ADVERTISEMENT

ಶಾಂಘೈನಲ್ಲಿ ‘ವೆಗನ್ ಫುಡ್’ ಹೀಂಗೆ!

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2017, 19:30 IST
Last Updated 4 ನವೆಂಬರ್ 2017, 19:30 IST
ಶಾಂಘೈನಲ್ಲಿ ‘ವೆಗನ್ ಫುಡ್’ ಹೀಂಗೆ!
ಶಾಂಘೈನಲ್ಲಿ ‘ವೆಗನ್ ಫುಡ್’ ಹೀಂಗೆ!   

ಚೀನಾದ ಪೂರ್ವ ಕರಾವಳಿಯಲ್ಲಿರುವ ಪ್ರಮುಖ ವಾಣಿಜ್ಯ ನಗರಿ ಶಾಂಘೈ. ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಶಾಂಘೈ ಘಟಕಕ್ಕೆ ಉದ್ಯೋಗ ನಿಮಿತ್ತವಾಗಿ ಹೋಗುವ ಅವಕಾಶ ನಾಲ್ಕು ವರುಷಗಳ ಹಿಂದೆ ಲಭಿಸಿತ್ತು. ಚೀನಾದಲ್ಲಿ ಮನುಷ್ಯರನ್ನು ಬಿಟ್ಟು ಇನ್ನೆಲ್ಲಾ ಪ್ರಾಣಿ, ಪಕ್ಷಿ, ಕೀಟಗಳನ್ನು ತಿನ್ನುತ್ತಾರೆ, ಸಸ್ಯಾಹಾರಿಗಳಿಗೆ ಸರಿಯಾದ ಊಟ ಸಿಗದು ಎಂಬ ಮಾತು ಪ್ರಚಲಿತ. ಹೀಗಿರುವಾಗ, ಶಾಂಘೈನಲ್ಲಿ ನಾಲ್ಕು ದಿನ ಇದ್ದು, ಅಪ್ಪಟ ಸಸ್ಯಾಹಾರವನ್ನುಂಡ ಅನುಭವ ನನ್ನದು.

ಅಲ್ಲಿನ ಸಹೋದ್ಯೋಗಿ ಮಿತ್ರರು ಬಹಳ ಕಾಳಜಿಯಿಂದ ನನ್ನ ಊಟ ತಿಂಡಿಯ ಜವಾಬ್ದಾರಿ ಹೊತ್ತಿದ್ದರು. ಸಂಸ್ಥೆಯ ಕ್ಯಾಂಟೀನ್‌ನಲ್ಲಿ ನನಗೆ ಯಾವುದು ಸೂಕ್ತ ಎಂದು ತಿಳಿಸಿ ಸಹಕರಿಸಿದ್ದರು. ರಾತ್ರಿಯ ಊಟಕ್ಕಾಗಿ ಶಾಂಘೈಯ ‘ವೆಗಾನ್’ ರೆಸ್ಟೋರೆಂಟ್‌ಗಳಿಗೆ ಕರೆದೊಯ್ದಿದ್ದರು. ಅಚ್ಚುಕಟ್ಟಾಗಿದ್ದ ಹೋಟೆಲಿನಲ್ಲಿ ಕುಳಿತು ಹರಟುತ್ತಾ ಇರುವಾಗ, ಮೆನು ಕಾರ್ಡ್ ಬಂತು. ಪುಟ್ಟ ರಂಗವಲ್ಲಿಗಳಂತೆ ಕಾಣುವ ‘ಮಾಂಡರಿನ್’ ಲಿಪಿಯ ಅಕ್ಷರಗಳ ನಡುವೆ ಇರುವ ಇಂಗ್ಲಿಷ್ ಪದಗಳತ್ತ ಕಣ್ಣು ಹಾಯಿಸಿದಾಗ ‘ವೆಜಿಟೇರಿಯನ್ ಕುಂಗ್ ಪಾವೊ ಚಿಕನ್’, ‘ವೆಜಿಟೇರಿಯನ್ ಬೀಫ್ ಅಂಡ್ ಟೊಫು ಪುಡ್ಡಿಂಗ್’ ಇತ್ಯಾದಿ ಹೆಸರುಗಳನ್ನು ಗಮನಿಸಿ ದಿಗಿಲುಗೊಂಡೆ. ನನ್ನ ಗೊಂದಲ ಕಂಡ ಚೀನಿ ಸಹೋದ್ಯೋಗಿಗಳು ‘ಭಯಪಡಬೇಡಿ, ಇದು ವೆಗನ್ ಹೋಟೆಲ್, ಇಲ್ಲಿ ಮಾಕ್‌ ಮೀಟ್ ಮಾತ್ರ ಸಿಗುವುದು. ಸೋಯಾ ಬೀನ್ಸ್, ತರಕಾರಿಗಳು ಮತ್ತು ವಿವಿಧ ಕಾಳುಗಳಿಂದ ತಯಾರಿಸಿದ ಅಡುಗೆಗಳಿವು’ ಅಂದರು.

