ADVERTISEMENT

ಹೊಸ ಅಲೆ ಹುಡುಗ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

`ಪ್ರಕೃತಿಯ ಛಾಯಾಚಿತ್ರದಂತಹ ರಚನೆಗಿಂತಲೂ ಬೇರೇನಾದರೂ ಬೇಕು. ಕೇವಲ ಕೊಠಡಿಗಳಲ್ಲಿ ತೂಗುಹಾಕಿಕೊಳ್ಳಬಹುದಾದ ಚಿತ್ರಗಳು ಅಗತ್ಯವಿಲ್ಲ. ಮಾನವತೆಯನ್ನು ಸಾರುವ ಇಲ್ಲವೇ ಕನಿಷ್ಠ ಪಕ್ಷ ಅದಕ್ಕೆ ನಾಂದಿ ಹಾಡುವಂತಹುದನ್ನೇನಾದರೂ ನಾವು ಸೃಷ್ಟಿಸಬೇಕು. ನಮ್ಮನ್ನು ಹಿಡಿದಿಡುವಂತಹ, ತನ್ಮಯರನ್ನಾಗಿಸುವಂತಹ ಕಲೆ ಬೇಕು. ಒಬ್ಬರ ಎದೆಯಾಳದಿಂದ ಹುಟ್ಟಿದ ಕಲೆ ಅದಾಗಿರಬೇಕು~

ಇಂಥ ಹಪಹಪಿಯೊಂದಿಗೆ ಕ್ಯಾನ್‌ವಾಸ್ ಹಿಡಿದವನು ನಾರ್ವೆಯ ಎಡ್ವರ್ಡ್ ಮುಂಕ್. 1863ರಲ್ಲಿ, ಆಗ ಕ್ರಿಸ್ಟಿಯಾನಾ ಎಂದು ಕರೆಯಲಾಗುತ್ತಿದ್ದ ನಾರ್ವೆಯ ರಾಜಧಾನಿ ಒಸ್ಲೊದಲ್ಲಿ ಜನನ. ತಂದೆ ಪಕ್ಕಾ ಧಾರ್ಮಿಕ ಮನೋಭಾವದ ಸೇನಾ ವೈದ್ಯ. ಮುಂಕ್ ಐದು ವರ್ಷದವನಿದ್ದಾಗ ಕ್ಷಯಕ್ಕೆ ತುತ್ತಾಗಿ ತಾಯಿ ತೀರಿಹೋದಳು.
 
ಹಿರಿಯ ಸಹೋದರಿಯೂ ಬಹುಕಾಲ ಉಳಿಯಲಿಲ್ಲ. ತಂಗಿ ಕೂಡ ಮಾನಸಿಕ ಅಸ್ವಸ್ಥೆ. ಇಂತಹ ಸಂದಿಗ್ಧ ಪರಿಸರ ಅವನದಾಗಿತ್ತು. ಸದಾ ಕಾಯಿಲೆಯಿಂದ ಬಳಲುತ್ತಿದ್ದ ಮುಂಕ್‌ಗೆ ಎಂಜಿನಿಯರ್ ಆಗಬೇಕೆಂಬ ಹಂಬಲ ಈಡೇರಲಿಲ್ಲ. ನಂತರ ರಾಯಲ್ ಕಲಾ ಮತ್ತು ವಿನ್ಯಾಸ ಶಾಲೆಗೆ ಸೇರ್ಪಡೆ. 1886ರಲ್ಲಿ `ಕ್ರಿಸ್ಟಿಯಾನಾದ ಬೊಹೆಮಿಯಾ~ ಎಂಬ ಪ್ರಗತಿಪರ ಲೇಖಕರ ಕಲಾವಿದರ ಸಂಘಟನೆಯೊಂದಿಗೆ ಗುರುತಿಸಿಕೊಂಡ.

ಬರ್ಲಿನ್ ಕಲಾವಿದರ ಸಂಘ ಈತನ ಕಲಾಕೃತಿಗಳನ್ನು ಪ್ರದರ್ಶನಕ್ಕಾಗಿ ಆಹ್ವಾನಿಸಿತ್ತು. ಆದರೆ ಆತನ ಕಲಾಕೃತಿಗಳಿಗೆ ಭಾರಿ ಪ್ರತಿರೋಧ ಉಂಟಾಗಿ ಒಂದೇ ವಾರದಲ್ಲಿ ಪ್ರದರ್ಶನ ಸ್ಥಗಿತಗೊಂಡಿತು. ಆದರೆ ರಾತ್ರೋರಾತ್ರಿ ಮುಂಕ್ ಜರ್ಮನಿಯ ಮನೆಮಾತಾಗಿ ಹೋದ!
`ಪ್ಯುಬರ್ಟಿ~, `ಆಂಕ್ಸೈಟಿ~, `ದಿ ಡಾನ್ಸ್ ಆಫ್ ಲೈಫ್~, `ದಿ ಸನ್~, `ವಿಂಟರ್ ಇನ್ ಕ್ರೆಗೆರೊ~, `ದಿ ಸ್ಕ್ರೀಮ್~, `ವರ್ಕರ್ಸ್‌ ರಿಟರ್ನಿಂಗ್ ಹೋಂ~ `ದಿ ಲೋನ್ಲಿ ಒನ್ಸ್~ ಈತನ ಕೆಲವು ಪ್ರಸಿದ್ಧ ಕಲಾಕೃತಿಗಳು. ವೈಯಕ್ತಿಕ ನೆಲೆಯಲ್ಲಿಯೇ ಚಿತ್ರ ರಚಿಸಿದರೂ `ದಿ ಸ್ಕ್ರೀಮ್~ ಸೇರಿದಂತೆ ಹಲವು ಕೃತಿಗಳ ಆಶಯ ವಿಶ್ವಾತ್ಮಕವಾಗಿದೆ. `ದಿ ಫ್ರೀಜ್ ಆಫ್ ಲೈಫ್~ ಕೃತಿ ಸರಣಿ, ಪ್ರೇಮ ಹಾಗೂ ಸಾವನ್ನು ಬಣ್ಣಗಳಲ್ಲಿ ಹಿಡಿದಿಟ್ಟಿದೆ.

ನಾಜಿ ದುರಾಡಳಿತ ಈತನನ್ನೂ ಬಿಡಲಿಲ್ಲ. ಮುಂಕ್‌ನ 71 ಕಲಾಕೃತಿಗಳನ್ನು ಹಿಟ್ಲರನ ಅನುಯಾಯಿಗಳು ಹೊತ್ತೊಯ್ದಿದ್ದರು. ತನ್ನ ಕಡೆಗಾಲದಲ್ಲಿ ನಾಜಿಗಳ ಭಯದ ನೆರಳಲ್ಲಿ ಬದುಕುವ ಸ್ಥಿತಿ ಒದಗಿತು. ಮುಂಕ್ 1844ರಲ್ಲಿ, ತನ್ನ ಎಂಬತ್ತನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ. ಇತ್ತೀಚೆಗೆ `ದಿ ಸ್ಕ್ರೀಮ್~ನ ಎರಡು ಆವೃತ್ತಿಗಳು ಹಾಗೂ `ಮಡೋನ್ನಾ~ ಕಲಾಕೃತಿಗಳು ದರೋಡೆಗೆ ತುತ್ತಾದವು ಎನ್ನುವುದು ಆತನ ಕಲೆಯ ಔನ್ನತ್ಯವನ್ನು ಸಾರುವಂತಿದೆ. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.