ADVERTISEMENT

ಸಮಕಾಲೀನ ಚರಿತ್ರೆಯ ಜತೆಗೆ ಒಂದು ಮುಖಾಮುಖಿ

ಶ್ರೀನಿವಾಸ ವೈದ್ಯ
Published 1 ಫೆಬ್ರುವರಿ 2014, 19:30 IST
Last Updated 1 ಫೆಬ್ರುವರಿ 2014, 19:30 IST

ಒಂದಿಷ್ಟು ದೀರ್ಘಕಾಲ ಬದುಕಿದವರು ತಮ್ಮ ಜೀವಿತದ ಅವಧಿಯಲ್ಲಿನ ರಾಜಕೀಯ, ಸಾಮಾಜಿಕ, ಸಾಂಸ್ಕ್ರತಿಕ ಆಗುಹೋಗುಗಳನ್ನು ಕುರಿತು ಯಾವದೇ ಭಿಡೆ ಮುರವತ್ತುಗಳಿಲ್ಲದೇ ತಮ್ಮ ಸಾಕ್ಷಿಪ್ರಜ್ಞೆಯ ನೆನಪುಗಳನ್ನು, ಅನುಭವ ಅನಿಸಿಕೆಗಳನ್ನು ದಾಖಲಿಸುತ್ತ ಹೋದರೆ ಇತಿಹಾಸಕಾರರಿಗೆ ಅದರಿಂದ ವಸ್ತುನಿಷ್ಠ ಚರಿತ್ರೆಯನ್ನು ಅಭ್ಯಸಿಸುವಲ್ಲಿ ಎಷ್ಟೋ ಸಹಾಯವಾದೀತು.

ಹೊರಗಿನ ಫಾಹಿಯಾನ, ಹುಯೇನತ್ಸಾಂಗರಿಗಿಂತ ಇಲ್ಲಿಯೇ ಇದ್ದು ಅನುಭವಿಸಿದ ಸಮಕಾಲೀನರ ದಾಖಲೆಗಳು ಹೆಚ್ಚು ನಿಖರವಾದವುಗಳಾಗಬಹುದು.
ನನಗಿಂತ ಹಿರಿಯರಾದ ನನ್ನ ಗೌರವಾನ್ವಿತ ಹಿರಿಯ ಸ್ನೇಹಿತರ ಜತೆಗೆ ನಾನು ಆಗೀಗ ಈ ಬಗ್ಗೆ ಮಾತನಾಡಿದ್ದೇನೆ. ಈಗ ನನ್ನ ಯೋಗ್ಯತೆಯ ಅಳವಿನಲ್ಲಿ ನಾನೇ ಆ ಪ್ರಯತ್ನಕ್ಕೆ ಕೈಹಾಕುತ್ತಿದ್ದೇನೆ.

ನಾನು ಹುಟ್ಟಿದ್ದು ಏಪ್ರಿಲ್ ೪, ೧೯೩೬ರಂದು. ನಮ್ಮ ದೇಶ ಒಂದು ಹೊಸ ರಾಷ್ಟ್ರವಾಗಿ ಮರು ಹುಟ್ಟು ಪಡೆದ ಘಳಿಗೆಗೆ ನಾನು ಸಾಕ್ಷಿಯಾಗಿದ್ದೇನೆ. ಕರ್ನಾಟಕದ ನಾಡು ಪುನರ್ಘಟಿತವಾಗಿ, ಏಕೀಕೃತವಾಗಲು ಹೆಣಗುತ್ತಿರುವ ಈ ಪ್ರಕ್ರಿಯೆಯನ್ನು ಹತ್ತಿರದಿಂದ ನೋಡುತ್ತಿದ್ದೇನೆ. ಈ ತೇರಿನ ಹಗ್ಗಕ್ಕೆ ನನ್ನ ಕೈಗಳನ್ನೂ ಜೋಡಿಸಿದ್ದೇನೆ. ಮಂದಿರ ಮಸೀದಿಗಳು ಧ್ವಂಸವಾದಾಗಿನ ದಿನಗಳ ಹಾಗೂ ಕೃತ್ರಿಮ ಸಹಜೀವನದ ಒತ್ತಡ ಜನಾಂಗಗಳ ಶೀತಲ ಸಮರಕ್ಕೆ ದಾರಿ ಮಾಡಿ, ಜನ ಬೇಸತ್ತು ಒಬ್ಬರನ್ನೊಬ್ಬರು ಕೊಂದುಕೊಳ್ಳುತ್ತಿದ್ದಾಗಿನ ದಿನಗಳ ಬೇಗುದಿಯನ್ನೂ ಅನುಭವಿಸಿದ್ದೇನೆ.

ಈ ಹಿನ್ನೋಟದಲ್ಲಿ, ನಡೆದು ಬಂದ ಹಾದಿಯ ಕೆಲವು ಪ್ರಮುಖ ಮೈಲುಗಲ್ಲುಗಳ ಬಳಿ ನಿಂತು, (ಚರಿತ್ರೆ ಏಕಮುಖಿ ಎಂದು ಗೊತ್ತಿದ್ದೂ), ಇಲ್ಲಿ ಬೇರೇ ಕವಲುದಾರಿ ಇರಲೇ ಇಲ್ಲವೇ? ಎಂದು ಚಿಂತಿಸಿದ್ದೇನೆ.

ಸ್ವತಂತ್ರ ಭಾರತದ ಹುಟ್ಟೇ, ತೀಕ್ಷ್ಣ ವಿರೋಧಾಭಾಸದಿಂದ ಕೂಡಿದ ಒಂದು ಕ್ರೂರ ವ್ಯಂಗ್ಯದಿಂದ ಕೂಡಿದೆ. ಅಹಿಂಸೆಯಿಂದ ಪಡೆದ ಸ್ವಾತಂತ್ರ್ಯದ ಜತೆ ಜತೆಗೇ ಬಂದ ಕರಾಳ ಹಿಂಸೆಯ ಜ್ವಾಲೆಗಳು ಇಂದಿಗೂ ಆಗೀಗ ಭುಗಿಲೇಳುತ್ತಲೇ ಇವೆ.

ಇಲ್ಲಿ ದಕ್ಷಿಣದಲ್ಲಿ, ತತ್ರಾಪಿ ಕರ್ನಾಟಕದಲ್ಲಿ ನಾವು tucked in comfort ಎನ್ನುತ್ತಾರಲ್ಲ ಹಾಗೆ ನೆಮ್ಮದಿಯ ಬೆಚ್ಚನೆಯ ಹೊದಿಕೆಯಲ್ಲಿ ಸುಖವಾಗಿದ್ದೇವೆ. ನಮ್ಮ ಉತ್ತರದ ಬಂಧುಗಳು ಮಾತ್ರ, ಮಹಾಭಾರತದ ಕಾಲದಿಂದ ಒಂದಿಲ್ಲೊಂದು ವಿಪ್ಲವಕ್ಕೆ ತುತ್ತಾಗುತ್ತಲೇ ಬಂದಿದ್ದಾರೆ. ದೇಶ ವಿಭಜನೆಯ ಕಾಲಕ್ಕೆ ಅಂದಿನ ಅಖಂಡ ಭಾರತದಿಂದ ಪಾಕಿಸ್ತಾನವನ್ನು ಕೊರೆದು ತೆಗೆಯುವಾಗ, ಪಂಜಾಬ, ಸಿಂಧ, ಬಂಗಾಲ ಪ್ರಾಂತಗಳಲ್ಲಿ ವರ್ಷಗಟ್ಟಲೆ ನಡೆದ ಜನಾಂಗೀಯ ಹಿಂಸೆ, ಅಲ್ಲಿಯವರೆಗೆ ಜಗತ್ತು ಕಂಡು ಕೇಳಿ ಅರಿಯದ ಜನಾಂಗೀಯ ಹಿಂಸೆಯಾಗಿತ್ತಂತೆ. ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನ ಸಾವುನೋವಿಗೆ ಈಡಾಗಿ, ಒಂದು ಕೋಟಿಯಷ್ಟು ಜನ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿ, ಅದಲು ಬದಲಾದರಂತೆ.

