ADVERTISEMENT

ಸೀಳುನೋಟ

ಕವಿತೆ

ಜ.ನಾ.ತೇಜಶ್ರೀ
Published 6 ಜೂನ್ 2015, 19:30 IST
Last Updated 6 ಜೂನ್ 2015, 19:30 IST

ನೆಲವನ್ನು ಮೂತಿಯಿಂದ ಗುದ್ದಿ ಎಮ್ಮೆ
ಕಿತ್ತುಕಿತ್ತು ತಿನ್ನುತ್ತಿದೆ ಹುಲ್ಲು ಸೊಪ್ಪುಸದೆಯನ್ನು,
ಅದರ ಬೆನ್ನಿನ ಮೇಲೊಂದು ಕಾಗೆ
ಎಮ್ಮೆ ನಡಿಗೆಯ ಲಯಕ್ಕೆ ತಕ್ಕಂತೆ
ತಾನೂ ನಡೆಯುತ್ತಿದೆ ಹಾಗೆಹೀಗೆ,
ಬಾಗಿ ಇಣುಕಿ ನೋಡುತ್ತ
ಏನನ್ನೋ ಆರಿಸುತ್ತ
ಕೊಕ್ಕಿನಿಂದ ಹೆಕ್ಕುತ್ತ ಕುಕ್ಕುತ್ತ,

ಬೀಸತೊಡಗಿತು ಗಾಳಿ ಒಮ್ಮಿಂದೊಮ್ಮೆಗೆ
ಹುಲ್ಲಿನ ಮೊನೆಗಳು ಅಲುಗಿದವು
ನಡುಗುತ್ತ ಬಾಗಿದವು,
ಗಿಡಮರದ ರೆಂಬೆ ಕೊಂಬೆಕೊಂಬೆಯೂ
ಗಾಳಿಗೆ ತನ್ನನ್ನು ತೀಡಿಕೊಂಡಿತು,
ಮಳೆಹನಿ ಎಮ್ಮೆಯನ್ನೂ
ಕಾಗೆಯನ್ನೂ ಒದ್ದೆಯಾಗಿಸಿತು,

ಸಿಳ್ಳೆಹಾಕುತ್ತ ಗುನುಗುನಿಸಿತು ಬಯಲು
ಅದೋ ಲೋಕದ ಅಳಲು,

ADVERTISEMENT

ಬರೆಯುತ್ತಿದ್ದಾನೆ ಕಲಾವಿದ ತಾಳ್ಮೆಯ ಬೆರಳುಗಳಲ್ಲಿ
ಹುಲ್ಲಿನೆಸಳು ಮಳೆ ಗಾಳಿಸಿಳ್ಳೆಯನ್ನು
ಕಂಪಿಸುವ ಅವನ ಕೈಗಳೊಳಗಿನ ಒಂಟಿತನವನ್ನೂ,

ದೃಷ್ಟಿಯನ್ನು ಒಂದು ಕಡೆ ನಿಲ್ಲಿಸಿದರೆ ಮಾತ್ರ
ಕಾಣಬಹುದು ಕಾಗೆ ಚಾಚಿದ ಕೊಕ್ಕು,
ಕೊಕ್ಕಿನ ಚೂಪಲ್ಲಿ ಹದಕಳಿತ ಹಣ್ಣು
ಮತ್ತು
ಅದರ ತಿರುಳಿನಲ್ಲಿ ಈಗಷ್ಟೆ
ಜೀವಪಡೆಯುತ್ತಿರುವ ಹುಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.