ADVERTISEMENT

ಬೆಳಗೆದ್ದು ತಿಂದೇವು ಗರಿ ಗರಿ ತೆಳ್ಳೇವು

ಸುಧಾ ಹೆಗಡೆ
Published 6 ಜನವರಿ 2018, 19:30 IST
Last Updated 6 ಜನವರಿ 2018, 19:30 IST
ಬೆಳಗೆದ್ದು ತಿಂದೇವು ಗರಿ ಗರಿ ತೆಳ್ಳೇವು
ಬೆಳಗೆದ್ದು ತಿಂದೇವು ಗರಿ ಗರಿ ತೆಳ್ಳೇವು   

ಹೆಂಚಿನ ಮೇಲೆ ದೋಸೆ ಹಿಟ್ಟಿಗಿಂತ ತೆಳುವಾದ, ಹದವಾದ ಬೆಳ್ಳನೆಯ ಹಿಟ್ಟನ್ನು ಸೌಟಿನಲ್ಲಿ ಸುರಿದು, ಇನ್ನೊಂದು ಕೈಯಲ್ಲಿರುವ ಮಡಚಿದ ಬಾಳೆಲೆ ಸೀಳಿನಿಂದ ಸರಸರನೆ ವೃತ್ತಾಕಾರವಾಗಿ ಹರಡುವುದೇ ಒಂದು ಕೌಶಲ್ಯ. ತಕ್ಷಣವೇ ಮುಚ್ಚಳವನ್ನು ಮುಚ್ಚಿ ಅರೆಕ್ಷಣದಲ್ಲಿ ಮತ್ತೆ ಮುಚ್ಚಳ ತೆಗೆದರೆ ಸಾಕು, ದೋಸೆಯನ್ನು ತೆಗೆಯಲು ಮಗುಚುವ ಕೈ ಕೂಡಾ ಬೇಡ, ತಾನಾಗೇ ಗರಿಗರಿಯಾಗಿ ಮೇಲೆದ್ದು ಬರುತ್ತದೆ ಈ ತೆಳ್ಳೇವು ಎಂಬ ಶಿರಸಿಯ ಹವ್ಯಕರ ಮನೆಗಳ ಬೆಳಗಿನ ಕಾಯಂ ತಿಂಡಿ; ಪಟ್ಟಣಿಗರ ಬಾಯಲ್ಲಿ ನಲಿದಾಡುವ ಮೊಗೆಕಾಯಿ ಪೇಪರ್‌ ದೋಸೆ.

ಈ ತಿಂಡಿಯ ಹುಟ್ಟು ಯಾವಾಗಾಯ್ತೋ ಗೊತ್ತಿಲ್ಲ, ಅಜ್ಜ, ಮುತ್ತಜ್ಜರು ಕೂಡಾ ಬೆಳಿಗ್ಗೆ ಏಳು ಗಂಟೆಗೆ ‘ಆಸರಿಗೆ’ಗೆ ಕೂತು ಸಲೀಸಾಗಿ 7–8 ಬಿಸಿಬಿಸಿ ತೆಳ್ಳೇವುಗಳನ್ನು ಜೋನಿ ಬೆಲ್ಲ– ಹರಳು ತುಪ್ಪದ ಮಿಶ್ರಣ, ಮಿಡಿ ಉಪ್ಪಿನಕಾಯಿ ರಸ– ಕೊಬ್ಬರಿ ಎಣ್ಣೆ, ಸೀಸನ್ನಿನಲ್ಲಿ ಆಪೂಸು ಮಾವಿನ ಹಣ್ಣಿನ ರಸಾಯನದಲ್ಲಿ ಅದ್ದಿ ಮೆದ್ದವರೇ. ಈಗಿನ ಉಪ್ಪಿಟ್ಟು, ಬಾತ್‌ಗಳ ಕಾಲದಲ್ಲೂ ಹೆಚ್ಚು ಕಡಿಮೆ ನಿತ್ಯವೂ ಈ ತೆಳ್ಳೇವು ಬಾಳೆಲೆಯ ಮೇಲೆ ಬಿದ್ದರೂ ಹಿರಿ ತಲೆಗಳಿಗೆ ಬೇಸರವಿಲ್ಲ. ಮೂರೇ ಮೂರು ತಿಂದರೂ ಸಾಕು, ಮಧ್ಯಾಹ್ನ ಒಂದು ಗಂಟೆಯವರಿಗೆ ಹೊಟ್ಟೆಯಲ್ಲಿ ತಾಳ ಏಳದು ಎಂಬ ಖಾತರಿ.

ಬೇಕಾಗುವ ಸಾಮಗ್ರಿಯೂ ಕಡಿಮೆಯೇ. ಮೂರು ಲೋಟ ಅಕ್ಕಿಗೆ ಒಂದು ಸಾಧಾರಣ ಗಾತ್ರದ ಮೊಗೆಕಾಯಿ (ಬಣ್ಣದ ಸೌತೆಕಾಯಿ) ಅಥವಾ ಮುಳ್ಳು ಸೌತೆಕಾಯಿ ಇದ್ದರೆ ಸಾಕು. ಹಿಂದೆ ಒರಳುಕಲ್ಲಿನ ಕಾಲದಲ್ಲಿ, ಅವಿಭಕ್ತ ಕುಟುಂಬಗಳ ಗೌಜಿಯಿದ್ದಾಗ ಕೆಜಿ, ಎರಡು ಕೆಜಿ ಅಕ್ಕಿ ನೆನೆ ಹಾಕಬೇಕಿತ್ತು. ಬೇಸಿಗೆಯಲ್ಲಿ ವರ್ಷಕ್ಕಾಗುವಷ್ಟು ಮೊಗೆಕಾಯಿಗಳನ್ನು ಗದ್ದೆಯಲ್ಲಿ ಬೆಳೆದು ಮನೆಯ ಮೇಲಿನ ಸೂರಿಗೆ ಕಟ್ಟಿಡುತ್ತಿದ್ದರು. ಮಧ್ಯಾಹ್ನ ಊಟವಾದ ಕೂಡಲೇ ಅಕ್ಕಿ ನೆನೆಸಿ ಸಂಜೆ ಒರಳುಕಲ್ಲಿನಲ್ಲಿ ಅರೆಯುವುದು ನಿತ್ಯದ ಕೆಲಸದ ಒಂದು ಭಾಗವೇ ಆಗಿತ್ತು. ಅಮ್ಮಂದಿರು ಗಾಜಿನ ಬಳೆಗಳ ಕಿಂಕಿಣಿ ನಾದದೊಂದಿಗೆ ಹಳೆಯ ಹಾಡು ಹಾಡುತ್ತ ರುಬ್ಬುವ ಆಯಾಸ ಮರೆಯುತ್ತಿದ್ದರು.

