ADVERTISEMENT

ಸಂಗೀತದ ಸಂಪತ್ತು ಆನೂರರಿಗೆ ಅರವತ್ತು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 23:30 IST
Last Updated 22 ಮಾರ್ಚ್ 2025, 23:30 IST
ಆನೂರು ಅನಂತಕೃಷ್ಣ ಶರ್ಮ
ಆನೂರು ಅನಂತಕೃಷ್ಣ ಶರ್ಮ   

ಆನೂರು ಶಿವು ಅಂದಾಗ.ತುಂಬು ಗಡ್ಡ, ಲಲಾಟದ ಮಧ್ಯೆ ನಗುವ ಕುಂಕುಮ. ತುಂಬು ತೋಳಿನ ಜುಬ್ಬ, ಪಂಚೆ. ಅದರೊಳಗೊಂದು ಅಜಾನುಬಾಹುದೇಹ. ಕೈಯ್ಯ ಬೆರಳುಗಳ ಅಂಚಲ್ಲಿ ಬೋಲುಗಳ ಮಿಡಿತ, ತುಟಿಯಂಚಿನಲಿ ಕೊನ್ನಕ್ಕೋಲು. ತಲೆಯಲ್ಲಿ ನೂರಾರು ಲಯಕಾರಿ ಲೆಕ್ಕಾಚಾರದ ವ್ಯಕ್ತಿ ಕಣ್ಣಮುಂದೆ ಬಂದು ಬಿಡುತ್ತಾರೆ.

ಇವರ ದೇಹ ತೂಕದ ಐವತ್ತೋ, ನೂರೋ ಪಟ್ಟು ಪಾಂಡಿತ್ಯ. ವೇದಿಕೆ ಹೊರತಾಗಿ ಅದನ್ನು ಯಾವತ್ತಿಗೂ, ಎಲ್ಲಿಯೂ ತೋರ್ಪಡಿಸಿಕೊಳ್ಳದ ಸದ್ಗುಣ. ವಿದ್ವಾನ್‌, ಪಂಡಿತ್- ಹೀಗೆಲ್ಲಾ ಕರೆದಾಗಲಂತೂ ಮುಜುಗರದ ಮುದ್ದೆ ಆಗಿಬಿಡುತ್ತಾರೆ ಈ ಆನೂರು ಅನಂತ ಕೃಷ್ಣಶರ್ಮ. ಇದು ಮೂಲ ಹೆಸರು.

ಶಿವು ಅನ್ನೋದು ಜನಪ್ರಿಯ ನಾಮ.  ಶಿವು ಕೈಯಿಟ್ಟರೆ ನುಡಿಯದ ವಾದ್ಯವಿಲ್ಲ. ಅವರು ನುಡಿಸುವ ವಾದ್ಯಗಳನ್ನು ಸುಮ್ಮನೆ ಲೆಕ್ಕ ಹಾಕೋಣ. ಮೃದಂಗ, ತಬಲ, ತವಿಲ್, ಡೋಲು, ಡೋಲಕ್, ಡೋಲ್ಕಿ, ಪಖ್ವಾಜ್, ಶ್ರೀಖೋಲ್, ಕಾಂಗೋಡ್ರಮ್ಸ್, ಬೋರಾನ್, ಡುಕಿತರಂಗ್, ತಮಟೆ, ಖಂಜಿರ, ದಮಡಿ, ಉಡುಕೆ, ಕರಟವಾದ್ಯ, ನಾದಪುಂಜ, ಶುದ್ಧಮದ್ದಳಂ, ಪಂಬೆ, ನಕಾರ, ಘಟಸಿಂಗಾರಿ… ಅಲ್ಲದೇ ಕೊನ್ನಕ್ಕೋಲ್, ಹಾಡುಗಾರಿಕೆ, ವೀಣೆ, ಪಿಟೀಲು...

ADVERTISEMENT

ವಿಶೇಷವಾಗಿ, ತಬಲ ಮತ್ತು ಮೃದಂಗ. ಎರಡರದ್ದೂ ವೈರುದ್ಯ ನುಡಿಸಾಣಿಕೆ. ಮೃದಂಗದ ಫಿಂಗರಿಂಗೇ ಬೇರೆ, ತಬಲದ ಬೆರಳಾಟವೇ ಬೇರೆ. ಹಾಗೇ ಶ್ರೀಖೋಲ್- ಮೃದಂಗ ಕೂಡ. ಆದರೂ, ಎಲ್ಲವನ್ನೂ ಅದದೇ ಶಾಸ್ತ್ರಚೌಕಟ್ಟಿನಲ್ಲಿ ನುಡಿಸುವ ಸಂಗೀತ ಜಗತ್ತಿನ ಅತ್ಯಪರೂಪ ಏಕೈಕ ಕಲಾವಿದರು ಅಂದರೆ ಈ ಶಿವು.