‘ವೆಗನ್’ ಆಹಾರ ಪದ್ಧತಿಯ ಪ್ರಕಾರ, ಹಾಲು, ಮೊಸರು, ತುಪ್ಪಗಳಂತಹ ಯಾವುದೇ ಪ್ರಾಣಿಜನ್ಯ, ಡೈರಿ ಉತ್ಪನ್ನಗಳನ್ನು ಸೇವಿಸುವುದಿಲ್ಲ. ಜೇನುತುಪ್ಪವೂ ನಿಷಿದ್ಧ. ಹಸುವಿನ ಹಾಲಿಗೆ ಬದಲು ಸೋಯಾ ಹಾಲನ್ನು ಉಪಯೋಗಿಸುತ್ತಾರೆ. ಸೋಯಾ ಹಾಲಿನಿಂದ ತಯಾರಿಸಿದ ವಿವಿಧ ಆಹಾರ ವಸ್ತುಗಳನ್ನು ಡೈರಿ ಉತ್ಪನ್ನಗಳಿಗೆ ಪರ್ಯಾಯವಾಗಿ ಬಳಸುತ್ತಾರೆ.

ADVERTISEMENT

ನಾನು ಶಾಂಘೈನಲ್ಲಿ ರುಚಿ ನೋಡಿದ ಕೆಲವು ವೆಗನ್ ತಿನಿಸುಗಳು ಹೀಗಿವೆ:

ವೆಜಿಟೇರಿಯನ್ ಬೀಫ್ ಅಂಡ್ ಟೊಫು: ಸೋಯಾ ಹಾಲಿನಿಂದ ತಯಾರಿಸಿದ ‘ಟೊಫು’ ಎಂಬ ಪನೀರ್ ಮತ್ತು ವಿವಿಧ ತರಕಾರಿ ಮಸಾಲೆಗಳನ್ನು ಸೇರಿಸಿ ತಯಾರಿಸಿದ ವ್ಯಂಜನವಿದು. ಭಾರತದ ಹೋಟೆಲ್‌ಗಳಲ್ಲಿ ದೊರೆಯುವ ‘ಆಲೂ ಪನೀರ್’ನ ರುಚಿ, ಅದರ ಉಪ್ಪು, ಖಾರ, ಮಸಾಲೆ ಇಷ್ಟಪಡುವ ನಮ್ಮ ನಾಲಿಗೆಗೆ ಇದು ಬಲು ಸಪ್ಪೆ ಎನಿಸುತ್ತದೆ! ನೂಡಲ್ಸ್ ಅಥವಾ ಬ್ರೆಡ್ ಜತೆ ನೆಂಚಿಕೊಂಡು ತಿನ್ನಬಹುದು.

