ADVERTISEMENT

ಪ್ರಬಂಧ | ಅಪರಿಚಿತ ನೆಂಟ

ಹೀರಾ ರಮಾನಂದ್‌
Published 29 ಮಾರ್ಚ್ 2020, 1:59 IST
Last Updated 29 ಮಾರ್ಚ್ 2020, 1:59 IST
ಕಲೆ: ಭಾವು ಪತ್ತಾರ್‌
ಕಲೆ: ಭಾವು ಪತ್ತಾರ್‌   

ಕಾಲೇಜು ಮುಗಿದ ನಂತರ ಕೆಲಸಕ್ಕಾಗಿ ಪತ್ರಿಕೆಗಳನ್ನು ತರಿಸಿ ಹುಡುಕಾಡಿ ಸರಿ ಹೊಂದುವಂತಹ ಹಲವು ಕೆಲಸಗಳಿಗೆ ಅರ್ಜಿ ಹಾಕಿದೆ. ಅರ್ಜಿ ಹಾಕಿದ ಒಂದು ತಿಂಗಳೊಳಗೆ ನನಗೆ ಬ್ಯಾಂಕಿನಿಂದ ಕಾಲ್‌ಲೆಟರ್‌ ಬಂತು. ನನಗಾದ ಸಂತೋಷ ಹೇಳತೀರದು. ಎರಡು ತಿಂಗಳೊಳಗೆ ನಾನು ಬೆಂಗಳೂರಿಗೆ ಬಂದು ಬ್ಯಾಂಕಿಗೆ ಸೇರಬೇಕಿತ್ತು. ಎಲ್ಲಾ ತರಹದ ತಯಾರಿಯೂ ಆಯಿತು. ಮಂಗಳೂರಿನಿಂದ ರೈಲಿನಲ್ಲಿ ಬೆಂಗಳೂರಿಗೆ ಹಗಲು ಪ್ರಯಾಣ. ಬೆಳಿಗ್ಗೆಯೇ ನನ್ನನ್ನು ಬೀಳ್ಕೊಡಲು ಬಂದವರ ಎಲ್ಲರ ಕಣ್ಣಂಚಿನಲ್ಲಿ ಆನಂದಭಾಷ್ಪ. ನನಗಂತೂ ಅಮ್ಮನನ್ನು ಬಿಟ್ಟು ಹೋಗುವ ಮನಸ್ಸೇ ಇರಲಿಲ್ಲ.

