ADVERTISEMENT

ಮಿನುಗು ಮಿಂಚು:ಮೊದಲ ಫೋಟೊ ಪತ್ರಕರ್ತೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 19:30 IST
Last Updated 23 ಜೂನ್ 2012, 19:30 IST
ಮಿನುಗು ಮಿಂಚು:ಮೊದಲ ಫೋಟೊ ಪತ್ರಕರ್ತೆ
ಮಿನುಗು ಮಿಂಚು:ಮೊದಲ ಫೋಟೊ ಪತ್ರಕರ್ತೆ   

ಹೋಮೈ ವ್ಯಾರಾವಾಲಾ ಹುಟ್ಟಿದ್ದೆಲ್ಲಿ?
ಡಿಸೆಂಬರ್ 9, 1913ರಂದು ಗುಜರಾತ್‌ನ ನವರಾಸಿಯಲ್ಲಿ ಹುಟ್ಟಿದರು. ಅವರ ಅಪ್ಪ-ಅಮ್ಮ ಪ್ರವಾಸಿ ನಾಟಕ ಕಂಪೆನಿಯಲ್ಲಿದ್ದ ಉರ್ದು ಪಾರಸಿಯವರಾಗಿದ್ದರು.

ಫೋಟೊಜರ್ನಲಿಸಂಗೆ ಪ್ರವೇಶಿಸಿದ್ದು ಹೇಗೆ?
ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹೋಮೈ ಅವರ ಪತಿ ಮಣೇಕ್ ಷಾ ಪತ್ನಿಗೆ ಫೋಟೊಗ್ರಫಿಯ ರುಚಿ ಹತ್ತಿಸಿದರು. 1942ರಲ್ಲಿ ಅವರು ದೆಹಲಿಗೆ ಹೋದಾಗ `ಬ್ರಿಟಿಷ್ ಇನ್ಫರ್ಮೇಷನ್ ಸರ್ವೀಸಸ್~ಗೆ ಪೂರ್ಣ ಪ್ರಮಾಣದ ಫೋಟೊ ಪತ್ರಕರ್ತರಾಗಿ ಕೆಲಸ ಮಾಡತೊಡಗಿದರು. ಆ ಕಾಲದಲ್ಲಿದ್ದ ಏಕೈಕ ಫೋಟೊ ಪತ್ರಕರ್ತೆ ಅವರಾಗಿದ್ದರು.

ಅವರ ಖ್ಯಾತ ಛಾಯಾಚಿತ್ರಗಳು ಯಾವುವು?
ಬ್ರಿಟಿಷರ ಆಳ್ವಿಕೆಯನ್ನು ಕೊನೆಗಾಣಿಸಲು ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಹೋಮೈ ಕೆಲಸ ಮಾಡಿದ್ದರು. 1947ರಲ್ಲಿ ಕೆಂಪುಕೋಟೆಯಲ್ಲಿ ನಡೆದ ಮೊದಲ ಧ್ವಜಾರೋಹಣವನ್ನು ಹೋಮೈ  ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು.

ಲಾರ್ಡ್ ಮೌಂಟ್ ಬ್ಯಾಟನ್ ಹಾಗೂ ಅವರ ಪತ್ನಿ ಇಂಗ್ಲೆಂಡ್‌ಗೆ ಹೊರಡುವ ಮುನ್ನ ರಾಷ್ಟ್ರಪತಿ ಭವನದಲ್ಲಿ ಕೊನೆಯ ಸಲ್ಯೂಟ್ ಹೊಡೆದಿರುವ ಕ್ಷಣವನ್ನೂ ಅವರು ಫೋಟೊ ಆಗಿಸಿದರು. ಮಹಾತ್ಮ ಗಾಂಧಿ, ನೆಹರೂ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪಾರ್ಥಿವ ಶರೀರಗಳ ಅಂತಿಮ ಸಂಸ್ಕಾರದ ಕ್ಷಣಗಳನ್ನು ಕೂಡ ಅವರು ಸೆರೆಹಿಡಿದರು. ಫೋಟೊಪತ್ರಕರ್ತೆಯಾಗಿ `ಜವಾಹರಲಾಲ್ ನೆಹರೂ~ ಅವರಿಗೆ ಇಷ್ಟವಾದ ವಿಷಯವಾಗಿತ್ತು.

ADVERTISEMENT

ಅವರ ಅಡ್ಡಹೆಸರು?
ಅವರ ಹಳೆಯ ಫ್ಲಾಟ್‌ನ ನಂಬರ್ `ಡಿಎಲ್‌ಡಿ 13~. ಅದನ್ನು ಓದಿದರೆ ಡಾಲ್ಡಾ ಟಿನ್ ಎಂಬಂತೆ ಕೇಳುತ್ತದೆ. ಅದೇ ವೃತ್ತಿಯಲ್ಲಿ ಅವರ ಅಡ್ಡಹೆಸರಾಗಿ ರೂಢಿಗೆ ಬಂದುಬಿಟ್ಟಿತು.

ಅವರ ಜೀವನ ಚರಿತ್ರೆ ಹೆಸರೇನು?
`ಇಂಡಿಯಾ ಇನ್ ಫೋಕಸ್: ಕ್ಯಾಮೆರಾ ಕ್ರಾನಿಕಲ್ಸ್ ಆಫ್ ಹೋಮೈ ವ್ಯಾರಾವಾಲಾ~ ಎಂಬುದು ಅವರ ಜೀವನ ಚರಿತ್ರೆ. ಸಾಕ್ಷ್ಯಚಿತ್ರಗಳ ನಿರ್ದೇಶಕ ಸಬೀನಾ ಗಡಿಹೋಕ್ ಅದನ್ನು ಬರೆದರು. 1939ರಿಂದ 1970ರವರೆಗಿನ ಹೋಮೈ ಅವರ ವೃತ್ತಿಬದುಕಿಗೆ ಕೃತಿ ಕನ್ನಡಿ ಹಿಡಿಯುತ್ತದೆ.ಈ ವರ್ಷ ಜನವರಿ 15ರಂದು ಹೋಮೈ  ಕೊನೆಯುಸಿರೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.