ಭೂ ತಾನ್ ದೇಶದ ಇಪ್ಪತ್ತು ಜಿಲ್ಲೆಗಳಲ್ಲಿ ಒಂದು ಪುನಖಾ ಝ್ಸಾಂಗ್‌ಖಾಗ್. ರಾಜಧಾನಿ ಥಿಂಪುವಿನಿಂದ 72 ಕಿಲೋಮೀಟರ್ ದೂರವಿರುವ ಪುನಖಾ, ಭೂತಾನಿನ ಬಹಳ ಮುಖ್ಯವಾದ ಮತ್ತು ದೊಡ್ಡದಾದ ಕೋಟೆಯನ್ನು (ಅವರ ಭಾಷೆಯಲ್ಲಿ ಝ್ಸಾಂಗ್ ಎಂದು ಕರೆಯುತ್ತಾರೆ) ಹೊಂದಿರುವ ಜಿಲ್ಲೆ. ಮೊಚು ಹಾಗು ಪೊಚು ನದಿಗಳ ನಡುವೆ ಕಟ್ಟಲಾಗಿರುವ 17ನೇ ಶತಮಾನಕ್ಕೆ ಸೇರಿದ ಈ ಕೋಟೆ ಅನೇಕ ಕಾರಣಗಳಿಂದ ಮಹತ್ವ ಪಡೆದಿದೆ.
ಭೂತಾನಿನ ಪೂಜನೀಯ ವ್ಯಕ್ತಿಯಾದ ಶಬ್ರದುಂಗ್ ಎಂಬ ಸಂತನ ದೇಹವನ್ನು ಇಲ್ಲಿ ಸಂರಕ್ಷಿಸಿ ಇಡಲಾಗಿದೆ. ಇಲ್ಲಿಗೆ ಸಂದರ್ಶಕರಿಗೆ ಪ್ರವೇಶವಿಲ್ಲ, ಇಬ್ಬರು ಭಿಕ್ಕುಗಳು ಮತ್ತು ಭೂತಾನಿನ ರಾಜ ಮತ್ತವನ ಧರ್ಮಗುರುವಿಗೆ ಮಾತ್ರ ಪ್ರವೇಶ.
ಭೂತಾನಿನಲ್ಲಿ ಹಬ್ಬಗಳಿಗೆ ‘ತ್ಸೆಚು’ ಎಂದು ಹೆಸರು. ಸದಾ ನಗು ನಗುತ್ತಿರುವ ಭೂತಾನಿನ ಜನರು ವರ್ಷವಿಡೀ ಅನೇಕ ತ್ಸೆಚುಗಳನ್ನು ಬೇರೆ ಬೇರೆ ಕೋಟೆಗಳಲ್ಲಿ ಆಚರಿಸುತ್ತಾರೆ. ಧರ್ಮಮುಖಂಡರಾದ ಜೆಕೆಂಪೊ ಅವರನ್ನು ಮಂಗಳವಾದ್ಯಗಳೊಂದಿಗೆ ಕರೆತರುವ ಕಾರ್ಯಕ್ರಮ ಮೂರು ದಿನ ನಡೆಯುತ್ತದೆ.
ಇಂತಹ ದಿನಗಳಲ್ಲಿ ಇಡೀ ಊರಿನ ಜನರು ತಮ್ಮ ಬಳಿ ಇರುವ ಅತ್ಯುತ್ತಮ ಉಡುಗೆಗಳನ್ನು ತೊಟ್ಟು ಚಾಪೆ, ಊಟ, ತಿಂಡಿ, ಚಹಾ ಸಮೇತ ಮನೆಯಿಂದ ಮುಂಜಾನೆಯೇ ಹೊರಟು ಕೋಟೆ ಸೇರುತ್ತಾರೆ.
