ADVERTISEMENT

ಚಾರಿತ್ರಿಕ ಪುರುಷ ಸಂತ ಸೇವಾಲಾಲ್ ಅವರ 286ನೇ ಜಯಂತಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 18:31 IST
Last Updated 13 ಫೆಬ್ರುವರಿ 2025, 18:31 IST
   

ಬಂಜಾರರ ಮೂಲ ಪುರುಷರಾದ ದಾದಮೋಲ ಮತ್ತು ರಾಧಿ ದಾದಿಯರು 3 ಭಿನ್ನ ಪ್ರದೇಶಗಳಿಂದ 3 ಜನರನ್ನು ದತ್ತು ಪಡೆದ ಮಕ್ಕಳೆಲ್ಲ ಬಂಜಾರರ ರಾಥೋಡರು, ಪೊಮ್ಮಾರ್, ಚವ್ಹಾಣ್ ಆಗಿದ್ದಾರೆ. ಮುಂದೆ ಇವರಿಂದ ಮೂರು ಪ್ರತ್ಯೇಕ ಬಂಜಾರ ಗೋತ್ರಗಳು ಹುಟ್ಟಿಕೊಂಡವು ಎಂಬ ಪ್ರತೀತಿ ಇದೆ. ದಾದಮೊಲ ಕೃಷ್ಣನ ಜೊತೆ ದನಗಾಹಿಯಾಗಿ ಮೊದಲಿಗೆ ತನ್ನ ಕೊಳಲನ್ನು ಕೃಷ್ಣನಿಗೆಕೊಟ್ಟು ಈ ಪರಂಪರೆಯಿಂದ ಹುಟ್ಟಿಬಂದ ಚಾರಿತ್ರಿಕ ಪುರುಷ, ಸೇನಾನಿ, ಸಂತ ಚಾರಣಕವಿ, ಕಾಲಜ್ಞಾನಿ ಸೇವಾಲಾಲ್ ಒಬ್ಬ ಮಹತ್ಮರಾಗಿ, ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಪುರುಷರಾಗಿದ್ದಾರೆ. ಜೊತೆಗೆ, ಆಶುಕವಿ, ಚಾರಣಕವಿ, ಬಂಜಾರರ ದ್ರಾವಿಡ ಮೂಲದ ಕುಲಗುರು, ಐತಿಹಾಸಿಕ, ಸಾಂಸ್ಕೃತಿಕ ನಾಯಕ ವೀರಸೇನಾನಿ, ಬ್ರಹ್ಮಚಾರಿ, ಸಮುದಾಯದ ಆರಾಧ್ಯದೈವ, ಆದರ್ಶ ಪುರುಷ, ಗುರು, ಚಾರಣಿಗ, ನಾಟಿ ವೈದ್ಯ, ಭಾಯಾ (ಅಣ್ಣ) ಸಮುದಾಯದ ಮೊದಲ ದಾರಿದೀಪವಾಗಿದ್ದಾರೆ.

ಸರ್ಕಾರವು ಪ್ರತಿವರ್ಷ ಫೆಬ್ರವರಿ 15 ರಂದು ಸಂತ ಸೇವಾಲಾಲರ ಜಯಂತಿಯನ್ನು ಆಚರಿಸುತ್ತಿದೆ.

ʼರಾಭೇನಿತೋ ಚಾಬೇನ್ ಮಳೇನಿʼ ಅಂದರೆ ʼಕೆಲಸ ಮಾಡದಿದ್ದರೆ ತಿನ್ನಲು ಸಿಗುವುದಿಲ್ಲʼ ಎಂಬುದು ಸೇವಾಲಾಲರ ನಾಣ್ಣುಡಿ. ಅದರಂತೆ, ಶ್ರಮ ಜೀವಿಗಳು, ಅಲೆಮಾರಿ ಬುಡಕಟ್ಟು ಸಮುದಾಯದ ಶ್ರಮಿಕ ಬಡ ಕುಟುಂಬದಲ್ಲಿ ಹುಟ್ಟಿದ ಸೇವಾಲಾಲ್ ಅವರ ಕೊಡುಗೆ ಸಮಾಜಕ್ಕೆ ಅಪಾರ.

