ADVERTISEMENT

ಸ್ಕೂಬಾ ಸ್ವರ್ಗ ಹ್ಯಾವಲಾಕ್!

ಸಚ್ಚಿದಾನಂದ ಕುರಗುಂದ
Published 9 ಜೂನ್ 2012, 19:30 IST
Last Updated 9 ಜೂನ್ 2012, 19:30 IST
ಸ್ಕೂಬಾ ಸ್ವರ್ಗ ಹ್ಯಾವಲಾಕ್!
ಸ್ಕೂಬಾ ಸ್ವರ್ಗ ಹ್ಯಾವಲಾಕ್!   

ಸ್ಪಟಿಕದಷ್ಟು ಶುಭ್ರ ನೀರು. ನೀರಿನ ಆಳಕ್ಕೆ ಇಳಿದಂತೆ ರೋಮಾಂಚನ, ಕುತೂಹಲಗಳ ಸಂಗಮ. ಬಣ್ಣ ಬಣ್ಣದ ಮೀನುಗಳು ಸುತ್ತೆಲ್ಲ ಹರಿದಾಡುತ್ತಿದ್ದರೆ ನೀರಿನಲ್ಲೂ ಸಣ್ಣಗೆ ಬೆವರು ಹರಿದ ಭಾವ!

ಹೊರ ಜಗತ್ತಿನ ಪರಿವೆಯಿಲ್ಲದೆ ಗೆಳೆಯನ ಕೈ ಹಿಡಿದು ನಿಧಾನವಾಗಿ ನೀರಿನಾಳಕ್ಕೆ ಸಾಗಿದಂತೆ ಸಮುದ್ರದ ತಳ ಬೆಳ್ಳಗೆ ಫಳಫಳನೆ ಹೊಳೆಯುತ್ತಿತ್ತು. ಅಂಡಮಾನ್ ದ್ವೀಪದ ಸಮುದ್ರಗಳಲ್ಲಿ ಈಜಾಡುವುದೇ ಒಂದು ರೋಚಕ ಅನುಭವ.

ಅದರಲ್ಲೂ ಹ್ಯಾವಲಾಕ್ ದ್ವೀಪ ಕ್ರೀಡಾ ಸಾಹಸಿಗಳಿಗೆ ಮತ್ತು ಪ್ರವಾಸಿಗರ ಪಾಲಿಗೆ ಸ್ವರ್ಗಸದೃಶ. ಇಲ್ಲಿಗೆ ಬಂದವರು `ಸ್ಕೂಬಾ ಡೈವಿಂಗ್~ ಮಾಡದಿದ್ದರೆ ಅಂಡಮಾನ್ ಪ್ರವಾಸವೇ ಅಪೂರ್ಣ.
 
ಹಾಗಾಗಿ ನಾವು `ಸ್ಕೂಬಾ ಸುಖ~ ಸೂರೆಗೊಳ್ಳಬೇಕೆಂದು ನೀರಿಗಿಳಿದೇ ಬಿಟ್ಟೆವು. ರಬ್ಬರ್‌ಸೂಟ್ ಹಾಗೂ ಬೂಟುಗಳನ್ನು ಧರಿಸಿ ಬೆನ್ನಿಗೆ ಆಮ್ಲಜನಕದ ಸಿಲಿಂಡರ್ ಏರಿಸಿಕೊಂಡು ಕಣ್ಣುಗಳಿಗೆ ವಿಶೇಷವಾದ ಕನ್ನಡಕಗಳನ್ನು ಧರಿಸಿ ಸಮುದ್ರಕ್ಕೆ ಜಿಗಿದೊಡನೆ ಇಡೀ ದೇಹದಲ್ಲಿ ಜಲೋನ್ಮಾದ!

ಪೋರ್ಟ್‌ಬ್ಲೈರ್‌ನಿಂದ ಹಡಗಿನಲ್ಲಿ ಸುಮಾರು ಎರಡೂವರೆ ಗಂಟೆ ಪ್ರಯಾಣಿಸಿದರೆ ಹ್ಯಾವಲಾಕ್ ದ್ವೀಪ ಸಿಗುತ್ತದೆ. ಬ್ರಿಟಿಷ್ ಜನರಲ್ ಹೆನ್ರಿ ಹ್ಯಾವಲಾಕ್‌ನ ಹೆಸರನ್ನು ಈ ದ್ವೀಪಕ್ಕೆ ಇಡಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಇಂತಹ 572 ದ್ವೀಪಗಳಿವೆ. ಇವುಗಳಲ್ಲಿ ಕೇವಲ 36 ದ್ವೀಪಗಳಲ್ಲಿ ಮಾತ್ರ ಜನವಸತಿ ಪ್ರದೇಶವಿದೆ.

