ADVERTISEMENT

ಹಪ್ಪಳ ಮಾಡಿದ ಕಾಗಕ್ಕ

ಕೃಷ್ಣವೇಣಿ ಕಿದೂರು
Published 16 ಜೂನ್ 2018, 11:19 IST
Last Updated 16 ಜೂನ್ 2018, 11:19 IST
ಹಪ್ಪಳ ಮಾಡಿದ ಕಾಗಕ್ಕ
ಹಪ್ಪಳ ಮಾಡಿದ ಕಾಗಕ್ಕ   

ಕಾಗಕ್ಕನಿಗೆ ಹಲಸಿನ ಕಾಯಿಯ ಹಪ್ಪಳ ಮಾಡಬೇಕು ಎಂದು ಆಸೆಯಾಗುತ್ತಿತ್ತು. ಎಲ್ಲ ಸ್ವಜಾತಿ ಬಾಂಧವರಂತೆ ಆಕೆಗೂ ಹಪ್ಪಳ ತಿನ್ನುವ ಆಸೆ ಬಹಳವೇ ಇತ್ತು. ತಾನು ಎಳೆಯವಳಿದ್ದಾಗ ಗೌಡರ ಮನೆ ಅಂಗಳದಲ್ಲಿ ಒಣಗಲು ಹಾಕಿದ ಹಪ್ಪಳವನ್ನು ತನ್ನಮ್ಮ ಕದ್ದು ತಂದು ಬಾಯಿಗಿಡುತ್ತಿದ್ದ ನೆನಪು ಹಸಿಯಾಗಿತ್ತು. ‘ಆಹಾ! ಅದೆಷ್ಟು ರುಚಿ; ತಿಂದಷ್ಟೂ ಇನ್ನೂ ಬೇಕು ಎಂಬಾಸೆ. ಅಮ್ಮನು ತೆಂಗಿನ ಮರದ ತುದಿಯಲ್ಲಿ ಕೂತು, ಹಪ್ಪಳ ಕಾಯಲು ಕೂತ ಮಕ್ಕಳು ಊಟಕ್ಕೆ, ತಿಂಡಿಗೆ ಒಳಗೆ ಹೋದ ಹೊತ್ತಿನಲ್ಲಿ ರಿವ್ವನೆ ಹಾರಿಹೋಗಿ ಹಪ್ಪಳ ಕಚ್ಚಿಕೊಂಡು ತರುತ್ತಿದ್ದ ಚಾಲಾಕು. ಆಹ್! ಅಮ್ಮ ಎಂದರೆ ಹಾಗಿರಬೇಕು’ ಎಂದು ತಾಯಿಯನ್ನು ನೆನಪಿಸಿಕೊಂಡ ಕಾಗಕ್ಕನ ಕಣ್ಣು ಒದ್ದೆಯಾಯಿತು.

ಹೇಗೂ ತನಗೆ ಆರು ಮಂದಿ ಮಕ್ಕಳಿದ್ದಾರೆ. ಹಲಸಿನ ಮರದ ತುಂಬಾ ಕಾಯಿಗಳು ಜೋತಾಡುತ್ತಿವೆ. ಎಲ್ಲರ ಸಹಾಯವಿದ್ದರೆ ಬೇಕಾದಷ್ಟು ಹಪ್ಪಳ ಮಾಡಿಕೊಳ್ಳಬಹುದು. ಕದಿಯುವ ಕೆಲಸವೇಕೆ. ಪ್ರಾಮಾಣಿಕವಾಗಿ ದುಡಿದು ಉಣ್ಣಬೇಕು ಎಂದು ಆಲೋಚಿಸಿದ ಕಾಗಕ್ಕ ಮಕ್ಕಳನ್ನು ಕರೆದಳು. ‘ನಾಳೆ ಬೆಳಿಗ್ಗೆ ಹಲಸಿನ ಕಾಯಿ ಹೆಚ್ಚಿ ತೊಳೆ ಬಿಡಿಸಿ ಹಪ್ಪಳ ಮಾಡೋಣ. ಇದಕ್ಕೆ ಎಲ್ಲರ ನೆರವು ಬೇಕು. ಬೆಳಗ್ಗೆ ಬೇಗನೆ ಎದ್ದು ಅಮ್ಮನಿಗೆ ಸಹಾಯ ಮಾಡಬೇಕು ಮಕ್ಕಳೇ’ ಎಂದು ಹೇಳಿದಳು.