ನಾನು ವಿದ್ಯಾರ್ಥಿಯಾಗಿದ್ದಾಗ ನಾಲ್ಕಾರು ಸಿಂಧೀ ಪಂಜಾಬೀ ನಿರಾಶ್ರಿತ ಕುಟುಂಬಗಳು, ನಮ್ಮ ಸಣ್ಣ ಊರು ಧಾರವಾಡಕ್ಕೂ ಬಂದು ನೆಲೆ ನಿಲ್ಲಲು ಹವಣಿಸುತ್ತಿದ್ದುದನ್ನು ನಾನು ನೋಡಿದ್ದೇನೆ. ವಿಭಜನೆಯ ಕಾಲದ ದಂಗೆ ಎಂದೊಡನೆ, ಮೈಲುಗಳುದ್ದದ ನಿರಾಶ್ರಿತರ ಕಾರವಾನುಗಳು ಎದುರು ಬದಿರಾಗಿ ಢಿಕ್ಕಿ ಹೊಡೆದು ರಕ್ತ ಸುರಿಸಿದ ನಮ್ಮ ಆರ್ಕೈವ್ ಚಿತ್ರಗಳು ಕಣ್ಣಿಗೆ ಕಟ್ಟುತ್ತವೆ. ಸಾಲದ್ದಕ್ಕೆ ಪರಿಸ್ಥಿತಿ ಒಂದಿಷ್ಟು ಶಾಂತವಾದ ಮೇಲೆ ಎರಡೂ ದೇಶಗಳವರು ತಾವು ಮಾನಭಂಗ ಮಾಡಿ, ಬಲಾತ್ಕರಿಸಿ ಹೊತ್ತು ತಂದಿದ್ದ ಮಹಿಳೆಯರನ್ನು ಹಸ್ತಾಂತರ ಮಾಡಿಕೊಂಡರಂತೆ! ಇತಿಹಾಸದಲ್ಲಿ ಇಂತಹ ಇನ್ನೊಂದು ಭೀಭತ್ಸ ರುದ್ರನಾಟಕ ಎಂದಿಗೂ ನಡೆದಿರಲಾರದು. ಇತಿಹಾಸದ ಮಾತು ಬಿಡಿ, ನಮ್ಮ ಪಂಚಕನ್ಯೆಯರ ನೋವು ಕೂಡ ನಮ್ಮ ಈ ಅಪಹೃತ ನಿರಾಶ್ರಿತ ಮಹಿಳೆಯರ ಶೋಕಕ್ಕಿಂತ ಹೆಚ್ಚಿನದೇನಲ್ಲ ಎನಿಸುವದಿಲ್ಲವೇ!
 

ADVERTISEMENT
ಲೇಖಕರು ಕನ್ನಡದ ಪ್ರಸಿದ್ಧ ಕಥೆಗಾರ – ಕಾದಂಬರಿಕಾರರು. ಅವರ ‘ಹಳ್ಳ ಬಂತು ಹಳ್ಳ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ನಾನು ನೌಕರಿಯ ನಿಮಿತ್ತ, ಅರವತ್ತರ ದಶಕದ ಮೊದಮೊದಲಿನ ಒಂದೆರಡು ವರುಷಗಳನ್ನು ಮುಂಬಯಿ ಬಳಿಯ ಉಲ್ಹಾಸನಗರವೆಂಬ ಊರಲ್ಲಿ ಸಿಂಧೀ ನಿರಾಶ್ರಿತರ ಮಧ್ಯೆ ಕಳೆಯಬೇಕಾಯಿತು. ಅಲ್ಲಿದ್ದಾಗ ನಿರಾಶ್ರಿತನಾಗಿ ಓಡಿ ಬಂದಿದ್ದ ನನ್ನ ಸಿಂಧೀ ಸಹೋದ್ಯೋಗಿಯೊಬ್ಬ, ‘ಅರೇ, ಈಗ ನಮ್ಮಲ್ಲಿ ಹಿಂದು ಯಾರು... ಮುಸ್ಲಿಮ್ ಯಾರು... ಎಲ್ಲ ಸಂಕರವಾಗಿ ಹೋಗಿದೆ’ ಎಂದು ಸಿನಿಕ ನಗು ನಗುತ್ತಿದ್ದುದು ನೆನಪಾಗುತ್ತದೆ.

ಇನ್ನೊಮ್ಮೆ ನನ್ನ ಇನ್ನೊಬ್ಬ ಸಿಂಧಿ ಸಹೋದ್ಯೋಗಿಯ ಮನೆಗೆ ಹೋಗಿದ್ದೆ. ಅಲ್ಲಿ ಸುಮಾರು ಮೂವತ್ತರ ಹರಯದ ತರುಣಿಯೊಬ್ಬಳು ಕಾಟಿನ ಮೇಲೆ ಎಷ್ಟೋ ಹೊತ್ತು ಸುಮ್ಮನೇ ತಾರಸಿ ನಿಟ್ಟಿಸುತ್ತ ಮಲಗಿಬಿಟ್ಟಿದ್ದಳು. ಮನೆಯಿಂದ ಹೊರಗೆ ಬರುವಾಗ ಅವ ‘ಅವಳು ನನ್ನ ಅಕ್ಕ, ಅವಳು ಬಾಯಿ ಬಿಟ್ಟು ಮಾತನಾಡಿ ವರುಷಗಳೇ ಕಳೆದಿದೆ’ ಎಂದಿದ್ದ.

ನನಗೆ ಆಶ್ಚರ್ಯವಾಗುತ್ತದೆ. ಜಗತ್ತು ಅದೇ ತಾನೇ ದ್ವಿತೀಯ ಮಹಾಯುದ್ಧದ ಭೀಕರ ಹತ್ಯಾಕಾಂಡವನ್ನು ಕಂಡಿತ್ತು. ಇಂಗ್ಲೆಂಡ, ಅಮೇರಿಕದಂತಹ ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವಗಳೂ ಸಾಕಷ್ಟು ಸಾವು ನೋವುಗಳನ್ನನುಭವಿಸಿದ್ದವು. ಜಾಗತಿಕ ಶಾಂತಿಗಾಗಿ ವಿಶ್ವಸಂಸ್ಥೆಯಂತಹ ಒಂದು ಸಂಸ್ಥೆ ರೂಪುಗೊಳ್ಳುತ್ತಿತ್ತು. ಈ ಯಾವದೇ ಅನುಭವಗಳೂ ಶಾಂತಿ ಪ್ರಯತ್ನಗಳೂ ನಮ್ಮ ಜನಾಂಗೀಯ ಹಿಂಸೆಯನ್ನು ತಡೆಯಲು ಸಮರ್ಥವಾಗಲ್ಲಿಲವೇ? ಶಿಸ್ತಿಗೆ, ಕೆಚ್ಚಿಗೆ ಹೆಸರಾಗಿದ್ದ ನಮ್ಮ ಭೂಸೇನೆಯನ್ನು ನಾವೇಕೆ ಉಪಯೋಗಿಸಿಕೊಳ್ಳಲಿಲ್ಲ? ಈಗ ಎಲ್ಲದರಲ್ಲೂ ಮೂಗು ತೂರಿಸುತ್ತಿರುವ ದೊಡ್ಡಣ್ಣ ಅಮೆರಿಕ ಆಗ ಏನು ಮಾಡುತ್ತಿತ್ತು? ಅಧಿಕಾರ ಹಸ್ತಾಂತರದ, ಆ ಗೊಂದಲಗೆಟ್ಟ ಅನನುಭವೀ ದಿನಗಳಲ್ಲಿ ರಕ್ತಪಾತವನ್ನು ತಡೆಗಟ್ಟುವಲ್ಲಿ, ದೊಂಬಿ ನಿಯಂತ್ರಿಸುವಲ್ಲಿ ನಾವು ವಿಫಲವಾದದ್ದಂತೂ ಸತ್ಯ.

ಹಿಂಸೆ, ಬಲಾತ್ಕಾರ, ದೊಂಬಿಗಳನ್ನು ನಿಯಂತ್ರಿಸುವಲ್ಲಿನ ಅಂದಿನ ನಮ್ಮ ವೈಫಲ್ಯ, ಒಂದು ದುರ್ದೈವೀ ಪರಂಪರೆಯಾಗಿ ನಮ್ಮನ್ನು ಇಂದಿಗೂ ಕಾಡುತ್ತಿದೆಯೇ? ಹಾಗೆಂದೇ ೧೯೮೪ರ ಸಿಖ್ ಹತ್ಯಾಕಾಂಡ, ೧೯೯೩ರ ಬಾಬ್ರೀ ಧ್ವಂಸ, ೨೦೦೨ರ ಗುಜರಾತು, ಮೊನ್ನಿನ ಮುಝಫರನಗರಗಳು ಮತ್ತೆ ಮತ್ತೆ ಮರುಕಳಿಸುತ್ತಿವೆಯೇ? ರಾಜಕೀಯದ ನೆವದಲ್ಲಿ ಸ್ವಾರ್ಥ, ಅಪ್ರಾಮಾಣಿಕತೆಗಳನ್ನು ಉಳಿದು ಇತಿಹಾಸಕ್ಕೆ ಬೇರೊಂದು ಕವಲು ಇರಲೇ ಇಲ್ಲವೇ? ಈಗಲೂ ಇಲ್ಲವೇ?

ಸ್ವಾತಂತ್ರ್ಯದ ಸುತ್ತಮುತ್ತ ಹಬ್ಬಿದ ಹಿಂಸೆಯ ಮಾತು ಬಂದಾಗ, ನೆನಪು ಸ್ವಾತಂತ್ರ್ಯ ಚಳವಳಿಯ ದಿನಗಳತ್ತ ಹೊರಳುತ್ತದೆ. ನಾನು ಎಂಟೊಂಬತ್ತು ವರುಷದವನಿದ್ದಾಗ, ಸ್ವಾತಂತ್ರ್ಯ ಚಳವಳಿಯ ಅಂಗವಾಗಿ ಡಾ. ನಾ.ಸು.ಹರ್ಡೀಕರರ ರಾಷ್ಟ್ರೀಯ ಸ್ವಯಂ ಸೇವಾದಳ (ಈಗಿನ ಕಾಂಗ್ರೆಸ್ ಸೇವಾದಳವಲ್ಲ)ದವರು ಏರ್ಪಡಿಸಿರುತ್ತಿದ್ದ ಪ್ರಭಾತ ಫೇರಿಗಳಲ್ಲಿ ಭಾಗವಹಿಸುತ್ತಿದ್ದೆ.