ಸುಶಿ ‘ಬೀಡಾ’ದ ಹಾಗೆ ಕಾಣಿಸುವ ‘ಸುಶಿ’ಯಲ್ಲಿ ಹಲವು ವೈವಿಧ್ಯಗಳಿವೆಯಂತೆ. ನನಗಾಗಿ ಸಸ್ಯಾಹಾರಿ ‘ಸುಶಿ’ ತಯಾರಾಗಿ ಬಂತು. ನೋಡಲು ತುಂಬಾ ಚೆನ್ನಾಗಿತ್ತು. ಆಲಂಕಾರಿಕ ತಟ್ಟೆಯಲ್ಲಿ, ಸ್ವಲ್ಪ ಸೀಳಿದ ಹಸಿರು ಮೆಣಸಿನ ಕಾಯಿ, ಲೆಟ್ಟೂಸ್ ಎಲೆಗಳು ಹಾಗೂ ಸೋಯಾ ಬೀನ್ಸ್‌ನಿಂದ ತಯಾರಿಸಿದ ಕೇಕ್‌ನಂತಹ ವಸ್ತುವನ್ನು ಜೋಡಿಸಿದ್ದರು. ನೋಡಲು ತುಂಬಾ ಚೆನ್ನಾಗಿತ್ತು. ಅದನ್ನು ತಿನ್ನುವ ಪದ್ಧತಿ ಇನ್ನೂ ಚೆನ್ನ. ಮೊದಲು ಲೆಟ್ಟೂಸ್ ಎಲೆಯನ್ನು ತೆಗೆದುಕೊಂಡು, ಅದರಲ್ಲಿ ಒಂದೆರಡು ಹಸಿರು ಮೆಣಸಿನಕಾಯಿ ಸೀಳುಗಳನ್ನಿರಿಸಿ, ಅದರ ಜತೆಗೆ ಸೋಯಾ ಕೇಕ್ ಇಟ್ಟು ಮಡಚಿ ತಿನ್ನುವುದು. ರುಚಿ ಸುಮಾರಾಗಿತ್ತು. ಹಸಿರು ಮೆಣಸಿನಕಾಯಿ ಖಾರವೇ ಇರಲಿಲ್ಲ. ರುಚಿಗಿಂತಲೂ ಅದರ ಹೊಸತನಕ್ಕೆ ಮಾರುಹೋಗಿ ಮೂರ್ನಾಲ್ಕು ‘ಸುಶಿ’ ತಿಂದೆ.

ಚೀನಾದಲ್ಲಿ ಪೆನ್ಸಿಲ್‌ನಂತಹ ಎರಡು ‘ಚಾಪ್ ಸ್ಟಿಕ್’ಗಳ ಮೂಲಕ ಆಹಾರ ಸೇವಿಸುತ್ತಾರೆ. ಕೈಯಲ್ಲಿ ಅಥವಾ ಚಮಚ ಬಳಸಿ ಆಹಾರ ಸೇವಿಸುವ ಅಭ್ಯಾಸವಿರುವ ನನಗೆ ಚಾಪ್ ಸ್ಟಿಕ್‌ ಬಳಸಿ ತಿನ್ನುವುದು ಬಲು ತಮಾಷೆಯೆನಿಸಿತು. ನನಗಾಗಿ ಚಮಚ ಮತ್ತು ಫೋರ್ಕ್ ಕೊಟ್ಟಿದ್ದರೂ, ಒಂದೆರಡು ತುಣುಕುಗಳನ್ನು ಚಾಪ್ ಸ್ಟಿಕ್ ಬಳಸಿ ತಟ್ಟೆಯಿಂದ ಮೇಲೆತ್ತಿ ತಿನ್ನುವಲ್ಲಿ ಯಶಸ್ವಿಯಾದೆ! ಆಮೇಲೆ ಚಮಚಕ್ಕೆ ಮರಳಿದೆ! ‘ಸುಶಿ’ ತಿನ್ನುವ ನನ್ನ ಸಡಗರ ನೋಡಿ ಚೀನಾದ ಅತಿಥೇಯರಿಗೂ ಖುಷಿಯಾಯಿತು.

