ADVERTISEMENT

ಭಾರತದ ಹೌದಿನಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 19:30 IST
Last Updated 3 ಸೆಪ್ಟೆಂಬರ್ 2011, 19:30 IST

ಜಾದೂ ತಂತ್ರಗಳನ್ನು ಮುತ್ತುಕಾಡ್ ಕಲಿತದ್ದು ಯಾರಿಂದ?
ವಳಕ್ಕುನ್ನಂ ನಂಬೂದರಿ, ಮಲಾಯತ್ ಹಾಗೂ  ಪಿ.ಸಿ.ಸರ್ಕಾರ್ ಜೂನಿಯರ್ ತಮ್ಮ ಗುರುಗಳೆಂದು ಗೋಪಿನಾಥ್ ಮುತ್ತುಕಾಡ್ ಭಾವಿಸಿದ್ದಾರೆ. ಅವರು ತಮ್ಮ ಹತ್ತನೇ ವಯಸ್ಸಿನಲ್ಲಿ ಮೊದಲ ಪ್ರದರ್ಶನ ನೀಡಿದರು.

1996ರಲ್ಲಿ ಮುತ್ತುಕಾಡ್ ಏಷ್ಯಾದಲ್ಲೇ ಮೊದಲ ಮ್ಯಾಜಿಕ್ ಅಕಾಡೆಮಿಯನ್ನು ಸ್ಥಾಪಿಸಿದರು. ತಿರುವನಂತಪುರದಲ್ಲಿ ಸ್ಥಾಪಿತವಾದ ಈ ಅಕಾಡೆಮಿಯು ಕೇರಳ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿದೆ.

ಅವರ ಧ್ಯೇಯೋದ್ದೇಶವೇನು?
`ಮ್ಯಾಜಿಕ್  ವಿತ್ ಎ ಮಿಷನ್~ ಎಂಬುದು ಅವರ ಧ್ಯೇಯವಾಕ್ಯ. ದೇಶದಲ್ಲಿ ವಿವಿಧೆಡೆ ಮ್ಯಾಜಿಕ್  ಶೋಗಳನ್ನು ಆಯೋಜಿಸುವ ಮೂಲಕ ಅವರು ರಾಷ್ಟ್ರೀಯ ಭಾವೈಕ್ಯತೆ, ಮದ್ಯಪಾನದ ದುಷ್ಪರಿಣಾಮ, ಸಾಕ್ಷರತೆಯ ಮಹತ್ವ , ಭಯೋತ್ಪಾದನೆಯ ಆತಂಕಗಳು ಮೊದಲಾದ ವಿಷಯಗಳ ಕುರಿತು ಅರಿವು ಮೂಡಿಸಿದ್ದಾರೆ.

ಮುತ್ತುಕಾಡ್ ಅವರ ಜನಪ್ರಿಯ ತಂತ್ರಗಳಾವುವು?
ಕೈಗೆ ಕೋಳ ತೊಟ್ಟುಕೊಂಡ ಮುತ್ತುಕಾಡ್ ಪ್ಲಾಸ್ಟಿಕ್ ಚೀಲದಲ್ಲಿ ಬಂಧಿಯಾಗುತ್ತಾರೆ. ಆ ಚೀಲವನ್ನು ನೀರಿಗೆ ಹಾಕಲಾಗುತ್ತದೆ. ಆ ನೀರಿಗೆ ವಿದ್ಯುತ್ ಹರಿಸುತ್ತಾರೆ. ಕ್ಷಣಾರ್ಧದಲ್ಲೇ ಮುತ್ತುಕಾಡ್ ತಮ್ಮ ಕಟ್ಟು ಬಿಡಿಸಿಕೊಂಡು ಹೊರಬಂದು ಚಕಿತಗೊಳಿಸುತ್ತಾರೆ. `ವಾಟರ್ ಟಾರ್ಚರ್ ಎಸ್ಕೇಪ್ ಆ್ಯಕ್ಟ್~ ಎಂದೇ ಜನಪ್ರಿಯವಾದ ಈ ತಂತ್ರಕ್ಕೆ ಅವರು ಹೆಸರುವಾಸಿ.