ಎಲ್ಲಕ್ಕೂ ಮುಂದೆ ನಾವು ಬಾಲಕರು, ನಂತರ ಕುಮಾರರು, ಯುವಕರು, ಮಹಿಳೆಯರು, ಪುರುಷರು ಹೀಗೆ, ರಾಷ್ಟ್ರನಾಯಕರಿಗೆ ಜಯಘೋಷಗಳನ್ನು ಕೂಗುತ್ತ ಬ್ರಿಟಿಷ್ ಸರಕಾರಕ್ಕೆ ಧಿಕ್ಕಾರ ಹಾಕುತ್ತ ನಡೆದ ಮೈಲುಗಟ್ಟಲೆ ಉದ್ದದ ಮೆರವಣಿಗೆಗಳ ನೆನಪು, ಪುಳಕಗಳನ್ನು ನಾನು ಇಂದಿಗೂ ಆಗೀಗ ಅನುಭವಿಸುತ್ತಿರುತ್ತೇನೆ.

ಆಗೆಲ್ಲ ನಾವು ಎಷ್ಟೊಂದು ರಾಷ್ಟ್ರನಾಯಕ ಜನನಾಯಕರಿಗೆ ಜಯಘೋಷ ಹಾಕುತ್ತಿದ್ದೆವು! ಗಾಂಧಿ, ನೆಹರೂ, ಪಟೇಲರಂತೂ ಸೈಯೇ! ಅಂದಿಗೆ ‘ಲಾಲ ಬಾಲ ಪಾಲ’ರೆಂದೇ ಹೆಸರಾಗಿದ್ದ ಲಾಲ ಲಜಪತರಾಯ, ಬಾಲಗಂಗಾಧರ ತಿಲಕ, ಸುರೇಂದ್ರನಾಥಪಾಲ, ಇವರುಗಳಷ್ಟೇ ಅಲ್ಲದೇ ನಾಮದಾರ ಗೋಖಲೆ, ನೇತಾಜಿ ಸುಭಾಷಚಂದ್ರ ಬೋಸ್, ಚಕ್ರವರ್ತಿ ರಾಜಗೋಪಾಲಾಚಾರಿ, ಬಾಬು ಡಾ. ರಾಜೇಂದ್ರ ಪ್ರಸಾದ, ಮೌಲಾನಾ ಅಬುಲ್ ಕಲಾಮ್ ಆಝಾದ, ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ, ಜಯಪ್ರಕಾಶ ನಾರಾಯಣ, ನೈಟಿಂಗೇಲ ಆಫ್ ಇಂಡಿಯಾ ಸರೋಜಿನಿ ನಾಯ್ಡು, ಅರುಣಾ ಅಸಫ್ ಅಲಿ, ವಿಜಯಲಕ್ಷ್ಮಿ ಪಂಡಿತ, ಅಚ್ಯುತ ಪಟವರ್ಧನ, ಒಬ್ಬರೇ ಇಬ್ಬರೇ! ರಾಷ್ಟ್ರದ ಮೂಲೆ ಮೂಲೆಗಳಿಂದ ಜನನಾಯಕರು ಸ್ವಾತಂತ್ರ್ಯ ಸಮರದಲ್ಲಿ ಸ್ವತಃ ಧುಮುಕಿ ಜನರಲ್ಲಿ ರಾಷ್ಟ್ರಭಾವನೆಯನ್ನು ಉಕ್ಕಿಸಿದ ಕಾಲ. ಇಂದಿಗೂ ಮೈನವಿರೇಳಿಸುವ ಹೆಸರುಗಳು.

ಈಗ? ಬಹುಶಃ ಅಟಲ ಬಿಹಾರಿ ವಾಜಪೇಯಿಯವರನ್ನುಳಿದು (ನಾನು ಬಿ.ಜೆ.ಪಿ.ಯವನಲ್ಲ. ಕಾಂಗ್ರೆಸ್ಸಿಗನೂ ಅಲ್ಲ) ಒಬ್ಬನೇ ಒಬ್ಬ ರಾಷ್ಟ್ರನಾಯಕನನ್ನು ಜನ ನೆನೆಯುವುದುಂಟೆ? ರಾಷ್ಟ್ರನಾಯಕರನ್ನು ಬಿಡಿ, ರಾಜ್ಯಗಳ ಮಟ್ಟಿಗಾದರೂ ಎಷ್ಟು ನಾಯಕರು ಜನನಾಯಕರಾಗಿ ಮುಂದೆ ಬಂದಿದ್ದಾರೆ? ಸಾಲದ್ದಕ್ಕೆ ಇಂದಿನ ಜಾತಿ ನಾಯಕರು ಹುಟ್ಟು ಹಾಕುತ್ತಿರುವ ಭ್ಯಷ್ಟಾಚಾರ, ಕೋಮುವಾದ, ಭಾಷಾವಾದ, ಜಾತಿದಾಹದಂತಹ, ಸಮಾಜ ಘಾತಕ ವಾದ ವಿವಾದಗಳು.

ಬಹುಶಃ ಒಡೆದು ಆಳುವ ನೀತಿಯನ್ನು ನಾವೇ ಬ್ರಿಟಿಷರಿಗೆ ಕಲಿಸಿರಬೇಕು!
ಈಗ ಯದಾ ಯದಾಹಿ....ಯ ಉಕ್ತಿಯಂತೆ ಇನ್ನೊಬ್ಬ ಅವತಾರ ಪುರುಷ ಮೂಡಿಬರಲಿದ್ದಾನೆಯೇ? ಈ ಪುಣ್ಯಭೂಮಿ ಭರತವರ್ಷದಲ್ಲಿ ರಾಮ, ಕೃಷ್ಣ, ಬುದ್ಧ, ಬಸವ, ಗಾಂಧಿ, ಅಂಬೇಡಕರ ಆದಿಯಾಗಿ ಪದೇ ಪದೇ ಹುಟ್ಟಿ ಬಂದು ಅವತಾರ ಪುರುಷರಿಗೂ ಬೇಸರವಾಗಿದೆಯೇ?

ಒಂದು ರಾಷ್ಟ್ರದ ಹಿರಿಮೆ ಗರಿಮೆಗಳನ್ನು, ಸಂದಿಗ್ಧ ಕಾಲದಲ್ಲಿ ಆ ರಾಷ್ಟ್ರದ ಜನ ತಮ್ಮ ಕಷ್ಟ ನಷ್ಟಗಳನ್ನು ಹೇಗೆ ಎದುರಿಸಿ ಮೆಟ್ಟಿ ನಿಲ್ಲುತ್ತಾರೆಂಬುದರ ಮೇಲೆ ನಿರ್ಧರಿಸಬೇಕು ಎಂದು ಬಲ್ಲವರು ಹೇಳುತ್ತಾರೆ. ನಾವು ಆಮ್ ಆದ್ಮಿಗಳು, ನಾವು ಏನು ಮಾಡುತ್ತೇವೆಯೋ ಕಾದು ನೋಡಬೇಕು.

ಗಾಂಧಿ–ನೆಹರು ಯುಗದ ನಂತರದ ಈ ದಿನಗಳಲ್ಲಿ ಬೆರಳೆಣಿಕೆಯಷ್ಟು ಕೂಡ ರಾಷ್ಟ್ರವ್ಯಾಪಿ ಜನನಾಯಕರನ್ನು ರಾಷ್ಟ್ರ ಕಾಣಲಿಲ್ಲವೆಂದರೆ, ಅದರ ಅರ್ಥ ಸಾಮಾನ್ಯ ಭಾರತೀಯರಲ್ಲಿ ರಾಷ್ಟ್ರಪ್ರಜ್ಞೆಯೇ ಕಡಿಮೆಯಾಗುತ್ತಿದೆ ಎಂದಲ್ಲ. ಇಂದಿನ ಭ್ರಷ್ಟ ನಾಯಕರ ಸಂತೆಯಲ್ಲಿ ನಿಜವಾದ ರಾಷ್ಟ್ರಪ್ರೇಮಿ ಜನನಾಯಕರನ್ನು ಗುರುತಿಸುವದು ಅಷ್ಟೊಂದು ಸುಲಭವಾಗಿರಲಿಕ್ಕಿಲ್ಲ.

