ADVERTISEMENT

ಮಿಟ್ಟಿಯಲ್ಲರಳಿದ ಕರಕುಶಲ ಕಲೆ...

ಸ್ವರೂಪಾನಂದ ಎಂ.ಕೊಟ್ಟೂರು
Published 15 ಅಕ್ಟೋಬರ್ 2018, 19:31 IST
Last Updated 15 ಅಕ್ಟೋಬರ್ 2018, 19:31 IST
ಚಿತ್ರಗಳು: ಲೇಖರವು
ಚಿತ್ರಗಳು: ಲೇಖರವು   

ಹಣತೆ ತರಬೇಕು... ಸ್ವಲ್ಪ ದಿನ ಬಿಟ್ರೆ ಜನ್ರು ಆರಿಸಿ ಬಿಟ್ಟಿದ್ದನ್ನು ತರಬೇಕಷ್ಟೆ... ಎಂದ ಗೆಳೆಯ ಬಳ್ಳಾರಿಯ ಮಲ್ಲಿಕಾರ್ಜುನ.

‘ದೀಪಾವಳಿ ಇನ್ನೂ ದೂರ ಐತಿ. ಈಗಲೇ ಯಾಕೆ ಅದರ ಚಿಂತೆ. ಬೇಜ್ಜಾನ್ ಸಿಗ್ತಾವೆ’ ಎಂದೆ. ಅದಕ್ಕೆ ಆತ ‘ಅವು ನಮ್ಮ ಕಡೆ ಸಿಗೋ ದೀಪಗಳಲ್ಲಪ್ಪ. ರಾಜಸ್ಥಾನಿ ಹಣತೆಗಳು. ಸೂಪರ್ ಡಿಸೈನ್, ತುಂಬಾ ವೆರೈಟಿಗಳು, ಬಣ್ಣಗಳು. ನೋಡೋದಕ್ಕೆ ಎರಡು ಕಣ್ಣು ಸಾಲದು. ನೋಡಂಗಿದ್ರೆ ನಡಿ ನನ್ನೊಂದಿಗೆ’ ಎನ್ನುತ್ತಾ ಆತುರ ಆತುರವಾಗಿ ಕರೆದೊಯ್ದ.

ನಾವಿಬ್ಬರೂ ಎಸ್‌ಪಿ ಸರ್ಕಲ್ ಹತ್ತಿರ ಹೋಗಿ ನಿಂತಾಗ, ಸೆಂಟ್ರೆಲ್ ಜೈಲ್ ಗೋಡೆಗೆ ಅಂಟಿದ್ದ ಖಾಲಿ ಜಾಗದಲ್ಲಿ ಎರಡು ಗೂಟ ಹುಗಿದು ಕಟ್ಟಿದ ಹಗ್ಗಕ್ಕೆ ನೇತು ಹಾಕಿದ್ದ ಲಾಟಿನ್, ಘಂಟೆ ಸರಗಳು, ವೈವಿಧ್ಯಮಯ ದೀಪಗಳು ಕಂಡವು. ಹತ್ತಿರ ಹೋಗಿ ನೋಡಿದರೆ ನೆಲದ ಮೇಲೆಲ್ಲಾ ರಂಗೋಲಿ ಇಟ್ಟಂತೆ ಬಣ್ಣದ ದೀಪಗಳು‌.

ADVERTISEMENT

ಎಲ್ಲವನ್ನೂ ನೋಡುತ್ತಾ ಹಗ್ಗದ ಮೇಲೆ ನೇತುಹಾಕಿದ್ದ ಲಾಟೀನು ಕೈಯಲ್ಲಿ ಹಿಡಿದುಕೊಂಡೆ. ಅದರ ಮೇಲ್ಮೈ ಸವರಿ ನೋಡಿದೆ. ‘ಅರೆ, ಇದು ಮಣ್ಣಿನ ಲಾಟೀನು’ ಎಂದು ಅಚ್ಚರಿಪಟ್ಟೆ. ಅದೇ ಅಚ್ಚರಿಯೊಂದಿಗೆ ವ್ಯಾಪಾರಸ್ಥನ ಕಡೆಗೆ ದೃಷ್ಟಿ ಹಾಯಿಸಿದೆ. ‘ದೇಖೋ ಬಯ್ಯಾ ಸಬ್ ಐಟಂ ಮಿಟ್ಟಿ ಮೆ ಬನಾ ಹೈ..’ ಎನ್ನುತ್ತಾ ನನ್ನ ಅಚ್ಚರಿಗೆಲ್ಲ ಒಂದೇ ಸಾಲಿನಲ್ಲಿ ಉತ್ತರಿಸಿದ. ಕನ್ನಡ–ಹಿಂದಿ ಮಿಶ್ರಿತ ಮಾತುಗಳಲ್ಲಿ ವಿವರಿಸುತ್ತಾ, ಮಣ್ಣಿನಿಂದ ಅರಳಿದ ಕಲಾಕೃತಿಗಳ ಲೋಕವನ್ನೇ ತೆರೆದಿಟ್ಟ.

