ADVERTISEMENT

ಸಾಥಿದಾರರಿಲ್ಲದ ಹಾಡು!

ಶಿರೀಶ ಜೋಷಿ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ಈಚಲಕರಂಜಿಯ ದೊರೆ ಶ್ರೀಮಂತ ಬಾಬಾಸಾಹೇಬರು ಬೆಳಗಾವಿ ಸಮೀಪವಿರುವ ಮಹಾರಾಷ್ಟ್ರದ ಹಳ್ಳಿ ಆಜರಾದಲ್ಲಿ ಒಮ್ಮೆ ವಾಸ್ತವ್ಯ ಹೂಡಿದ್ದರು. ಅದೇ ದಿನ ಅಕಸ್ಮಾತ್ತಾಗಿ ಶಿವರಾಮಬುವಾ ವಝೆ ಕೂಡ ಆಜರಾಕ್ಕೆ ಆಗಮಿಸಿದ್ದರು.

ಶಿವರಾಮಬುವಾರಿಗೆ ದೊರೆ ಎದುರಿಗೆ ಹಾಡಬೇಕು ಅನ್ನಿಸಿತು. ಮರುದಿನ ಬೆಳಿಗ್ಗೆ ಅವರು ಬಾಬಾಸಾಹೇಬರು ಉಳಿದುಕೊಂಡಲ್ಲಿಗೆ ಧಾವಿಸಿದರು. ಮೊದಲು ಶ್ರೀಮಂತರ ಖಾಸಾ ಕಾರಭಾರಿ ಮಾಧವರಾವ ಲೇಲೆಯವರನ್ನು ಕಂಡು `ನಾನೊಬ್ಬ ಗವಾಯಿ. ನಾನು ದೊರೆಗಳನ್ನು ಕಾಣಬೇಕು~ ಎಂದು ನಿವೇದಿಸಿಕೊಂಡರು. ಮಾಧವರಾವ್ ಅವರಿಗೆ ಬಂದವ ಗಾಯಕ ಎಂದೇನೂ ಅನ್ನಿಸಲಿಲ್ಲ.

ವೇಷಭೂಷಣಗಳಿಗೆ ಮಹತ್ವ ಕೊಡದ ಶಿವರಾಮಬುವಾ, ಕೆಲವು ಸಲ ಗಲೀಜು ಬಟ್ಟೆ ಧರಿಸುತ್ತಿದ್ದರು. ಅವರ ಅಂದಿನ ವೇಷವೂ ಅದೇ ರೀತಿಯಿತ್ತು. ಹೀಗಾಗಿ ಮಾಧವರಾಯರಿಗೆ ಅನುಮಾನ ಉಂಟಾಗಿತ್ತು. ಪ್ರಶ್ನೋತ್ತರ ಆರಂಭವಾಯಿತು.
`ನೀನು ಗಾಯಕ ಎಂಬುದಕ್ಕೇನು ಆಧಾರ? ಹಾಡಿ ತೋರಿಸು~
`ನಾನು ದೊರೆಗಳ ಎದುರಿಗೆ ಮಾತ್ರ ಹಾಡುತ್ತೇನೆ~
`ಹಾಗಿದ್ದರೆ ನೀನು ಗಾಯಕನೆಂಬುದಕ್ಕೆ ಆಧಾರವೇನಿದೆ?~

ಪಕ್ಕದ ಕೋಣೆಯ ತೂಗುಮಂಚದ ಮೇಲೆ ಪತ್ರಿಕೆಯನ್ನೋದುತ್ತಿದ್ದ ಶ್ರಿಮಂತರು ಈ ಸಂಭಾಷಣೆ ಕೇಳಿಸಿಕೊಳ್ಳುತ್ತಿದ್ದರು. ಅವರೊಬ್ಬ ಅಪ್ರತಿಮ ಸಂಗೀತ ಪ್ರೇಮಿ. ಅವರು ಮಾಧವರಾಯರಿಗೆ ಬಂದಿರುವ ಗವಾಯಿಯನ್ನು ಒಳಗೆ ಕಳಿಸುವಂತೆ ಸೂಚಿಸಿದರು.
ದೊರೆಗಳು ಗವಾಯಿಗೆ ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ಸೂಚಿಸಿದರು.
`ನಾನು ಶಿವರಾಮ. ಪಂ.ರಾಮಕೃಷ್ಣಬುವಾ ವಝೆ ಅವರ ಮಗ. ನಿಮಗೆ ನನ್ನ ಹಾಡು ಕೇಳಿಸಬೇಕೆಂದು ಬಂದಿದ್ದೇನೆ~.

ದೊರೆಗಳು ಪಂ.ರಾಮಕೃಷ್ಣಬುವಾ ವಝೆಯವರ ಪಾಂಡಿತ್ಯವನ್ನು ಕೇಳಿಬಲ್ಲವರಾಗಿದ್ದರು. ಅವರ ಮಗನೆಂದ ಮೇಲೆ ಚೆನ್ನಾಗಿಯೇ ಹಾಡುವವನಿರಬೇಕು ಅನ್ನಿಸಿತು.