ರಾಷ್ಟ್ರಪ್ರಜ್ಞೆಯ ಮಾತು ಬಂದಾಗ ಒಂದು ಸಂತಸದ ಸಂಗತಿಯೆಂದರೆ, ಭಾಷಾವಾರು ಪ್ರಾಂತ ರಚನೆಯಿಂದ ರಾಷ್ಟ್ರಪ್ರಜ್ಞೆಗೆ ಧಕ್ಕೆಯಾದೀತೆಂಬ ಆ ಕಾಲದ ಹೆದರಿಕೆ ಹುಸಿಯಾದುದು. ರಾಜ್ಯಗಳ ನಡುವೆ ಸಾಕಷ್ಟು ಅಂತಃಕಲಹಗಳಿದ್ದರೂ, ರಾಷ್ಟ್ರಪ್ರಜ್ಞೆಗೆ ಅದರಿಂದ ಏನೂ ಧಕ್ಕೆಯಾಗದೇ ಜನ ಟೀಮ್ ಇಂಡಿಯಾಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆಂಬುದು ಸಂತಸದ ಸಂಗತಿಯೇ ಸರಿ! ಟೀಮ್ ಇಂಡಿಯಾ ಎಂಬುದು ಕ್ರಿಕೆಟ್‌ಗಾಗಿ ಹುಟ್ಟಿದ ಪದ ಪುಂಜವಾದರೂ, ಅದು ಕ್ರೀಡೆ, ಆಡಳಿತ, ವಿಜ್ಞಾನ ಇತ್ಯಾದಿಯಾಗಿ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುವದೆಂಬ ವ್ಯಾಪಕ ಅರ್ಥದಲ್ಲಿ ಇಲ್ಲಿ ಬಳಸಿದ್ದೇನೆ. ನಮ್ಮ ನಾಡಗೀತೆಯಂತೂ ಜಯ ಭಾರತ ಜನನಿಯ ತನುಜಾತೆ ಎಂದೇ ಪ್ರಾರಂಭವಾಗುತ್ತದೆ.

ಆದರೂ ಅಂತರ್ ರಾಜ್ಯಗಳ ಕಿತ್ತಾಟ ಅತಿಯಾದಾಗ, ಅಲ್ಲಲ್ಲಿ ತೆಲಂಗಾಣಗಳು ತಲೆಯೆತ್ತುತ್ತಿರುವಾಗ ರಾಷ್ಟ್ರಪ್ರಜ್ಞೆಯ ಬಗೆಗಿನ ಹೆದರಿಕೆಯಿಂದ ನಾವು ಪೂರ್ಣ ಮುಕ್ತವಾಗಿಲ್ಲವೆಂದು ತೋರುತ್ತದೆ.

ಉಳಿದ ಸಮಸ್ಯೆಗಳ ಜೊತೆಗೇ ಭಾಷಾ ರಾಜ್ಯಗಳು ಜಾಗತೀಕರಣದ ಪೆಡಂಭೂತವನ್ನೂ ಎದುರಿಸಬೇಕಾಗಿ ಬಂದಿದೆ. ಇದು ಮೂಲತಃ ನಮ್ಮ ದೇಶದ ಆರ್ಥಿಕ ದೌರ್ಬಲ್ಯದಿಂದಾಗಿ ನಮ್ಮನ್ನು ಅಟ್ಟಿಸಿಕೊಂಡು ಬಂದ ಭೂತವಾದರೂ, ಕ್ರಮೇಣ ನಮ್ಮ ಭಾಷಿಕ, ಸಾಂಸ್ಕೃತಿಕ, ಕೌಟುಂಬಿಕ, ಸಾಂಪ್ರದಾಯಿಕ ಕ್ಷೇತ್ರಗಳಲ್ಲೂ ಹೊಕ್ಕು ಇಡಿಯಾಗಿ ಭಾರತೀಯ ಬದುಕನ್ನೇ ನುಂಗಿ ಹಾಕಲು ಹೊಂಚುತ್ತಿದೆ. ನಮ್ಮ ಗೊಣಗಾಟ, ಆಕ್ರೋಶ, ಅಟ್ಟಹಾಸಗಳಿಂದ ಈ ಪೆಡಂಭೂತವನ್ನು ಎದುರಿಸಲು ಸಾಧ್ಯವಿಲ್ಲ.

ಆರ್ಥಿಕ ಕ್ಷೇತ್ರದಲ್ಲಿ ನಮ್ಮ ಉದ್ಯಮಿಗಳೂ ತಂತ್ರಜ್ಞರೂ ಈ ಆಕ್ರಮಣವನ್ನು ತಕ್ಕಮಟ್ಟಿಗೆ ಸಮರ್ಥವಾಗಿಯೇ ಎದುರಿಸುತ್ತಿದ್ದಾರೆ. ನಮ್ಮ ಭಾಷೆ ಸಂಸ್ಕೃತಿಗಳ ಉಳಿವಿಗಾಗಿ ಆಯಾ ಕ್ಷೇತ್ರದ ಚಿಂತಕರು, ಸಾಹಿತಿಗಳು, ಕಲಾವಿದರು, ರಚನಾತ್ಮಕ ಕಾರ್ಯಕ್ರಮಗಳನ್ನೂ ಚಳವಳಿಗಳನ್ನೂ ಹಮ್ಮಿಕೊಂಡು ಯುದ್ಧೋಪಾದಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ, ಈ ಮುಸುಕಿನ ಗುದ್ದಾಟದಲ್ಲಿ ನಾವು ಗೆದ್ದೇವು.

ಬರೀ ಮಾಧ್ಯಮಗಳಲ್ಲಿ ಮಿಂಚುವ ಭಾಷಣಗಳಿಂದ ಈ ಪಿಡುಗನ್ನು ತೊಡೆಯಲು ಸಾಧ್ಯವಿಲ್ಲ.
ತಮ್ಮತನವನ್ನು ಉಳಿಸಿಕೊಳ್ಳುವ ಸಮಸ್ಯೆ, ಎಲ್ಲ ಭಾಷಾ ರಾಜ್ಯಗಳ ಸಮಸ್ಯೆಯಾಗಿದ್ದುದರಿಂದ, ಇಲ್ಲಿ ಇಡೀ ದೇಶವ್ಯಾಪಿಯಾದ ಸರ್ವಸಮ್ಮತವಾದ ಏಕರೂಪಿ ಚಳವಳಿಯ ಅವಶ್ಯಕತೆ ಕಾಣುತ್ತಿದೆ. ಇಂತಹ ಚಳವಳಿಯಿಂದ ಭಾಷಾಬಾಂಧವ್ಯವೂ ಹೆಚ್ಚೀತು. ಕನ್ನಡಕ್ಕಾಗಿ ಕಲ್ಲೆತ್ತುವ ಪ್ರಸಂಗಗಳೂ ಬರಲಿಕ್ಕಿಲ್ಲ.

೧೯೭೫ರ ತುರ್ತು:
ಈ ಏಳು ದಶಕಗಳ ಹಿನ್ನೋಟದ ಚಾಚಿಗೆ, ತುರ್ತು ಪರಿಸ್ಥಿತಿಯ ಕಾಲಘಟ್ಟ ಎದ್ದು ಕಾಣುತ್ತದೆ. ಜತೆಗೇ ನಮ್ಮ ಪ್ರಜಾಪ್ರಭುತ್ವ ಯಾವ ಘಳಿಗೆಗೂ ಮುರಿದು ತುಂಡಾಗಿ ಬಿಡುವಷ್ಟು ದುರ್ಬಲವಾಗಿದೆ ಎಂಬದನ್ನೂ ಎತ್ತಿ ತೋರಿಸುತ್ತದೆ. ಸರ್ವಾಧಿಕಾರತ್ವದ ಕಠೋರ ಬಿಗಿ ಹಿಡಿತದಲ್ಲಿದ್ದ ಒಂದು ರಾಷ್ಟ್ರವನ್ನು ಸ್ವತಂತ್ರ ರಾಷ್ಟ್ರ ಎನ್ನಲಾದೀತೆ?

ಇಲ್ಲಿ, ಹತ್ತೊಂಬತ್ತನೆಯ ಶತಮಾನದ ಮಧ್ಯಕ್ಕೆ ಉತ್ತರ ಭಾರತದ ಪ್ರವಾಸದಲ್ಲಿದ್ದ ಒಬ್ಬ ಬ್ರಿಟಿಷ್‌ ಪಾದ್ರಿ ಹಾಗೂ ಒಬ್ಬ ಸ್ಥಾನೀಯ ಹಿಂದೂ ಪಂಡಿತರಲ್ಲಿ ನಡೆದ ಒಂದು ಸಂಭಾಷಣೆಯ ಸಂದರ್ಭದಲ್ಲಿ, ಹಿಂದೂ ಪಂಡಿತ, ಬ್ರಿಟಿಷರು ನಮ್ಮ ಕತ್ತಿನ ಮೇಲೆ ಕಟ್ಟಿಗೆಯ ನೊಗ ಹೇರಿದ್ದಾರೆ. ಏನಿಲ್ಲೆಂದರೂ ಅದು ಮುಸ್ಲಿಮರು ಹೇರಿದ ಕಬ್ಬಿಣದ ನೊಗಕ್ಕಿಂತ ಹಗುರಾಗಿದೆ ಎಂದ ಮಾತು ಯಾಕೋ ನೆನಪಾಗುತ್ತದೆ.