ಪುನಖಾದಲ್ಲಿ ಪ್ರತಿ ವರ್ಷ ಮಾರ್ಚ್ 11ರಿಂದ 13ರವರೆಗೆ ವಿಶೇಷ ಹಬ್ಬ ನಡೆಯುತ್ತದೆ. ಅದು ಅವರ ಪುರಾತನ ಗುರು ಪದ್ಮಸಂಭವನಿಗೆ ಮೀಸಲಾದ ಗಾಢ ಬಣ್ಣಗಳ ಉಡುಗೆ ಮತ್ತು ಮುಖವಾಡಗಳ ಹಬ್ಬ. ಈತ ತಾಂತ್ರಿಕ ಬೌದ್ಧಧರ್ಮವನ್ನು ಹಿಮಾಲಯದ ಪ್ರಾಂತ್ಯಗಳಿಗೆ ಪರಿಚಯಿಸಿದವನು. ಈ ಮಹಾಗುರುವಿನ ಸಾಧನೆಗಳನ್ನು ನೆನಪಿಸಿಕೊಳ್ಳುವುದು ಹಬ್ಬದ ಉದ್ದೇಶ.
ಹಬ್ಬವೆಂದರೆ ಹಣ್ಣು, ಹೂವು–ಕಾಯಿಗಿಂತ ಗಾಢ ಬಣ್ಣದ ಕಸೂತಿ ಮಾಡಿರುವ ಬಟ್ಟೆಗಳನ್ನು ಧರಿಸಿ ಬರುವುದನ್ನು ಕೂಡ ಸಮರ್ಪಣೆ ಎಂದೇ ಇಲ್ಲಿನ ಜನ ತಿಳಿಯುತ್ತಾರೆ. ಕೋಟೆಯ ಒಳ ಅಂಗಳದಲ್ಲಿ ಭೂತಾನಿನ ಸಾಂಪ್ರದಾಯಿಕ ನೃತ್ಯದ ಮೂಲಕ ಗುರು ಪದ್ಮಸಂಭವರ ಅವತಾರ ಹಾಗೂ ಅವರು ಮಾಡಿದ ಶತ್ರು ಸಂಹಾರವನ್ನು ಸೊಗಸಾದ ಕತೆಗಳ ಮೂಲಕ ಅಭಿನಯಿಸಿ ತೋರಿಸುತ್ತಾರೆ.
ಬೌದ್ಧಭಿಕ್ಕುಗಳು ಮುಖವಾಡ, ಬಣ್ಣದ ದಿರಿಸು ತೊಟ್ಟು ನೃತ್ಯಗಳನ್ನು ಮಾಡುತ್ತಾರೆ.
ಕೊಲ್ಕತ್ತಾ ಅಥವಾ ದೆಹಲಿಯಿಂದ ವಿಮಾನದ ಮೂಲಕ ಪಾರೊ ತಲುಪಬಹುದು. ಅಲ್ಲಿಂದ ಥಿಂಪು ಮೂಲಕ ಪುನಖಾಗೆ ನಾಲ್ಕು ಗಂಟೆ ಪ್ರಯಾಣ. ರಸ್ತೆ ಮಾರ್ಗದಲ್ಲಿ ಸಂಚರಿಸುವುದಾದರೆ ಪೂಂಚಲಿಂಗ್‌ನಿಂದ ಥಿಂಪುವಿನ 176 ಕಿ.ಮೀ ಹಾದಿ ಸವೆಸಿ, ಅಲ್ಲಿಂದ 72 ಕಿ.ಮೀ. ಇರುವ ಪುನಖಾ ತಲುಪಬಹುದು.
ಹಸನ್ಮುಖಿಗಳ ನಾಡಾದ ಭೂತಾನಿನ ಪುನಖಾದಲ್ಲಿನ ಮೂರು ದಿನಗಳ ಬಣ್ಣ ಬಣ್ಣದ ಉಡುಗೆಗಳ, ಭಿನ್ನವಿಭಿನ್ನವಾದ ಮುಖವಾಡಗಳ, ನಂಬಿಕೆ, ಸಂತೋಷ, ಸಂಭ್ರಮದ ಚಿತ್ತಾಕರ್ಷಕ ಹಬ್ಬವನ್ನು ವಿದೇಶೀಯ ಪ್ರವಾಸಿಗರು ಕ್ಯಾಮೆರಾ ಕಣ್ಣಲ್ಲಿ ತುಂಬಿಸಿಕೊಳ್ಳಲು ನೆರೆದಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.