ಹ್ಯಾವಲಾಕ್ ಒಂದು ಪುಟ್ಟ ಗ್ರಾಮ. ಸುಮಾರು 8 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಪ್ರವಾಸೋದ್ಯಮವೇ ಜೀವಾಳ. ಇಲ್ಲಿ ಬಂಗಾಳಿ ಮತ್ತು ಹಿಂದಿ ಭಾಷಿಕರ ಸಂಖ್ಯೆಯೇ ಹೆಚ್ಚು. ಡೀಸೆಲ್ ಜನರೇಟರ್ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
 
ಸುತ್ತ ಕಣ್ಣು ಹಾಯಿಸಿದರೆ ಭತ್ತದ ಗದ್ದೆಗಳು ಅಲ್ಲಲ್ಲಿ ಕಾಣಿಸುತ್ತವೆ. ಎಲ್ಲೋ ಅಪರೂಪಕ್ಕೆ ಕೆಲವೆಡೆ ತರಕಾರಿ ಬೆಳೆಯುವುದೂ ಕಂಡು ಬರುತ್ತದೆ. ಒಂದು ಸಣ್ಣ ಸೈಕಲ್ ಟ್ಯೂಬ್‌ನಿಂದ ಹಿಡಿದು ಊಟದ ಸ್ಟೀಲ್‌ತಟ್ಟೆಯವರೆಗೂ ಎಲ್ಲಾ ಸಾಮಾನುಗಳು ಹೊರಜಗತ್ತಿನಿಂದಲೇ ಇಲ್ಲಿಗೆ ಆಮದಾಗಬೇಕು.

ದ್ವೀಪದಲ್ಲಿ ಹಾಯಾಗಿ ಸುತ್ತಾಡಲು ಬೈಕ್, ಸೈಕಲ್‌ಗಳು ಬಾಡಿಗೆ ಸಿಗುತ್ತವೆ. ನೀವು ಈ ದ್ವೀಪಕ್ಕೆ ಹೆಜ್ಜೆ ಇಡುತ್ತಿದ್ದಂತೆಯೇ ನಿಮ್ಮನ್ನು ಸಮುದ್ರದ ಆಳಕ್ಕೆ (ಸ್ಕೂಬಾ ಡೈವಿಂಗ್) ಕರೆದೊಯ್ಯಲು ಏಜೆಂಟರು ಕಾಯುತ್ತಿರುತ್ತಾರೆ.

ಪ್ರವಾಸಿಗರು ಸ್ಕೂಬಾ ಡೈವಿಂಗ್ ಹೋಗಬೇಕೆಂದರೆ ಮೊದಲಿಗೆ ಅವರನ್ನು ದೋಣಿಯಲ್ಲಿ ಸ್ವಲ್ಪ ದೂರ ಕರೆಯ್ದ್‌ಯ್ಯಲಾಗುತ್ತದೆ. ಸಮುದ್ರದ ದಡದಿಂದ ಅನತಿ ದೂರಕ್ಕೆ ಬಂದಮೇಲೆ ಆಮ್ಲಜನಕದ ಸಿಲಿಂಡರ್‌ಗಳನ್ನು ಬೆನ್ನಿಗೇರಿಸಿ ಸಮುದ್ರದ ಆಳಕ್ಕೆ ಕರೆದೊಯ್ಯುತ್ತಾರೆ.

ನೀರಿಗಿಳಿದಾಗ ನಮ್ಮ ಬೆನ್ನ ಹಿಂದೆಯೇ ಪರಿಣತಿ ಪಡೆದ ಕೋಚ್‌ಗಳೂ ಇರುತ್ತಾರೆ. ಹೀಗಾಗಿ ಭಯ ಕಡಿಮೆ. ಮೀನ ಮರಿಗಳಂತೆ ಸರಾಗವಾಗಿ ಈಜಬಲ್ಲ ಈ ಕೋಚ್‌ಗಳು ಸಮುದ್ರದ ಆಳ ಅಗಲ ಅಳೆಯುವಲ್ಲಿ ಪರಿಣತರು. ಆಳಕ್ಕೆ ಇಳಿಯುವ ಮುನ್ನವೇ ಹಲವು ರೀತಿಯ ಸಂಕೇತಗಳನ್ನು ಪ್ರದರ್ಶಿಸುವ ಬಗ್ಗೆ ತರಬೇತಿ ನೀಡಿರುತ್ತಾರೆ.