ಇಂದಿರಾಗಾಂಧಿ ಪ್ಲಾಸ್ಟಿಕ್ ನೊಗ ಹೇರಿದ್ದರು. ನೊಗ ನೊಗವೇ! ಆದರೆ ಹೊಟ್ಟೆ ಬಟ್ಟೆಗಳ ಸಮಸ್ಯೆಯೇ ಅತಿ ಮಹತ್ವದ್ದಾಗಿ ಬಿಟ್ಟಿರುವ ನಮ್ಮ ಬಡ ಪ್ರಜಾಪ್ರಭುತ್ವಕ್ಕೆ ವ್ಯಕ್ತಿ ಸ್ವಾತಂತ್ರ್ಯದಂತಹ ಸೂಕ್ಷ್ಮ ವಿಷಯಗಳ ಕಡೆ ಗಮನ ಹರಿಸಲಾದೀತೇ?

ತುರ್ತು ಪರಿಸ್ಥಿತಿಯ ಝಳ ನನ್ನಂತಹ ತೀರ ಸಾಮಾನ್ಯನಿಗೂ ಹೇಗೆ ತಟ್ಟಿತ್ತೆಂಬುದಕ್ಕೆ ಒಂದು ಘಟನೆ ನೆನಪಾಗುತ್ತದೆ.
ಆಗ ನಾನು ನಮ್ಮ ಬ್ಯಾಂಕಿನ ತುಮಕೂರು ರೋಡ್, ಬೆಂಗಳೂರಿನ ಶಾಖೆಯ ಮ್ಯಾನೇಜರನೆಂದು ಕೆಲಸ ಮಾಡುತ್ತಿದ್ದೆ. ಇಂದಿರಾಗಾಂಧಿ ಘೋಷಿಸಿದ ಇಪ್ಪತ್ತಂಶಗಳ ಸಣ್ಣ ಸಾಲಗಳ ಭರಾಟೆಯ ಕಾಲ. ಒಂದು ಪಕ್ಷದ ರಾಜಕಾರಣಿಗಳು ಸುತ್ತಮುತ್ತಲ ನೂರಾರು ಜನರನ್ನು ಕರೆತಂದು ಸಾಲ ಕೊಡಲು ಒತ್ತಡ ಹೇರುತ್ತಿದ್ದರು. ನೀವೇನಾದರೂ ಕಾನೂನು ರೂಲ್ಸು ಎಂದು ಹಿಂದೆ ಮುಂದೆ ನೋಡಿದರೆ ಆ ಜನ ನಿಮ್ಮನ್ನು ಘೇರಾಯಿಸಿ ಮೈಮೇಲೇ ಬರುತ್ತಿದ್ದರು.

ಒಂದು ಸಲ ಹೀಗೇ ಸುಮಾರು ಜನ ಬಂದು ನನ್ನನ್ನು ಘೇರಾಯಿಸಿದ್ದರು. ಅದರಲ್ಲಿ ಹೆಚ್ಚಿನವರು ಸಾಲಕ್ಕೆ ಅರ್ಹರಲ್ಲ. ಆದರೆ ಪರಿಸ್ಥಿತಿ ಕೈಮೀರಿ ಹೋಗುವ ಲಕ್ಷಣ ಕಂಡು ನಾನು ಕಂಗೆಟ್ಟು ನಮ್ಮ ಮೇಲಾಧಿಕಾರಿಗೆ ದೂರವಾಣಿಯಲ್ಲಿ ಪರಿಸ್ಥಿತಿ ವಿವರಿಸಿ ಏನು ಮಾಡಬೇಕೆಂದು ಕೇಳಿದರೆ, ಆ ಮೇಲಾಧಿಕಾರಿ; ‘Being the man on the spot looking to the local conditions, keeping the interests of the Bank uppermost in your mind, take your own decision’ (ಆ ಸ್ಥಳದಲ್ಲಿದ್ದವನಾಗಿ, ಸುತ್ತಲ ಪರಿಸ್ಥಿತಿಯನ್ನು ಗಮನಿಸಿ, ಬ್ಯಾಂಕಿನ ಹಿತರಕ್ಷಣೆಯನ್ನು ಲಕ್ಷ್ಯದಲ್ಲಿಟ್ಟುಕೊಂಡು ನೀನೇ ನಿನ್ನ ನಿರ್ಣಯ ತೆಗೆದುಕೋ) ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದರು.
ದಬ್ಬಾಳಿಕೆಗೆ ಹೆದರಿ ನಿರ್ಣಯಗಳಿಂದ ನುಣುಚಿಕೊಳ್ಳುವದು ಪ್ರಾರಂಭವಾಗಿತ್ತು!

ತುರ್ತು ಪರಿಸ್ಥಿಯ ಸಂದರ್ಭದಲ್ಲಿ ಸಂಪೂರ್ಣ ಕ್ರಾಂತಿಯ ನಾಯಕರಾದ ಜಯಪ್ರಕಾಶ ನಾರಾಯಣ ಅವರು, ತುರ್ತು ಪರಿಸ್ಥಿತಿಯ ನಾಯಕಿಯಾದ ಇಂದಿರಾಗಾಂಧಿಯವರಿಗೆ ದಿ. ೨೧–-೦೭-–೧೯೭೫ರಂದು ಬರೆದ ಪತ್ರದ ಕೆಲ ಆಯ್ದ ಭಾಗಗಳನ್ನು ಇಲ್ಲಿ ಉಲ್ಲೇಖಿಸಬಹುದು.

‘....ಸಜ್ಜನರಾದ ನಿಮ್ಮ ತಂದೆಯವರನ್ನೊಳಗೊಂಡು ಅನೇಕ ಹಿರಿಯರು ಒಟ್ಟಾಗಿ ಹಾಕಿದ ರಾಷ್ಟ್ರದ ತಳಪಾಯವನ್ನು ದಯವಿಟ್ಟು ಹಾಳುಗೆಡವಬೇಡಿ. ನೀವು ಆಯ್ದುಕೊಂಡ ದಾರಿಯಲ್ಲಿ ವ್ಯರ್ಥ ನೋವು, ವ್ಯಾಜ್ಯ, ಕಿತ್ತಾಟಗಳಲ್ಲದೇ ಬೇರೇನೂ ಇಲ್ಲ. ನೀವು ಒಂದು ಶ್ರೇಷ್ಠ ಪರಂಪರೆಗೆ, ಉದಾತ್ತ ಮೌಲ್ಯಗಳಿಗೆ ಹಾಗೂ ಒಂದು ಲವಲವಿಕೆಯ ಜೀವಂತ ಪ್ರಜಾಪ್ರಭುತ್ವಕ್ಕೆ ಉತ್ತರದಾಯಿಯಾಗಿದ್ದೀರಿ. ನಿಮ್ಮ ಹಿಂದೆ ಈ ಎಲ್ಲದರ ದುರದೃಷ್ಟಕರ ವಿನಾಶವನ್ನು ಬಿಟ್ಟು ಹೋಗಬೇಡಿ. ಇದೆಲ್ಲದರ ಪುನಃ ಸೃಷ್ಟಿಗೆ ತುಂಬ ಸಮಯ ಬೇಕಾದೀತು...’

ಈಗ ಸಿ.ಎ.ಜಿ, ಸಿ.ಬಿ.ಐ, ನ್ಯಾಯಾಂಗ ಎನ್ನುತ್ತ ಒಂದೊಂದೇ ಸಂಸ್ಥೆಗಳು ಶಿಥಿಲಗೊಳ್ಳುತ್ತಿರುವದನ್ನು ಕಾಣುತ್ತಿದ್ದೇವೆ.
ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ರೂವಾರಿಯಾಗಿ, ಅದರ ಆರಾಧಕರಾಗಿದ್ದರು ಪಂ. ನೆಹರೂ. ಅಂತಹರ ಕೈಯಲ್ಲಿ ಪಳಗಿದ ಅವರ ಪುತ್ರಿಯೇ ಪ್ರಜಾಪ್ರಭುತ್ವಕ್ಕೆ ಕೊಡಲಿಯೇಟು ಕೊಟ್ಟದ್ದು ಇತಿಹಾಸದ ಒಂದು ಕ್ರೂರ ವ್ಯಂಗ್ಯವೇ ಸರಿ.

ಭಾರತೀಯ ಸಮಾಜವನ್ನು ಅತಿ ಘೋರವಾಗಿ ಕದಡಿದ ಆ ಮೂರು ಘಟನೆಗಳು:
ಇತ್ತೀಚಿನ ದಶಕಗಳಲ್ಲಿ ಭಾರತೀಯ ಸಮಾಜವನ್ನು ಅತಿ ಘೋರವಾಗಿ ಕಲಕಿದ ಮೂರು ಘಟನೆಗಳೆಂದರೆ–
1. ೧೯೮೪ರ ಅಮೃತಸರದ ಸುವರ್ಣ ಮಂದಿರದ ದಾಳಿ, ಅದರ ಹಿನ್ನೆಲೆಯಲ್ಲೇ ನಡೆದ ಇಂದಿರಾಗಾಂಧಿ ಹತ್ಯೆ ಮತ್ತು ನಮ್ಮ ಸಾವಿರಾರು ಸಿಖ್ ಬಂಧುಗಳ ಕಗ್ಗೊಲೆ.
2. ೧೯೯೩ರ ಬಾಬ್ರಿ ಮಸಿೀದಿಯ ಧ್ವಂಸ.
3. ೨೦೦೨ದ ಗುಜರಾತ್ ಹತ್ಯಾಕಾಂಡ.