ಶಾಸ್ತ್ರೀಯ ಸಂಗೀತ ಪರಂಪರೆಯನ್ನು, ಭಜನೆಗಳಿಗೂ, ಭಕ್ತಿ, ಸಿನಿಮಾ, ಫ್ಯೂಷನ್, ತಾಳವಾದ್ಯ, ಜನಪದ, ಸುಗಮ ಸಂಗೀತಕ್ಕೂ ವಿಸ್ತರಿಸಿದ್ದಾರೆ. ಹಾಗಾಗಿ, ಇವೆಲ್ಲದರ ಜೊತೆ ನೃತ್ಯ, ಬ್ಯಾಲೆ ಪ್ರಕಾರಗಳಲ್ಲೂ ಶಿವು ಛಾಪಿದೆ. 

ಶಿವು ಒಂಥರ ಸಂಗೀತ ಸಂತರೇ. ಯಾರೇ ಹೊಸದು ಹಾಡಲಿ, ವಾದ್ಯಗಳನ್ನು ನುಡಿಸಲಿ ಅವರ ಪಾಂಡಿತ್ಯ ಪಕ್ಕಕ್ಕೆ ಇಟ್ಟು ಕೇಳುತ್ತಾರೆ. ಹೊಸತಿದ್ದರೆ ಅವರಿಂದ ಹೆಕ್ಕಿಕೊಳ್ಳುತ್ತಾರೆ. ‘ಇದನ್ನು ಹಿಂಗೆ ಮಾಡ್ಕೊಬಹುದಾ…’ ಅಂತ ವಿನಮ್ರವಾಗಿ ತಿದ್ದುತ್ತಾರೆ. ಮತ್ತೆ ಪುಟ್ಟ ಮಗುವಿನಂತೆ ಅವರನ್ನು  ಆಲಿಸುತ್ತಾರೆ.

ಸಂಗೀತವನ್ನು ಕಲಿಯುವುದು, ಅರಗಿಸಿಕೊಳ್ಳುವುದು, ಸ್ವತಂತ್ರವಾಗಿ ವಿಚಾರ ಮಾಡಿ, ಅದನ್ನು ಮುಂದಿನ ತಲೆಮಾರುಗಳಿಗೆ ಪ್ರತಿಫಲಾಪೇಕ್ಷೆ ಇಲ್ಲದೆ ವ್ರತದಂತೆ ಹಂಚುವ ಬದ್ಧತೆ ತಂದೆ ದಿವಂಗತ ಆನೂರು ರಾಮಕೃಷ್ಣ ಅವರಿಂದ ಬಂದ ಸಂಸ್ಕಾರ. ಇವರ ಶಿಷ್ಯವೃಂದ ಬಹಳ ದೊಡ್ಡದಿದೆ. ಅವರೆಲ್ಲರೂ ಕನಿಷ್ಠ ಮೂರು-ನಾಲ್ಕು ವಾದ್ಯಗಳನ್ನು ನುಡಿಸುವುದರಲ್ಲಿ ‘ಶಿವುಗುಣ’ ಸಂಪನ್ನರು.

ಶಿವು ಕಿವಿಗೆ ಎಂಥದೇ ಶಬ್ದ ಬಿದ್ದರು, ಅದು ಸಂಗೀತವಾಗಿ ಬೆರಳ ತುದಿಗೆ ಬರುತ್ತದೆ. ಯಾವುದೇ ವಾದ್ಯದ ನಾದ ಕೇಳಿಸಿಕೊಂಡರೂ, ಅದರ ಗುಣಧರ್ಮವನ್ನು ಮನದಲ್ಲಿ ಎಣಿಸಿ, ನುಡಿಸುವ ‘ನಾದವೇಧಿ’ ಗುಣವಿದೆ.  