ADVERTISEMENT

ಜನನ

ಸೇವಾಲಾಲರು ಕ್ರಿ.ಶ 1739 ಫೆಬ್ರುವರಿ 15ರ ಸೋಮವಾರ ಬೆಳಗ್ಗೆ 9ಕ್ಕೆ ಶಿವರಾತ್ರಿಯ ದಿನ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿಯ ಸೂರಗೊಂಡನ ಕೊಪ್ಪ (ಭಾಯ ಘಡ)ದಲ್ಲಿ ಜನಿಸಿದರು ಎನ್ನಲಾಗುತ್ತದೆ.

ಸೇವಾಲಾಲರ ಬಗ್ಗೆ ಇರುವ ಲಾವಣಿ ಹಾಡುಗಳಲ್ಲಿ ಒಂದು ಈ ರೀತಿ ಇದೆ.

ʼಹಾತೇಮ ಕಾಟಿರೆ ಝಲನರೆ

ಗೋರೂರ ತಾಂಡೆನ ಜಾರೋ ಫೆವನರ

ತಾಂಡೋ ತಾಂಡೆಮ ಸೀಕವಾಡಿ ದೇವರʼ

ಅಂದರೆ,

ʼಕೈಯಲ್ಲಿ ಝಂಡ ಹೀಡಿದು, ಬಂಜಾರರ ತಾಂಡಕ್ಕೆ ಹೋಗುವ

ತಾಂಡ ತಾಂಡಗಳಲ್ಲಿ ಶಾಲೆ ನೀಡಲುʼ ಎಂಬ ಹಾಡು ಸೇವಾಲಲರು ಶಿಕ್ಷಣಕ್ಕೆ ನೀಡಿದ ಮಹತ್ವವನ್ನು ಸಾರುತ್ತದೆ.

ಕ್ರಿ.ಶ 1500 ರಿಂದ 2000 ವರೆಗೆ ಇವರು 500ಕ್ಕೂ ಹೆಚ್ಚಿನ ಸಂಸ್ಥಾನಗಳಿಗೆ ಕಾಡು ಹಾದಿಯಲ್ಲಿ ವ್ಯಾಪಾರ ಮಾಡುತ್ತಾ, ಅವರ ಸರಕು, ಆಹಾರ, ಧಾನ್ಯ, ಉಪ್ಪು, ಬೆಳ್ಳಿ, ಬಂಗಾರ ಸಾಮಾಗ್ರಿ, ಯುದ್ದ ಸಾಮಾಗ್ರಿಸಾಗಿಸಿ ಸ್ವಾತಂತ್ರ್ಯ ಹೋರಾಟದವರೆಗೂ ಸೇವೆಸಲ್ಲಿಸಿರುವ ಸಮುದಾಯ ಅನೇಕ ಪ್ರಥಮಗಳನ್ನು ನಾಡಿಗೆ ನೀಡಿದೆ. ಆರ್ಥಿಕತೆ, ಗೋಪಾಲನೆ, ಕಸೂತಿ, ಕಲೆ, ಕೃಷ್ಣನಿಗೆ ಮೊದಲು ಕೊಳಲುಕೊಟ್ಟವರು, ಮೊದಲ ಬೇಟೆಗಾರರು, ಹೀಗೆ ನೂರಾರು ಪ್ರಥಮಗಳನ್ನು ಸಾಧಿಸಿದ ಶ್ರಮಿಕರು.

ಪ್ರಾಮಾಣಿಕರು ಹಾಗೂ ನಂಬಿಕಸ್ಥ ಸಿಪಾಯಿಗಳು ಇವರಾಗಿದ್ದರು. ಹೀಗಾಗಿ ರಾಜರುಗಳ ವಜ್ರ, ವೈಡೂರ್ಯ ಸಾಗಿಸುವ ಸಂಚಾರಿಗಳಾಗಿದ್ದರು.