‘ಅಮ್ಮಾ, ಹಪ್ಪಳವಾ?! ನಾವೇ ಮಾಡ್ತೇವಾ? ನನಗೆ ತುಂಬ, ನನಗೆ ಜಾಸ್ತಿ’ ಎಂದು ಜಗಳವಾಡತೊಡಗಿದವು ಮರಿಗಳು.

ADVERTISEMENT

‘ಸಹಾಯ ಮಾಡಿದವರಿಗೆ ಹಪ್ಪಳ ಕೊಡದೆ ಇರಲಾಗುತ್ತದೆಯೇ? ಎಲ್ಲರಿಗೂ ಸಮಾನ ಪಾಲು’ ಎಂದು ಕಾಗಕ್ಕ ತನ್ನ ಮರಿಗಳನ್ನು ಸಮಾಧಾನ ಮಾಡಿದಳು.

ಮಾರನೆ ದಿನ ಕಾಗಕ್ಕ ಎದ್ದು ಹಲಸಿನ ಕಾಯಿಯನ್ನು ಕುಕ್ಕಿ ಕುಕ್ಕಿ ತೊಳೆ ಬಿಡಿಸಿ ತಂದಳು. ಮಕ್ಕಳು ಒಬ್ಬರ ಮೇಲೊಬ್ಬರು ಬಿದ್ದುಕೊಂಡು ನಿದ್ದೆ ಮಾಡುತ್ತಿದ್ದವು. ಕಾಗಕ್ಕ ಮರಿಗಳನ್ನು ಕರೆದಳು. ಊಹೂಂ, ಉತ್ತರವಿಲ್ಲ. ತಾನೇ ತೊಳೆಗಳನ್ನು ಶುಚಿಗೊಳಿಸಿದಳು. ಅವುಗಳನ್ನು ಪಾತ್ರೆಗೆ ಹಾಕಿ ಬೇಯಲಿಟ್ಟು ಮಕ್ಕಳನ್ನು ಎಬ್ಬಿಸಿದಳು. ‘ಅಮ್ಮಾ, ತುಂಬಾ ನಿದ್ದೆ ಬರುತ್ತಿದೆ. ಇನ್ನೊಂದು ಸ್ವಲ್ಪ ಹೊತ್ತು ಮಲಗ್ತೇವೆ. ಚಳಿ ಬೇರೆ ಇದೆ’ ಎಂದವು ಮರಿಗಳು. ‘ಪಾಪ, ಮಲಗಲಿ’ ಎಂದು ಕಾಗಕ್ಕ ಹಿಟ್ಟು ಮಾಡಿದಳು. ಇನ್ನು ಉಳಿದಿರುವ ಸ್ವಲ್ಪವೇ ಸ್ವಲ್ಪ ಕೆಲಸವನ್ನು ಮಕ್ಕಳು ಮಾಡಿಯಾರು ಎಂದು ಕಾಗಕ್ಕ, ಮರಿಗಳ ಮೈ ಅಲುಗಿಸಿ ಎಬ್ಬಿಸಿದಳು. ಮುಸುಕು ಹೊದ್ದು ಮಲಗಿದ್ದ ಅವು ಅಲ್ಲಿಂದಲೇ ‘ಆಯ್ತಾ ಅಮ್ಮ ಹಪ್ಪಳ? ಇಲ್ಲೇ ಎರಡೆರಡು ಹಪ್ಪಳ ಕೊಡು. ತಿಂದು ಇನ್ನೊಂದು ನಿದ್ದೆ ಮುಗಿಸ್ತೇವೆ’ ಎಂದವು.

