ADVERTISEMENT

ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ

ಚಿಕ್ಕ ರಾಮು
Published 17 ಫೆಬ್ರುವರಿ 2019, 20:00 IST
Last Updated 17 ಫೆಬ್ರುವರಿ 2019, 20:00 IST
ಹೇರೋಹಳ್ಳಿ ಜಾತ್ರೆ
ಹೇರೋಹಳ್ಳಿ ಜಾತ್ರೆ   

ನಗರದ ಹೊರವಲಯವಾದ ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ಹೇರೋಹಳ್ಳಿ ಮತ್ತು ಅದರ ಸುತ್ತಲಿನ ಗ್ರಾಮಗಳು, ಬಡಾವಣೆಯ ನಿವಾಸಿಗಳಿಗೆ ಸೋಮವಾರದಿಂದ ಮೂರು ದಿನ ಹಬ್ಬದ ವಾತಾವರಣ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ ಗ್ರಾಮೀಣ ಸೊಗಡನ್ನು ಉಳಿಸಿಕೊಂಡು ಬಂದಿದೆ.

ಬ್ರಹ್ಮರಥೋತ್ಸವ ಅಂಗವಾಗಿ ಹೇರೋಹಳ್ಳಿ ಹಾಗೂ ಸುತ್ತಮುತ್ತಲಿನ ಬಡಾವಣೆಗಳು ತಳಿರು ತೋರಣಗಳಿಂದ ಸಿಂಗಾರಗೊಂಡಿವೆ. ಕಟ್ಟಡಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿವೆ. ಇಡೀ ಹಳ್ಳಿ ನವ ವಧುವಿನಂತೆ ಸಿಂಗಾರಗೊಂಡಿದೆ.

ಸೋಮವಾರ (ಫೆ 18) ರಥದ ಪುಣ್ಯಹ, ವಿಶೇಷ ಪೂಜೆಗಳು ನಡೆಯಲಿವೆ. ಸಂಜೆ 5.30ಕ್ಕೆ ನಂದಿ ನವಗ್ರಹ ಆರಾಧನೆ, ಅಂಕುರಾರ್ಪಣೆ, ಧ್ವಜಾರೋಹಣ, ರಥ ಅಂಕಪೂಜೆ, ಕಳಸ ಸ್ಥಾಪನೆ. ಸಂಜೆ 6 ಗಂಟೆಗೆ ಕಡಬಗೆರೆ ಶ್ರೀನಿವಾಸ್ ಮತ್ತು ತಂಡದಿಂದ ಜಾನಪದ ಹಾಸ್ಯ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ.

ADVERTISEMENT

ಮಂಗಳವಾರ ಮುಂಜಾನೆ ಅಭಿಷೇಕ, ಹೋಮ, ಹವನಗಳು, ನಡೆಯಲಿದ್ದು, 10 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ವಾದ್ಯಗೋಷ್ಠಿ, ಮೊಬೈಲ್ ಆರ್ಕೆಸ್ಟ್ರಾ ನಡೆಯಲಿದ್ದು ಜನರನ್ನು ರಂಜಿಸಲಿವೆ.