ಈ ಮೂರೂ ಘೋರ ಪಾತಕಗಳ, ಮತಾಂಧತೆಯ ಅತಿರೇಕಗಳ, ರಾಜಕೀಯದ ಕ್ಷುದ್ರಾತಿಕ್ಷುದ್ರ ದುರಾಶೆಗಳ ನಂತರವೂ ನಮ್ಮ ದೇಶ ಒಂದಾಗಿ ಮಿಡಿಯುತ್ತಿರುವದು ನಿಜಕ್ಕೂ ಒಂದು ಪವಾಡವೇ ಸರಿ. ಈ ಜನ ಭಾರತೀಯರು ನಿಜಕ್ಕೂ ಅಭಿನಂದನಾರ್ಹರೇ ಸರಿ. ಆದರೆ ಇದು ರಿಪೇರಿ ಮಾಡಿದ ದೇಶವೇ? ಮೊದಲಿನಂತೆ ಕೂಡಿಕೊಂಡೀತೇ? ಮೊದಲೆಂದರೆ ಯಾವತ್ತಿನದು?

ಇರಲಿ. ಎಂಬತ್ತರ ದಶಕದಲ್ಲಿ ನಾನು ಮುಂಬಯಿಯಲ್ಲಿ ಕೆಲಸ ಮಾಡುತ್ತಿದ್ದೆ. ನಮ್ಮ ಗ್ರಾಹಕರಲ್ಲಿ ಹೆಚ್ಚಿನವರು ಸಿಖ್ ಜನಾಂಗದವರಾಗಿದ್ದರು. ನನಗೆ ಕೆಲವರಲ್ಲಿ ಒಳ್ಳೆಯ ಸ್ನೇಹವಿತ್ತು.

೧೯೮೪ರ ಅಕ್ಟೋಬರ ೩೧ಕ್ಕೆ ಆ ವರುಷದ ದೀಪಾವಳಿ ಕಳೆದು ಒಂದು ವಾರವಾಗಿತ್ತು. ಅಂದು ಬೆಳಿಗ್ಗೆ ನನ್ನ ಸಿಖ್ ಮಿತ್ರರು ನನಗಾಗಿ ಸ್ವೀಟ್ಸ್ ಡಬ್ಬ ತಂದಿದ್ದರು. ನಾನು ‘ದೀಪಾವಳಿ ಕಳೆದು ಒಂದು ವಾರವೇ ಆಯಿತಲ್ಲ. ಅಷ್ಟಲ್ಲದೇ ಈಗಾಗಲೇ ನೀವು ದೀಪಾವಳಿ ಸ್ವೀಟ್ಸ್ ಕೊಟ್ಟಿದ್ದೀರಲ್ಲ? ಮತ್ತೇಕೆ ಕೊಡುತ್ತಿದ್ದೀರಿ?’ ಎಂದೆ.

ನನ್ನ ಸಿಖ್ ಮಿತ್ರರು, ಇದು ಬೇರೆ ದೀಪಾವಳಿಯದು, ನಿಮಗೆ ಆಮೇಲೆ ತಿಳಿಯುತ್ತದೆ ತಗೊಳ್ಳಿ ಎಂದು ಸಂತಸದಲ್ಲಿ ನಗುತ್ತ ಹೋಗಿದ್ದರು.
ನನಗೆ ವಿಚಿತ್ರವೆನಿಸಿತು. ಅಂದು ಯಾಕೋ ಬೆಳಗಿನಿಂದ ವಾತಾವರಣದಲ್ಲಿ ಒಂದೇನೋ ಗುಪಿತವಿದ್ದಂತಿತ್ತು. ಅಲ್ಲಲ್ಲಿ ಕಳ್ಳದನಿಯಲ್ಲಿ ಗುಸುಗುಸು ಪಿಸುಪಿಸು ನಡೆದಿತ್ತು. ಆಮೇಲೆ ಸುಮಾರು ಹನ್ನೊಂದು ಗಂಟೆಗೆ ನಮ್ಮ ದೆಹಲಿ ಕಚೇರಿಯಿಂದ ಇಂದಿರಾಗಾಂಧಿ ಹತ್ಯೆಯ ಫೋನುಗಳು ಬರತೊಡಗಿದವು. ಆಮೇಲೆ ನಡೆದದ್ದೊಂದು ಜನಾಂಗೀಯ ಹತ್ಯಾಕಂಡ. ಸಾವಿರಾರು ಸಿಖ್ ಬಂಧುಗಳ ಕೊಲೆ, ಸುಲಿಗೆ, ಲೂಟಿಗಳು ಈಗ ಚರಿತ್ರೆ.
ಈ ದಿನಗಳಲ್ಲೇ ತುಸು ಹಿಂದೆಯೋ ಮುಂದೆಯೋ ಸುಮಾರು ಇನ್ನೂರು ಸಿಖ್ ಸೈನಿಕರ ಸೇನಾ ತುಕಡಿಯೊಂದು ಮುಂಬಯಿ ಬಳಿ ಪ್ರತೀಕಾರಕ್ಕೆಂದು ಬಂಡೆದ್ದು ಸೈನ್ಯ ತ್ಯಜಿಸಿ ಓಡುತ್ತಿರುವಾಗ ಅವರನ್ನು ಬಂಧಿಸಿದ್ದು ಈಗ ನೆನಪು.

ಕೆಲವು ದಿನ ಕಳೆದು ಪರಿಸ್ಥಿತಿ ಸ್ವಲ್ಪ ಹತೋಟಿಗೆ ಬಂದ ಮೇಲೆ, ನಾನು ಇಂದಿರಾ ಹತ್ಯೆಯ ಬಗ್ಗೆ ನನ್ನ ಒಬ್ಬ ಸುಶಿಕ್ಷಿತ ಪ್ರಗತಿಪರ ಸಿಖ್ ಮಿತ್ರನ ಜತೆಗೆ ಮಾತನಾಡುತ್ತಿದ್ದೆ. ಮಾತು ಸಂತ ಭಿಂದ್ರಾನವಾಲೆ, ಸ್ವರ್ಣಮಂದಿರದ ಮುತ್ತಿಗೆ, ದಾಳಿ, ಇಂದಿರಾ ಹತ್ಯೆ, ಆಮೇಲೆ ನಡೆದ ಹಿಂಸಾಕಾಂಡ, ಭಾರತೀಯ ಬದುಕಿಗೆ ಸಿಖ್‌ರ ಕೊಡುಗೆ, ವಿಶೇಷತಃ ಭಾರತೀಯ ಸೇನೆಯಲ್ಲಿ ಸಿಖ್‌ರ ಪಾತ್ರ, ಹಿಂದೂ ಮತ್ತು ಸಿಖ್‌ರ ನಡುವಿನ ರೋಟಿ ಬೇಟಿಕಾ ಸಂಬಂಧ ಇಲ್ಲೆಲ್ಲ ಸುತ್ತಾಡುತ್ತಿತ್ತು.

ನಾನು ‘ಏನೇ ಆದರೂ ಇಂದಿರಾಗಾಂಧಿಯ ಹತ್ಯೆಯ ದಿನ ನಿಮ್ಮವರು ಸಿಹಿ ಹಂಚಿದ್ದು ಸರಿಯೇ?’ ಎಂದೆ.
ಅವನು, ‘ಒಂದು ವೇಳೆ ಇಂತಹದೇ ಏನಾದರೂ ಪ್ರಸಂಗ ಹಿಂದೂಗಳ ಮೇಲೆ ಬಂದು ತಿರುಪತಿ ವೆಂಕಟೇಶ್ವರ ದೇವಸ್ಥಾನ ಮೇಲೆ ಸೈನಿಕರು ಟ್ಯಾಂಕರ್ ದಾಳಿ ಮಾಡಿದ್ದರೆ ನೀವು ಹಿಂದೂಗಳು ಏನು ಮಾಡುತ್ತಿದ್ದಿರಿ?’ ಎಂದ.
ನಾನು ಕ್ಷಣ ಯೋಚಿಸಿ ಗೊತ್ತಿಲ್ಲ ಎಂದೆ.
ಜಯಪ್ರಕಾಶ ನಾರಾಯಣರು ಅಂದು ಇಂದಿರಾಗಾಂಧಿಗೆ ಬರೆದ ಪತ್ರದ– ನೀವು ಆಯ್ದುಕೊಂಡ ದಾರಿಯಲ್ಲಿ ವ್ಯರ್ಥ ವೇದನೆ, ವ್ಯಾಜ್ಯ, ಕಿತ್ತಾಟಗಳಲ್ಲವೇ ಬೇರೇನೂ ಇಲ್ಲ ಎಂಬ ಮಾತು ನೆನಪಾಯಿತು.

