ADVERTISEMENT

Bengaluru Film Festival: ಉದ್ಯಮಕ್ಕೆ ಬೇಡವಾದ ಚಲನಚಿತ್ರೋತ್ಸವ

ಪ್ರೇಮಕುಮಾರ್ ಹರಿಯಬ್ಬೆ
Published 16 ಮಾರ್ಚ್ 2025, 0:15 IST
Last Updated 16 ಮಾರ್ಚ್ 2025, 0:15 IST
ಚಿತ್ರೋತ್ಸವದ ಲಾಂಛನ 
ಚಿತ್ರೋತ್ಸವದ ಲಾಂಛನ    

ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಾದ 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ಮುಕ್ತಾಯವಾಗಿದೆ. ಒಂದು ವಾರ 13 ತೆರೆಗಳಲ್ಲಿ ಕಿರುಚಿತ್ರಗಳೂ ಸೇರಿದಂತೆ 250ಕ್ಕೂ ಹೆಚ್ಚು ಭಾರತೀಯ ಹಾಗೂ ಜಾಗತಿಕ ಸಿನಿಮಾಗಳು ಚಿತ್ರೋತ್ಸವದಲ್ಲಿ ಪ್ರದರ್ಶನವಾದವು.

ನೋಂದಾಯಿಸಿಕೊಂಡ ಮೂರು ಸಾವಿರಕ್ಕೂ ಹೆಚ್ಚು ಆಸಕ್ತರು ಸಿನಿಮಾಗಳನ್ನು ಮುಗಿಬಿದ್ದು ನೋಡಿದರು. ಚಿತ್ರೋತ್ಸವ ಯಶಸ್ವಿಯಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಚಲನಚಿತ್ರ ಅಕಾಡೆಮಿ ಹೇಳಿಕೊಂಡಿವೆ. ಜನ ಮುಗಿಬಿದ್ದು ಸಿನಿಮಾ ನೋಡಿದರು ಎನ್ನುವುದೇ ಮಾನದಂಡವಾದರೆ ಚಿತ್ರೋತ್ಸವ ಯಶಸ್ವಿಯಾಗಿದೆ.

ಚಿತ್ರೋತ್ಸವದ ಭಾಗವಾಗಿ ನಡೆದ ಚರ್ಚೆ, ಸಂವಾದಗಳಲ್ಲಿ ಸಿನಿಮಾಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆ, ಕಲಾತ್ಮಕತೆ, ಸಂಗೀತದ ಮಾಂತ್ರಿಕತೆ, ಪ್ರಾದೇಶಿಕ ಸಿನಿಮಾ ಹಂಚಿಕೆಯಲ್ಲಿನ ಸವಾಲುಗಳು ಹೀಗೆ ಹಲವು ವಿಷಯಗಳ ಕುರಿತು ಚರ್ಚೆಗಳು ನಡೆದವು. ಬೇಸರದ ಸಂಗತಿ ಎಂದರೆ ಕನ್ನಡ ಚಿತ್ರೋದ್ಯಮದ ಜನ ಈ ಚರ್ಚೆಗಳಿಂದ ದೂರ ಉಳಿದದ್ದು! ಅಕಾಡೆಮಿಕ್‌ ಆಸಕ್ತಿ ಇದ್ದವರು ಇವುಗಳಲ್ಲಿ ಭಾಗವಹಿಸಿದ್ದರು. ಅಚ್ಚರಿ ಎಂದರೆ ಚೆನ್ನೈ ಮೂಲದ ಒಬ್ಬರು ಮಾಡರೇಟರ್‌ ಆಗಿ ಐದು ಚರ್ಚೆ, ಸಂವಾದಗಳನ್ನು ನಡೆಸಿಕೊಟ್ಟದ್ದು. ಕನ್ನಡ ಚಿತ್ರೋದ್ಯಮದವರಿಗೆ ಈ ವಿಷಯಗಳಲ್ಲಿ ಆಸಕ್ತಿ ಇಲ್ಲವೋ ಅಥವಾ ಚಲನಚಿತ್ರ ಅಕಾಡೆಮಿ ಅವರಿಗೆ ಅವಕಾಶ ಕೊಡಲಿಲ್ಲವೋ ಗೊತ್ತಿಲ್ಲ.