ಸೋಮಾರಿ ಮರಿಗಳು ಹೊರಳಿ ಮಲಗಿದವು. ಅಮ್ಮ ಕಾಗೆಗೆ ಸಿಟ್ಟು ಏರಿತು. ಈ ಮಕ್ಕಳು ಅಮ್ಮನಾದ ತನಗೇ ಬುದ್ಧಿ ಕಲಿಸುತ್ತವೆ, ಸೋಮಾರಿಗಳು. ಮಲಗಿದಲ್ಲೇ ಅಪ್ಪಣೆ ಮಾಡುತ್ತವೆ. ಇವುಗಳಿಗೆ ಮುಟ್ಟಿ ನೋಡಿಕೊಳ್ಳುವಂತಹ ಪಾಠ ಕಲಿಸಬೇಕು ಎಂದು ಅಮ್ಮ ಕಾಗೆ ತೀರ್ಮಾನಿಸಿತು. ‘ಕಾಗೆಗಳು ಸೋಮಾರಿತನ ಕಲಿತರೆ ಜೀವನ ಸಾಗಿಸುವುದು ಹೇಗೆ? ಊಟ ಹುಡುಕಿಕೊಳ್ಳುವುದು ಹೇಗೆ, ಕಾವಲಿನವರ ಕಣ್ತಪ್ಪಿಸಿ ಆಹಾರ ಕದಿಯಬೇಕು. ಹಾಗೆ ಮಾಡುವುದಕ್ಕೆ ಚುರುಕುತನ ಬೇಕು’ ಎಂದು ಬಯ್ಯುತ್ತಲೇ ಅಮ್ಮ ಕಾಗೆ ಹಪ್ಪಳದ ಹಿಟ್ಟು ಉಂಡೆ ಮಾಡಿ ತೇಗದೆಲೆಗಳ ಮಧ್ಯೆ ಇರಿಸಿ ಒತ್ತಿತು. ಚಂದ್ರಮನಂತೆ ಉರುಟಾದ ಹಪ್ಪಳ ಸಿದ್ಧವಾಯಿತು. ಅಷ್ಟೂ ಹಿಟ್ಟು ಒತ್ತಿ ಹಪ್ಪಳ ಮಾಡಿ ಪಕ್ಕದ ಮೈದಾನದಲ್ಲಿ ಅವುಗಳನ್ನು ಹರಡಿ ಕಾದು ಕೂತಳು.

ಆನೆಯ ಬೆನ್ನು ಒಡೆಯುವಷ್ಟಿದ್ದ ಬಿಸಿಲಿಗೆ ಹಪ್ಪಳ ಗರಿಗರಿಯಾಗಿ ಒಣಗಿತು. ಕಾಗಮ್ಮ ಆ ಹಪ್ಪಳಗಳನ್ನು ಜೋಪಾನವಾಗಿ ಒಗ್ಗೂಡಿಸಿ ಗೂಡಿಗೆ ತಂದಳು. ಹೊಟ್ಟೆ ಹಸಿದಾಗ ಎದ್ದ ಮರಿಗಳು ಅಮ್ಮ ಮುನ್ನಾದಿನ ತಂದಿಟ್ಟಿದ್ದ ಹುಳಹುಪ್ಪಟೆಗಳನ್ನು ನುಂಗಿ ಮಗ್ಗುಲು ಹೊರಳಿ ಗಾಢ ನಿದ್ದೆಗೆ ಇಳಿದಿದ್ದವು.

