ಚಿತ್ರರೂಪಕ
ಗೋವೆ ಬಳಿಯ ಸಾಲ್‌ಗಾವ್‌ನಲ್ಲಿ 1924ರಲ್ಲಿ ಜನಿಸಿದ ಫ್ರಾನ್ಸಿಸ್ ನ್ಯೂಟನ್ ಸೋಜಾ ದೇಶ ಕಂಡ ಪ್ರಖ್ಯಾತ ಚಿತ್ರಕಲಾವಿದರಲ್ಲಿ ಒಬ್ಬರು. ತಂದೆಯ ಸಾವಿನೊಂದಿಗೆ ಎಳೆಯ ಪ್ರಾಯಕ್ಕೆ ಸಂಕಷ್ಟದ ಬದುಕು ಅನುಭವಿಸುವ ಸ್ಥಿತಿ. ಜತೆಗೆ ಮೈಗಂಟಿದ ಸಿಡುಬು. ಇದು ಅವರನ್ನು ಬೇರೆಯದೇ ಹಾದಿ ತುಳಿಯುವಂತೆ ಮಾಡಿತು.
ಮುಂಬೈಗೆ ಪಯಣಿಸಿ ಅಲ್ಲಿನ ಜೆ ಜೆ ಕಲಾಶಾಲೆಯಲ್ಲಿ ಅಭ್ಯಾಸ ನಿರತರಾದರು. ಅದು ಸ್ವಾತಂತ್ರ್ಯ ಚಳವಳಿ ಉತ್ತುಂಗದಲ್ಲಿದ್ದ ಸಂದರ್ಭ. ಗಾಂಧೀಜಿ ಕರೆ ನೀಡಿದ್ದ ಭಾರತ ಬಿಟ್ಟು ತೊಲಗಿ ಚಳವಳಿಗೆ ಧುಮುಕಿದರು. ಪರಿಣಾಮ ಕಲಾಶಾಲೆಯಿಂದ ಅವರಿಗೆ ಬಹಿಷ್ಕಾರ ಹಾಕಲಾಯಿತು.
ಅದು 1947ನೇ ಇಸವಿ. ರವೀಂದ್ರನಾಥ ಟ್ಯಾಗೋರ್, ಅವನೀಂದ್ರನಾಥ ಟ್ಯಾಗೋರ್ ಮುಂತಾದ ಬಂಗಾಳಿ ಪಂಥದ ಕಲಾವಿದರು ರಾಷ್ಟ್ರೀಯತೆಗೆ ಮಣೆ ಹಾಕಿದ್ದ ಸಂದರ್ಭ ಅದು. ಆಗ ಅದಕ್ಕೆ ಪ್ರತಿಯಾಗಿ ನಿಂತದ್ದು ಸೋಜಾ, ಮುಂಬೈನಲ್ಲಿ ಸ್ಥಾಪಿಸಿದ ಪ್ರಗತಿಶೀಲ ಕಲಾವಿದರ ಸಮೂಹ. ಎಸ್.ಎಚ್.ರಾಜಾ, ಎಂ.ಎಫ್.ಹುಸೇನ್ ಹಾಗೂ ಕೆ.ಎಚ್.ರಾಜಾ ಈ ಗುಂಪಿನ ಮತ್ತಿತರ ಸದಸ್ಯರು.
ನಂತರ ಎಸ್.ಕೆ.ಭಾಕ್ರೆ, ಅಕ್ಬರ್ ಪದ್ಮಶ್ರೀ, ರಾಮ್ ಕುಮಾರ್, ತಯ್ಯಬ್ ಮೆಹ್ತಾ, ಎಸ್.ಜಿ. ವಾಸುದೇವ್ ಮುಂತಾದವರು ಈ ಕಲಾಪಂಥವನ್ನು ಸೇರಿದರು. ಯೂರೋಪಿನ ನವ್ಯವಾದ ಅತಿಯಾಗಿ ಪ್ರಭಾವಿಸಿದ್ದರೂ ಈ ಪಂಥದ ಕಲಾವಿದರು ವೈವಿಧ್ಯಮಯ ಕೃತಿಗಳನ್ನು ರಚಿಸಿದರು. ಸೋಜಾ ಅವರ ಅಭಿವ್ಯಕ್ತಿವಾದದಿಂದ ಹಿಡಿದು ಎಸ್.ಜಿ. ವಾಸುದೇವ್ ಅವರ ಅಪ್ಪಟ ಅಮೂರ್ತ ಕಲೆಯವರೆಗೂ ಈ ಮಾತು ಅನ್ವಯಿಸುತ್ತದೆ.
