ADVERTISEMENT

ಮರೆಯಾದ ಹಾಲ್ತುಪ್ಪದ ಗಿಂಡಿ.. ಏನದರ ವಿಶೇಷ?

ಬೀರಣ್ಣ ನಾಯಕ ಮೊಗಟಾ
Published 14 ಜೂನ್ 2025, 23:16 IST
Last Updated 14 ಜೂನ್ 2025, 23:16 IST
<div class="paragraphs"><p>ಹಾಲ್ತುಪ್ಪದ ಗಿಂಡಿ</p></div>

ಹಾಲ್ತುಪ್ಪದ ಗಿಂಡಿ

   

ನಮ್ಮ ಬದುಕಿನಲ್ಲಿ ಒಂದಾಗಿದ್ದ ಹಾಲ್ತುಪ್ಪದ ಗಿಂಡಿ ಈಗ ನೆನಪು ಮಾತ್ರ. ಒಂದು ಕಾಲದಲ್ಲಿ ಎಲ್ಲರ ಮನೆಯಲ್ಲೂ, ಎಲ್ಲರಿಗೂ ಬೇಕಾಗಿದ್ದ ಈ ಹಾಲ್ತುಪ್ಪದ ಗಿಂಡಿ ಬಹು ಉಪಯೋಗಿ ಸಲಕರಣೆಯಾಗಿ ತನ್ನ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿತ್ತು.

ಸಾಮಾನ್ಯವಾಗಿ ಹಿತ್ತಾಳೆಯಿಂದ ಮಾಡಲಾಗುವ ಈ ಗಿಂಡಿ ಸಣ್ಣದು, ಮಧ್ಯಮ ಹಾಗೂ ದೊಡ್ಡದು ಎಂಬ ಪ್ರಕಾರದಲ್ಲಿದ್ದು, ಗಿಂಡಿಯ ಮುಚ್ಚಳ ಹಾಕಲು ಯಾವ ತೊಂದರೆಯೂ ಇಲ್ಲದಂತೆ ಬಾಯಲ್ಲಿ ಇಡಲು ಒಂದು ಲೋಟವಿರುತಿತ್ತು. ಗಿಂಡಿಯ ಮುಚ್ಚಳ ತಿರಗಿಣಿ ಪದ್ಧತಿಯಲ್ಲಿದ್ದು, ಹಿಡಿಕೆ ಅಖಂಡವಾಗಿರುತಿತ್ತು. ಈಗಿನ ಅಳೆತೆಯಂತೆ ಸಣ್ಣದರಲ್ಲಿ ಎರಡು ಲೀಟರ್, ಮಧ್ಯಮದರಲ್ಲಿ ಐದು ಲೀಟರ್ ಹಾಗೂ ದೊಡ್ಡದರಲ್ಲಿ ಏಳು ಲೀಟರ್ ಪದಾರ್ಥ ಹಿಡಿಯುವಂತೆ ಇರುತಿತ್ತು. ಸಾಮಾನ್ಯರ ಮನೆಯಲ್ಲಿ ಸಣ್ಣ ಹಾಲ್ತುಪ್ಪದ ಗಿಂಡಿ ಮಾತ್ರ ಇದ್ದು ಸಿರಿವಂತರ ಮನೆಯಲ್ಲಿ ಮೂರು ಪ್ರಕಾರದ ಹಾಲ್ತುಪ್ಪದ ಗಿಂಡಿಗಳು ಇರುತ್ತಿದ್ದವು.