ಕನ್ನಡ ಸಂಸ್ಕೃತಿಯ ದ್ರಾವಿಡ ಪರಂಪರಣೆಯ ಗುರು ಸಂತ ಸೇವಲಾಲರು ಸಮುದಾಯದ ಪಂಗಡಗಳಲ್ಲಿ ದೇವರಾಗಿ, ಮೋತಿವಾಳೋ | ಮುತ್ತಿನವನು| ಝಾರಿವಾಳೋ (ಜನರ ಜಂಗುಳಿಯವ), ಧೋಳೊ ಘೋಡೆವಾಳೋ (ಬಿಳಿ ಕುದುರೆಯ), ಬಳಿಪಗಡಿಯವ, ಗರಸ್ಯಾ ಎಂಬ ಎತ್ತಿನವನು, ಲಗ್ಗಿವಾಳೋ ಬಹುತೇಕರಿಗೆ ದೇವರು. ವೈಧ್ಯ, ಬಾಮಣೀಯ (ಬ್ರಾಹ್ಮಣ), ಸಿಖ್, ಢಾಡಿ (ಮುಸ್ಲಿಂ) ಕಲಾವಿದ, ಢಾಲಿಯಾ, ಶಿಂಗಾಡಿಯಾ, ಭರವಾ, ಧನ್‌ಖೋಟ್, ಜೋಗಿ ಮತ್ತೆ ಕೆಲವರಿಗೆ (ನಾವಿಯಿಂದ), ನಾಯಕ (ಯಜಮಾನ), ಭಾಯಾ (ಅಣ್ಣ), ವೇರಾಳು (ಸೇನಾನಿ) ಹೀಗೆ ಮುಂತಾಗಿ ಬಹು ಆಯಾಮಿಯಾಗಿದ್ದವರು ಹತಾದಿಯಾ (ಗೋಪಾಲಕ).

ವಿದೇಶಗಳಲ್ಲಿ ಜಿಪ್ಸಿಗಳು, ಕ್ಯಾರವಾನ್‌ಗಳು, ರೋಮಾನಿಯನ್ನರು ಎಂದು ಹೇಳುವ ಬಂಜಾರರು ಮಧ್ಯಯುರೋಪ್, ಅಮೆರಿಕದಲ್ಲೂ ಕಾಣುವ ಸಮುದಾಯದ ಈ ಜನರ ಗುರು ಸೇವಾಲಾಲರು ಕನ್ನಡ ಮೌಖಿಕ ಪರಂಪರೆಯಲ್ಲಿ ಬರುವ ದ್ರಾವಿಡರ ಗುರುಗಳಂತೆ, ವೀರ, ಸಾಂಸ್ಕೃತಿಕ ನಾಯಕ. ಇವರ ತಂದೆ ಭೀಮಾನಾಯ್ಕ ಬಹುದೊಡ್ಡ ವ್ಯಾಪಾರಿಯಾಗಿದ್ದರು. ರಸ್ತೆ ಇಲ್ಲದ ಕಾಲದಲ್ಲಿ ಸರಕುಗಳು, ಆಹಾರ ಸಾಮಾಗ್ರಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಾಡಿನ ಮಾರ್ಗಗಳಲ್ಲಿ ನೂರಾರು ಎತ್ತುಗಳ ಮೇಲೆ ಸಾಗಿಸುವ ವೃತ್ತಿಯವರಾಗಿದ್ದರು.

ಸೇವಾಲಾಲರು 3,751 ಹಸುಗಳ ಒಡೆಯರಾಗಿದ್ದರು. ತಾಂಡ ಜನರ ಅಚ್ಚುಮೆಚ್ಚಿನವರು. ಇವರ ವಿವಿಧ ಸೇವಾ ಮನೋಭಾವದ ಬಗ್ಗೆ ಸಮುದಾಯ ಜನರು ಬಯಲಾಟಗಳಲ್ಲಿ, ಲಾವಣಿಯ ಮೂಲಕ, ಕಥೆಕಟ್ಟಿ ರಾತ್ರಿ ಇಡೀ ಹಾಡುತ್ತಾರೆ. ಭಜನೆ ಮಾಡುತ್ತಾರೆ. ಇವರು ನಿತ್ಯ ನೆನೆಯುವ ಪ್ರಾತಃಸ್ಮರಣೀಯರಾಗಿದ್ದಾರೆ.