ಶಿವು ಪಾಠ ಮಾಡುವ ಶೈಲಿಯಂತು ಭಿನ್ನ. ಒಂದು ಸಲ ತಮ್ಮ ಶಿಷ್ಯವರ್ಗದೊಂದಿಗೆ ಕಾರಿನಲ್ಲಿ ಜಯನಗರ ಸೌತ್ ಎಂಡ್ ವೃತ್ತಕ್ಕೆ ಬಂದಾಗ ಸಿಗ್ನಲ್ ಬಿತ್ತು. ‘ಅರುಣಾ, 60 ಸೆಕೆಂಡ್ ಗೆ ಒಂದು ತಾಳ ಹಾಕಮ್ಮ’ ಅಂದರು ಶಿವು. ತಕ್ಷಣ ಹಾಕಿ ತೋರಿಸುತ್ತಿದ್ದಂತೆ, ಲಾಲ್‌ಬಾಗ್ ಸಿಗ್ನಲ್‌ಗೆ ಕಾರು ಬಂತು. ಸ್ಟೇರಿಂಗ್ ಮುಂದೆ ಕೈ ಕುಣಿಸಿ ಅಲ್ಲಿ ನೂರಿಪ್ಪತ್ತು ಸೆಕೆಂಡುಗಳಿಗೆ ಮಿಶ್ರಛಾಪಲ್ಲಿ ತಾಳ ಹೆಣೆದಾಗ ಎಲ್ಲರೂ ನಿಬ್ಬೆರಗು. 

ಈಗಲೂ ಶಿವು ಪ್ರತಿದಿನ ತಿಂಡಿ-ಊಟಕ್ಕೆ ಅವರ ಪತ್ನಿ ಪದ್ಮಿನಿ ಅವರಿಗೆ ತರಕಾರಿ ಹೆಚ್ಚಿಕೊಡುವ ರೂಢಿ ಇಟ್ಟುಕೊಂಡಿದ್ದಾರೆ. ಈರುಳ್ಳಿ, ಹುರುಳಿಕಾಯಿ, ಆಲೂಗಡ್ಡೆಗಳ ಎದೆ ಸೀಳುವಾಗಲೂ ಅಲ್ಲೂ ಪ್ರಯೋಗಾತ್ಮಕವಾದ ಲಯ ಹುಡುಕಾಟಿಕೆ ಇದ್ದೇ ಇರುತ್ತದೆ. ಆಂತರಿಕವಾಗಿ ಆವಿಷ್ಕಾರಗೊಳಿಸಿಕೊಳ್ಳುವ ಲಯಗಳನ್ನು ಅವರು ಬಾಹ್ಯಜಗತ್ತಿಗೆ ಎಷ್ಟು ಬೇಕೋ ಅಷ್ಟು ನಿಬ್ಬೆರಗಾಗುವಂತೆ ನೀಡುತ್ತಾರೆ. ಸ್ವತಂತ್ರವಾಗಿ ಸಂಗೀತವನ್ನು ಧ್ಯಾನಿಸಿದರೂ, ಮನೋಸಂಗೀತಕ್ಕೆ ಬೇಲಿ ಹಾಕುವುದು ಬಹಳ ಚೆನ್ನಾಗಿ ಗೊತ್ತು. ಶಿವು ಅವರಿಗೆ ಸಂಗೀತವೇ ಜೀವ; ಅದೇ ಸರ್ವಸ್ವ. ಮನೆಯಲ್ಲಿ ಲೋಟ ಕೆಳಗೆ ಬಿದ್ದ ಸದ್ದಲ್ಲೂ ಲಯವನ್ನೂ ಹುಡುಕುತ್ತಾರೆ. ತೆಂಗಿನ ಚಿಪ್ಪಲ್ಲೂ ಸಂಗೀತ ಹುಟ್ಟಿಸುತ್ತಾರೆ. ಇವರು ಹುಡುಕಾಟಕ್ಕೆ ಎಣೆ ಇಲ್ಲ. ಹಳೇ ಪಾತ್ರೆ, ಅಕ್ಕಿ ಕೇರುವ ಮರ, ಒನಕೆಗಳಲ್ಲಿ ಅಡಗಿರುವ ಲಯದ ಲಾವಣ್ಯವನ್ನು ಜಗತ್ತಿಗೆ ತೋರಿಸಿದ್ದಾರೆ. 
ಹಿಂದೂಸ್ತಾನಿಯ ಲಯಕಾರಿಗಳಾಗಲಿ, ಕರ್ನಾಟಕದ ತನಿಗಳಾಗಲಿ ಇವರಿಗೆ ಸೋದರ ಸಂಬಂಧಿಗಳೇ. ಹಾಗಾಗಿ, ಶಿವು ವೇದಿಕೆಯ ಮೇಲೆ ವಾದ್ಯಗಳು, ಸ್ವರಗಳು, ಬೋಲುಗಳು, ಸೊಲ್ಲುಕಟ್ಟುಗಳೊಂದಿಗೆ ಕೂತು ಸಂಧಾನ ಮಾಡುವ ರೀತಿಯೇ ಅನನ್ಯ.  