ನಾವಿಬ್ಬರು ಕಲಾಕೃತಿಗಳನ್ನು ಬೆರಗಿನಿಂದ ನೋಡುತ್ತಾ ನಿಂತಿದ್ದರೆ, ಗ್ರಾಹಕರೆಲ್ಲ ಅದು ಬೇಕು, ಇದು ಬೇಕು, ಎನ್ನುತ್ತಾ ಭರ್ಜರಿ ವ್ಯಾಪಾರ ಶುರು ಮಾಡಿದರು. ಆ ವ್ಯಾಪರಸ್ಥರಲ್ಲಿ ಒಬ್ಬ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರೆ, ಮತ್ತೊಬ್ಬ ಇನ್ನೊಂದು ಬದಿಯಲ್ಲಿ ಕುಳಿತು ಕೆಂದು ಬಣ್ಣದ ಕಲಾಕೃತಿಗಳಿಗೆ ಬಣ್ಣ ಹಚ್ಚುತ್ತಾ ಅಂತಿಮ ಸ್ಪರ್ಶ ನೀಡುತ್ತಿದ್ದ.

ಏನುಂಟು.. ಏನಿಲ್ಲ..!
‘ಚೀನಾ ಮಾಲ್‌ಗಳು, ಪಿಂಗಾಣಿ ವಸ್ತುಗಳು, ಎಲೆಕ್ಟ್ರಿಕ್ ದೀಪಗಳ ಅಬ್ಬರದಲ್ಲಿ ಮಣ್ಣಿನ ದೀಪಗಳನ್ನು ಕೇಳೋರು ಯಾರು’ ಎಂಬುದು ನಮ್ಮ ಕುಂಬಾರರ ಅಳಲು. ಅದು ನಿಜವೂ ಇರಬಹುದು. ಆದರೆ, ನಮ್ಮ ಭಾಷೆಯೇ ಗೊತ್ತಿಲ್ಲದವರು, ನೂರಾರು ಮೈಲಿ ದೂರದಿಂದ ಬಂದು ಇಲ್ಲಿಯೇ ದೀಪಗಳನ್ನು ತಯಾರಿಸಿ ಎಷ್ಟು ಬೇಗ ಮಾರಾಟ ಮಾಡುತ್ತಿದ್ದಾರಲ್ಲಾ, ಅವರ ಚಾಕಚಕ್ಯತೆ, ಕೌಶಲ ನಿಜಕ್ಕೂ ನನ್ನನ್ನು ನಿಬ್ಬೆರಗಾಗಿಸಿತು. ಹೀಗೆ ಯೋಚಿಸುತ್ತಿದ್ದಾಗ ವ್ಯಾಪಾರಿ ಹನುಮಾನ್ ಬಿಲ್ಲಾಡ ‘ಗ್ರಾಹಕರಿಗೆ ಒಂದೇ ಮಾಡಲ್, ಡಿಸೈನ್ ಪಸಂದ್ ಆಗಲ್ಲ. ಹೀಗಾಗಿ ನಾವು ಹಂಗಂಗೆ ಮಾಡಲ್ ಛೇಂಜ್ ಮಾಡ್ತೀವಿ, ಮಾರ್ಕೆಟ್ ಮಾಡ್ತೀವಿ’ ಎಂದು ವಿವರಿಸಿದ. ಆ ವಿವರಣೆ ನನ್ನ ಪ್ರಶ್ನೆಗೆ ಉತ್ತರವೂ ಆಗಿತ್ತು.

ಇಷ್ಟಕ್ಕೂ ಈ ವ್ಯಾಪಾರಿಗಳು ವರ್ಷ ಪೂರ್ತಿ ಈ ಕೆಲಸ ಮಾಡಲ್ಲ. ಮಳೆಗಾಲದಲ್ಲಿ ಕೃಷಿ ಕೆಲಸ ಮಾಡುತ್ತಾರೆ. ಉಳಿದ ದಿನಗಳಲ್ಲಿ ಹೊಸ ಹೊಸ ವಿನ್ಯಾಸಗಳ ಬಗ್ಗೆ ಚಿಂತಿಸುತ್ತಾರೆ. ಮಾತ್ರವಲ್ಲ, ಪ್ರಯೋಗ ಮಾಡಿ ನೋಡುತ್ತಾರೆ. ಇಂಥ ಕರಕುಶಲ ತಂತ್ರಗಾರಿಕೆಯ ಫಲದಿಂದ ಬಂದ ಐಡಿಯಾಗಳಿಗೆ ಮೂರ್ತ ರೂಪ ಕೊಟ್ಟು, ಅದರಂತೆ ಅಚ್ಚು ಸಿದ್ಧಪಡಿಸುತ್ತಾರೆ. ಅಚ್ಚಿನಿಂದ ಮಣ್ಣಿನ ಉತ್ಪನ್ನ ಮಾಡಿ, ಅದಕ್ಕೆ ಹೊಂದುವಂತಹ ಬಣ್ಣ ಹಚ್ಚುತ್ತಾರೆ. ಇಷ್ಟೆಲ್ಲ ಸಿದ್ಧತೆಯ ವಿವರಣೆ ನೀಡುವ ವ್ಯಾಪಾರಿ ದಿಲ್‌ಖುಷ್‌’ ಒಂದು ಚೀಜ್ (ವಸ್ತು) ಮಾರ್ಕೆಟ್‌ಗೆ ಬಂದರೆ ಸಾಲದು. ಅದು ಜನರ ದಿಲ್‍ಗೆ ಲಗ್ಗೆ ಇಡಬೇಕು. ಆಗಲೇ ನಮಗೆ ಕಮಾಯಿ ಅಲ್ವಾ’ ಎನ್ನುತ್ತಾ ಮಾರುಕಟ್ಟೆ ಗ್ರಹಿಸುವ ವಿಧಾನವನ್ನು ಹಂಚಿಕೊಳ್ಳುತ್ತಾನೆ.