ಬಂಜಾರರ ಹಾಗೂ ಸೇವಾಲಾಲರ ಧರ್ಮ

ಕ್ರಿ.ಪೂ 600-300ರ ಕಾಲದಲ್ಲಿಯೇ ಧರ್ಮಶಾಸ್ತ್ರ ಗ್ರಂಥಗಳಿದ್ದವು. 2ನೇ ಶತಮಾನದಲ್ಲಿ ಅವು ಪ್ರಮಾಣ ಗ್ರಂಥಗಳಾದವು. ಮೇದಾತಿಥಿಯ ಪ್ರಕಾರ ಧರ್ಮವು ಐದು ವಿಧಗಳದ್ದಾಗಿದೆ. ಅವು..

  • ವರ್ಣ ಧರ್ಮ

  • ಆಶ್ರಮ ಧರ್ಮ

  • ವರ್ಣಾಶ್ರಮ ಧರ್ಮ

  • ನೈಮಿತ್ತಿಕ ಧರ್ಮ

  • ಗುಣಧರ್ಮ

ಈ ಮೇಲಿನ ಧರ್ಮಗಳ ಪ್ರಕಾರ ಪರಿಸರ ಆರಾಧಕ ಸೇವಾಲಾಲರು, ಗುಣಧರ್ಮ ಅಥವಾ ಅತ್ಯಂತ ಹಳೆಯದಾದ ಬೌದ್ಧ ಧರ್ಮಗ್ರಂಥಗಳು (ಬೌದ್ದಾಯನ ಧರ್ಮಸೂತ್ರ) ಹೇಳುವ ನಿರ್ದೇಶನಗಳು, ಆಕರಗಳ ಧರ್ಮವನ್ನು (ಪರಿಸರದ ಧರ್ಮ) ಭೋಧಿಸಿದ್ದಾರೆ ಎನ್ನಬಹುದು. ಬೌದ್ಧಾಯನ ಧರ್ಮ ಸೂತ್ರದ ಮೇಲೆ ಗೋವಿಂದಸ್ವಾಮಿ ಸಹ ವ್ಯಾಖ್ಯಾನ ಬರೆದಿದ್ದಾರೆ. ಸೇವಾಲಾಲರು ಎಲ್ಲಾ ಧರ್ಮಗಳನ್ನು ನಯನವಾಗಿ ಕಾಣಿ ಎಂದರು.

ಧರ್ಮ ಮತ್ತು ನೀತಿ ಒಂದೇ ಆಗಿರಬೇಕು ಎಂದರು. ಹಾಗೆಯೇ, ಧರ್ಮಗಳ ಮಧ್ಯ ಸಮಾನತೆ ಸಾರಿದರು. ಬಡವರಿಗೆ ದಾನ ಮಾಡಿ ಎಂದರು.

ಸೇವಾಲಾಲರ ಕುರಿತು ತಾಂಡ ಜನರು ಯಾವಾಗಲೂ ಹಾಡುಕಟ್ಟಿ ಹಾಡುತ್ತಾರೆ. ʼಸೇವಾಲಾಲ ಭೀಮನ ಮಗನೆ, ನನ್ನ ಕುಲದ ತಾರೆಯೇ ಕುಲದ ನಗಾರಿಯೇ ಧ್ಯಾನ ಮಾಡುವೆ ನಿಮ್ಮʼ ಎಂದು.

ಸೇವಾಲಾಲರು ಹೇಳಿದ, ʼಸೀಕ್ ಸೀಕೋ ಸೀಕನ್ ಸೀಕಾವೋ

ಸೀಕೋಜಕೋ ಸೇನಿ ಭಲಾನ್ ಆಂಗ್ ಚಾಲಚ್ʼ

ಅಂದರೆ,

ʼಶಿಕ್ಷಣ ಕಲಿಯಿರಿ ಕಲಿತು ಕಲಿಸಿರಿ

ಕಲಿತವನು ಸರ್ವರನ್ನು ಒಗ್ಗೂಡಿಸಿ ಮುಂದೆ ಸಾಗುತ್ತಾನೆʼ ಎನ್ನುವ ಸೇವಾಲಾಲರ ಈ ಮಾತುಗಳನ್ನು ಹಿಂದುಳಿದಿರುವ ಎಲ್ಲಾ ಸಮುದಾಯಗಳು ಅಕ್ಷರಶಃ ಪಾಲಿಸಬೇಕಾಗಿದೆ.