...ಬಿಬಿಕ್ಯೂ ಪೋರ್ಕ್ ಇನ್ ಹನಿ
ನೋಡಲು ಸುಮಾರಾಗಿ ‘ಹನಿಕೇಕ್’ನಂತೆ ಇದ್ದ ‘ವೆಜಿಟೇರಿಯನ್ ಬಿಬಿಕ್ಯೂ ಪೋರ್ಕ್ ಇನ್ ಹನಿ’ ಸಿಹಿತಿಂಡಿಯು ನಮ್ಮ ಮಾಪನದಲ್ಲಿ ತೀರಾ ಕಡಿಮೆ ಸಿಹಿ ಇತ್ತು. ಇದು ಕೂಡಾ ಸೋಯಾ ಪನೀರ್‌ನಿಂದ ತಯಾರಿಸಲಾದ ತಿನಿಸು. ಒಟ್ಟಿನಲ್ಲಿ ನಾನು ಗಮನಿಸಿದಂತೆ, ಶಾಂಘೈಯ ಅಡುಗೆ ಪದ್ಧತಿಯಲ್ಲಿ ಉಪ್ಪು, ಖಾರ, ಸಿಹಿ, ಹುಳಿ ಎಲ್ಲವೂ ಕಡಿಮೆ. ರುಚಿಗಿಂತ ಹೆಚ್ಚಾಗಿ ಆಹಾರದ ಜೋಡಣೆಯ ಅಂದವನ್ನು ನೋಡಿ ಸಂತಸಪಟ್ಟೆ.

ಬಕ್ ವೀಟ್ ಚಹಾ
ಚಹಾ ಸೇವನೆಯು ಚೀನಾದ ಭೋಜನದ ಅವಿಭಾಜ್ಯ ಅಂಗ. ಇದರಲ್ಲಿ ಹಲವು ಬಗೆಗಳು. ತಯಾರಿ ಬಹಳ ಸುಲಭ. ಹಲವಾರು ಬಗೆಯ ಹೂವು, ಬೀಜ, ಕಾಳು, ಸೊಪ್ಪುಗಳಿಂದ ತಯಾರಿಸಿದ ಚಹಾ ಲಭ್ಯ. ನಮಗೆ ಬೇಕೆನಿಸಿದ ಹೂವನ್ನೋ, ಬೀಜವನ್ನೋ, ಸೊಪ್ಪನ್ನೋ ಸ್ವಲ್ಪ ಹೂಜಿಗೆ ಹಾಕಿ, ಒಂದಷ್ಟು ನೀರು ಕುದಿಸಿ ಸುರಿದರೆ ಸಾಕು, ಚಹಾ ಸಿದ್ದ. ಉದಾ: ಹಸಿರು ಚಹಾ, ಎಳ್ಳಿನ ಚಹಾ, ಓಟ್ಸ್ ಚಹಾ... ಇತ್ಯಾದಿ. ಪಿಂಗಾಣಿ ಅಥವಾ ಗಾಜಿನ ಮಗ್‌ನಲ್ಲಿ ಚಹಾ ತಂದು, ಊಟದ ಮೇಜಿನ ಮಧ್ಯೆ ಇಡುತ್ತಾರೆ. ನಾವು ಊಟದ ಮಧ್ಯೆ, ಆಗಿಂದಾಗ್ಗೆ ಚಹಾವನ್ನು ಲೋಟಕ್ಕೆ ಬಗ್ಗಿಸಿಕೊಂಡು ಬೇಕಾದಷ್ಟು ಕುಡಿಯಬಹುದು. ಈ ಚಹಾಕ್ಕೆ ಸಕ್ಕರೆ-ಹಾಲು ಸೇರಿಸುವುದಿಲ್ಲ. ನಮ್ಮ ಹಳ್ಳಿಮನೆಗಳಲ್ಲಿ ತಯಾರಿಸುವ ಕೊತ್ತಂಬರಿ, ಜೀರಿಗೆ, ಏಲಕ್ಕಿ ಇತ್ಯಾದಿಗಳುಳ್ಳ ‘ಕಷಾಯ’ವನ್ನು ಹಾಲು, ಸಕ್ಕರೆ ಹಾಕದೆ ಕುಡಿದಂತೆ! ಇಂತಹ ಚಹಾವನ್ನು ತಂಬಿಗೆಗಟ್ಟಲೆ ಕುಡಿದರೂ, ಕ್ಯಾಲೊರಿ-ಕೊಲೆಸ್ಟೆರಾಲ್ ಭಯ ಬೇಕಿಲ್ಲ. ಮಾರ್ಚ್ ತಿಂಗಳಲ್ಲಿ ಅಲ್ಲಿ 5 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಹಾಗಾಗಿ ಬಿಸಿ ‘ಬಕ್ ವೀಟ್’ ಚಹಾ ಇಷ್ಟವಾಯಿತು.

