ಕಡಲಾಳದಲ್ಲಿನ ನೋಟ
ಸ್ಕೂಬಾ ಡೈವಿಂಗ್ ನೀಡುವ ಅನುಭವ ಅಪೂರ್ವ. ಕಡಲಾಳಕ್ಕೆ ಇಳಿದು ಜಲಚರಗಳೊಂದಿಗೆ ಈಜುತ್ತಾ, ಅವುಗಳನ್ನು ಹತ್ತಿರದಿಂದ ನೋಡುವುದು ರೋಮಾಂಚನಕಾರಿ. ಇಲ್ಲಿ ಲೇಖರರು ತಮ್ಮದೇ ಅನುಭವವನ್ನು ಕಟ್ಟಿಕೊಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರದಿಂದ 19 ಕಿಲೋಮೀಟರ್ ದೂರದಲ್ಲಿ ‘ನೇತ್ರಾಣಿ’ ಎಂಬ ಪುಟ್ಟ ದ್ವೀಪವಿದೆ. ಇದು ಕರ್ನಾಟಕದ ಕರಾವಳಿಯ ಅರಬ್ಬೀ ಸಮುದ್ರದಲ್ಲಿರುವ ಒಂದು ದ್ವೀಪ. ಈ ದ್ವೀಪವನ್ನು ‘ಹಾರ್ಟ್ ಶೇಪ್ ಐಲ್ಯಾಂಡ್’, ‘ಭಜರಂಗಿ ದ್ವೀಪ’ ಮತ್ತು ‘ಪಾರಿವಾಳ ದ್ವೀಪ’ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ತಿಳಿಯಾದ ನೀಲಿ ನೀರು, ಹವಳದ ದಿಬ್ಬ ಮತ್ತು ಸಮೃದ್ಧ ಸಮುದ್ರಜೀವಿಗಳನ್ನು ಹೊಂದಿರುವ ನೇತ್ರಾಣಿ ದ್ವೀಪದ ಸುತ್ತಮುತ್ತಲಿನ ನರ್ಸರಿ, ಪಬಲ್ ಬೀಚ್, ಟಿ55, ಬಾಂಬ್ ರಾಕ್ ಮತ್ತು ಐಲ್ಯಾಂಡ್ ಬ್ಯಾಕ್ ಸ್ಥಳಗಳಲ್ಲಿ ಸ್ಕೂಬಾ ಡೈವಿಂಗ್ ಮತ್ತು ಸ್ನಾರ್ಕ್ಲಿಂಗ್ ಎಂಬ ಸಾಹಸಮಯ ಚಟುವಟಿಕೆಯನ್ನು ಅನಂದಿಸಲು ನಮ್ಮ ರಾಜ್ಯದಲ್ಲಿರುವ ಏಕೈಕ ಪ್ರವಾಸಿ ತಾಣವಾಗಿದೆ. ಈ ದ್ವೀಪದ ಸುತ್ತಮುತ್ತಲಿನ ನೀರಿನಾಳದಲ್ಲಿ 14 ಜಾತಿಯ ಹವಳಗಳು ಮತ್ತು 89 ಜಾತಿಯ ಮೀನುಗಳಿವೆ ಎಂದು ತಜ್ಞರು ಹೇಳುತ್ತಾರೆ.
ಸ್ಕೂಬಾ ಡೈವಿಂಗ್ ತೆರಳುವ ಮುನ್ನ ಕಡ್ಡಾಯ ನೋಂದಣಿ ಮಾಡಬೇಕು. ಬಳಿಕ ಎಲ್ಲಾ ಡೈವರ್ಸ್‌ಗಳಿಗೆ ‘ಪೂಲ್ ಸೇಷನ್’ ಮೂಲಕ ಹಲವು ಅಗತ್ಯ ಮಾಹಿತಿ ನೀಡಿ, ಮಾಕ್ ಡ್ರಿಲ್ ಮಾಡಿಸಿ ಬೋಟ್ ಮೂಲಕ ನೇತ್ರಾಣಿ ದ್ವೀಪದ ಕಡೆಗೆ ಕರೆದೊಯ್ಯಲಾಗುತ್ತದೆ.
