ADVERTISEMENT

ವಯಸ್ಸಿಗೂ ಮೀರಿದ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST
ವಯಸ್ಸಿಗೂ ಮೀರಿದ ಉತ್ಸಾಹ
ವಯಸ್ಸಿಗೂ ಮೀರಿದ ಉತ್ಸಾಹ   

ಮಿನುಗು ಮಿಂಚು

ಲಿ ನಾ ಹುಟ್ಟಿದ್ದು ಎಲ್ಲಿ?
ಚೀನಾದ ವ್ಯಯಾನ್‌ಗೆ ಸೇರಿದ ಹ್ಯೂಬಿ ಎಂಬಲ್ಲಿ. 1982, ಫೆಬ್ರುವರಿ 26ರಂದು ಹುಟ್ಟಿದರು. ತಮ್ಮ ಒಂಬತ್ತನೇ ವಯಸ್ಸಿನಿಂದ ಟೆನಿಸ್ ಅಭ್ಯಾಸ ಪ್ರಾರಂಭಿಸಿದರು.

ಹೋದ ವರ್ಷ ಫ್ರೆಂಚ್ ಓಪನ್‌ನಲ್ಲಿ ಅವರು ಯಾರನ್ನು ಸೋಲಿಸಿದ್ದು?
2010ರಲ್ಲಿ ಚಾಂಪಿಯನ್ ಆಗಿದ್ದ, ಇಟಲಿಯ ಆಟಗಾರ್ತಿ ಫ್ರಾನ್ಸೆಸ್ಕಾ ಶಿಯಾವೋನ್ ಅವರನ್ನು 6-4, 7-6, (7-0)ರಲ್ಲಿ ಸೋಲಿಸಿ ಫೈನಲ್ ಪಂದ್ಯದಲ್ಲಿ ಅವರು ಗೆಲುವಿನ ನಗೆ ಬೀರಿದರು. ಇಬ್ಬರೂ ಆಟಗಾರ್ತಿಯರ ವಯಸ್ಸನ್ನು ಸೇರಿಸಿದರೆ 60 ವರ್ಷ 79 ದಿನಗಳಾಗುತ್ತವೆ.

ಗ್ರ್ಯಾಂಡ್ ಸ್ಲಾಮ್ ಫೈನಲ್‌ನಲ್ಲಿ ಇಷ್ಟು ಹೆಚ್ಚು ವಯಸ್ಸಿನ ಇಬ್ಬರೂ ಆಟಗಾರ್ತಿಯರು ಅದಕ್ಕೂ ಮೊದಲು ಆಡಿದ್ದು 1998ರಲ್ಲಿ; ವಿಂಬಲ್ಡನ್‌ನಲ್ಲಿ. ಹಾಗಾಗಿ ಇನ್ನೊಂದು ಅಪರೂಪದ ದಾಖಲೆಗೂ ಲಿ ನಾ ಕಾರಣರಾದರು. ಅಷ್ಟೇ ಅಲ್ಲ, ಟೆನಿಸ್ ಸಿಂಗಲ್ಸ್‌ನಲ್ಲಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ಆಟಗಾರ್ತಿ ಎಂಬ ಗೌರವವೂ ಅವರದ್ದಾಯಿತು.

ಲಿ ನಾ ಕೋಚ್ ಯಾರು?
ಮೊದಲು ಥಾಮಸ್ ಹೋಗಸ್ಟೆಡ್ ಅವರಿಗೆ ತರಬೇತಿ ನೀಡಿದ್ದ. 2010ರಲ್ಲಿ ಅವನು ಮರಿಯಾ ಶರಪೋವಾಗೆ ತರಬೇತಿ ನೀಡಲೆಂದು ಹೊರಟುಹೋದ. 2011ರ ಟೆನಿಸ್ ಋತುವಿನಲ್ಲಿ ಪತಿ ಜಿಯಾಂಗ್ ಶಾನ್ ಅವರನ್ನೇ ತರಬೇತುದಾರರನ್ನಾಗಿಸಿಕೊಂಡ ಲಿ ನಾ ಕನಸುಗಳನ್ನು ಕಟ್ಟತೊಡಗಿದರು. ಆಮೇಲೆ ಫೆಡ್ ಕಪ್‌ನಲ್ಲಿ ನಾಯಕ ಕೂಡ ಆಗಿದ್ದ ಡೆನ್ಮಾರ್ಕ್‌ನ ವೆುಕಲ್ ಮಾರ್ಟೆನ್‌ಸನ್ ಅವರನ್ನು ತರಬೇತುದಾರರನ್ನಾಗಿ ನೇಮಿಸಿಕೊಂಡರು.

ADVERTISEMENT

ಗೆಲುವಿನ ನಂತರ ಅವರ ಡಬ್ಲ್ಯುಟಿಎ ರ‌್ಯಾಂಕಿಂಗ್ ಎಷ್ಟಾಯಿತು?
ಲಿ ನಾ ಗ್ರ್ಯಾಂಡ್ ಸ್ಲಾಮ್ ಗೆದ್ದ ನಂತರ ಡಬ್ಲ್ಯುಟಿ ರ‌್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೇರಿದರು.

ಅವರು ಗೆದ್ದಿರುವ ಇತರೆ ಟೂರ್ನಿಗಳಾವುವು?
ಇದುವರೆಗೆ ಐದು ಡಬ್ಲ್ಯುಟಿ ಹಾಗೂ 19 ಐಟಿಎಫ್ ಸಿಂಗಲ್ಸ್ ಪ್ರಶಸ್ತಿಗಳನ್ನು ಅವರು ಗೆದ್ದಿದ್ದಾರೆ. ಜನವರಿ 2011ರಲ್ಲಿ ಆಸ್ಟ್ರೇಲಿಯಾ ಓಪನ್ ಫೈನಲ್ ತಲುಪಿದ ಚೀನಾದ ಮೊದಲ ಆಟಗಾರ್ತಿ ಎಂಬ ಅಗ್ಗಳಿಕೆ ಅವರದ್ದಾಯಿತು. ಆದರೆ, ಫೈನಲ್‌ನಲ್ಲಿ ಅವರು ಕಿಮ್ ಕ್ಲೈಸ್ಟರ್ಸ್‌ ಎದುರು ಸೋತರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.