ಪ್ರಾಥಮಿಕ ತರಬೇತಿ ನಂತರ ಸಮುದ್ರದ ಆಳಕ್ಕೆ ಇಳಿದಂತೆ ಬಣ್ಣಬಣ್ಣದ ಮೀನುಗಳು, `ಕೋರಲ್ಸ್~ ಕಾಣಸಿಗುತ್ತವೆ. ಸುಮಾರು 10 ಮೀಟರ್ ಸಾಗಿದಂತೆ ಅಲ್ಲೊಂದು ಅಕ್ವೇರಿಯಂ ಮಾದರಿಯ ದೃಶ್ಯ ಅನಾವರಣಗೊಳ್ಳುತ್ತದೆ.
 
ಸಮುದ್ರದ ವಿವಿಧ ಜಲಚರಗಳು ಅಲ್ಲಲ್ಲಿ ವಿಹರಿಸುತ್ತಿರುತ್ತವೆ. ಎಷ್ಟೇ ಆಗಲಿ ಸಾಗರವನ್ನು ಬೊಗಸೆಯಲ್ಲಿ ಅಳೆಯಲಾದೀತೇ? ಎದೆಯ ಆಳಕ್ಕೆ ತಟ್ಟುವ ಆನಂದವನ್ನು ಅವುಚಿಕೊಂಡು ಆಳದಲ್ಲೊಂದು ಸುತ್ತು ಹಾಕಿ ದಂಡೆಗೆ ಬರುವ ಹೊತ್ತಿಗೆ ಎಂಥವರೇ ಆದರೂ ಧನ್ಯೋಸ್ಮಿ ಎಂಬ ಭಾವದಿಂದ ಪುಳಕಿತರಾಗಿರುತ್ತಾರೆ.

ಇದೇ ದ್ವೀಪದಲ್ಲಿರುವ `ರಾಧಾನಗರ ಬೀಚ್~ ಶುಭ್ರತೆಗೆ ಎಷ್ಟು ಹೆಸರಾಗಿದೆಯೋ ಅಷ್ಟೇ ಸ್ವಚ್ಛಂದಕ್ಕೂ ಹೆಸರುವಾಸಿ. ಏಷ್ಯಾದಲ್ಲೇ ಪ್ರಸಿದ್ಧಿ ಪಡೆದಿರುವ ಬೀಚ್‌ಗಳಲ್ಲಿ ಇದೂ ಒಂದು. ಸುತ್ತಲೂ ಅರಣ್ಯ ಪ್ರದೇಶದಿಂದ ಆವೃತವಾಗಿರುವ ಈ ಬೀಚ್‌ನ ನುಣುಪಾದ ಬೆಳ್ಳನೆಯ ಮರಳಿನಲ್ಲಿ ಮೈಚೆಲ್ಲುವುದು ಹಾಗೂ ಈಜಾಡುವುದು ಎಂದರೆ ಅದು ಉಲ್ಲಾಸದ ಉತ್ತುಂಗ ಸ್ಥಿತಿಯೇ ಸರಿ.

ಇದೇ ದ್ವೀಪದ ಇನ್ನೊಂದು ಮೂಲೆಯಲ್ಲಿರುವ `ಕಾಲಾಪತ್ತರ್~ ಬೀಚ್ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿರುವ ಕಪ್ಪು ಶಿಲೆಗಳಿಂದಾಗಿ ಈ ಬೀಚ್‌ಗೆ `ಕಾಲಾಪತ್ತರ್~ ಎನ್ನುವ ಹೆಸರು.
 
ದಂಡೆಯಲ್ಲಿರುವ ಕಪ್ಪು ಶಿಲೆಗಳನ್ನು ನೋಡುಗರ ಮನಸೂರೆಗೊಳ್ಳುತ್ತವೆ. ಆದರೆ, ಪ್ರಕೃತಿಯ ಮೌನ ಧ್ಯಾನದ ಈ ಪ್ರದೇಶಕ್ಕೆ ಪ್ರವಾಸಿಗರು ಭೇಟಿ ಕೊಡುವುದು ಕಡಿಮೆ.      
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.