ಸೇವಾಲಾಲರು ಸಮುದಾಯದಲ್ಲಿ ಒಂದು ಶಾಸನ, ಪದ್ಧತಿ, ಕರ್ತವ್ಯ, ಹಕ್ಕು, ನ್ಯಾಯಶೀಲತೆ, (ಪಂಚಾಯತಿ), ಕಲ್ಪ, ಸತ್ಕಾರ್ಯ, ಕ್ರಿಯೆ, ಗುಣ, ದೈವ, ಧರ್ಮ ಬೃಹದ್‌ ಸೂತ್ರವನ್ನು ಸಮುದಾಯಕ್ಕೆ ಬೋಧಿಸಿದ್ದಾರೆ.

ಸೇವಾಲಾಲರ ಸಮಾಜ ಸೇವೆ

  • ಸೇವಾಲಾಲ್ ಸತ್ತಮನೆಯವರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದರು.

  • ಸೇವಾಲಾಲ ಬಂಜಾರ ಸಮುದಾಯಕ್ಕೆ ಮಾತ್ರ ಸೇವೇ ಮಾಡದೆ ಇತರರಿಗೂ ಸೇವೆ ಸಲ್ಲಿಸುತ್ತಾ ಸೇವಕರಾಗಿದ್ದರು.

  • ಅಪ್ಪಟ ನಾಟಿ ವೈದ್ಯರಾಗಿದ್ದರು ಅನೇಕರ ಪ್ರಾಣ ರಕ್ಷಣೆ ಮಾಡಿದ್ದಾರೆ.

  • ಅಲೆಮಾರಿ ಬಂಜಾರರ ಬದುಕಿನಿಂದ ರೋಸಿ ಹೋಗಿದ್ದ ಇವರು ಮೊದಲಿಗೆ ಒಂದೆಡೆ ನೆಲೆ ನಿಲ್ಲುವಂತೆ, ವ್ಯವಸಾಯ, ಪಶುಪಾಲನೆ ಮಾಡಲು ತಿಳುವಳಿಕೆ ಹಂಚಿದವರು.

  • ಹಬ್ಬದ ದಿನಗಳಲ್ಲಿ ಸ್ವತಃ ತಾವೇ ತಯಾರಿಸಿದ ಮದ್ಯ ಸೇವಿಸಲು ಸೂಚಿಸಿದ್ದರು.

  • ಸ್ತ್ರೀಯರಿಗೆ ಪುರುಷ ಸಮಾನವಾದ ಸ್ಥಾನಕ್ಕೆ ಆಗ್ರಹಿಸಿದ್ದರು.

  • ಎಲ್ಲರೂ ಸಾಮೂಹಿಕವಾಗಿ ಸೇರಿ ಶುಭಕೋರುವುದು, ಹಬ್ಬ ಆಚರಿಸಲು ಹೇಳಿದ್ದರು.

  • ಸೇವಾಲಾಲರು ಪರಿಸರ ಧರ್ಮವು, ಕಲಿಕೆಗೆ ಪೂಜಿಸುವ ಧರ್ಮವಾಗಿದೆ. ಇದರಿಂದ ಆರ್ಥಿಕ ಸಮಾನತೆ ಇರುತ್ತೆ ಎಂದು ನಂಬಿದ್ದರು.

ಬಂಜಾರರಲ್ಲಿ 64ಕ್ಕೂ ಹೆಚ್ಚಿನ ವೀರ ಪುರುಷರು ಇದ್ದು ಇವರಲ್ಲಿ ಸೇವಾಲಾಲ್ ಪ್ರಮುಖರಾಗಿದ್ದಾರೆ.