ADVERTISEMENT

ಊರಿನ ಯಾರದಾದರೂ ಮನೆಯಲ್ಲಿ, ಮದುವೆ, ಸೀಮಂತ, ಉಪನಯನ, ಹಿರಿಯರ ದಿನಗಳು ಇದ್ದಾಗ ನೆಂಟರಿಷ್ಟರು ಗಿಂಡಿಯಲ್ಲಿ ಹಾಲನ್ನಿಟ್ಟು ಹಾಗೂ ಲೋಟದಲ್ಲಿ ತುಪ್ಪವನ್ನು ತುಂಬಿಸಿ ತೆರಳುವ ಪದ್ಧತಿ ಇತ್ತು. ಹಿಂತಿರುಗುವಾಗ ಕಾರ್ಯದ ಮನೆಯಲ್ಲಿ ಮಾಡಿದ ಯಾವುದಾದರೂ ತಿನಿಸನ್ನು ಈ ಗಿಂಡಿಯಲ್ಲಿಟ್ಟು ಕಳಿಸುತ್ತಿದ್ದರು. ಅದಕ್ಕೇ ಇದಕ್ಕೆ ಹಾಲ್ತುಪ್ಪದ ಗಿಂಡಿ ಎಂದು ಕರೆಯುತ್ತಿದ್ದರು. ಇದು ಅಂದು ಎಷ್ಟರಮಟ್ಟಿಗೆ ಜನಜನಿತವಾಗಿತ್ತೆಂದರೆ ನೆಂಟರ ಮನೆಯಿಂದ ಹಾಲ್ತುಪ್ಪದ ಗಿಂಡಿ ಮನೆಗೆ ತರುತ್ತಿರುವಂತೆ ಮನೆಯ ಬೆಕ್ಕು ಯಜಮಾನಿಯ ಹಿಂದೆ ಸುತ್ತಾಡಿ ತಿಂಡಿಗಾಗಿ ಹಂಬಲಿಸುತಿತ್ತು. ನೆಂಟರ ಮನೆಯ ಕಾರ್ಯಗಳಲ್ಲಿ ಹಾಲ್ತುಪ್ಪದ ಗಿಂಡಿಯಲ್ಲಿ ಹಾಲು ಮತ್ತು ತುಪ್ಪವನ್ನು ಒಯ್ದು ಕೊಟ್ಟರೆ ತಮ್ಮ ಮನೆಯ ಕೊಟ್ಟಿಗೆಯಲ್ಲಿ ಗೋವುಗಳ ಸಂತತಿ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಕೂಡಾ ಹಳ್ಳಿಗರಲ್ಲಿ ಇತ್ತು.

ಅಂದಿನ ಕಾಲದಲ್ಲಿ ಇಂದಿನಂತೆ ಪ್ಲಾಸ್ಟಿಕ್ ಬಾಟಲಿಗಳು ಇಲ್ಲದ ಸಮಯದಲ್ಲಿ ಪ್ರವಾಸದ ವೇಳೆ, ತೀರ್ಥಯಾತ್ರೆಯ ಸಂದರ್ಭದಲ್ಲಿ ಕಾಸಿ ಆರಿಸಿದ ನೀರನ್ನು ದೊಡ್ಡ ಹಾಲ್ತುಪ್ಪದ ಗಿಂಡಿಯಲ್ಲಿ ಒಯ್ಯುತ್ತಿದ್ದರು.

ಹಾಲ್ತುಪ್ಪದ ಗಿಂಡಿಯನ್ನು ಖಾಲಿ ಇಟ್ಟರೆ, ಮನೆ ಖಾಲಿಯಾಗುವುದೆಂಬ ನಂಬಿಕೆ ಇದ್ದುದರಿಂದ ಹಾಲ್ತುಪ್ಪದ ಗಿಂಡಿಯನ್ನು ಖಾಲಿ ಇಡದೇ ಅದರಲ್ಲಿ ವಿಶೇಷವಾದ ಕಾಯಿಪಲ್ಯ ಬೀಜವನ್ನು ತುಂಬಿಡುತ್ತಿದ್ದರು. ಹೊಸ್ತಿನ ಹಬ್ಬ(ತೆನೆ ಹಬ್ಬ)ದಲ್ಲಿ ಹಾಲ್ತುಪ್ಪದ ಗಿಂಡಿಗೆ ವಿಶೇಷ ಪೂಜೆ ಕೂಡಾ ನಡೆಯುತಿತ್ತು.

ಈಗ ಹಾಲ್ತುಪ್ಪದ ಗಿಂಡಿಯನ್ನು ಬಳಸುವವರೇ ಇಲ್ಲ. ಹೀಗಾಗಿ ಇದು ಮನೆಯಿಂದ ಮರೆಯಾಗಿ ಜಾನಪದ ವಸ್ತುಸಂಗ್ರಹಾಲಯವನ್ನು ಸೇರಿದೆ.

***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.