`ಸರಿ, ಯಾವಾಗ ಕೇಳಿಸುತ್ತೀರಿ?~
`ದೊರೆಗಳು ಹೇಳಿದಾಗ~.
`ಜೊತೆ ವಾದ್ಯಗಳು ಇವೆಯೋ~
`ಇಲ್ಲ~
`ತಂಬೂರಿ~
`ಅದೂ ಇಲ್ಲ~
`ಮತ್ತೆ? ಆಧಾರಶ್ರುತಿಯಿಲ್ಲದೆ ಹೇಗೆ ಹಾಡುತ್ತೀರಿ?~
`ತಮ್ಮಲ್ಲಿ ಬರುವುದು ಮೊದಲೇ ಗೊತ್ತಿದ್ದರೆ ಎಲ್ಲ ವ್ಯವಸ್ಥೆಯೊಂದಿಗೆ ಬರುತ್ತಿದ್ದೆ. ಹೀಗಾಗಿ....~

`ಸಾಥಿದಾರರು ಸಿಗುತ್ತಾರೇನು ನೋಡಿ. ರಾತ್ರಿ ಒಂಬತ್ತಕ್ಕೆ ಬನ್ನಿ~
ಶಿವರಾಮಬುವಾ ಅಂದು ದಿನವಿಡೀ ಆಜರಾವನ್ನು ಗಸ್ತು ಹೊಡೆದರೂ ಅವರಿಗೆ ಪಕ್ಕವಾದ್ಯ ನುಡಿಸುವ ಸಾಥಿದಾರರು ಸಿಗಲೇ ಇಲ್ಲ.

ಆದರೆ ಒಂದು ಹಳೆಯ ತಂಬೂರಿ ಮಾತ್ರ ದೊರಕಿತು. ಅದೊಂದನ್ನೇ ಎತ್ತಿಕೊಂಡು ರಾತ್ರಿ ಒಂಬತ್ತಕ್ಕೆ ಶಿವರಾಮಬುವಾ ಶ್ರಿಮಂತರಿದ್ದಲ್ಲಿಗೆ ಆಗಮಿಸಿದರು.

ತಂಬೂರಿಯೊಂದನ್ನೇ ಆಧಾರವಾಗಿಟ್ಟುಕೊಂಡು ಸೊಗಸಾಗಿ ಹಾಡಿದರು. ಅವರ ಹಾಡಿಗೆ ಶ್ರಿಮಂತರೊಬ್ಬರೇ ಶೋತೃ! ನಿರಂತರ ಕೆಲಸಕಾರ್ಯಗಳಿಂದ ದಣಿದಿದ್ದ ಮಾಧವರಾಯರು ಶಿವರಾಮಬುವಾ ಹಾಡುವಾಗ ನಿದ್ರಿಸಿದ್ದರು!

ಮರುದಿನ ಬೆಳಿಗ್ಗೆ ದೊರೆಗಳು ಕೇಳಿದರು-
`ನಿನ್ನೆ ರಾತ್ರಿ ಗವಾಯಿಯ ಹಾಡನ್ನು ನೀವು ಕೇಳಿದಿರಾ?~. ಮಾಧವರಾಯರು ವಾಸ್ತವ ಸಂಗತಿಯನ್ನು ಹೇಳಿದರು.

`ಒಂದು ಪ್ರಬುದ್ಧ ಗಾಯನ ಕೇಳುವುದನ್ನು ನೀವು ಕಳೆದುಕೊಂಡಿರಿ. ಸರಿ ಬಿಡಿ, ಆ ಗವಾಯಿ ಇನ್ನೇನು ಬರುತ್ತಾರೆ, ಅವರಿಗೆ ಬಿದಾಗಿ ಎಷ್ಟು ಕೊಡುವುದು?~
ಶಿವರಾಮಬುವಾರ ವಿದ್ವತ್‌ನ ಕಲ್ಪನೆಯೇ ಇಲ್ಲದ ಮಾಧವರಾಯರು ಐದು ರೂಪಾಯಿ (ಆ ಕಾಲದಲ್ಲದು ದೊಡ್ಡ ಮೊತ್ತವೇ!) ಕೊಡಲು ಸಲಹೆಯಿತ್ತರು. ಶಿವರಾಮಬುವಾ ಶ್ರಿಮಂತರೆದುರು ಹಾಜರಾದಾಗ ಅವರಿಗೆ ಇಪ್ಪತ್ತೈದು ರೂಪಾಯಿಗಳ ಸಂಭಾವನೆ ದೊರೆಯಿತು. ದೊರೆಗಳು ಹೇಳಿದರು-

`ನೋಡಿ, ನಿಮ್ಮ ಹಾಡುಗಾರಿಕೆಗೆ ಈ ಸಂಭಾವನೆ ತಕ್ಕುದಲ್ಲ ಎಂದು ನನಗೆ ಗೊತ್ತು. ಈಚಲಕರಂಜಿಯ ನವರಾತ್ರಿ ಉತ್ಸವಕ್ಕೆ ಬನ್ನಿ. ನಿಮಗೆ ಕೈತುಂಬ ಬಿದಾಗಿ ಕೊಡುತ್ತೇನೆ~. ಶಿವರಾಮಬುವಾ ಅಲ್ಲಿಂದ ಸಂತೃಪ್ತಿಯಿಂದ ಹೊರಟರು.

ಸಾಥಿದಾರರಿಲ್ಲದೆ ಕೇವಲ ಮುರುಕು ತಂಬೂರಿಯೊಂದರ ಸಹಾಯದಿಂದ ಹಾಡಿ ಅವರು ಸಂಗೀತಪ್ರೇಮಿ ದೊರೆಯ ಮನಸ್ಸನ್ನು ಗೆದ್ದಿದ್ದರು. ನಿಜವಾದ ಹಾಡುಗಾರನಿಗೆ ರಾಗಗಳು, ಅವುಗಳ ಸ್ವರಗಳು, ಅವುಗಳ ಶ್ರುತಿ ಇವೆಲ್ಲವೂ ಅಂತರ್ಗತವಾಗಿರುತ್ತವೆ, ಪಕ್ಕ ವಾದ್ಯಗಳು ನೆಪ ಮಾತ್ರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.