ಸ್ಕೂಬಾ ಡೈವಿಂಗ್‌ಗೆ ನಿಗದಿಪಡಿಸಲಾದ ಸ್ಥಳಕ್ಕೆ ತಲುಪಲು ಒಂದು ಗಂಟೆ ಬೇಕು. ಬೋಟ್ ಮೂಲಕ ಪಯಣಿಸುವಾಗ ಸುತ್ತಲೂ ವಿಶಾಲವಾಗಿ ಹಬ್ಬಿರುವ ಸಮುದ್ರದ ಸೌಂದರ್ಯ, ಬೆಸ್ತರು ಪುಟ್ಟ ಪುಟ್ಟ ದೋಣಿಗಳಲ್ಲಿ ಮೀನು ಹಿಡಿಯಲು ಬಲೆ ಬೀಸುತ್ತಿರುವ ದೃಶ್ಯಗಳೆಲ್ಲವೂ ಬೇರೊಂದು ಜಗತ್ತಿನಲ್ಲಿ ವಿಹರಿಸುತ್ತಿರುವ ಅನುಭವವನ್ನು ನೀಡುತ್ತವೆ. ಮನಸ್ಸು ಇನ್ನಷ್ಟು ಪುಳಕಿತಗೊಳ್ಳುತ್ತದೆ.
ಸುಮಾರು 12 ಕಿಲೋಮೀಟರ್ ಸಾಗುತ್ತಿದ್ದ ಹಾಗೆಯೇ ದೂರದಲ್ಲಿ ಕಾಣುವ ನೇತ್ರಾಣಿ ದ್ವೀಪವು ನಮ್ಮಲ್ಲಿ ಮತ್ತಷ್ಟು ಕುತೂಹಲವನ್ನು, ತವಕವನ್ನು ಹೆಚ್ಚಿಸುತ್ತದೆ. ಬೋಟ್ ನೇತ್ರಾಣಿ ದ್ವೀಪ ತಲುಪಿದ ತಕ್ಷಣ ಸ್ಕೂಬಾ ಸೂಟ್ ಧರಿಸಿ ಮಾಸ್ಟರ್ ನಿರ್ದೇಶನದಂತೆ 12 ಮೀಟರ್ ಆಳದ ಸಮುದ್ರದಲ್ಲಿ ಒಂಟಿಯಾಗಿ ಧುಮ್ಮಿಕ್ಕುವ ಆ ಒಂದು ಕ್ಷಣ ಎಂಥವರಿಗಾದರೂ ಹೃದಯ ಬಾಯಿಗೆ ಬಂದಂತಾಗುತ್ತದೆ. ನೋಡ ನೋಡುತ್ತಲೇ ಸಮುದ್ರದಲ್ಲಿ ದೊಪ್ಪೆಂದು ಬೀಳುವುದೇ ಸಖತ್ ಥ್ರೀಲ್. ನಂತರ ನೀರಿನ ಮೇಲೆ ತೇಲುತ್ತಾ ನೀರಿನ ಜೊತೆ ಆಟವಾಡತೊಡಗಿದಾಗ ಧೈರ್ಯ ಸ್ವಲ್ಪ ಸ್ವಲ್ಪವೇ ಹೆಚ್ಚಾಗುತ್ತದೆ.
ಅಲ್ಲಿಂದ ನಿಧಾನವಾಗಿ ಸಮುದ್ರದೊಳಗೆ ಅದರಲ್ಲೂ ನೇತ್ರಾಣಿಯ ವಿಶೇಷ ಜೀವಜಗತ್ತು ಇರುವ ಪ್ರದೇಶದಲ್ಲಿ ಆಳಕ್ಕೆ ಈಜುತ್ತಾ ಸಾಗಿದಂತೆ ತಕ್ಷಣ ಕಾಣುವ ನಯನ ಮನೋಹರ ಅದ್ಭುತ ದೃಶ್ಯಗಳು ಆಶ್ಚರ್ಯಚಕಿತರನ್ನಾಗಿಸುತ್ತವೆ.
