ ಚಳ್ಳನೆ
ಆಕಾಶ ಮುಖಕ್ಕೆ ಬಡಿದು ಚಕಳೆ ಹಾರಿದಂತೆ
ಮದನಕನ್ನಿಕೆಯ ಮೊಲೆ ತುದಿ ಸಿಡಿದು
ಧೊಪ್ಪನೆ ಬಿತ್ತು ಕೆಳಗೆ ಕೈಲಾಸದ ತಂತು ಕಡಿದು
ಎಷ್ಟಾದರೂ
ಪೂರ್ಣಗೊಂಡದ್ದು ಸ್ವರ್ಗಕ್ಕೆ
ಊನಗೊಂಡದ್ದು ಮರ್ತ್ಯಕ್ಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.