ADVERTISEMENT

ಸೂರ್ಯಕುಂಚ ವಿಲಾಸ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 19:30 IST
Last Updated 8 ಮಾರ್ಚ್ 2014, 19:30 IST

ಸೂರ್ಯನ ಕೊನೆಯ ಪಾದ ಹಾಗೂ ಚಂದ್ರಮನ ಮೊದಲ ಪಾದ ಸಂಧಿಸುವ ಅಮೃತ ಕ್ಷಣ. ಕಾಣದ ಲೋಕದ ಕಲಾವಿದನೊಬ್ಬ ಮುಗಿಲು ಬಯಲುಗಳನ್ನೇ ಕ್ಯಾನ್ವಾಸ್ ಆಗಿಸಿಕೊಂಡು ತನ್ನ ಕಬಂಧ ಬಾಹುಗಳಿಂದ ಎರಚಿದ ಬಣ್ಣಗಳು ಚೆಲ್ಲಾಪಿಲ್ಲಿ. ಕಿತ್ತಳೆ, ಬೆಳ್ಳಿ, ಹಸಿರು, ಕಂದು– ಬಣ್ಣಗಳು ಒಂದರೊಳಗೊಂದು ಕಲಸಿಹೋಗಿವೆ.
ಈ ಎಲ್ಲ ಬಣ್ಣಗಳನ್ನು ತಬ್ಬಿಕೊಳ್ಳುವಂತೆ ಕತ್ತಲೆಯ ಕಪ್ಪು ನಿಧಾನಕ್ಕೆ ಗಾಢವಾಗುತ್ತಿದೆ. ಆದರೆ, ಇದು ಭಯ ಹುಟ್ಟಿಸುವ ಕತ್ತಲೆಯಲ್ಲ. ಅಮ್ಮನ ಆಲಿಂಗನದಂಥ ವಾತ್ಸಲ್ಯರೂಪಿ ಸೆರಗಕಪ್ಪದು. ಮನಸ್ಸನ್ನು ಆಹ್ಲಾದಗೊಳಿಸುವ, ಪುಳಕಿತಗೊಳಿಸುವ ಸಮ್ಮೋಹನ ವರ್ಣವಿಲಾಸವಿದು. ಈ ದಿವ್ಯ ರಮ್ಯ ಸೆಳೆತವೇ ಇಲ್ಲಿನ ಸೂರ್ಯಾಸ್ತದ ಎಲ್ಲ ಚಿತ್ರಗಳ ಕೇಂದ್ರ.

ಹಂಪಿಯ ಬೆಟ್ಟಬಯಲು ಹಾಗೂ ಹುಬ್ಬಳ್ಳಿಯ ಬಟಾಬಯಲುಗಳಲ್ಲಿ ಸೂರ್ಯಕುಂಚ ಅರಳಿಸಿದ ಚಿತ್ತಾರದ ಚಿತ್ರಗಳಿವು. ನವನವೀನ ಸೂರ್ಯ ಗಡಿಯಾರ ಮರೆತು ಆಟದಲ್ಲಿ ತಲ್ಲೀನವಾದ ಅಮಾಯಕ ಕೂಸಿನಂತೆ, ದೇವರ ದಯೆಯಂತೆ ಕಾಣಿಸುತ್ತಾನೆ.

ಬಯಲಿನೊಳಗೆ ಏಕಾಂಗಿಯಾಗಿ ನಿಂತ ಮಂಟಪ, ಗುಟ್ಟುಗಳನ್ನು ಅಡಗಿಸಿಟ್ಟುಕೊಂಡಂತೆ ಕಾಣಿಸುವ ಕೆರೆ, ಮೌನವನ್ನು ಆವಾಹಿಸಿಕೊಂಡು ಸುಳಿದಾಡುವಂತೆ ಕಾಣಿಸುವ ಅಮೂರ್ತ ಗಾಳಿ, ಎಲ್ಲಿಂದಲೋ ಬಂದ ಒಂಟೆಗಳ ಪಿಸುಮಾತು, ಚಿನ್ನದೋಕುಳಿಯಲ್ಲಿ ಮಿಂದ ಕಲ್ಪವೃಕ್ಷ– ಎಲ್ಲವೂ ಚಿತ್ರಗಳ ಚೌಕಟ್ಟಿನೊಳಗೆ ಹಾಸುಹೊಕ್ಕು. ಒಂದು ಚಿತ್ರದಿಂದ ಇನ್ನೊಂದು ಚಿತ್ರಕ್ಕೆ ಜಿಗಿಯುವ ಸಹೃದಯರ ಎದೆಯೊಳಗೂ ಸೂರ್ಯ ಸಂಚಾರ. ಬಣ್ಣಗಳ ಹಬ್ಬ ‘ಹೋಳಿ’ಗೆ ಇನ್ನೂ ಒಂದು ವಾರವಿದೆ (ಮಾ. 16). ಆದರೆ, ಪರಿಸರದಲ್ಲೋ ನಿತ್ಯವೂ ಓಕುಳಿ – ಹೋಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.