2007ರಲ್ಲಿ ಮುತ್ತುಕಾಡ್ ಹಾಗೂ ಅವರ ತಂಡವು ಸಿಕ್ಕಿಂನ ನಾತು ಲಾ ಎಂಬಲ್ಲಿ 4,310 ಮೀಟರ್ ಎತ್ತರ ಪ್ರದೇಶದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಇರುವ ಕಡೆ ವಿವಿಧ ಕೈಚಳಕಗಳನ್ನು ತೋರಿದ್ದು ಇನ್ನೊಂದು ವಿಕ್ರಮ.

ಅವರಿಗೆ ದೊರೆತ ವಿಶೇಷ ಪ್ರಶಸ್ತಿಯಾವುದು?
`ಮ್ಯಾಜಿಕ್ ಜಗತ್ತಿನ ಆಸ್ಕರ್~ ಎಂದೇ ಹೆಸರಾದ ಮರ್ಲಿನ್ ಪ್ರಶಸ್ತಿಗೆ ಅವರು ಭಾಜನರಾದರು. `ಅಂತರ್‌ರಾಷ್ಟ್ರೀಯ ಜಾದೂಗಾರರ ಸೊಸೈಟಿ~ಯು ಈ ಪ್ರತಿಷ್ಠಿತ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುತ್ತದೆ.

ಈ ಪ್ರಶಸ್ತಿ ಸಂದ ಭಾರತದ ಎರಡನೇ  ಜಾದೂಗಾರ ಎಂಬ ಗೌರವ ಮುತ್ತುಕಾಡ್ ಅವರದ್ದಾಯಿತು. ಇದಕ್ಕೂ ಮೊದಲು ಭಾರತದ ಪಿ.ಸಿ.ಸರ್ಕಾರ್ ಜೂನಿಯರ್ ಅವರಿಗೆ ಮಾತ್ರ ಈ ಪ್ರಶಸ್ತಿ ಸಂದಿತ್ತು. ಡೇವಿಡ್ ಕಾಪರ್‌ಫೀಲ್ಡ್, ಲು ಚೆನ್ ಹಾಗೂ ಕ್ರೈಸಿಸ್ ಏಂಜಲ್ ಇತ್ತೀಚಿನ ವರ್ಷಗಳಲ್ಲಿ ಈ ಪ್ರಶಸ್ತಿಗೆ ಪಾತ್ರರಾದವರು.

ಮರ್ಲಿನ್ ಪ್ರಶಸ್ತಿ ಸಂದದ್ದು ಯಾವ ಕೈಚಳಕಕ್ಕೆ?
ಹತ್ತು ಪ್ರಮುಖ ಪತ್ರಿಕೆಗಳ ಸುದ್ದಿ ತಲೆಬರಹಗಳನ್ನು ಅವು ಪ್ರಕಟವಾಗುವ 36 ಗಂಟೆ ಮುಂಚೆ ಮುತ್ತುಕಾಡ್ ನಿಖರವಾಗಿ ಹೇಳಿದರು. ಚೀಟಿಯೊಂದರಲ್ಲಿ ತಾವು ಅಂದಾಜು ಮಾಡಿದ ತಲೆಬರಹವನ್ನು ಬರೆದು, ಬ್ಯಾಂಕ್‌ನಲ್ಲಿ ಇಡುತ್ತಿದ್ದರು. ಅವರು ಯಾವ  ದಿನದ ತಲೆಬರಹಗಳನ್ನು ಅಂದಾಜು ಮಾಡಿದ್ದರೋ, ಆ ದಿನದ ಪತ್ರಿಕೆಗಳನ್ನು ತೆಗೆದು, ಮೊದಲೇ ಬರೆದಿಟ್ಟ ತಲೆಬಹರಗಳೊಂದಿಗೆ ಹೋಲಿಸಿ ನೋಡಲಾಯಿತು. ಇದು ಅಪರೂಪದ `ಟ್ರಿಕ್~ ಎಂದು ಪರಿಗಣಿತವಾದದ್ದೇ ಮರ್ಲಿನ್ ಪ್ರಶಸ್ತಿ ಅವರದ್ದಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.