ADVERTISEMENT

ಚಿತ್ರೋತ್ಸವದಲ್ಲಿ ಪ್ರದರ್ಶನವಾದ ಸಿನಿಮಾಗಳ ಗುಣಮಟ್ಟ ಹೇಗಿತ್ತು? ಸಮಕಾಲೀನ ಜಾಗತಿಕ ಸಿನಿಮಾಗಳನ್ನು ನೋಡಿದವರ ಅನಿಸಿಕೆಗಳೇನು? ಎನ್ನುವುದೂ ಗೊತ್ತಾಗಲಿಲ್ಲ. ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸೂಕ್ತ ವೇದಿಕೆ ಇರಲಿಲ್ಲ. ಈ ಕುರಿತಂತೆ ಮಾಧ್ಯಮಗಳೂ ಆಸಕ್ತಿ ತೋರಿಸಲಿಲ್ಲ.

ಭಾರತದ ಮೊದಲ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ (1952) ಸಂದರ್ಭದಲ್ಲಿ ಅಂದಿನ ಪ್ರಧಾನಿ ನೆಹರೂ ಅವರು ಜಾಗತಿಕ ಸಿನಿಮಾಗಳ ಜೊತೆಯಲ್ಲಿ ಭಾರತೀಯ ಸಿನಿಮಾಗಳನ್ನು ಪ್ರದರ್ಶಿಸುವುದು ಮತ್ತು ಸಿನಿಮಾ ನಿರ್ಮಾಣದ ಹೊಸ ಆವಿಷ್ಕಾರಗಳನ್ನು ಭಾರತೀಯ ತಂತ್ರಜ್ಞರಿಗೆ ಪರಿಚಯಿಸುವುದು ಚಿತ್ರೋತ್ಸವಗಳ ಉದ್ದೇಶ ಆಗಬೇಕು ಎಂದಿದ್ದರು. ಈ ಹಿನ್ನೆಲೆಯಲ್ಲಿ ಕೇಳಬೇಕೆನಿಸುವ ಪ್ರಶ್ನೆ ಎಂದರೆ ಬೆಂಗಳೂರು ಚಿತ್ರೋತ್ಸವದಿಂದ ಕನ್ನಡ ಚಿತ್ರೋದ್ಯಮಕ್ಕೆ ಏನು ಪ್ರಯೋಜನ ಆಯಿತು?

ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಭುತ್ವ ವಿರೋಧಿ ಹಾಗೂ ಪ್ರಭಾವಶಾಲಿ ರಾಜಕೀಯ ಚಿಂತನೆಗಳನ್ನು ಪ್ರತಿಪಾದಿಸುವ ಹಾಗೂ ಕಲಾತ್ಮಕ ಸಿನಿಮಾಗಳು ಹೆಚ್ಚಾಗಿರುತ್ತವೆ ಎನ್ನುವ ಕಾಲವೊಂದಿತ್ತು. ಈಗ ಚಿತ್ರೋತ್ಸವಗಳ ಆಶಯ, ಉದ್ದೇಶಗಳು ಬದಲಾಗಿವೆ. ಜಗತ್ತಿನ ಪ್ರಮುಖ ದೇಶಗಳಲ್ಲಿ ಸರ್ವಾಧಿಕಾರಿ, ಯುದ್ಧದಾಹಿ ಹಾಗೂ ವಿಧ್ವಂಸಕ ಮನಃಸ್ಥಿತಿಯ ಪ್ರಭುತ್ವಗಳಿವೆ. ಜನ, ಜನಾಂಗ ವಿರೋಧಿ ಆಡಳಿತದ ಪರಿಣಾಮಗಳನ್ನು ಕಲಾತ್ಮಕವಾಗಿ ಹೇಳುವ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಬೆಂಗಳೂರು ಚಿತ್ರೋತ್ಸವದಲ್ಲಿ ಅಂಥ ಸಿನಿಮಾಗಳು ವಿರಳವಾಗಿದ್ದವು.
ಪಣಜಿ ಸೇರಿದಂತೆ ದೇಶದ ಪ್ರಮುಖ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಜನಪ್ರಿಯ (ಕಮರ್ಷಿಯಲ್‌) ಸಿನಿಮಾಗಳನ್ನು ಪ್ರದರ್ಶನ ಮಾಡುವ ಪರಿಪಾಟ ಆರಂಭವಾಗಿದೆ. ಭಾರಿ ಬಜೆಟ್ಟಿನ ಸಿನಿಮಾಗಳ ಮೊದಲ (ಪ್ರೀಮಿಯರ್‌) ಪ್ರದರ್ಶನಕ್ಕೆ ಚಿತ್ರೋತ್ಸವಗಳು ವೇದಿಕೆ ಆಗುತ್ತಿವೆ! ರಾಜಕೀಯ ಅಜೆಂಡಾ ಬಿಂಬಿಸುವ ಸಿನಿಮಾಗಳಿಗೂ ಅವಕಾಶ ಸಿಗುತ್ತಿದೆ. ಬೆಂಗಳೂರು ಚಿತ್ರೋತ್ಸವದಲ್ಲಿ ಕಮರ್ಷಿಯಲ್‌ ಸಿನಿಮಾಗಳಿದ್ದವು. ರಾಜಕೀಯ ಅಜೆಂಡಾದ ಸಿನಿಮಾಗಳಿರಲಿಲ್ಲ. ಪ್ರದರ್ಶನವಾದ ಸಿನಿಮಾಗಳು ಒಂದಲ್ಲ ಒಂದು ಸಮಸ್ಯೆ ಮೇಲೆ ಬೆಳಕು ಚೆಲ್ಲಿದರೂ ಇನ್ನೂ ಏನೋ ಇರಬೇಕಿತ್ತು. ಗುಣಮಟ್ಟ, ಕಸುಬುದಾರಿಕೆ ಕೊರತೆ ಇದೆ ಇತ್ಯಾದಿ ಗೊಣಗಾಟದ ಮಾತುಗಳು ಕೇಳಿ ಬಂದವು. ಹತ್ತು ಸಿನಿಮಾಗಳನ್ನು ನೋಡಿದರೆ ಅವುಗಳಲ್ಲಿ ಮೂರ್ನಾಲ್ಕು ಉತ್ತಮವಾಗಿವೆ ಅಥವಾ ಪರವಾಗಿಲ್ಲ ಅನ್ನಿಸಿದರೆ ಚಿತ್ರೋತ್ಸವ ಯಶಸ್ವಿ ಆದಂತೆ.