ಕಾಗಮ್ಮ ಕರುಂ ಕುರುಂ ಎಂದು ಹಪ್ಪಳ ತಿನ್ನತೊಡಗಿದಳು. ಒಣಗಿದ ಹಪ್ಪಳ ಬಲು ರುಚಿಯಾಗಿತ್ತು. ಒಂದರ ಮೇಲೊಂದು ಹಪ್ಪಳವನ್ನು ಬಾಯಿಗೆ ಹಾಕಿ ಸವಿದಳು. ಕುರುಂ ಕುರುಂ ಸದ್ದು ಕೇಳಿದ ಮರಿಗಳು ಕಣ್ಮುಚ್ಚಿ ಕೈ ಚಾಚಿದವು. ಊಹೂಂ, ಅಮ್ಮ ಹಪ್ಪಳ ಕೊಡಲಿಲ್ಲ. ತುಸು ಹೊತ್ತಿನಲ್ಲಿ ಅಮ್ಮ ಹಪ್ಪಳ ಅಗಿಯುವ ಸದ್ದು ನಿಂತಿತು. ಈಗ ತಮಗೆ ಕೊಡಬಹುದು ಎನ್ನುತ್ತ ಮತ್ತೆ ಕೈ ಉದ್ದ ಮಾಡಿದವು ಪಿಳ್ಳೆಗಳು. ಆಗಲೂ ಹಪ್ಪಳ ಸಿಗಲಿಲ್ಲ. ಆಸೆ ತಡೆಯಲು ಆಗದೆ ಮರಿಗಳು ಕಣ್ಣು ಬಿಟ್ಟವು. ಅಲ್ಲಿ ಏನಿತ್ತು? ಖಾಲಿ ಖಾಲಿ. ಅಮ್ಮ ಕಾಗೆ ಕಾಲು ಚಾಚಿ ಮಲಗಿದ್ದಳು. ‘ಆಂ! ನಮಗೆ ಕೊಡದೆ ಎಲ್ಲ ತಿಂದುಬಿಟ್ಲಾ ಅಮ್ಮ’ ಎಂದು ಮರಿಗಳು ಮೂತಿ ಚಾಚಿ ವಾಸನೆ ಆಘ್ರಾಣಿಸಿದವು. ಆಸೆ ತಡೆಯಲಾಗದೆ ಕೈಕಾಲು ಬಡಿದು ಗೋಳೋ ಎಂದು ಅತ್ತವು. ಹೊರಳಿ ಹೊರಳಿ ಅತ್ತವು. ‘ಅಮ್ಮಾ, ನಂಗೆ ಹಪ್ಪಳಾ... ಕೊಡೂ... ನೀನೊಬ್ಳೇ ನುಂಗಿದ್ಯಾಕೆ? ಅಮ್ಮಾ..ಆಅ...’ ಎಂದು ಅತ್ತವು.

ಮರಿಗಳ ರಾಗಾಲಾಪ ನಿಲ್ಲದಾದಾಗ ಕಾಗಮ್ಮ, ‘ಹಪ್ಪಳ ಮಾಡಲು ಸಹಾಯ ಕೇಳಿದಾಗ ನೀವು ಬರಲಿಲ್ಲ’ ಎಂದು ಅವುಗಳಿಗೆ ಬಯ್ದಳು. ಸೋಮಾರಿತನದಿಂದ ಜೀವನದಲ್ಲಿ ಮುಂದೆ ಆಗಬಹುದಾದ ಅನಾಹುತಗಳನ್ನು ವಿವರಿಸಿದಳು. ಚುರುಕುತನ, ಚಾಲಾಕಿತನ ಇವೆರಡೂ ಕಾಗೆಗಳಿಗೆ ಅದೆಷ್ಟು ಅಗತ್ಯ ಎನ್ನುವುದು ಮರಿಗಳಿಗೆ ಅರ್ಥವಾಯಿತು. ಹಾಗಿದ್ದರೂ ಅವುಗಳ ಕುಸುಕುಸು ಅಳು ನಿಲ್ಲಲಿಲ್ಲ. ಹಪ್ಪಳದ ರುಚಿ ನೆನೆಸಿಕೊಂಡು ಆಗಾಗ ಜೊಲ್ಲು ಸುರಿಸುತ್ತಿದ್ದವು.

‘ಮರಿಗಳನ್ನು ಬಿಟ್ಟು ಅಮ್ಮ ಎಲ್ಲಾದರೂ ಖಾಲಿ ಮಾಡುವುದುಂಟೆ ನಮ್ಮ ವಂಶದಲ್ಲಿ?! ಎದ್ದೇಳಿ. ನಾಲ್ಕು ನಾಲ್ಕು ಹಪ್ಪಳ ತಿನ್ನಿ. ನಾಳೆ ಮತ್ತೆ ಹಪ್ಪಳ ಮಾಡೋಣ. ಹಲಸಿನ ಕಾಯಿ ಬೇಕಾದಷ್ಟು ಇದೆ. ಎಲ್ಲರೂ ಬೇಗ ಎದ್ದು ಸಹಾಯ ಮಾಡಬೇಕು’ ಎಂದಳು ಅಮ್ಮ. ಮರಿಗಳು ಸಂಭ್ರಮದಿಂದ ಹಪ್ಪಳ ಕುಕ್ಕುತ್ತ ಒಪ್ಪಿ ತಲೆಯಾಡಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.