ರೈಲು ಹೊರಟ ಬಳಿಕ ಗಮನಿಸಿದರೆ, ನಾನಿದ್ದ ರೈಲು ಬೋಗಿಯಲ್ಲಿ ಬರೀ ಗಂಡಸರು. ನಾನೊಬ್ಬಳೇ ಹುಡುಗಿ. ಆಗ 20 ತಾಸುಗಳ ಪ್ರಯಾಣ. ಹೇಗಪ್ಪಾ ಸುಧಾರಿಸಿಕೊಂಡು ಹೋಗುವುದು.. ಎಂಬ ಯೋಚನೆಯಲ್ಲಿ ನನಗೆ ಕುಳಿತಲ್ಲೇ ನಿದ್ದೆ ಆವರಿಸಿದ್ದು ಗೊತ್ತಾಗಲೇ ಇಲ್ಲ. ಎಷ್ಟೋ ಹೊತ್ತಿನ ಬಳಿಕ ಹಾಸನ ಬಂದಾಗ ಎಚ್ಚರವಾಯಿತು. ಎದುರು ಕುಳಿತ ಯುವಕ ನನ್ನನ್ನೇ ಗಮನಿಸುತ್ತಿದ್ದ. ನಾನು ಸಂಕೋಚದಿಂದ ಸುಮ್ಮನೆ ತಲೆ ತಗ್ಗಿಸಿ ಕೂತೆ. ನಿಲ್ದಾಣದಲ್ಲಿ ಎಲ್ಲರೂ ಕಾಫಿ ಕುಡಿಯುವುದನ್ನು ನೋಡಿದಾಗ ನನಗೂ ಕುಡಿಯ ಬೇಕು ಎಂದು ಎನಿಸಿದರೂ ಒಬ್ಬಳೇ ಇಳಿದು ಹೋಗುವಷ್ಟು ಧೈರ್ಯ ನನಗಿರಲಿಲ್ಲ. ನನ್ನ ಪೆಚ್ಚಾದ ಮುಖ ನೋಡಿ ಎದುರು ಕೂತ ಯುವಕನು ‘ಹಲೋ, ನಾನು ಶ್ರೀಪತಿ ಬೆಂಗಳೂರಿಗೆ ಹೋಗುತ್ತಿದ್ದೇನೆ. ನಿಮ್ಮ ಹೆಸರು?’ ಎಂದು ವಿಚಾರಿಸಿದ. ನಾನು ಹೆಸರು ಹೇಳಿ ನಾನೂ ಬೆಂಗಳೂರಿಗೆ ಹೋಗುವುದು ಎಂದೆ. ‘ಕಾಫಿ ಕುಡಿಯುತ್ತಿರಾ?’ ಎಂದಾತ ಕೇಳಿದಾಗ, ಮನೆಯಲ್ಲಿ ಅಮ್ಮ ಮಾಡುವ ಕಾಫಿಯ ವಾಸನೆ ನೆನಪಾಗಿ ಹೂಂ ಎಂದೆ. ಆತ ಲಗುಬಗೆಯಿಂದ ಹೋಗಿ ಕಾಫಿ ತಂದುಕೊಟ್ಟ. ಅನಂತರ ಪ್ರತಿ ನಿಲ್ದಾಣದಲ್ಲೂ ನನಗೆ ಊಟ, ತಿಂಡಿ, ನೀರು ಎಲ್ಲ ಅವನದ್ದೇ ಸೇವೆ.

ಏನೊಂದೂ ಮಾತನಾಡದೇ ಆತ ಇಷ್ಟೊಂದು ಸಹಾಯ ಮಾಡುವುದನ್ನು ಕಂಡು ಮನಸ್ಸಿನಲ್ಲೇ ಅವನನ್ನು ವಂದಿಸಿದೆ. ಆದರೆ ಹೆಚ್ಚು ಮಾತನಾಡುವುದು ನನಗೂ ಸರಿಕಾಣಲಿಲ್ಲ. ಹಾಗೂ ಹೀಗೂ ಬೆಂಗಳೂರು ಬರುವ ಹೊತ್ತು. ಪಕ್ಕದ ಬೋಗಿಯಲ್ಲಿ ಯಾರೋ ಕಿರುಚಿದ ಹಾಗಾಯಿತು. ಎಲ್ಲರೂ ಆ ಕಡೆಗೆ ಧಾವಿಸಿದರು. ಎದುರು ಕುಳಿತ ಯುವಕ ಮಾತ್ರ ಅಲ್ಲಿಂದ ಕದಲಲೇ ಇಲ್ಲ. ಸ್ವಲ್ಪ ಹೊತ್ತಿನ ನಂತರ, ಅತ್ತ ಹೋದವರು ಬಂದು, ‘ಪಕ್ಕದ ಬೋಗಿಯಲ್ಲಿ ಕಳ್ಳನೊಬ್ಬ ಒಬ್ಬ ಪ್ರಯಾಣಿಕರ ಪರ್ಸ್ ಹಾಗೂ ಸೂಟ್‌ಕೇಸ್ ತಗೊಂಡು ಪಲಾಯನ ಮಾಡಿದ್ದಾನೆ’ ಎಂದು ಮಾತನಾಡುವುದು ಕೇಳಿಸಿತು. ನನಗೆ ಒಮ್ಮೆಲೆ ಭಯ ಶುರುವಾಯಿತು.