ಸೇವಾಲಾಲ್ ಆಪತ್ತಿನಿಂದ ಪಾರಾಗುವ ಯುದ್ಧತಂತ್ರ, ವಿಭಿನ್ನ ಜ್ಞಾನ ಹೇಳಿಕೊಟ್ಟಿದ್ದಾರೆ. ಸೇವಾಲಾಲರ ಹುಟ್ಟು ಪವಾಡ ಕುರಿತ ಒಲೈಕೆಯ ನೂರಾರು ಲಾವಣಿ, ಹಾಡು, ಬಯಲಾಟಗಳಿವೆ.

ಹಾಗೆಯೇ ಸೇವಾಲಾಲ್, ʼಒಂದು ಬಟ್ಟಲು ನೀರು ಕೊಟ್ಟವರಿಗೆ ಊಟ ನೀಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕುʼ ಎಂದವರು.

ಸಂತ ಸೇವಾಲಾಲರ 286ನೇ ಜಯಂತಿಯ ಈ ಸಂಧರ್ಭದಲ್ಲಿ ಬಂಜಾರ ಸಮುದಾಯ ಅನೇಕ ಸಮಸ್ಯೆಗಳನ್ನು ಇಂದಿಗೂ ಅನುಭವಿಸುತ್ತಿದೆ. ಜೀವನಕ್ಕಾಗಿ ವಲಸೆ ಹೋಗುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ವಲಸೆ ಸಂದರ್ಭದಲ್ಲಿ ಕಬ್ಬು ಕಟಾವು, ಕಾಫಿ ಎಸ್ಟೇಟ್ ಹಾಗೂ ರಸ್ತೆ-ಕಟ್ಟಡಗಳ ಕೆಲಸದಲ್ಲಿ ತೋಡಗುವುದರಿಂದ ನಿರಂತರವಾಗಿ ಹಾವು ಕಚ್ಚಿ ಸಾಯುವ ಜೊತೆಗೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ದೇಶದ ಅನೇಕ ರಾಜ್ಯಗಳಲ್ಲಿ ಇಂದಿಗೂ ಮಕ್ಕಳನ್ನು ಮಾರಿ ಬದುಕುವ ಸ್ಥಿತಿ ಇದೆ. ಉತ್ತರ ಕನ್ನಡ ದಕ್ಷಿಣ ಕನ್ನಡ ಪ್ರದೇಶಗಳಿಗೆ ಬಂಜಾರರು ವಾರ್ಷಿಕವಾಗಿ 3,000ಕ್ಕೂ ಹೆಚ್ಚು ಜನ ವಲಸೆ ಹೋಗುತ್ತಾರೆ. ಇವರಲ್ಲಿ ಕನಿಷ್ಠ 100 ಮಕ್ಕಳು ಶಾಲಾ ವಂಚಿತರಾಗಿರುತ್ತಾರೆ. ನಗರ ಪಟ್ಟಣಗಳಿಗೆ ವಲಸೆ ಬರುವ ಜನರ ಲೆಕ್ಕವೇ ಇಲ್ಲ. ಬಂಜಾರರ ಭಾಷೆಗೆ ಸಂವಿಧಾನಿಕ ಸ್ಥಾನಮಾನ ಅಗತ್ಯ ಸಹ ಇದೆ.

ಸೇವಾಲಾಲರ ಜಯಂತಿಯ ಈ ಸಂದರ್ಭದಲ್ಲಿ ಬೇಡಿಕೆ ಸಾಕಷ್ಟು ಇವೆ.

  • ಬಂಜಾರ ಭಾಷೆಗೆ ಸಂವಿಧಾನಾತ್ಮಕ ಸ್ಥಾನಮಾನ.

  • ಬಂಜಾರ ತಾಂಡಗಳು ಶೇ 100 ರಷ್ಟು ಕಂದಾಯ ಗ್ರಾಮಗಳಾಗಬೇಕು.

