ADVERTISEMENT

ಸಿಲೋನ್ ಆನೆಗಳು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 19:30 IST
Last Updated 19 ಫೆಬ್ರುವರಿ 2011, 19:30 IST

ಕಿವಿಗಳು ಅಗಲವಾಗಿರುವ ಆನೆಗಳನ್ನು ಆಫ್ರಿಕಾದ ಆನೆಗಳೆಂದೂ ಕಿವಿಗಳ ಗಾತ್ರ ಚಿಕ್ಕದಾಗಿರುವ ಆನೆಗಳನ್ನು ಏಷ್ಯಾದ ಆನೆಗಳೆಂದು ವರ್ಗೀಕರಿಸಲಾಗಿದೆ. ಸಿಲೋನ್ ಆನೆಗಳು ಏಷ್ಯಾದ ಆನೆಗಳ ಗುಂಪಿಗೆ ಸೇರುತ್ತವೆ. ಅವು ಸುಮತ್ರಾ, ಇಂಡಿಯಾ, ಮಲೇಷಿಯಾ ಆನೆಗಳಿಗಿಂತ ದೊಡ್ಡವು. ಸುಮಾರು 21 ಅಡಿಗಳಷ್ಟು ಎತ್ತರ ಬೆಳೆಯಬಲ್ಲವು.

ಶ್ರೀಲಂಕಾದ ದಟ್ಟ ಕಾಡುಗಳಲ್ಲಿ ಕಂಡುಬರುವುದರಿಂದ ಅವುಗಳಿಗೆ ಸಿಲೋನ್ ಆನೆಗಳು ಎಂಬ ಹೆಸರು. ಎಲೆಗಳು, ಹುಲ್ಲುಗಳು, ಬಳ್ಳಿಗಳು, ಹಣ್ಣುಗಳನ್ನು ತಿನ್ನುವ ಈ ಆನೆಗಳಿಗೆ ಮರಳಿನಲ್ಲಿ ಹೊರಳಾಡಿ ನಂತರ ಜಲಪಾತದಡಿಯಲ್ಲಿ ಸ್ನಾನ ಮಾಡುವುದು ತುಂಬಾ ಇಷ್ಟ. ವಯಸ್ಸಾದ ಆನೆ ಒಬ್ಬಂಟಿಯಾಗಿ ವಾಸಿಸಿದರೆ, ವಯಸ್ಸಾದ ಹೆಣ್ಣಾನೆ 10ರಿಂದ 50 ಆನೆಗಳ ಗುಂಪಿಗೆ ನಾಯಕಿಯಾಗುತ್ತದೆ.

ಇತ್ತೀಚೆಗೆ ಸಿಲೋನ್ ಕಾಡುಗಳಲ್ಲಿ ಈ ಆನೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅವುಗಳ ಒಟ್ಟು ಸಂಖ್ಯೆಯಲ್ಲಿ ಕಾಲು ಭಾಗ ಮಾತ್ರ ಬದುಕುಳಿದಿರುವುದಾಗಿ ತಜ್ಞರು ಹೇಳುತ್ತಿದ್ದಾರೆ.

ಕಾಡುಗಳನ್ನು ಕಡಿದು ರಾಷ್ಟ್ರೀಯ ಉದ್ಯಾನವನಗಳನ್ನಾಗಿ ಮಾಡುತ್ತಿರುವುದು ಮತ್ತು ಕಾಡನ್ನು ಒತ್ತುವರಿ ಮಾಡಿಕೊಂಡು ತೋಟಗಳನ್ನು ಮಾಡಿಕೊಳ್ಳುತ್ತಿರುವುದು ಅವುಗಳ ನಾಶಕ್ಕೆ ಪ್ರಮುಖ ಕಾರಣ. ಉದ್ಯಾನವನಗಳು ಆ ಬೃಹತ್ ಪ್ರಾಣಿಯ ಸಂಚಾರಕ್ಕೆ ಸಾಕಾಗುತ್ತಿಲ್ಲ. ಅವು ಕಾಡಿನಿಂದ ಆಚೆ ಬಂದರೆ ಆನೆಗಳ ಹಾವಳಿ ಎಂಬ ಹೆಸರಿನಲ್ಲಿ ನಿರ್ದಾಕ್ಷಿಣ್ಯವಾಗಿ ಕೊಲ್ಲಲಾಗುತ್ತದೆ.

ಜೊತೆಗೆ ಅವು ಆಹಾರಕ್ಕಾಗಿ ಸುತ್ತುವಾಗ ತೋಟಗಳ ಕಡೆಗೆ ಹೋದರೆ ರೈತರು ಕೋಪಗೊಂಡು ಅವುಗಳನ್ನು ಕೊಲ್ಲುತ್ತಾರೆ. ಹೀಗೆ ನಿರಂತರವಾಗಿ ಆನೆಗಳು ಸಾವಿಗೀಡಾಗುತ್ತಿವೆ. ಆದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ಸಿಲೋನ್ ಆನೆಗಳು ಕಣ್ಮರೆಯಾಗುವ ದಿನ ಹತ್ತಿರದಲ್ಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.