ADVERTISEMENT

ಮಾತಿಗೊಲ್ಲದ ರಂಗೋಲಿ ಮಾಸಿಹೋಗುವ ಮುನ್ನ...

ಕವಿತೆ

ಕಾವ್ಯಶ್ರೀ ನಾಯ್ಕ
Published 8 ಮಾರ್ಚ್ 2014, 19:30 IST
Last Updated 8 ಮಾರ್ಚ್ 2014, 19:30 IST
ಮಾತಿಗೊಲ್ಲದ ರಂಗೋಲಿ ಮಾಸಿಹೋಗುವ ಮುನ್ನ...
ಮಾತಿಗೊಲ್ಲದ ರಂಗೋಲಿ ಮಾಸಿಹೋಗುವ ಮುನ್ನ...   


ಬೀದಿಕೊನೆಯ ಮನೆ ಸುತ್ತ
ನನ್ನ ಬೆವರು ಬೆರೆಸಿದ ಘಮ
ಮೂಗಿಗಡರುತ್ತಲೂ
ಹೆಬ್ಬಾಗಿಲ ಮುಂದಣ ರಂಗವಲ್ಲಿ
ಜಿಗಿವ ಜಿಂಕೆಯಾಗುತ್ತದೆ,
ಬೆನ್ನ ಬೇತಾಳವಾಗಿ
ಕತೆಗೆ ಕಿವಿಯಾಗುವಂತೆ
ಗೋಗರೆಯುತ್ತದೆ...


ಚುಕ್ಕಿಯೊಂದು ಎರಡಾಗಿ, ನಾಲ್ಕಾಗಿ
ಎಂಟು ಹದಿನೆಂಟಾಗಿ ಎಳೆಯೊಡೆದು
ಬಳ್ಳಿ ಚಪ್ಪರವಾಗಿ ಮೊಗ್ಗು ಹೂವಾಗಿ
ಮೈದುಂಬಿಕೊಂಡಿದ್ದಕ್ಕೆ ಬೇರೆಯವರೇಕೆ?
ನಾನೇ ಸಾಕ್ಷಿಹೇಳುತ್ತೇನೆ
ಆದರೆ, ಹಿಂದೆಂದೂ ರಂಗೋಲಿ
ಹೆಗಲೇರಿ ಕುಳಿತು ಹಟಮಾಡಿರಲಿಲ್ಲ.


ಒಮ್ಮೆ ಬರುವ ಆಷಾಢಕ್ಕೆ
ಮೈಯುಡ್ಡುವುದೇನೂ ದೊಡ್ಡಮಾತಲ್ಲ
ಪದೇಪದೇ ಆಷಾಢದ ಕೆನ್ನೀರಲ್ಲಿ
ಮಿಂದೆದ್ದು ತೊಪ್ಪೆಯಾಗಿ
ಹೆಬ್ಬಾಗಿಲಿನಾಚೆ ಪಂಚಮಳಾಗುವಾಗಿನ
ನನ್ನನ್ನು ನೀವು ಗಮನಿಸಿಯೇ ಇಲ್ಲ
ಗಮನಿಸಿದ್ದರೆ, ಕಣ್ಣಂಚಲಿ ಪಸೆಯೊಡೆದ
ನೋವನ್ನು ಒಳಗು ಮಾಡಿಕೊಳ್ಳದೇ
ಇರುತ್ತಿರಲಿಲ್ಲ.

ADVERTISEMENT


ಬಿಕರಿಗೀಗ ಸಕಾಲ
ಶ್! ಹರಾಜು ಹಿಡಿಯುವವರು
ಏನು ಬೇಕಾದರೂ ಹೇಳಬಹುದು
ರಂಗೋಲಿಯೆಳೆಗಳು
ತೀರಾ ದಪ್ಪ ಸಪೂರವಿರಬೇಕಿತ್ತು.
ಬಣ್ಣ ಡಲ್ಲಾಯಿತು ಬೆಳ್ಳಗಿರಬೇಕಿತ್ತು


ಗರೀಗರೀ ಗಾಂಧೀ ನೋಟುಗಳು
ಕೈಬದಲಿಸುತ್ತಿರುವಾಗಲೇ
ಹೆಗಲೇರಿ ಕುಳಿತ ರಂಗೋಲಿ
ಹನಿಯಾಗಿ ಹರಿಯಲಾರಂಭಿಸಿದ್ದು
ಮಾತಿಗೊಲ್ಲದ ಅದು
ಮಾಸಿಹೋಗುವ ಮುನ್ನ
ಹೆಬ್ಬಾಗಿಲ ದಾಟಿ, ಹೆದ್ದಾರಿಯಾಚೆ
ಪಯಣ ಬೆಳೆಸಿದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.