ನೇತ್ರಾಣಿ ದ್ವೀಪ
ಸೂರ್ಯನ ಪ್ರಕಾಶಕ್ಕೆ ಸ್ಪಟಿಕದಂತೆ ಹೊಳೆಯುವ ನೀರು, ಮನೋಹರವಾದ ಹವಳದ ದಿಬ್ಬಗಳು, ತಂಡೋಪ ತಂಡವಾಗಿ ಕಣ್ಣ ಮುಂದೆ ಓಡಾಡುತ್ತಾ ಮನಸ್ಸಿಗೆ ಕಚಗುಳಿ ನೀಡುವ ಬಣ್ಣ ಬಣ್ಣದ ಚಿಟ್ಟೆ ಮೀನು, ಟ್ರಿಗರ್ ಮೀನು, ಗಿಳಿ ಮೀನು, ಈಲ್‌ಗಳು ಮತ್ತು ಸೀಗಡಿಗಳಂತಹ ಸಮುದ್ರಜೀವಿಗಳನ್ನು ನೋಡಿದಾಗ ಆಗುವ ಸಂತಸಕ್ಕೆ ಪಾರವೇ ಇರುವುದಿಲ್ಲ. ನಾವೂ ಸಹ ಅವುಗಳೊಂದಿಗೆ ಈಜುತ್ತಾ, ಅವುಗಳನ್ನು ಹಿಡಿಯಬೇಕೆಂದು ಬೆನ್ನಟ್ಟಿದರೆ ಎದುರಾದದ್ದು ಕಡಲಾಮೆ. ಕಪ್ಪೆಚಿಪ್ಪು, ಶಂಖ, ಜಲಸಸ್ಯಗಳು ಬಹಳವಾಗಿ ಆಕರ್ಷಿಸಿದವು. ಇವುಗಳ ನಡುವೆ ‘ನಮ್ಮ ಡೈವಿಂಗ್ ಮಾಸ್ಟರ್ ನಮ್ಮ ಜೊತೆ ಇದ್ದಾರೆ ಅಲ್ವಾ’ ಎಂದು ಖಾತ್ರಿ ಪಡಿಸಿಕೊಳ್ಳಲು ಮನಸ್ಸು ಮರೆಯುವುದಿಲ್ಲ!.
ಭಾರತೀಯ ನೌಕಾಪಡೆಯು ಗುರಿ ಅಭ್ಯಾಸಕ್ಕಾಗಿ ಈ ದ್ವೀಪದಲ್ಲಿ ತಾಲೀಮು ನಡೆಸುತ್ತಿದ್ದ ಕಾರಣ ಶೆಲ್‌ಗಳ ಚೂರುಗಳನ್ನು ಕಾಣಬಹುದು. ನಮಗಿರುವ 30 ನಿಮಿಷದಲ್ಲಿ ಕೊಂಚ ಗಾಬರಿ ಹಾಗೂ ದುಪ್ಪಟ್ಟು ಕುತೂಹಲದಿಂದ ಡೈವ್ ಮಾಡುತ್ತಾ, ಕಡಲಾಳದ ಸೌಂದರ್ಯವನ್ನು ಆಸ್ವಾದಿಸುತ್ತಾ ಸಾಗಿದಂತೆ ಮೇಲೆ ಬರಲು ಮನಸ್ಸೇ ಆಗುವುದಿಲ್ಲ. ನಾವು ಸಹ ಆ ಜಲಚರಗಳಂತೆ ಪ್ರಶಾಂತವಾಗಿ ತಮ್ಮದೇ ಲೋಕದಲ್ಲಿ ಹಾಯಾಗಿ ವಿಹರಿಸುತ್ತಾ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ಲವೇ ಎಂದು ಸ್ಕೂಬಾ ಡೈವಿಂಗ್ ಮಾಡಿದ ಪ್ರತಿಯೊಬ್ಬರಿಗೂ ಅನಿಸಿದೆ ಇರದು. ಇದುವೇ ಸ್ಕೂಬಾ ಡೈವ್ ವೈಶಿಷ್ಟ್ಯ.