1949ರಲ್ಲಿ ದೇಶ ತೊರೆದ ಸೋಜಾ ಲಂಡನ್‌ನಲ್ಲಿ ವಾಸ್ತವ್ಯ ಹೂಡಿದರು. ಸಾಕಷ್ಟು ಕಷ್ಟಗಳನ್ನು ಅನುಭವಿಸಿದ ನಂತರ ಅವರಿಗೆ ಅಲ್ಲಿನ ಕಲಾಲೋಕದಲ್ಲಿ ಭದ್ರ ನೆಲೆ ದೊರೆಯಿತು. 1954ರಲ್ಲಿ ಅಲ್ಲಿನ ಸಮಕಾಲೀನ ಕಲಾ ಸಂಸ್ಥೆ ಅವರ ಕಲಾಕೃತಿಗಳನ್ನು ಒಳಗೊಂಡ ಪ್ರದರ್ಶನ ಏರ್ಪಡಿಸಿತು.
1955ರಲ್ಲಿ ಪ್ರಥಮ ಏಕವ್ಯಕ್ತಿ ಪ್ರದರ್ಶನ ನೀಡಿದರು.1967ರಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನೆಲೆಗೊಳ್ಳುವ ಹೊತ್ತಿಗೆ ಅವರೊಬ್ಬ ಪ್ರಮುಖ ಭಾರತೀಯ ಕಲಾವಿದನಾಗಿ ಹೊರಹೊಮ್ಮಿದ್ದರು. ಲಂಡನ್, ಪ್ಯಾರಿಸ್, ಡೆಟ್ರಾಯಿಟ್, ಕರಾಚಿಯಲ್ಲಿ ಪ್ರಮುಖ ಪ್ರದರ್ಶನಗಳನ್ನು ನೀಡಿದರು. 1996ರಲ್ಲಿ ಅವರ ಎಲ್ಲಾ ಕೃತಿಗಳನ್ನು ಒಳಗೊಂಡ ಬೃಹತ್ ಪ್ರದರ್ಶನ ನವದೆಹಲಿಯಲ್ಲಿ ನಡೆಯಿತು.
ನಿಸರ್ಗ, ಧರ್ಮ, ಬದುಕು, ನಗ್ನತೆ, ಸೋಜಾ ಕಲಾಕೃತಿಗಳ ಪ್ರಮುಖ ವಸ್ತುಗಳಾಗಿದ್ದವು. ಹೆಣ್ಣು ಗಂಡಿನ ಕುರಿತ ಅವರ ಕಲಾಕೃತಿಗಳು ಹೆಚ್ಚು ಮನ್ನಣೆ ಪಡೆದಿದ್ದವು. `ಹೆಡ್ ಆಫ್ ಎ ಮ್ಯಾನ್~, `ಲ್ಯಾಂಡ್‌ಸ್ಕೇಪ್ ಆಫ್ ನೈಟ್~, `ಲವರ್ಸ್ ಇನ್ ದ ಪಾರ್ಕ್~, `ಸ್ಟಿಲ್ ಲೈಫ್ ಆಫ್ ಫ್ಲವರ್ಸ್~, `ರೆಡ್ ಕರ್ಸ್~, `ನ್ಯೂಡ್ ವಿತ್ ಮಿರರ್~, `ಬೀಸ್ಟ್ಸ್ ಆಫ್ ಪ್ರೇ~ ಅವರ ಪ್ರಮುಖ ಕೃತಿಗಳಲ್ಲಿ ಕೆಲವು.
ಕಲಾವಿದರಷ್ಟೇ ಅಲ್ಲದೆ ಬರಹಗಾರರು ಕೂಡ ಆಗಿದ್ದ ಅವರ ಪ್ರಸಿದ್ಧ ಗ್ರಂಥ `ವರ್ಡ್ಸ್ ಅಂಡ್ ಲೈನ್ಸ್~. `ನಿರ್ವಾಣ ಆಫ್ ಎ ಮಾಗ್ಗೊತ್~ ಎಂಬುದು ಆತ್ಮಕತೆ. 2002ರ ಮಾರ್ಚ್ 28ರಂದು ಮುಂಬೈನಲ್ಲಿ ಸೋಜಾ ಕೊನೆಯುಸಿರೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.