ADVERTISEMENT

ಶಕ್ತಿಗಿಂತ ಯುಕ್ತಿ ಮೇಲು

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 19:30 IST
Last Updated 14 ಜುಲೈ 2012, 19:30 IST

ಹಣಮಪ್ಪನು ಬಡ ರೈತ. ಅವನಿಗೆ ಅಷ್ಟಿಷ್ಟು ಸಾಲದ ಹೊರೆಯೂ ಇತ್ತು. ಸಾಲದ ಬಾಧೆ ನೀಗಿಸಿಕೊಳ್ಳಲು, ತಾನು ಪ್ರೀತಿಯಿಂದ ಬೆಳೆಸಿದ್ದ ಎಮ್ಮೆಯನ್ನು ಮಾರಲು, ಹತ್ತಿರದ ಪಟ್ಟಣದ ಸಂತೆಗೆ ಹೋದನು. ಅವನಿಗೆ 70 ವರ್ಷ.

ದೇಹ ದುರ್ಬಲವಾಗುತ್ತಾ, ಮುಪ್ಪು ಆವರಿಸಿತ್ತು. ಆದರೆ, ಸಂತೆಯಲ್ಲಿ ಎಮ್ಮೆಯನ್ನು ಯೋಗ್ಯ ಬೆಲೆಗೆ ಯಾರೂ ಕೇಳಲೇ ಇಲ್ಲ! ನಿರಾಶೆಯಿಂದ ಎಮ್ಮೆಯೊಂದಿಗೆ, ತನ್ನ ಹಳ್ಳಿಗೆ ಹಿಂತಿರುಗುವಾಗ, ಅಡವಿಯಲ್ಲಿ ಅಂದು ಜನ ಸಂಚಾರವಿರಲಿಲ್ಲ. ಸುತ್ತಲಿನ ವಾತಾವರಣ ಬಿಕೋ ಅನ್ನುತ್ತಿತ್ತು. ಅಷ್ಟರಲ್ಲಿ, ಧಾಂಡಿಗನಾದ ಒಬ್ಬ ಕಳ್ಳನು ಕೈಯಲ್ಲಿ ಉದ್ದನೆಯ ಬಲವಾದ ಕೋಲನ್ನು ಹಿಡಿದು, ಎದುರಿಗೆ ಬಂದು ನಿಂತನು.

`ಈ ಎಮ್ಮೆ ನನ್ನದು!. ಸುಮ್ಮನೆ ಬಿಟ್ಟುಕೊಡು. ಇರದಿದ್ದರೆ ಈ ಕೋಲಿನಿಂದ ನಿನ್ನ ತಲೆಯೊಡೆದು ಸಾಯಿಸುತ್ತೇನೆ!~ ಎಂದು ಗದರಿಸಿದನು. ಕಳ್ಳನು ಪೈಲ್ವಾನನಂತಿದ್ದನು. ತಾನು ಜಗಳಕ್ಕೆ ನಿಂತರೆ, ಇವನು ತನ್ನನ್ನು ಸಾಯಿಸಿಯೇ ಬಿಡುವನೆಂದು ಹೆದರಿದ ಹಣಮಪ್ಪನು, ತಕ್ಷಣ ಉಪಾಯ ಹುಡುಕಿದನು.

`ಅಯ್ಯಾ, ಸ್ವಾಮಿ!. ಈ ಎಮ್ಮೆ ನಿನ್ನದೇ! ತೆಗೆದುಕೊಂಡು ಹೋಗು. ಆದರೆ, ಒಂದು ವಿನಂತಿ ಏನಂದರೆ, ನನ್ನ ಹಳ್ಳಿಯು ಇನ್ನೂ ತುಂಬಾ ದೂರವಿದೆ. ಆಸರೆಯಿಲ್ಲದೇ ನಡೆಯಲಾಗದು. ದಯವಿಟ್ಟು ನಿನ್ನ ಈ ಕೋಲನ್ನು ಕೊಡು. ಇದನ್ನು ನೆಲಕ್ಕೆ ಊರುತ್ತಾ, ಇದರ ಸಹಾಯದಿಂದ ಹೇಗಾದರೂ ಮಾಡಿ ಊರು ಮುಟ್ಟುತ್ತೇನೆ~, ಎಂದು ಬೇಡಿಕೊಂಡನು.

`ಬೆಲೆಬಾಳುವ ಎಮ್ಮೆಯೇ ತನ್ನದಾಗುವಾಗ, ಸಾಮಾನ್ಯವಾದ ಕೋಲು ಇಲ್ಲದಿದ್ರೆ ಏನು ಮಹಾ!~ ಎಂಬ ಉಡಾಫೆಯಿಂದ ತನ್ನ ಕೈಯೊಳಗಿನ ಕೋಲನ್ನು ಕೊಟ್ಟು, ಎಮ್ಮೆಗೆ ಕಟ್ಟಿದ್ದ ಹಗ್ಗವನ್ನು ಕಸಿದುಕೊಂಡನು. ಕಳ್ಳನು ಎರಡು ಹೆಜ್ಜೆ ಸಾಗುವಷ್ಟರಲ್ಲಿ, ಹಣಮಪ್ಪನು ಹಿಂದಿನಿಂದ, ಕಳ್ಳನ ತಲೆಗೆ, ತನ್ನ ಮೈಯೊಳಗಿನ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ, ಬಡಿಗೆಯಿಂದ ಹೊಡೆದನು. ಏಟಿನಿಂದ ತತ್ತರಿಸಿದ ಕಳ್ಳ ನೆಲಕ್ಕೆ ಬಿದ್ದನು.

ಆಗ ಕಾಲಿಗೆ ಮತ್ತೆ ಬಲವಾಗಿ ಹೊಡೆದು, ಕಾಲಿನ ಮೂಳೆ ಮುರಿದನು. ತಲೆಯೊಡೆದು ರಕ್ತ ಸೋರತೊಡಗಿತ್ತು. ತಕ್ಷಣ ಹಣಮಪ್ಪನು ಕೋಲು ಹಾಗೂ ಎಮ್ಮೆಯೊಂದಿಗೆ ಮುಂದೆ ಸಾಗಿ, ತನ್ನ ಮನೆಯನ್ನು ಸೇರಿದನು. ಆಪತ್ ಕಾಲದಲ್ಲಿ, ಶಕ್ತಿಗಿಂತ ಯುಕ್ತಿ ಮೇಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.