ಒಂದು ತಿಂಗಳ ವ್ಯಾಪಾರ
ದಸರೆಯಿಂದ ದೀಪಾವಳಿ ನಡುವೆ ಇವರ ವ್ಯಾಪಾರ. ಇದಕ್ಕಾಗಿ ವರ್ಷದಿಂದ ಯೋಜನೆ ರೂಪಿಸಿರುತ್ತಾರೆ. ಸಿದ್ಧಪಡಿಸಿರುವ ಬಣ್ಣ ರಹಿತ ವಸ್ತುಗಳನ್ನು ಲಾರಿಗಳಲ್ಲಿ ತುಂಬಿಕೊಂಡು ಬರುತ್ತಾರೆ. ಲಕ್ಷಾಂತರ ರೂಪಾಯಿ ಮಾಲನ್ನು, ಸಾವಿರಾರು ರೂಪಾಯಿ ಲಾರಿ ಬಾಡಿಗೆ ತೆತ್ತು ತರುತ್ತಾರೆ. ಅಲ್ಲಿಗೆ, ಇವರ ‘ವಹಿವಾಟು’ ಎಷ್ಟು ಪ್ರಮಾಣದಲ್ಲಿರಬಹುದೆಂದು ಅಂದಾಜಿಸಿ ನೋಡಿ. ‘ಬೀಸ್ ಸಾಲ್ ಸೇ ದೀಪಾವಲಿ ಔರ್ ಗರಮ್ ದಿನ್ ಮೆ ವ್ಯಾಪಾರಕ್ಕೆ ಬರ್ತೇವೆ. ಕಬಿ ಬಿ ಮಾಲ್ ಉಳಿದಿಲ್ಲ. ಲಾಸು ಆಗಿಲ್ಲ’ ಎನ್ನುತ್ತಾರೆ ತಂಡದ ಹಿರಿಯ ಸದಸ್ಯೆ ಗುಡ್ಡಿ ದೇವಿ.

ನೆರೆ ರಾಜ್ಯದವರೂ ಬರ್ತಾರೆ
ರಾಜ್ಯದ ವಿವಿಧ ಕಡೆಗಳಲ್ಲಿ ಗಮನಿಸಿದಂತೆ, ಕರಕುಶಲ ವಸ್ತುಗಳ ಮಾರಾಟದಲ್ಲಿ ರಾಜಸ್ಥಾನದಷ್ಟೇ, ಕೇರಳ, ಗುಜರಾತ್, ತಮಿಳುನಾಡು, ಆಂಧ್ರದ ನೂರಾರು ಕುಟುಂಬಗಳು ಪಾಲು ಪಡೆದಿವೆ. ದೀಪಾವಳಿ ವೇಳೆಗೆ ಕರಕುಶಲ ವಸ್ತು, ಬೇಸಿಗೆಯಲ್ಲಿ ಅಂದವಾದ ನೀರಿನ ಮಡಿಕೆಗಳ ಮಾರಾಟ ಮಾಡುತ್ತಾರೆ. ಇವರ ಮಾರಾಟದ ಕೌಶಲ ಗಮನಿಸಿದ ಗೆಳೆಯ ಮಲ್ಲಿಕಾರ್ಜುನ, ‘ಭಾಷೆ ಗೊತ್ತಿರದಿದ್ದರೂ, ಈ ನೆಲದ ಗ್ರಾಹಕರ ಭಾವ ಹಾಗೂ ಅಗತ್ಯಗಳನ್ನು ಅರ್ಥ ಮಾಡಿಕೊಂಡಿರುವ ಇಂಥವರಿಂದ ಮಾತ್ರ ನಮ್ಮ ಸಾಂಪ್ರದಾಯಿಕ ವೃತ್ತಿಗಳನ್ನು ಜೀವಂತವಾಗಿಡಬಹುದು ಅಲ್ವಾ’ ಎಂದ. ಅವನ ಮಾತಿಗೆ ನಾನು ತಲೆ ಅಲ್ಲಾಡಿಸಿದೆ. ಹೀಗೆ ಮಾತನಾಡುತ್ತಲೇ ಗೆಳೆಯ ಮಲ್ಲಿಯ ಜೋಳಿಗೆಯಲ್ಲಿ ನಾನಾ ನಮೂನೆಯ ದೀಪಗಳಿದ್ದವು..!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.