ADVERTISEMENT

ಆದರೀಗ ಕೆಜಿ ಅಕ್ಕಿ ಒಂದೆರಡು ಲೋಟಗಳಿಗೆ ಇಳಿದಿದೆ. ರಾತ್ರಿ ನೆನೆಹಾಕಿ ಬೆಳಿಗ್ಗೆ ಮೊಗೆಕಾಯಿ ಹೋಳುಗಳೊಂದಿಗೆ ಮಿಕ್ಸರ್‌, ಗ್ರೈಂಡರ್‌ನಲ್ಲಿ ನುಣ್ಣಗೆ ಅರೆದರಾಯಿತು. ಸ್ವಲ್ಪ ಉಪ್ಪು ಸೇರಿಸಿ ಕಾದ ಕಬ್ಬಿಣದ ಹೆಂಚಿನ ಮೇಲೆ ಸುರಿದ ಹಿಟ್ಟನ್ನು ಬಾಳೆಲೆಯಿಂದ (ಬಾಳೆಲೆ ಸೀಳು ಸಿಗದಿದ್ದರೆ ಹಳೆಯ ಕ್ರೆಡಿಟ್‌ ಕಾರ್ಡನ್ನೂ ಬಳಸಬಹುದು!) ಸರಸರನೆ ವೃತ್ತಾಕಾರವಾಗಿ, ತೆಳ್ಳಗಾಗಿ ಸವರುವುದೂ ಒಂದು ಕಲೆಯೇ. ಮನೆಯ ಹೊಸ್ತಿಲು ತುಳಿದು ಬಂದ ಹೊಸ ಸೊಸೆಗೆ ತೆಳ್ಳೇವು ಮಾಡಲು ಬರಲ್ಲ ಎಂಬ ಸುದ್ದಿಯನ್ನು ಆಚೀಚೆ ಮನೆಯ ಹೆಣ್ಣುಮಕ್ಕಳು ಗಾಸಿಪ್‌ ಮಾಡಿಕೊಂಡು ಸವಿದಿದ್ದೂ ಇದೆ.

ಈ ತೆಳ್ಳೇವಿಗೆ ಎಣ್ಣೆಯ ಸಾಂಗತ್ಯವೂ ಬೇಕಿಲ್ಲ. ಮೊದಲ ತೆಳ್ಳೇವು ಎರೆಯುವ ಮುನ್ನ ಹೆಂಚಿನ ಮೇಲೆ ಒಂದೆರಡು ಹನಿ ಎಣ್ಣೆ ಹಾಕಿ ಇನ್ನೊಂದು ಮಡಿಸಿದ ಬಾಳೆಲೆ (ಚುಟ್ಟಿ)ಯಿಂದಲೋ, ಸೌತೆಕಾಯಿ ಚೂರಿನಿಂದಲೋ ಸವರಿದರೆ ಸಾಕು, ಗರಿಗರಿಯಾಗಿ ಮೇಲೇಳಲು. ಮೇಲೆದ್ದ ತೆಳ್ಳೇವನ್ನು ತ್ರಿಕೋನಾಕಾರದಲ್ಲಿ ಮಡಚಿ ಕಾದು ಕುಳಿತವರ ಬಾಳೆಲೆಗೋ, ಪ್ಲೇಟಿಗೋ ಹಾಕಿದರೆ ಮೆದ್ದವರ ನಾಲಿಗೆಗೇ ಗೊತ್ತು ಅದರ ಸವಿ. ಮೊಗೆಕಾಯಿ ಅಥವಾ ಸೌತೆಕಾಯಿಯ ಪರಿಮಳದ ತೆಳ್ಳೇವಿಗೆ ಜೊತೆ ನೀಡಲು ತೆಂಗಿನಕಾಯಿ ಚಟ್ನಿ, ಜೋನಿ ಬೆಲ್ಲ– ತುಪ್ಪದ ಮಿಶ್ರಣ, ಕೊನೆಗೆ ಏನಿಲ್ಲವೆಂದರೂ ಅಪ್ಪೆ ಮಿಡಿ ಉಪ್ಪಿನಕಾಯಿ ಇದ್ದೇ ಇರುತ್ತದೆ. ಆದರೆ ಈ ತೆಳ್ಳೇವು ಮಾತ್ರ ಉತ್ತರ ಕನ್ನಡದ ಶಿರಸಿ, ಯಲ್ಲಾಪುರವನ್ನು ಬಿಟ್ಟು ಆಚೆಗಿನ ಸಿದ್ದಾಪುರಕ್ಕೂ ಕಾಲಿಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.