ಕನ್ನಡ ಚಿತ್ರೋದ್ಯಮ ಸಂಕಷ್ಟದಲ್ಲಿದೆ. ನಿರ್ಮಾಣವಾಗುವ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದ್ದರೂ ಯಶಸ್ಸಿನ ಪ್ರಮಾಣ ಶೇ 5ರಷ್ಟಿದೆ. ಸಿನಿಮಾಗಳನ್ನು ಜನರಿಗೆ ತಲುಪಿಸುವ ವ್ಯವಸ್ಥೆ ಕುಸಿದಿದೆ. ಏಕತೆರೆಯ ಚಿತ್ರಮಂದಿರಗಳು ಮುಚ್ಚುತ್ತಿವೆ. ಮಲ್ಟಿಪ್ಲೆಕ್ಸ್‌ ತೆರೆಗಳು ಕನ್ನಡ ಸಿನಿಮಾಗಳಿಗೆ ಮತ್ತು ಪ್ರೇಕ್ಷಕರಿಗೆ ಎಟುಕುತ್ತಿಲ್ಲ. ಕನ್ನಡ ಚಿತ್ರೋದ್ಯಮಕ್ಕೆ ನೆರವಾಗುವ ರೀತಿಯಲ್ಲಿ ಚಿತ್ರೋತ್ಸವವನ್ನು ಸಂಘಟಿಸುವ ಕುರಿತು ಸರ್ಕಾರ ಮತ್ತು ಚಲನಚಿತ್ರ ಅಕಾಡೆಮಿ ಯೋಚಿಸಬೇಕು.