ಶಿವು ಯಾವತ್ತಿಗೂ ಸಂಗೀತವನ್ನು ಬಿಕರಿಗೆ ಇಟ್ಟವರಲ್ಲ. ಕಾಸಿಗೆ ತಕ್ಕಂತೆ ಕಜ್ಜಾಯ ಅನ್ನೋದು ಅವರಿಗೆ ತಿಳಿದಿಲ್ಲ ಅನ್ನೋದಕ್ಕೆ ಈ ಘಟನೆ.

ಒಂದು ಸಲ ಶಿವು ಅವರ ತಾಳವಾದ್ಯ ಕಛೇರಿ ಗಾಯನ ಸಮಾಜದಲ್ಲಿ ಏರ್ಪಾಟಾಗಿತ್ತು. ಕಛೇರಿ ಮುಗಿದ ತಕ್ಷಣ ಶಿವು ಗ್ರೀನ್ ರೂಮಿಗೆ ಬಂದು ಕುಳಿತರು. ಅಷ್ಟರಲ್ಲಿ ಆಯೋಜಕರು ಸಂಭಾವನೆಯ ಒಂದು ಕವರ್ ಇವರ ಕೈಗಿತ್ತಿದ್ದರು. ಶಿವು, ಅದನ್ನು ಎಷ್ಟು ಅಂತ ಕೂಡ ಎಣಿಸದೆ, ‘ಬನ್ರಯ್ಯಾ’, ಅಂತ ಒಬ್ಬೊಬ್ಬರೇ ಶಿಷ್ಯಂದಿರನ್ನು ಕರೆದು ‘ಇವತ್ತು ಇಷ್ಟೇ ಕಣೋ.. ಇಟ್ಕೊಳೋ’ ಅಂತ ಕೊಡುತ್ತಿದ್ದರು. ಕವರ್‌ನಲ್ಲಿರುವ ಹಣ ತಳ ಮುಟ್ಟಿದಾಗ ಉಳಿದದ್ದು ಕೇವಲ 500 ರೂಪಾಯಿ. 

‘ನೋಡ್ರೋ, ನಾನು ಇಷ್ಟು ತಗೊಂಡಿದ್ದೀನಿ’ ಅಂತ 500 ರೂಪಾಯಿ ನೋಟು ಎತ್ತಿ ತೋರಿಸಿ ಜೇಬಲ್ಲಿ ಇಟ್ಟುಕೊಂಡರು. ತಕ್ಷಣ, ಶಿಷ್ಯ ವೃಂದ ಓಡಿ ಬಂದು. ‘ಸಾರ್, ಇದು ಇಟ್ಕೊಳಿ’ ಅಂತ ಹಣ ಕೊಡಲು ಮುಂದಾದರೆ, ‘ನೋಡ್ರೋ, ನನಗೆ ದಕ್ಕಿದ್ದು ನನಗೆ, ನಿಮಗೆ ದಕ್ಕಿದ್ದು ನಿಮಗೆ. ಇಟ್ಕೊಳಿ. ಇನ್ನು ಚೆನ್ನಾಗಿ ನುಡಿಸಿ’ ಅಂತ ಹೇಳಿ, ಎದ್ದು ಹೊರಟೇ ಬಿಟ್ಟರು.  ಇಂಥ ಶಿವು ಅವರಿಗೆ ಈಗ 60. ಸಂಗೀತಕ್ಕೆ ವಯಸ್ಸಿನ ಹಂಗಿಲ್ಲ; ಶಿವುಗೂ ಕೂಡ.

ಆನೂರು ಅನಂತಕೃಷ್ಣ ಶರ್ಮ

ಮಾರ್ಚ್‌ 29ಕ್ಕೆ ಅವರು 60ಕ್ಕೆ ಕಾಲಿಡುತ್ತಿದ್ದಾರೆ. ಈ ನೆಪದಲ್ಲಿ ಅವರ ಶಿಷ್ಯರು ಹಾಗೂ ಅಭಿಮಾನಿಗಳು ಗಾಯನ ಸಮಾಜದಲ್ಲಿ ಮಧ್ಯಾಹ್ನ 3.30ರಿಂದ ಸಂಗೀತ ಸಮಾರಾಧನೆ ಏರ್ಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.