ರಥೋತ್ಸವ ಸಂದರ್ಭದಲ್ಲಿ ಯಕ್ಷಗಾನ, ವೀರಗಾಸೆ, ಡೊಳ್ಳುಕುಣಿತ, ಮಹಿಳಾ ವೀರಗಾಸೆ, ಗಾರುಡಿಗೊಂಬೆ, ಪೂಜಾಕುಣಿತ, ಮಹಿಳೆಯರ ಪೂಜಾಕುಣಿತ, ಕಂಸಾಳೆ, ಸೋಮನ ಕುಣಿತ, ಚಂಡೇವಾದ್ಯ, ಕುಂಭ ಕಹಳೆ, ರಂಡೋಲು, ಕೀಲು ಕುದುರೆ, ಗೊರವನ ಕುಣಿತ, ಸೇರಿದಂತೆ ಹಲವಾರು ಗ್ರಾಮೀಣ ಕಲೆಗಳ ಪ್ರದರ್ಶನ ರಥೋತ್ಸವಕ್ಕೆ ಮೆರಗನ್ನು ನೀಡಲಿವೆ. ಭಕ್ತರಿಗೆ ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ ಇರುತ್ತದೆ. ಗ್ರಾಮಸ್ಥರು ತಮ್ಮ ಮನೆಯ ಮುಂದೆ ಮಜ್ಜಿಗೆ ಕೋಸಂಬರಿ, ಪಾನಕ ವಿತರಣೆ ಮಾಡುವ ಮೂಲಕ ಭಕ್ತರ ಬಾಯಾರಿಕೆ ನೀಗಿಸುವರು. ಸಂಜೆ 7 ಗಂಟೆಗೆ ಆಂಜನೇಯಸ್ವಾಮಿ ದೇವರಿಗೆ ವಿದ್ಯುತ್ ಪಲ್ಲಕ್ಕಿ ಉತ್ಸವ ಆರ್ಕೆಸ್ಟ್ರಾ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ ನಡೆಯಲಿವೆ. ಹೇರೋಹಳ್ಳಿ ಆಂಜನೇಯಸ್ವಾಮಿ ದೇವಾಯಲಕ್ಕೆ 200 ವರ್ಷಗಳ ಇತಿಹಾಸವಿದ್ದು 101 ಕಂಬಗಳಿಂದ ನಿರ್ಮಿತವಾಗಿರುವುದು ಈ ದೇವಸ್ಥಾನದ ಒಂದು ವಿಶೇಷ.

ಫೆಬ್ರುವರಿ 20ರ ಬುಧವಾರ ವಸಂತೋತ್ಸವ ಸಂಜೆ 7 ಗಂಟೆಗೆ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಈ ವೇಳೆ ಪಟಾಕಿ ಸಿಡಿಸುವುದರ ಜತೆಗೆ ಆಕಾಶದಲ್ಲಿ ಬಾಣ ಬಿರುಸುಗಳ ಚಿತ್ತಾರ ಮೂಡಿಸಲಾಗುತ್ತದೆ. ಗುರುರಾಜಲು ನಾಯ್ಡು ಪುತ್ರಿ ಶೀಲಾನಾಯ್ಡು ಅವರಿಂದ ಹರಿಕಥೆಯನ್ನೂ ಹಮ್ಮಿಕೊಳ್ಳಲಾಗಿದೆ.

ಉತ್ಸವ ಸಮಿತಿಯ ಸಂಚಾಲಕ ಎಚ್.ಎಲ್.ಸುರೇಶ್ ಮಾತನಾಡಿ, ಪ್ರತಿವರ್ಷ ರಥೋತ್ಸವ ನಡೆದರೆ ಮಳೆ ಬೆಳೆ ಚೆನ್ನಾಗಿ ಆಗುತ್ತದೆ. ಜಾನುವಾರುಗಳಿಗೆ ನೀರಿನ ತೊಂದರೆ ಇರುವುದಿಲ್ಲ. ಕೆರೆಗಳು ತುಂಬಿ ತುಳುಕುತ್ತವೆ. ರಥದ ಕಳಸಕ್ಕೆ ದವನ ಸಮೇತ ಬಾಳೆಹಣ್ಣು ಹೊಡೆದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ಪ್ರತೀತಿಯು ಅಂದಿನಿಂದ ಇಂದಿನವರೆಗೆ ನಡೆದು ಬಂದಿರುತ್ತದೆ ಎನ್ನುತ್ತಾರೆ. ಬ್ರಹ್ಮರಥೋತ್ಸವ ವಿವಿಧೆಡೆಯಿಂದ ಸಹಸ್ರಾರು ಜನರು ಪಾಲ್ಗೊಳ್ಳುತ್ತಾರೆ.

ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ ಗ್ರಾಮೀಣ ಮೂಲ ಪರಂಪರೆ ಉಳಿಯಬೇಕು. ನಮ್ಮ ಯುವ ಜನಾಂಗ ಗ್ರಾಮೀಣ ಸಂಸ್ಕೃತಿ ಕಲೆ, ಸಾಹಿತ್ಯ, ಪರಂಪರೆ ಮರೆಯಬಾರದು ಎಂಬ ಉದ್ದೇಶದಿಂದ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಜಾತ್ರೆ, ರಥೋತ್ಸವ, ದೇವರ ಉತ್ಸವಗಳಿಗೆ ಸಂಪೂರ್ಣ ಸಹಕಾರ ನೀಡಿಕೊಂಡು ಬಂದಿದ್ದೇನೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.