  • ತಾಂಡಗಳಿಗೆ ಆಧುನಿಕ ಮೆರಗು, ಎಲ್ಲಾ ರೀತಿಯಲ್ಲೂ ಶಾಲೆ, ನೀರಿ, ವಿದ್ಯುತ್, ಬ್ಯಾಂಕ್ ಸೇವೆ, ಹಾಲಿನ ಡೈರಿ, ಸೈಬರ್ ಸೆಂಟರ್, ಗ್ರಂಥಾಲಯ, ವೈದ್ಯಕೀಯ ಸೇವೆ, ಕಸೂತಿ ಕೇಂದ್ರ, ಕಲಾಕೇಂದ್ರ, ಅತ್ಯಾಚಾರ ಮುಕ್ತ ವಾತಾವರಣದ ಜೊತೆಗೆ ಶೋಷಣೆ ಇಲ್ಲದ ಜಾತೀಯತೆ ಇಲ್ಲದ ಸಮಾಜ ಬಯಸುತ್ತೇವೆ.

  • ತಾಂಡಗಳತ್ತ ಸರ್ಕಾರ ಗಮನ ಹರಿಸಬೇಕು.

  • ಸಮುದಾಯದ ಸಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕದಂತಹ ಅನೇಕ ಅಂಶಗಳನ್ನು ಸರ್ಕಾರ ಪರಿಗಣಿಸುವುದು ಪ್ರೋತ್ಸಾಹ ನೀಡುವುದು ಒಳಿತು.

  • 3,300ಕ್ಕೂ ಹೆಚ್ಚಿನ ಲಂಬಾಣಿ ತಾಂಡಗಳು ಇಂದಿಗೂ ಸಂಪೂರ್ಣ ರೆವಿನ್ಯೂ ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡಿರುವುದಿಲ್ಲ. ಹೀಗಾಗಿ ಸರ್ಕಾರದ ಬಹುತೇಕ ಸೌಲತ್ತಿನಿಂದ ಸಮುದಾಯ ವಂಚಿತವಾಗಿದೆ. ಈ ಬಗ್ಗೆ ಜಾಗೃತಿ ಅರಿವು ಇಲ್ಲ.

  • ಸರ್ಕಾರದ ಅನೇಕ ಜನಪರವಾದ ಉತ್ತಮ ಯೋಜನೆಗಳು ಈ ಸಮುದಾಯಕ್ಕೆ ಸಮರ್ಪಕವಾಗಿ ತಲುಪುತ್ತಿಲ್ಲ.

  • ವಾಸಿಸುವವನೆ ಒಡೆಯ ಕಾನೂನು ಜಾರಿಗೊಳ್ಳದೆ ಇವರ ಅಕ್ರಮ ಆಸ್ತಿಗಳು ಸಕ್ರಮವಾಗಿರುವುದಿಲ್ಲ.

  • ಇವರ ಆರೋಗ್ಯ ನೋಡುವುದಾದರೆ, ಆರೋಗ್ಯದಲ್ಲಿ ರೋಗ ರುಜಿನಗಳು ಹೆಚ್ಚಿವೆ. ಅಪೌಷ್ಠಿಕತೆ ಇದೆ. ವಿಶೇಷವಾಗಿ ಮಕ್ಕಳು ಗರ್ಭಿಣಿಯರು ಸಾಯುತ್ತಾರೆ. ಭ್ರೂಣಹತ್ಯೆ ಇದೆ.

  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೇಳುವ ಅಂಕಿ-ಅಂಶಗಳ ಪ್ರಕಾರ, ಬೆಂಗಳೂರಲ್ಲೇ ವಾರ್ಷಿಕ ಕನಿಷ್ಠ 2,000 ಮಕ್ಕಳು ಕಾಣೆಯಾಗಿರುತ್ತಾರೆ. ಆ ಮಕ್ಕಳಲ್ಲಿ ಹೆಚ್ಚು ಬಂಜಾರ, ಅಲೆಮಾರಿ, ಆದಿವಾಸಿ, ದಲಿತ ಮಕ್ಕಳಿದ್ದಾರೆ. ಇವರನ್ನು ವೇಶ್ಯಾವಾಟಿಕೆಗೆ, ಅಂಗಾಂಗ ಮಾರಾಟ, ಸರ್ಕಸ್‌ಗಳಿಗೆ, ಸಂಶೋಧನೆಗಳಿಗೆ ಬಳಸಿಕೊಳ್ಳುತ್ತಿರುವ ಅನುಮಾನ ಇದೆ.

