ADVERTISEMENT

ಸ್ಕೂಟರಿಗೆ ಗುದ್ದಿದ ವ್ಯಕ್ತಿಗೊಂದು ಪತ್ರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2017, 19:30 IST
Last Updated 3 ಜೂನ್ 2017, 19:30 IST
ಸ್ಕೂಟರಿಗೆ ಗುದ್ದಿದ ವ್ಯಕ್ತಿಗೊಂದು ಪತ್ರ
ಸ್ಕೂಟರಿಗೆ ಗುದ್ದಿದ ವ್ಯಕ್ತಿಗೊಂದು ಪತ್ರ   

ಬಹುಶಃ ನಿನಗೆ ತಿಳಿದಿರಲಾರದು. ಅದು ಕಳೆದ ಮಾರ್ಚ್‌ 24ರ ಶುಕ್ರವಾರ. ಮಧ್ಯಾಹ್ಮ 3.30ರ ಸಮಯ. ಬೆಂಗಳೂರು ಮಹಾನಗರದ ‘ಎಚ್.ಬಿ.ಆರ್. ಲೇಔಟ್‌’ನ ಮುಖ್ಯರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದೆ. ಹಿಂದಿನ ಸೀಟ್‌ನಲ್ಲಿ ನನ್ನ 25 ವರ್ಷದ ಮಗ ಕುಳಿತಿದ್ದ. ಅವನಿಗೆ ಕಣ್ಣುಕಾಣಿಸುವುದಿಲ್ಲ.

ಇನ್ನು 8–10 ನಿಮಿಷಗಳಲ್ಲಿ ನಾವು ಮನೆ ತಲುಪಿಬಿಡುತ್ತಿದ್ದೆವು. ಅಷ್ಟರಲ್ಲಿ ನೀನು (ಯಾರು ಎಂಬುದು  ಗೊತ್ತಿಲ್ಲ) ಕಾರಿನಲ್ಲಿ ರಭಸವಾಗಿ ಬಂದು ನನ್ನ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದೆ. ನಿಯಂತ್ರಣ ತಪ್ಪಿದ ನಾನು ಹಾಗೂ ನನ್ನ ಮಗ ಮತ್ತು ಸ್ಕೂಟರ್‌ನೊಂದಿಗೆ ಬೀದಿಯಲ್ಲಿ ದಿಕ್ಕಾಪಾಲಾಗಿ ಬಿದ್ದೆವು. ನೀನು ನಿನ್ನ ಕಾರನ್ನು ನಿಲ್ಲಿಸಲಿಲ್ಲ.

ಬಂದ ರಭಸದಲ್ಲೇ ಹೊರಟುಹೋದೆ. ನಿನ್ನ ಕಾರು ಯಾವುದು, ಕಾರಿನ ಸಂಖ್ಯೆ ಏನು ಎಂಬುದು ನನ್ನ ಅರಿವಿಗೆ ಬಾರದೇಹೋಯಿತು. ಏಕೆಂದರೆ ನಾನು ಪ್ರಜ್ಞೆ ತಪ್ಪಿದ್ದೆ. ನನ್ನ ಕಣ್ಣು ಕಾಣಿಸದ ಮಗ ಏನನ್ನೂ ತಿಳಿಯಲಾಗದೆ, ಮೈಕೈಗಳಿಗಾದ ತೀವ್ರ ಗಾಯಗಳಿಂದ ನೊಂದು ಎದೆ ಬಿರಿಯುವಂತೆ ಅಳುತ್ತಿದ್ದನಂತೆ.

ADVERTISEMENT

ನಡು ಬೀದಿಯಲ್ಲಿ ನರಳುತ್ತ ಬಿದ್ದಿದ್ದ ನಮ್ಮ ಕಡೆಗೆ ಗಮನಹರಿಸುವ ವ್ಯವಧಾನ, ನಿಧಾನ ಯಾರಿಗೂ ಇರಲಿಲ್ಲ. ಬಿಡುವು–ಮಾನವೀಯತೆ ಎರಡು ಇದ್ದ ಆಟೋ ಚಾಲಕರೊಬ್ಬರು ನನ್ನ ಮಗನನ್ನು ಸಮಾಧಾನಿಸುತ್ತಾ, ಧೈರ್ಯ ಹೇಳುತ್ತ, ನಮ್ಮಿಬ್ಬರನ್ನೂ ಹತ್ತಿರದ ‘ನರ್ಸಿಂಗ್ ಹೋಂ’ಗೆ ದಾಖಲಿಸಿದರು.