ADVERTISEMENT

ಬೆಂಗಳೂರು ಬಂದಾಗ ಕತ್ತಲಾಗಿತ್ತು. ನಿಲ್ದಾಣಕ್ಕೆ ರೈಲು ಬಂದಿದ್ದೇ ತಡ, ಎಲ್ಲರೂ ತರಾತುರಿಯಿಂದ ಇಳಿಯತೊಡಗಿದರು. ನಾನು ಸೀಟಿನ ಕೆಳಗೆ ಇಟ್ಟಿದ್ದ ನನ್ನಸೂಟ್‌ಕೇಸ್ ತೆಗೆಯಲು ಹೊರಟಾಗ ಅದಕ್ಕೆ ಚೈನ್ ಹಾಕಿ ಬೀಗ ಹಾಕಿತ್ತು. ಗಾಬರಿಯಿಂದ ಎಳೆಯತೊಡಗಿದೆ. ಆ ಯುವಕ ‘ಮೇಡಂ, ಭಯ ಬೇಡ. ಈ ರೈಲಿನಲ್ಲಿ ನಾನು ಯಾವಾಗಲೂ ಓಡಾಡುವವನು. ಹಲವು ಸಲ ಇದೇ ತರಹದ ಕಳ್ಳತನ ಆಗಿದೆ. ನೀವೋಬ್ಬರೇ ಇದ್ದೀರಾ ಅಲ್ವಾ. ಅದಕ್ಕೆ ನೀವು ನಿದ್ದೆ ಮಾಡಿದ್ದಾಗ ನಾನೇ ನಿಮ್ಮ ಲಗ್ಗೇಜ್‌ಗೆ ಚೈನ್ ಹಾಕಿ ಬೀಗ ಹಾಕಿದ್ದೇನೆ. ಇದೋ ನೋಡಿ..’ ಎಂದು ಕೀಯಿಂದ ಬೀಗ ತೆಗೆದು ಕೊಟ್ಟ.

ರೈಲುನಿಲ್ದಾಣದಲ್ಲಿ ಇಳಿದು ಪ್ರೀಪೇಡ್ ಆಟೋ ಸ್ಟ್ಯಾಂಡ್ ಬಳಿಗೆ ಆತನೂ ನನ್ನೊಡನೆ ಬಂದು, ಸಾಲಿನಲ್ಲಿ ನಿಂತ. ನಾನು ಜಯನಗರ ಎಂದಾಗ ಅವನೇ ಒಂದು ರೂಪಾಯಿ ನಾಣ್ಯ ಇಟ್ಟು ರಸೀತಿ ಕೊಟ್ಟು, ‘ಹುಷಾರಾಗಿ ಹೋಗಿ’ ಎಂದು ನಸುನಕ್ಕ. ಈ ಘಟನೆ ನಡೆದು ಎಷ್ಟೊಂದು ವರ್ಷಗಳಾದವು! ನಾನು ಹಲವು ವರ್ಷಗಳ ಕಾಲ ಆ ನೆನಪಿನಲ್ಲೇ ಬ್ಯಾಂಕ್‌ಗೆ ಬರುವ ಗ್ರಾಹಕರನ್ನು ಗಮನಿಸುತ್ತಿದ್ದೆ. ಎಂದಾದರೂ ಆ ಯುವಕ ಬ್ಯಾಂಕಿಗೆ ಬರಬಹುದು ಎಂಬ ನಿರೀಕ್ಷೆ. ಅವತ್ತು ಆ ಯುವಕ ಇಲ್ಲದಿದ್ದಿದ್ದರೆ ಏನಾದರೂ ಅನಾಹುತ ಆಗುತ್ತಿತ್ತೋ ಏನೋ ಎನ್ನುವ ಆಲೋಚನೆ ಈಗಲೂ ನನಗೆ ಬರುತ್ತದೆ. ನಿಜವಾಗಲೂ ಅವತ್ತಿನ ಭಯದ ಸಮಯದಲ್ಲಿ ಆ ಯುವಕ ಎಷ್ಟು ಕಾಳಜಿ ವಹಿಸಿ ನನ್ನ ಬೇಕು ಬೇಡಗಳನ್ನು ನೋಡಿಕೊಂಡ; ಅದೂ ಯಾವ ಸ್ವಾರ್ಥವೂ ಇಲ್ಲದೆ! ಅವನಿಗೊಂದು ಥ್ಯಾಂಕ್ಸ್‌ ಹೇಳಿದ್ದೂ ನನಗೆ ನೆನಪಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.