ಇದ್ದೇ ಇದೆ
ಸ್ಟ್ರಾಂಗ್ ಆದ ಅನುಮಾನ
ನನ್ನ ಹುಟ್ಟಿದ ದಿನದ ಬಗ್ಗೆ.
ನುಣ್ಣುನಾಮ ಶ್ಯಾನುಭೋಗರ
ಕೈಚಳಕ
ತಲೆಮಾರು ತಡೆಗಳ ನಡುವೆಯೂ
ಹೇಗೋ ಸರ್ಕಾರದ ಕಣ್ಣಿಗೆ ಬಿದ್ದ
ಮಲ್ಸೀಮೆಯ ಗಡಿ
ಯಗಚಿ ಹೊಳೆಯ ದಂಡೆ
ಘೂ.... ಗೂಬೆಗಳ ತಾಣ
ತಗ್ಗುತೋಪಿನ ಊರು
ಪಟೇಲರ ತಿರುವು ಕೊಟ್ಟಿಗೆಯಲ್ಲಿ
ಆರಂಭವೆ ಆಯಿತು
ಸರ್ಕಾರಿ ಕಿರಿಯ ಪ್ರಾಥಮಿಕವು.
ಬಯಲ ಬೇಟೆಯ
ನಮ್ಮ ಗೋಳು ಬ್ಯಾಡ
ಸೀರಣಿಗೆ ಬಾಚಣಿಗೆ ಹಲ್ಲಿಗೂ ಸಿಗದ
ಥರೆವೇರಿ ಸೀರು ಹೇನಿನ ಗಡವ ತಲೆ
ಸಂತೆ ಲಾಡಿಚಡ್ಡಿಯ ಸಂದುಗೊಂದಿನ
ರಕ್ತಸಿರಿಯ ಮುಲುಮುಲು
ಬೆಳ್ಳಿಚುಕ್ಕೆ ಸಾಲುಸಾಲು ಕೂರೆಗಳ ದಂಡು
ಮಗ್ಗಲುಚ್ಚೆಯ ಕುಂಚುವಾಸನೆ
ಉಸಿರನ್ನೆ ಏರುಪೇರು ಮಾಡುವ
ನಾರಸಿ ಹಸಿರುಗೊಣ್ಣೆಯ
ಟಾರು ಮೆತ್ತಿದ ಮೂಗು
ನಸುನಾಚು ಬಾಣಂತಿಯರು
ಎದೆಹಾಲು ಚಿಮ್ಮಿಸಿ
ಪಿಸರೆ ಬಿಡಿಸುವ ಕಣ್ಣುರೆಪ್ಪೆಗಳು
ಢಣ್ ಧರ್ ಅರೆಗುದ್ದಲಿ ಘಂಟೆಯ
ಹೊಸನಾದಕ್ಕೆ ಬೆಚ್ಚಿ ಬೆರಗಾಗಿದ್ದೆವು.
ಸ್ಕೂಲಿಗೆ ಸೇರುವ ಸರದಿ
ಜನ್ಮಕುಂಡಲಿ ಕೇಳಿದ ಮೇಷ್ಟ್ರಿಗೆ
ಹೆ...ಹ್ಹೆ...ಹ್ಹೆ... ನಗೆಯ ಬೀರಿದ ಅಪ್ಪ
ಬಾಲದ ಬರಚುಕ್ಕಿ ಕಾಣಿಸಿ
ಬರ್ಗಾಲ ಬಂದು, ಬಿದ್ರಕ್ಕಿ ತಿಂದ್ವು ನೋಡಿ
ಅದರ ಹಿಂದ್ಕೆ ಕದಾಳು ಕ್ಯರೆ
ಬ್ಯಾಟೆ ಆತು ನೋಡಿ
ಅದೇ... ಬಯಲೊಳೆ ಬಿದ್ದು
ಸಂಪೂರ್ಣ ರಾಮಾಯಣ ಆದ ವರ್ಷ
ನಮ್ಮ ದೊಡ್ಡಸ ಕರ ಹಾಕಿದ
ದಿನವೇ ಹುಟ್ಟಿದ್ದು.
ಅಪ್ಪನ ಭೂಮಿ ಆಕಾಶದ
ಈ ಲೆಕ್ಕ
ಕಚ್ಚೆಪಂಚೆ ಟೋಪಿಯ ಶ್ವೇತದಾರಿ
ರೂಲುದೊಣ್ಣೆ ಮೇಷ್ಟ್ರು
ಕಲಿತಿದ್ದ ಗಣಿತಶಾಸ್ತ್ರದ
ತೆಕ್ಕೆಗೆ ಸಿಗದ
ನನ್ನ ಹುಟ್ಟಿದ ದಿನ
ಸವ್ವಾ ಸವಾಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.