ಇನ್ನು ಬಾಬ್ರಿಗೆ ಬಂದರೆ–
ಬಾಬ್ರಿ ಮಸಿೀದಿಯ ಧ್ವಂಸದಂತಹ, ಅನಾಗರಿಕ ಕೃತ್ಯವೆಸಗಿದ ನಂತರ ಇದು ಬಿ.ಜಿ.ಪಿ.ಯ ಅಂತ್ಯವೆಂದೇ ನಾನು ಭಾವಿಸಿದ್ದೆ. ಆದರೆ ಈ ವಿಧ್ವಂಸಕ ಕೃತ್ಯದಿಂದಲೇ ಈ ರಾಜಕೀಯ ಪಕ್ಷ ಮೈಗೂಡಿಸಿಕೊಂಡು ಮತ್ತೆ ತಲೆಯೆತ್ತಿದ್ದೊಂದು ಮನುಷ್ಯ ಸ್ವಭಾವದ ವಿಪರೀತವೇ ಸರಿ. ಪ್ರೀತಿ, ಪ್ರೇಮ, ಸಹಾನುಭೂತಿ, ಸೌಹಾರ್ದದಂತಹ ಶಬ್ದಗಳು ಬಹುಶಃ ನಿಘಂಟುವಿಗೆ ಮಾತ್ರ ಸೀಮಿತವೋ ಏನೋ!

ಮನುಷ್ಯ ಇನ್ನೊಬ್ಬ ಮನುಷ್ಯನನ್ನು ದ್ವೇಷಿಸುತ್ತಿರುತ್ತಾನೆ. ಹಾಗಾಗಿ ಜನಾಂಗಗಳು ಒಂದಿಷ್ಟು ನೆವ ಸಿಕ್ಕರೆ ಸಾಕು ಒಬ್ಬರಿನ್ನೊಬ್ಬರ ಕತ್ತಿಗೆ ಕೈ ಹಾಕುತ್ತವೆ. ಕ್ಷುದ್ರ ರಾಜಕಾರಣಿಗಳು ಒಂದಿಲ್ಲೊಂದು ನೆವ ಸೃಷ್ಟಿಸಿ ಒಡಕು ಹುಟ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಎಲ್ಲರೂ ಅಷ್ಟೆ! ಅವರು ಸಾವಿರಾರು ಸಿಖ್‌ರನ್ನು ಕೊಂದು ಇನ್ನೂ ಸೆಕ್ಯೂಲರ್ ಎಂದು ಕೊಳ್ಳುತ್ತಾರೆ. ಇವರು ಸಾವಿರಾರು ಮುಸ್ಲಿಮ್‌ರನ್ನು ಕೊಂದು ಹಿಂದುತ್ವವಾದಿಗಳೆನಿಸಿಕೊಳ್ಳುತ್ತಾರೆ. ಇನ್ನೊಬ್ಬರು ಕಾಫಿರರನ್ನೆಲ್ಲ ಕೊಲ್ಲುತ್ತಲೇ ತಾವು ಧರ್ಮನಿಷ್ಠರೆನ್ನಿಸಿಕೊಳ್ಳುತ್ತಾರೆ. ಎಲ್ಲರೂ ಅಷ್ಟೇ!

ಮೂಲದಲ್ಲಿ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಕಂಡು ಜೀವ ಭಯದಿಂದ ಬೆದರಿರುತ್ತಾನೆ. ಬೆದರಿಕೆಯಿಂದಾಗಿ ತನ್ನನ್ನು ರಕ್ಷಿಸಿಕೊಳ್ಳಲು ಆ ಇನ್ನೊಬ್ಬನ ಮೇಲೆ ಆಕ್ರಮಣವೆಸಗುತ್ತಾನೆ. ಪರ್ಯಾಯವನ್ನು ಹುಡುಕುತ್ತ ಮತ್ತೆ ಮತ್ತೆ ನಾಗರಿಕತೆಗಳನ್ನು ಕಟ್ಟಿ ಬೆಳೆಸುತ್ತಾನೆ. ಮತ್ತೆ ಹೆದರುತ್ತಾನೆ ಮತ್ತೆ ಕೆಡವುತ್ತಾನೆ.

ಇದು ಅತ್ಯಂತ ಸಂಕ್ಷಿಪ್ತ ಹಿಸ್ಟರಿ ಆಫ್ ದ ವರ್ಲ್ಡ್.
ಬಾಬ್ರಿ ಮಸೀದಿಯ ಧ್ವಂಸದ ನಂತರ ನಾಲ್ಕಾರು ದಿನ ಬಿಟ್ಟು ಒಂದು ದಿನ ನಾನು ನನ್ನ ಕಚೇರಿಯ ಕೇಬಿನ್ನಿನಲ್ಲಿ ಕೆಲಸದಲ್ಲಿ ಮಗ್ನನಾಗಿದ್ದೆ. ಆಗ ಕೆಲವು ದಿನ ರಜೆಯಲ್ಲಿದ್ದ ನಮ್ಮ ಒಬ್ಬ ಸಿಬ್ಬಂದಿ- ಇನ್ನೂ ಹುಡುಗ ವಯಸ್ಸಿನವ- ಉನ್ಮತ್ತನಂತೆ ಬಾಗಿಲು ದೂಡಿಕೊಂಡು ಒಳಗೆ ಬಂದ. ಭ್ರೂಮಧ್ಯೆ ಕುಂಕುಮ, ಕೆದರಿದ ತಲೆ, ಹಣೆಯ ಬಳಿ ಒಂದು ಬ್ಯಾಂಡೇಜ್‌ ಪಟ್ಟಿ, ಉನ್ಮಾದೀ ರಾವುಗಣ್ಣುಗಳಿಂದ ನನ್ನನ್ನು ನಿಟ್ಟಿಸುತ್ತ, ಒಮ್ಮೆಲೇ ಬಗ್ಗಿ ನನ್ನ ಪಾದಸ್ಪರ್ಶ ಮಾಡಿ ಮೇಲೆದ್ದ.

ಆಮೇಲೆ ಬಗಲಿಗೆ ನೇತುಹಾಕಿದ್ದ ತೂಗು ಚೀಲದಿಂದ ಒಂದು ಮುಷ್ಟಿ ಗಾತ್ರದ್ದೇನನ್ನೊ ನನ್ನ ಟೇಬಲ್ ಮೇಲಿಟ್ಟು, ‘ಕರಸೇವಕನಾಗಿ ಹೋಗಿದ್ದೆ. ದೇವರ ದಯೆಯಿಂದ ಎಲ್ಲ ಸುಸೂತ್ರವಾಯಿತು. ಸೋಮನಾಥ ದೇವಸ್ಥಾನದ ಸೇಡು ತೀರಿತು’ ಎಂದವನೇ ಬಲಗಾಲಿನ ಪಾಯಝಾಮಾ ಏರಿಸಿ ಅಲ್ಲೊಂದು ಬ್ಯಾಂಡೇಜು ತೋರಿಸಿ, ಆಮೇಲೆ ತಲೆಯ ಬ್ಯಾಂಡೇಜು ಕಡೆ ಕೈಮಾಡಿ, ‘...ಈ ಎರಡೂ ಗಾಯಗಳು ನನ್ನ ಜನ್ಮ ಸಾರ್ಥಕ್ಯದ ಕುರುಹುಗಳು... ನಿಮಗೆ ಕೊಟ್ಟಂತಹದೇ ಇನ್ನೊಂದು ಇಟ್ಟಿಗೆಯ ತುಂಡನ್ನು ಜನರಲ್ ಮ್ಯಾನೇಜರರಿಗೆ ಕೊಡಬೇಕು...’ ಎನ್ನುತ್ತ ಕೇಬಿನ್ನಿನ ಬಾಗಿಲನ್ನು ಘಟಾರನೇ ದೂಡಿಕೊಂಡು ಹೊರನಡೆದ.

ಅವನು ಹೋದ ಮೇಲೆ ಎಷ್ಟೋ ಹೊತ್ತು ನನ್ನ ಕೇಬಿನ್ನಿನ ಕೋಣೆ ಅಗ್ನಿಸ್ಪರ್ಶವಾದಂತೆ ಸುಡುತ್ತಿತ್ತು!
ಅದಾಗಿ ಎರಡು ದಿನ ಬಿಟ್ಟು ನಾನು ಆಟೋ ಒಂದರಲ್ಲಿ ಎಲ್ಲೋ ಹೊರಟಿದ್ದೆ. ಆಟೋ ಚಾಲಕ ಮುಸ್ಲಿಮ್ ಹುಡುಗ ಒಂದೇನೋ ಟೇಪು ಹಾಕಿದ್ದ. ಟೇಪಿನಲ್ಲಿ ಯಾರೋ ಉರ್ದುವಿನಲ್ಲಿ ಅತ್ಯುಗ್ರ ಭಾಷಣ ಮಾಡುತ್ತಿದ್ದರು. ನನಗೆ ಉರ್ದು ತಿಳಿಯುವದಿಲ್ಲ. ಆದರೆ ಭಾಷಣ ರಕ್ತಮಾಂಸಗಳನ್ನೂ ಬೆಂಕಿಯ ಉಂಡೆಗಳನ್ನೂ ಒಂದೇ ಸಮನೇ ಉಗುಳುತ್ತಿತ್ತು. ಕಾಫಿರ್.... ಖೂನ.... ಹರಾಮ್... ಹಲಾಲ್.... ಹಿಂದೂಸ್ತಾನ.... ನಾಮರ್ದ... ಕತ್ತಲರಾತ್... ಇನ್‌ಶಾ ಅಲ್ಲಾದಂತಹ ಶಬ್ದಗಳು ತೋಫಿನ ಗುಂಡಿನಂತೆ ಸಿಡಿಯುತ್ತಿದ್ದವು. ಚಾಲಕ ಹಲ್ಲು ಕಚ್ಚಿ ಉನ್ಮತ್ತನಂತೆ ಸಿಕ್ಕಾಪಟ್ಟೆ ರಭಸದಿಂದ ಆಟೋ ಓಡಿಸುತ್ತಿದ್ದ. ಪುಣ್ಯಕ್ಕೆ ಸುರಕ್ಷಿತ ಸ್ಥಾನಕ್ಕೆ ತಲುಪಿಸಿದ.