  • ಸ್ವಾತಂತ್ರ‍್ಯ ಬಂದು 75 ವರ್ಷ ಕಳೆದರು ಬಂಜಾರರಲ್ಲಿ ಇರುವ ಬಡತನ, ಮೂಡನಂಬಿಕೆ ಜಗಜ್ಜಾಹೀರವಾಗಿದೆ.

ಇಂದಿಗೂ ಈ ಸಮುದಾಯ ಅಸ್ಪೃಶ್ಯತೆಯಿಂದ ಹೊರತಾಗಿಲ್ಲ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿರುವ ಬಂಜಾರ(ಲಂಬಾಣಿ) ಸಮುದಾಯಕ್ಕೆ ಒಳ ಮೀಸಲಾತಿಯಲ್ಲಿ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾದ, ವಾಸ್ತವವಾದ ಸಿಫಾರಸ್ಸುಗಳನ್ನು ಮಾಡುವ ಅಗತ್ಯವಿದೆ.

ತಬ್ಬಲಿ ಸಮುದಾಯಗಳಾದ ಅನೇಕ ಅಲೆಮಾರಿ ಬುಡಕಟ್ಟುಗಳು, ಆದಿವಾಸಿಗರು ತಮ್ಮನ್ನು ತಾವು ಎಲ್ಲಾ ರೀತಿಯಲ್ಲಿ ಸಾಬೀತು ಮಾಡಿಕೊಳ್ಳಲು, ತಮ್ಮ ಆಸ್ಮಿತೆಯನ್ನು ಕಾಪಾಡಿಕೊಳ್ಳಲು ಸರ್ಕಾರದ ಸಹಕಾರ ಬಯಸುತ್ತೇವೆ.

ಮರಣ

ಸೇವಾಲಾಲರು 1806ರ ಡಿಸೆಂಬರ್‌ 4ರಂದು ಮರಣಹೊಂದಿದರು. ಇವರ ವಿಶೇಷತೆ ಎಂದರೆ, ಎಲ್ಲಾ ರಾಜ್ಯದವರು ಇವರನ್ನು ನಮ್ಮಲ್ಲೇ ಹುಟ್ಟಿದರು, ನಮ್ಮಲ್ಲೇ ಸಾವಿಗೀಡಾದರು ಎನ್ನುತ್ತಾರೆ. ಇದೇ ನಿಜವಾಗಿ ಒಬ್ಬ ಸಂತನಿಗೆ ಸಂದ ಗೌರವ.

ಅಣ್ಣ ಬಸವಣ್ಣ ಹೇಳುವ ಹಾಗೆ, ʼಇವನಾರವ ಇವನಾರವ ಎನ್ನದೆ, ಎಲ್ಲರೂ ಇವ ನಮ್ಮವ ಇವ ನಮ್ಮವʼ ಎನ್ನುತ್ತಾರೆ.

ಇತ್ತಿಚೆಗೆ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಬೇಡಿಕೆಯ ಮೇರೆಗೆ ಪ್ರಸಕ್ತ ಸಾಲಿನಲ್ಲಿ ಸರ್ಕಾರವು ಸೇವಾಲಾಲ್ ಹೆಸರಿನಲ್ಲಿ ₹ 1 ಲಕ್ಷ ಮೊತ್ತದ ಪ್ರಶಸ್ತಿಯನ್ನು ಸ್ಥಾಪಿಸಿದೆ. ಈ ಪ್ರಶಸ್ತಿಯನ್ನು ಬಂಜಾರ ಹಿರಿಯ ಸಾಹಿತಿ ಹಾಗೂ ಸಂಸ್ಕೃತಿಕ ಚಿಂತಕಿ ಡಾ. ಬಿ.ಟಿ. ಲಲಿತ ನಾಯಕ್ ಅವರಿಗೆ ಬಂಜಾರ ಅಕಾಡಮಿ ವತಿಯಿಂದ ನೀಡಿರುವುದು ವಿಶೇಷವಾಗಿದೆ.

ಡಾ.ಎ.ಆರ್ ಗೋವಿಂದಸ್ವಾಮಿ

ಲೇಖಕರು: ಅಧ್ಯಕ್ಷರು, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಮೊ: 9113243344

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.