ನಾಲ್ಕು ದಿನ ನರ್ಸಿಂಗ್ ಹೋಂನಲ್ಲಿದ್ದು ನಂತರ ಡಿಸ್ಚಾರ್ಜ್ ಆಗಿ ಬಂದೆ. ನನ್ನ ಬಲಗಣ್ಣು ದೃಷ್ಟಿ ಕಳೆದುಕೊಂಡಿತ್ತು. ಒಂದು ಕಣ್ಣಾದರೂ ಉಳಿಯಿತಲ್ಲ ಎಂದು ಸಮಾಧಾನ ತಂದುಕೊಂಡೆ. ಕ್ರಮೇಣ ಎಲ್ಲಾ ಸರಿಹೋಗುತ್ತದೆ ಎಂದುಕೊಂಡಿದ್ದೆ.

ನಂತರದ ದಿನಗಳಲ್ಲಿ ನನಗೆ ಚಳಿ–ಜ್ವರ ಶುರುವಾಯಿತು. ಕೂಡಲೇ ವೈದ್ಯರನ್ನು ಕಂಡು ಔಷಧೋಪಚಾರ ಪಡೆದು ಹಿಂದಿರುಗಿದೆ. ಉಪಯೋಗವಾಗಲಿಲ್ಲ. ವಾಂತಿ ಆರಂಭವಾಯಿತು. ತಲೆನೋವು ತೀವ್ರವಾಯಿತು. ನನಗೆ ವಿವರಿಸಲಾಗದ ಆತಂಕ, ಭಯ. ಮೆದುಳಿನ ರಕ್ತನಾಳಗಳಲ್ಲಿ ಏನೋ ವ್ಯತ್ಯಾಸವಾಗಿದೆ, ರಕ್ತ ಪರಿಚಲನೆಗೆ ತೊಡಕಾಗಿ ತಲೆನೋವು ಹೀಗೆ ನನ್ನನ್ನು ಕೊಲ್ಲುತ್ತಿದೆ ಎಂಬ ಶಂಕೆ ನನಗಾಯಿತು.

ಹೆಂಡತಿ, ಮಕ್ಕಳು, ಕುಟುಂಬದವರ ನೆನಪಾಗಿ ಅಧೀರನಾಗಿಬಿಟ್ಟೆ. ಸ್ಕೂಟರಿಗೆ ಡಿಕ್ಕಿ ಹೊಡೆದು ನಡುಬೀದಿಯಲ್ಲಿ ಬೀಳಿಸಿ ಹೋದ ನೀನೂ ಕೂಡ ನೆನಪಾದೆ. ನೀನು ಒಂದು ಕ್ಷಣ ಎಚ್ಚರ ವಹಿಸಿದ್ದರೂ ನನಗೀಗ ಹೆಂಡತಿ, ಮಕ್ಕಳನ್ನು ತೊರೆದುಹೋಗುವ ಸ್ಥಿತಿ ಬರುತ್ತಿರಲಿಲ್ಲ ಅಲ್ಲವೇ ಎಂದು ನಿನ್ನನ್ನು ಪ್ರಶ್ನಿಸಬೇಕೆಂದುಕೊಂಡೆ. ಅಂದುಕೊಂಡದ್ದು ಧ್ವನಿಯಾಗದೆ ಹೋಯಿತು. ನೋವು ಕೂಡ ಮಾಯವಾಗಿಹೋಯಿತು. ನಾನು ಸತ್ತುಹೋಗಿದ್ದೆ. ಇದಿಷ್ಟು ನನ್ನ ಕತೆ. ಇದನ್ನು ನಿನಗೆ ತಿಳಿಸಲೆಂದೇ ಈ ಪತ್ರ. ನಿನಗೆ ಹಾಗೂ ಎಲ್ಲರಿಗೂ ನನ್ನ ಪ್ರೀತಿಯ ವಿದಾಯ.

ಜಿ. ಜಯರಾಮ್, ಬೆಂಗಳೂರು
(ಅಪಘಾತದಲ್ಲಿ ತಮ್ಮ ಗೆಳೆಯನನ್ನು ಕಳೆದುಕೊಂಡ ಮೈಸೂರಿನ ಎಂ.ಕೆ. ವಾಸುದೇವರಾಜು ಅವರು, ತಮ್ಮ ಗೆಳೆಯನ ಅಳಲನ್ನು ಕಲ್ಪಿಸಿಕೊಂಡು ಬರೆದ ಪತ್ರ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.