ಆಮೇಲೆ ಅವತ್ತಿನ ಆಟೋದಲ್ಲಿ ನಾನು ಕೇಳಿದಂತಹ ಉಗ್ರ ಭಾಷಣದ ಟೇಪುಗಳು ಅಲ್ಲಲ್ಲಿ ಹರಿದಾಡುತ್ತಿವೆಯೆಂದೂ, ಟೇಪುಗಳು ಉಗ್ರವಾದಿಯೊಬ್ಬ ಹಿಂದೂಸ್ತಾನದ ಮೇಲೆ ದಾಳಿ ಮಾಡಿ ಮತ್ತೆ ಮುಸ್ಲಿಮ್ ರಾಜ್ಯ ಕಟ್ಟುವ ಭಾಷಣದ ಟೇಪುಗಳೆಂದೂ ಯಾರೋ ಹೇಳಿದರು!

ನಾವು ಚರಿತ್ರೆಯಿಂದ ಏನನ್ನೂ ಕಲಿಯುವದೂ ಇಲ್ಲ. ಚರಿತ್ರೆಯನ್ನು ಅದರ ಪಾಡಿಗೆ ಬಿಟ್ಟು ಹೊಸ ಬಾಳನ್ನು ಕಟ್ಟಿಕೊಳ್ಳುವದೂ ಇಲ್ಲ.
ನಾನು ಇಲ್ಲಿ ೨೦೦೨ರ ಗುಜರಾತು ದೊಂಬಿ ಕುರಿತು ಪ್ರತ್ಯೇಕವಾಗಿ ಹೇಳುವುದಿಲ್ಲ. ಯಾಕೆಂದರೆ ನಮ್ಮ ರಾಜಕಾರಣಿಗಳು ಅದನ್ನು ಮರೆಯಲು ಬಿಡುವುದೇ ಇಲ್ಲ. ಅದೂ ಅಲ್ಲದೇ ನನಗೆ ೧೯೮೪ರ ಸುವರ್ಣ ಮಂದಿರದ ದಾಳಿ, ಹಿಂದೆಯೇ ನಡೆದ ಸಿಖ್‌ರ ಹತ್ಯಾಕಾಂಡ; ೧೯೯೩ರ ಬಾಬ್ರಿ ಮಸೀದಿ ಧ್ವಂಸ; ಹಾಗೂ ೨೦೦೨ರ ಗುಜರಾತ್ ದಂಗೆ ಒಂದೇ ತೆರನಾದ, ತಪ್ಪಿಸಬಹುದಾಗಿದ್ದ, ಸರ್ಕಾರಿಪೋಷಿತ ಪಾತಕಗಳೆಂದೇ ತೋರುತ್ತದೆ. ಒಂದನ್ನು ಸೆಕ್್ಯುಲರ್ ಪಾತಕವಾದ್ದರಿಂದ ಕ್ಷಮಾರ್ಹವೆಂದೂ, ಇನ್ನೊಂದನ್ನು ಆಂಟಿಸೆಕ್ಯೂಲರ್ ಪಾತಕವಾದ್ದರಿಂದ ಅಕ್ಷಮ್ಯವೆಂದೂ ವಾದಿಸುವುದು, ಬರೀ ಬಾಲಿಶವಷ್ಟೇ ಅಲ್ಲ ಹಾಸ್ಯಾಸ್ಪದವಾಗಿ ತೋರುತ್ತದೆ.

ಏನೆಲ್ಲ ಪಾತಕಗಳು, ಹೆದರಿಕೆ, ಅಸುರಕ್ಷಿತ ಭಾವನೆಗಳ ನಡುವೆಯೂ ನಮ್ಮ ಮುಗ್ಧ ಜನ ಬದುಕನ್ನು ಪ್ರೀತಿಸುತ್ತಾರೆ. ಎಷ್ಟೇ ಅವಘಡಗಳನ್ನೆದುರಿಸಿಯೂ, ಮತ್ತೆ ಮತ್ತೆ ಹೆಂಡತಿ ಮಕ್ಕಳೊಡನೆ ನೆಮ್ಮದಿಯಿಂದ ಬದುಕಲು ಹವಣಿಸುತ್ತಾರೆ, ಹಂಬಲಿಸುತ್ತಾರೆ. ಗೋಡೆಯನ್ನೇರುವ ಇರುವೆಯಂತೆ! ಎಷ್ಟು ಸಲ ಬಿದ್ದರೂ ಮತ್ತೆ ಮತ್ತೆ ಏರುತ್ತಿರುತ್ತದೆ.

ಈ ರಾಷ್ಟ್ರದ ಇಂದಿನ ದೊಡ್ಡ, ಬಲುದೊಡ್ಡ ಶಾಪ ಎಂದರೆ ರಾಜಕಾರಣಿಗಳು. ರಾಜಕಾರಣಿಗಳಲ್ಲೂ ಒಳ್ಳೆಯವರಿರಬಹುದು. ಆದರೆ ಅವರಿಂದ ಒಳ್ಳೆಯ ಪರಿಣಾಮವೇನಾಗಿದೆಯೋ, ಆಗುತ್ತಿದೆಯೋ ತಿಳಿಯದು.

ಏನೆಲ್ಲ ಆದರೂ ನಾನು ನಿರಾಶನಾಗಿಲ್ಲ. ಇಂದಿನ ಕೆಲವು ಮುಂದುವರೆದ ರಾಷ್ಟ್ರಗಳೂ ಇಂತಹ ಏರಿಳಿತಗಳನ್ನು ದಾಟಿಯೇ ಇಂದಿನ ಸ್ಥಿತಿಗೆ ತಲುಪಿದೆಯಂತೆ. ಇಂದಿಲ್ಲ ನಾಳೆ ಮನುಷ್ಯ ತನ್ನ ಸುಪ್ತ ಶಕ್ತಿ ಸಾಮರ್ಥ್ಯಗಳನ್ನು ಕಂಡುಕೊಂಡಾನು. ಬದುಕು ಹಸನಾದೀತು. ಇಂದಿನ ಭ್ರಷ್ಟಾಚಾರ, ಜಾತೀಯತೆ, ಧರ್ಮಾಂಧತೆ, ಸ್ವಜನ ಪಕ್ಷಪಾತಗಳನ್ನೆಲ್ಲ ದಾಟಿ ಬಂದರೆ ಅಲ್ಲೊಂದು ಸುಂದರ ಬದುಕು ನಮಗಾಗಿ ಕಾಯುತ್ತಿದ್ದೀತು.

ಈ ಮಧ್ಯೆ ಬೇಂದ್ರೆಯವರ ನಾ ಹಡೆದ ಮೂವತ್ತು ಮೂರು ಕೋಟಿ ನೂರ ಮೂವತ್ತು ಮೂರು ಕೋಟಿಗೆ ಏರಿದೆ. ಸುನಾಮಿಗಳೂ ಅಗ್ನಿ ದುರಂತಗಳೂ ಆಗುತ್ತಿವೆ, ಭೂಕಂಪ ಭೋಪಾಳಗಳಾಗುತ್ತಿವೆ. ಪತ್ರಿಕೆಗಳು ಮರಣ ದುರಂತಗಳ ಕೋಷ್ಟಕಗಳನ್ನೇ ಕೊಡುತ್ತಿವೆ. ಇವೆಲ್ಲವುಗಳ ಮಧ್ಯೆ, ಬೃಹತ್ ಭಾರತವೆಂಬ ಅತಿ ದೊಡ್ಡ ಲಿಕಿಲಿಕಿಯಾದ ಜಗನ್ನಾಥ ತೇರು (Juggernaut)  ಹೊಯ್ದಾಡುತ್ತ ಮುಗ್ಗರಿಸುತ್ತ ತುಯ್ಯುತ್ತ ತೂಗುತ್ತ ಘುಡು ಘುಡಿಸುತ್ತ ಎತ್ತಲೋ ಸಾಗುತ್ತಿದೆ. ಬನ್ನಿ ಈ ರಥೋತ್ಸವದಲ್ಲಿ ಭಾಗಿಯಾಗೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.