ಶುದ್ಧ ಬಿಳಿ ದಳಗಳಿರುವ, ಆಘ್ರಾಣಿಸಿದಷ್ಟೂ ಮುದನೀಡುವ ಪರಿಮಳ ಬೀರುವ ಹೂವೇ ಮಲ್ಲಿಗೆ. ಪರ್ಷಿಯನ್ನರು ಈ ಹೂವನ್ನು ಯಾಸ್ಮಿನ್ ಎಂದು ಕರೆಯುತ್ತಾರೆ. ಅಂದರೆ, ‘ದೇವರ ಉಡುಗೊರೆ’ ಎಂದರ್ಥ.
ಬಳ್ಳಿಗಳಲ್ಲಿ ಬೆಳೆಯುವ ಮಲ್ಲಿಗೆಯಲ್ಲಿ 200ಕ್ಕೂ ಹೆಚ್ಚು ಬಗೆಗಳಿವೆ. ಏಷ್ಯಾದ ಹೆಚ್ಚೇನೂ ಉಷ್ಣವಲ್ಲದ ವಲಯಗಳಲ್ಲಿ ಇವು ಹೆಚ್ಚಾಗಿ ಬೆಳೆಯುತ್ತವೆ. ಪ್ರಾಚೀನ ಚೀನೀಯರ, ಈಜಿಪ್ಟಿಯನ್ನರ ಹಾಗೂ ಪರ್ಷಿಯನ್ನರ ಪಠ್ಯಗಳಲ್ಲಿ ಮಲ್ಲಿಗೆಯ ಉಲ್ಲೇಖವಿದೆ.
ನಿತ್ಯಹರಿದ್ವರ್ಣ ಮಲ್ಲಿಗೆ ಬಳ್ಳಿಗಳು ಮೂರರಿಂದ ನಾಲ್ಕು ಮೀಟರ್‌ನಷ್ಟು ಉದ್ದ ಬೆಳೆಯಬಲ್ಲವು. ಎಲೆಗಳ ಬಣ್ಣ ಗಾಢ ಹಸಿರು. ಹೂವಿನ ಆಕಾರವು ಆಯಾ ಬಗೆಗೆ ತಕ್ಕಂತೆ ಭಿನ್ನವಾಗಿರುತ್ತದೆ. ಬಹುತೇಕ ಪ್ರಭೇದಗಳ ಮಲ್ಲಿಗೆ ಹೂಗಳು ಹೆಚ್ಚೆಂದರೆ 2.5 ಸೆಂ.ಮೀ. ಉದ್ದ ಇರುತ್ತವೆ. ಜೂನ್‌ನಿಂದ ಅಕ್ಟೋಬರ್ ಅವಧಿಯಲ್ಲಿ ಈ ಹೂಗಳು ಹೆಚ್ಚಾಗಿ ಬಿಡುತ್ತವೆ. ಸಂಜೆ ವೇಳೆ ಅವುಗಳ ಪರಿಮಳ ಹೆಚ್ಚು ಆವರಿಸಿಕೊಳ್ಳುತ್ತದೆ.
ನಾಟಿ ಔಷಧಗಳಲ್ಲಿ ಮಲ್ಲಿಗೆ ಹೂಗಳನ್ನು ಬಳಸುತ್ತಾರೆ. ಮಲ್ಲಿಗೆ ಎಣ್ಣೆ ಅತಿ ದುಬಾರಿ. ಸಾವಿರಾರು ಹೂಗಳಿಂದ ತುಸುವೇ ಎಣ್ಣೆ ತೆಗೆಯಲು ಸಾಧ್ಯ. ಈ ಎಣ್ಣೆಗೆ ಔಷಧಿ ಗುಣವಿದೆ.
ಭಾರತದಲ್ಲಿ ಬೇರ ಬೇರೆ ಭಾಷೆಗಳಲ್ಲಿ ಮಲ್ಲಿಗೆಯನ್ನು ಭಿನ್ನ ರೀತಿಯಲ್ಲಿ ಕರೆಯುತ್ತಾರೆ. ಹಿಂದಿಯಲ್ಲಿ ಜೂಹಿ, ಚಮೇಲಿ, ಮರಾಠಿಯಲ್ಲಿ ಮೊಗ್ರಾ, ತಮಿಳಿನಲ್ಲಿ ಮಲ್ಲಿಗೈ, ಒಡಿಯಾದಲ್ಲಿ ಮಹ್ಲಿ ಎಂದು ಕರೆಯುತ್ತಾರೆ. ಮಲ್ಲಿಗೆ ಮುಡಿಯುವುದು ಭಾರತೀಯ ಮಹಿಳೆಯರಿಗೆ ಸಂತೋಷದ ವಿಷಯ.
‘ಜಾಸ್ಮಿನಮ್ ಅಫಿಸಿನೇಲ್’ ಎನ್ನುವುದು ಪಾಕಿಸ್ತಾನದ ರಾಷ್ಟ್ರಪುಷ್ಪ. ಥಾಯ್ಲೆಂಡ್‌ನಲ್ಲಿ ಬೆಳೆಯುವ ಅಕ್ಕಿಯ ಬಗೆಯೊಂದನ್ನು ಮಲ್ಲಿಗೆ ಎಂದು ಕರೆಯುತ್ತಾರೆ. ಫ್ರೆಂಚರು ಆಹಾರ ಹಾಗೂ ಪಾನೀಯಗಳಲ್ಲಿ ಜಾಸ್ಮಿನ್ ರಸವನ್ನು ಉಪಯೋಗಿಸುತ್ತಾರೆ. ‘ಮೈಸೂರ ಮಲ್ಲಿಗೆ’, ‘ಮಂಗಳೂರು ಮಲ್ಲಿಗೆ’ಗಳು ಕರ್ನಾಟಕದಲ್ಲಿ ಜನಪ್ರಿಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.