17ನೇ ಬೆಂಗಳೂರು ಚಿತ್ರೋತ್ಸವ ಹೇಗಿರಬೇಕು? ಚಿತ್ರೋತ್ಸವ ಜನರ ತೆರಿಗೆ ಹಣದಲ್ಲಿ ನಡೆಯುತ್ತಿದೆ ಎನ್ನುವ ಎಚ್ಚರ ಚಲನಚಿತ್ರ ಅಕಾಡೆಮಿಗೆ ಇರಬೇಕು. ಪ್ರದರ್ಶನಕ್ಕೆ ಅವಕಾಶ ಕೇಳಿ ಸಲ್ಲಿಸುವ ಸಿನಿಮಾಗಳ ಆಯ್ಕೆಯಲ್ಲಿ ಪಾರದರ್ಶಕತೆ ಇರಬೇಕು. ಪೂರ್ವ ತಯಾರಿಗೆ ಕನಿಷ್ಠ ಐದಾರು ತಿಂಗಳ ಕಾಲಾವಕಾಶ ಬೇಕು. ಹಣ ಕೊಡುತ್ತೇವೆ. ನಿಮಗೆ ಬೇಕಾದಂತೆ ಚಿತ್ರೋತ್ಸವ ನಡೆಸಿ ಎನ್ನುವ ಸರ್ಕಾರದ ಧೋರಣೆ ಬದಲಾಗಬೇಕು. ತರಾತುರಿಯಲ್ಲಿ ಚಿತ್ರೋತ್ಸವ ಮಾಡಿ ಬೆನ್ನು ತಟ್ಟಿಕೊಳ್ಳುವ ಪ್ರವೃತ್ತಿ ಮುಂದುವರಿದರೆ ಅದರಿಂದ ಹೆಚ್ಚಿನ ಪ್ರಯೋಜನ ಆಗದು. ಅದಕ್ಕೆ ದೊಡ್ಡ ಮೊತ್ತದ ಹಣ ಖರ್ಚು ಮಾಡುವುದು ವ್ಯರ್ಥ. 

ಚಿತ್ರೋತ್ಸವದಲ್ಲಿ ಸಿನಿಮಾ ನೋಡಲು ಪ್ರೇಕ್ಷಕರ ಸರದಿ 

ಗಮನ ಸೆಳೆದ ಸಮಕಾಲೀನ ಸಿನಿಮಾಗಳು

16ನೇ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನವಾದ ಸಮಕಾಲೀನ ಸಿನಿಮಾಗಳ ಪೈಕಿ ಹಲವು ಉತ್ತಮ ಸಿನಿಮಾಗಳಿದ್ದವು. ವಿವಿಧ ದೇಶಗಳ, ಸಮುದಾಯಗಳ ಜೀವನ ಕ್ರಮ ಹಾಗೂ ಸಮಸ್ಯೆಗಳನ್ನು ಕಲಾತ್ಮಕವಾಗಿ ಹೇಳುವ ಪ್ರಯತ್ನಗಳಿಂದ ಗಮನ ಸೆಳೆದವು.

ಜಾಗತಿಕ ಸಿನಿಮಾರಂಗದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ. ಅನೇಕ ಮಹಿಳೆಯರು ಗುಣಮಟ್ಟದ ಸಿನಿಮಾಗಳನ್ನು ನಿರ್ದೇಶಿಸಿ ಗಮನ ಸೆಳೆಯುತ್ತಿದ್ದಾರೆ. ಈ ಬಾರಿಯ ಚಿತ್ರೋತ್ಸವದಲ್ಲಿದ್ದ ಮುಖ್ಯ ಸಿನಿಮಾಗಳ ಪೈಕಿ 35ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದವರು ಮಹಿಳೆಯರು. ಧಾರ್ಮಿಕ ಮೂಲಭೂತವಾದ, ಮಹಿಳೆಯರ ಮೇಲಿನ ದೌರ್ಜನ್ಯಗಳು, ಶೋಷಣೆ, ಕ್ರೌರ್ಯ, ಬಡತನ ಇತ್ಯಾದಿಗಳನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನದಲ್ಲಿ ಅವರ ಸಾಧನೆ ಮೆಚ್ಚುವಂಥದ್ದು.

ಐದು ಆಸ್ಕರ್‌ ಪ್ರಶಸ್ತಿಗಳನ್ನು ಬಾಚಿಕೊಂಡ ‘ಅನೋರ’ (ಇಂಗ್ಲಿಷ್‌) ಸಿನಿಮಾ ಬಗ್ಗೆ ಇಟ್ಟುಕೊಂಡ ನಿರೀಕ್ಷೆ ಸುಳ್ಳಾಯಿತು. ಮಹಿಳೆಯರಿಗೆ ಈ ಸಿನಿಮಾ ಇಷ್ಟವಾಗಲಿಲ್ಲ. ಸ್ಪೇನ್‌ ದೇಶದ ಚಿತ್ರ ‘ಐ ಆ್ಯಮ್‌ ನೆವೆಂಕಾ’ ಎಲ್ಲರ ಗಮನ ಸೆಳೆಯಿತು. ಇದು ತನ್ನದೇ ಪಕ್ಷದ ಸದಸ್ಯೆಯ ಮೇಲೆ ರಾಜಕಾರಣಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗುವ ನೈಜ ಘಟನೆ ಆಧರಿಸಿದ್ದು. ಜನ ಮತ್ತು ನ್ಯಾಯಾಂಗ ವ್ಯವಸ್ಥೆ ಸಂತ್ರಸ್ತೆ ಪರವಾಗಿ ನಿಲ್ಲುವ ಮೂಲಕ ದೊಡ್ಡ ಸಂದೇಶವನ್ನು ಚಿತ್ರ ಎತ್ತಿ ಹಿಡಿಯುತ್ತದೆ.