ಸ್ಕೂಬಾ ಡೈವಿಂಗ್ ನೀಡುವ ಅನುಭವ ಒಂದು ತೆರನಾಗಿದ್ದರೆ, ಇನ್ನು ಸಮುದ್ರದ ಮೇಲ್ಭಾಗದಲ್ಲಿ ಈಜುತ್ತಲೇ ಸ್ನಾರ್ಕ್ಲಿಂಗ್ ಮಾಡುತ್ತಲೇ ತಳಭಾಗದಲ್ಲಿರುವ ಸೌಂದರ್ಯವನ್ನು ಸವಿಯುವ ಅನುಭವ ಇನ್ನೂ ಭಿನ್ನ. ನೇತ್ರಾಣಿ ದ್ವೀಪದ ಕಡಲಿನಲ್ಲಿ ಡೈವ್ ಮಾಡುವಾಗ ಮೀನುಗಳನ್ನು ಮುಟ್ಟಲು ಅಥವಾ ಹವಳಗಳನ್ನು ಹಾನಿಗೊಳಿಸಲು ಮತ್ತು ಯಾವುದೇ ವಸ್ತುಗಳನ್ನು ಸಮುದ್ರಕ್ಕೆ ಎಸೆಯಲು ಅವಕಾಶವಿಲ್ಲ. ಬೋಟ್‌ಗಳು ಸಂಜೆ 4.30 ರಿಂದ ಸಂಜೆ 5.30 ರ ನಡುವೆ ಹಿಂತಿರುಗಲಾಗುತ್ತದೆ.
‘ಚಲನಚಿತ್ರ ತಾರೆಯರಾದ ಪುನೀತ್ ರಾಜಕುಮಾರ್, ಗಣೇಶ್, ದಿಗಂತ್ , ಡಾಲಿ ಧನಂಜಯ, ರಶ್ಮಿಕಾ ಮಂದಣ್ಣ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಇಲ್ಲಿಗೆ ಬಂದು ಸ್ಕೂಬಾ ಡೈವ್‌ನ ಖುಷಿಯನ್ನು ಅನುಭಿಸಿದ್ದಾರೆ’ ಎಂದು ನೇತ್ರಾಣಿ ಗಣೇಶ್ ಮಾಹಿತಿ ನೀಡಿದರು.
ಸ್ಕೂಬಾ ಡೈವಿಂಗ್ ಸಾಹಸಮಯ ಚಟುವಟಿಕೆಯು ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಅಕ್ಟೋಬರ್‌ನಿಂದ ಮೇ ವರೆಗೆ ಪ್ರವಾಸೋದ್ಯಮ ಇಲಾಖೆ ಅನುಮತಿ ನೀಡುತ್ತದೆ. ಇದು ಉತ್ತರ ಕನ್ನಡ ಜಿಲ್ಲಾಡಳಿತದ ನಿಯಂತ್ರಣದಲ್ಲಿದೆ. ಡೈವರ್‌ಗಳು ಹತ್ತು ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಪ್ರತಿಯೊಬ್ಬರಿಗೆ ₹3,500 ರಿಂದ ₹4,000 ಶುಲ್ಕವನ್ನು ನಿಗದಿಪಡಿಸಲಾಗಿದೆ.
ವಿಶೇಷವಾಗಿ ನೇತ್ರಾಣಿ ದ್ವೀಪದ ಕಡಲು ಎಷ್ಟು ವೈವಿಧ್ಯಮಯ ಜಲಚರಗಳನ್ನು ಹೊಂದಿದೆಯೋ, ಅಷ್ಟೇ ಪ್ರಮಾಣದ ಅಪರೂಪದ ಪ್ರಾಣಿ ಸಂಕುಲವು ದ್ವೀಪದ ಮೇಲ್ಭಾಗದಲ್ಲಿದೆ. ಹಾಗಾಗಿ ದ್ವೀಪದ ಮೇಲೆ ಹತ್ತಲು ಪ್ರವಾಸಿಗರಿಗೆ ಅನುಮತಿ ಇಲ್ಲ. ಸ್ಕೂಬಾ ಡೈವಿಂಗ್ ಅಪರೂಪದ ಸಾಹಸಮಯ ಚಟುವಟಿಕೆ ಮಾತ್ರವಲ್ಲ, ಸಾಗರದ ಆಳದೊಳಗಿನ ಅತ್ಯದ್ಭುತ ಜೀವ ಜಗತ್ತಿನ ಬಗ್ಗೆ ತಿಳಿದುಕೊಳ್ಳಲು ಇರುವ ಒಂದು ಅವಕಾಶವು ಹೌದು.
ನೇತ್ರಾಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.