ವೆಗನ್ ಸೂಪ್
ಊಟದ ಆರಂಭದಲ್ಲಿ ಸೂಪ್ ಕುಡಿಯುವ ಅಭ್ಯಾಸ ಇರುವ ನಮಗೆ ಚೀನಾದಲ್ಲಿ ಊಟದ ಕೊನೆಯ ಹಂತವಾಗಿ ಸೂಪನ್ನು ಕೊಟ್ಟಾಗ ಅಚ್ಚರಿಯಾಯಿತು. ದೊಡ್ಡ ಪಿಂಗಾಣಿಯ ಬೌಲ್‌ನಲ್ಲಿ ತಂದಿರಿಸುವ ಬಿಸಿಬಿಸಿ ಸೂಪನ್ನು ನಮಗೆ ಬೇಕಾದಷ್ಟು ಬಡಿಸಿಕೊಳ್ಳಬಹುದು. ಸಣ್ಣಗೆ ಹೆಚ್ಚಿದ ತರಕಾರಿಗಳನ್ನೊಳಗೊಂಡಿದ್ದ ಸರಳ ಸೂಪ್ ಚಳಿಗೆ ಹಿತವಾಗಿತ್ತು. ನನ್ನ ಸಹೋದ್ಯೋಗಿಗಳು ತಲಾ ಎರಡು ಬೌಲ್ ಸೂಪ್ ಕುಡಿದರು. ಸೂಪನ್ನು ಒಂದೇ ಬಾರಿ ಕುಡಿಯುವ ಪದ್ಧತಿಯನ್ನು ನೋಡಿದ್ದ ನನಗೆ ಇದೂ ವಿಭಿನ್ನ ಎನಿಸಿತು.

ಶಾಂಘೈನಲ್ಲಿ ಇದ್ದ ನಾಲ್ಕು ದಿನಗಳಲ್ಲಿ ನೂಡಲ್ಸ್, ಫ್ರೈಡ್ ರೈಸ್ ಮೊಮೊ, ವಿವಿಧ ಸೂಪ್‌ಗಳನ್ನು ಸವಿದೆ. ಕಡಿಮೆ ಉಪ್ಪು, ಖಾರ, ಹುಳಿ, ಸಿಹಿ ರುಚಿಯುಳ್ಳ, ಅತಿ ಕಡಿಮೆ ಜಿಡ್ಡು ಮತ್ತು ಮಸಾಲೆಗಳನ್ನು ಸೇರಿಸುವ ಚೀನಿ ಶೈಲಿಯ ವೆಗನ್ ಆಹಾರಗಳು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯವು.

ಶಾಂಘೈನಲ್ಲಿ ಕೆಲವು ವೆಗನ್ ರೆಸ್ಟೋರೆಂಟ್‌ಗಳಿವೆಯಂತೆ. ಉದಾಹರಣೆಗೆ ಅಕಾ ಜುಜುಬೆ ಟ್ರೀ, ಹುಯಿ ಯುವಾನ್ ಇತ್ಯಾದಿ. ಇಂಗ್ಲಿಷ್ ಬರಹಗಳು ಬಲು ಕಡಿಮೆ ಇದ್ದ ಕಾರಣ ನನಗೆ ಹೆಚ್ಚಿನ ವಿವರಗಳು ಗೊತ್ತಾಗಲಿಲ್ಲ.

ಹೇಮಮಾಲಾ.ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.