ಫ್ರೆಂಚ್‌ ಭಾಷೆಯ ‘ಶೆಫರ್ಡ್‌’ ಮತ್ತು ‘ದ ಸ್ಟೋರಿ ಆಫ್‌ ಸುಲೇಮಾನ್‌’, ವಿಯಟ್ನಾಮಿ ಭಾಷೆಯ ‘ವಿಯೆಟ್‌ ಅಂಡ್‌ ನಾಮ್‌’, ಇಂಡೋನೇಷಿಯಾದ ‘ಕ್ರೊಕಡೈಲ್‌ ಟಿಯರ್‌’, ಅಮೆರಿಕಾದ ಇಂಗ್ಲಿಷ್‌ ಚಿತ್ರ ‘ಫೆಮಿಲಿಯರ್‌ ಟಚ್‌’, ‘ಲಯನೆಸ್‌‌’ (ಎಸ್ಟೋನಿಯನ್‌), ‘ನಾವಿ’ (ಕೀನ್ಯಾ) ಕನ್ನಡದ ‘ಮಿಕ್ಕ ಬಣ್ಣದ ಹಕ್ಕಿ’, ‘ಬೇಲಿ ಹೂ’, ‘ಪರ್ಜ್ಯ’, ‘ಸ್ವಪ್ನ ಮಂಟಪ’, ‘ಲಚ್ಚಿ’, ‘ಕೆರೆಬೇಟೆ’, ತುಳು ಭಾಷೆಯ ‘ದಸ್ಕತ್‌’, ‘ಪಿದಾಯಿ’, ಕೊಂಕಣಿಯ ‘ದಮ್ಮಮ್‌’, ‘ಕ್ರಾಸಿಂಗ್‌’ (ಜಾರ್ಜಿಯಾ) ಮಲಯಾಳದ ‘ಲೆವೆಲ್‌ ಕ್ರಾಸ್‌’, ‘ಅಪ್ಪುರಂ’, ‘ಕುಮ್ಮಾಟಿ’, ಪರ್ಷಿಯನ್‌ ಭಾಷೆಯ ‘ಇನ್‌ ದ ಲ್ಯಾಂಡ್‌ ಆಫ್‌ ಬ್ರದರ್ಸ್‌’ ಮತ್ತು ‘ರೀಡಿಂಗ್‌ ಲೊಲಿಟಾ ಇನ್‌ ಟೆಹ್ರಾನ್‌’, ಬಾಂಗ್ಲಾ ದೇಶದ ‘ಸಬಾ’, ಅಫ್ಘಾನಿಸ್ತಾನದ ‘ಸೀಮಾಸ್‌ ಸಾಂಗ್‌’, ಹಿಂದಿಯ ‘ಹ್ಯೂಮನ್ಸ್‌ ಇನ್‌ ದ ಲೂಪ್‌’, ‘ಮಾಂಗ್ತ ಜೋಗಿ’, ಮಗಹಿ ಭಾಷೆಯ ಮೊದಲ ಸಿನಿಮಾ ‘ಸ್ವಾಹ’, ತೆಲುಗಿನ ‘35 ಚಿನ್ನ ಕಥಾ ಕಾದು’... ಹೀಗೆ ಹಲವು ಸಿನಿಮಾಗಳು ಚಿತ್ರೋತ್ಸವದಲ್ಲಿ ಗಮನ ಸೆಳೆದವು.

ತಮಿಳಿನ ‘ಅಮರನ್‌’, ‘ಮೆಅಳಗನ್‌’, ‘ವಾಳೈ’, ಕನ್ನಡದ ‘ಮ್ಯಾಕ್ಸ್‌’, ‘ಮಾರ್ಟಿನ್‌’, ‘ಭೀಮ’, ‘ಭೈರತಿ ರಣಗಲ್‌’, ‘ಕೃಷ್ಣಂ ಪ್ರಣಯ ಸಖಿ’ ಇತ್ಯಾದಿ ಚಿತ್ರಗಳನ್ನೂ ಜನ ಮುಗಿಬಿದ್ದು ನೋಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.