ADVERTISEMENT

ಹಲಗೆ ಮೇಳದ ವನಿತೆಯರು

ಸಂತೋಷ ಈ.ಚಿನಗುಡಿ
Published 30 ಮಾರ್ಚ್ 2024, 23:30 IST
Last Updated 30 ಮಾರ್ಚ್ 2024, 23:30 IST
<div class="paragraphs"><p>ಮಹಿಳೆಯರ ಮೊಗದಲ್ಲಿ ನಗು ತಂದ ಹಲಗೆ ನಾದ... </p></div>

ಮಹಿಳೆಯರ ಮೊಗದಲ್ಲಿ ನಗು ತಂದ ಹಲಗೆ ನಾದ...

   

ಚಿತ್ರಗಳು: ತಾಜುದ್ದೀನ್ ಆಜಾದ್‌

ಹಲಗೆ ಸದ್ದು ಕಿವಿಗೆ ಬಿದ್ದರೆ ಸಾಕು; ಊರಲ್ಲಿ ಯಾರೋ ಸತ್ತಿದ್ದಾರೆ ಎಂದೇ ಅರ್ಥ. ಅಷ್ಟರಮಟ್ಟಿಗೆ ಇದು ಅಮಂಗಳಕರ ವಾದನ ಎಂದು ನಿರ್ಧರಿಸಿದ್ದು ಸಂಪ್ರದಾಯ. ಅಂಥ ಹಲಗೆಗೂ ‘ಮಂಗಳ ನಾದ’ದ ಭಾವನೆ, ಭಾವುಕತೆ ತಂದುಕೊಟ್ಟವರು ವನಿತೆಯರು. ಹತ್ತು ವರ್ಷಗಳ ಹಿಂದೆ ‘ಮಹೇಶ್ವರಿ ಹಲಗೆ ಮೇಳ’ ಕಟ್ಟಿಕೊಂಡು, ಊರೂರು ಸುತ್ತಿ ಹಲವು ಅಡೆತಡೆಗಳ ವಿರುದ್ಧ ಈಜಿದವರು. ಹಲಗೆಗೂ, ತಮ್ಮ ಬದುಕಿಗೂ ಹೊಸ ಹುಟ್ಟು ತಂದವರು.

ADVERTISEMENT

ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಕುರಕುಂಟ ಎಂಬ ಗ್ರಾಮದಲ್ಲಿ ಹತ್ತು ಮಹಿಳೆಯರು ಇಟ್ಟ ದಿಟ್ಟ ಹೆಜ್ಜೆ ಈಗ ಯಶೋಗಾಥೆಯಾಗಿದೆ. ಈ ಸಾಧನೆಯ ಹಿಂದಿನ ರೂವಾರಿ; ಅದೇ ಊರಿನ ಶಿಕ್ಷಕಿ ಅಕ್ಕನಾಗಮ್ಮ. ತಾವೇ ಮುಂದಾಗಿ ಹಲಗೆ ವಾದನ ಕಲಿತು, ನಂತರ ಎಲ್ಲರಿಗೂ ಕಲಿಸಿದ್ದಾರೆ.

ಕುರಕುಂಟದಲ್ಲಿ ಪರಿಶಿಷ್ಟ ಸಮುದಾಯದ ಹಲವು ಪುರುಷರು ಹಲಗೆ ಬಾರಿಸಿಯೇ ಜೀವನ ಸಾಗಿಸುತ್ತಿದ್ದರು. ಅವರು ಕೆಲಸವಿಲ್ಲದೇ ಅಲೆಯುತ್ತಿದ್ದಾಗ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದವು. ತುತ್ತಿನಚೀಲ ತುಂಬಿಸಿಕೊಳ್ಳಲು, ಮಕ್ಕಳಿಗೆ ಅಕ್ಷರ ಕಲಿಸಲು ‍ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಆಗಲೇ ಈ ತಾಯಂದಿರು ಹಲಗೆ ಹೆಗಲೇರಿಸಿಕೊಂಡರು.

ಪುರುಷರು ಮಾತ್ರ ಹಲಗೆ ಬಡಿಯುವ ರೂಢಿ ಹಿಂದಿನಿಂದಲೂ ಇದೆ. ಹೆಣ್ಣುಮಕ್ಕಳು ಹಲಗೆ ಹಿಡಿದಾಗ ಮನೆಯವರು, ಊರಿನವರು ವಿರೋಧ ಮಾಡಿದರು. ಆದರೂ ಹಲಗೆ ನಾದದ ಗುಂಗಿನಲ್ಲಿ ಮಿಂದಿದ್ದ ಈ ಗಟ್ಟಿಗಿತ್ತಿಯರು; ತಮ್ಮಲ್ಲಿ ಕೀಳರಿಮೆ ಮೂಡಲು ಬಿಡಲಿಲ್ಲ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಾತ್ರೆ, ಉತ್ಸವ, ಹಬ್ಬ, ‍ಪೂಜೆ, ಜಯಂತಿ ಹೀಗೆ ಎಲ್ಲ ಕಾರ್ಯಗಳಲ್ಲೂ ಇವರ ಹಲಗೆಗಳು ಸದ್ದು ಮಾಡುತ್ತಿವೆ. ಮಂಗಳಕರ ನಾದ ಜನರಲ್ಲಿ ಚುಂಬಕಶಕ್ತಿ ಮೂಡಿಸುತ್ತಿದೆ. ಈಗ ಸ್ಥಳೀಯ ಕಾರ್ಯಕ್ರಮಗಳಿಗೆ ₹10 ಸಾವಿರ, ಬೇರೂರಿನ ಹಾಗೂ ಸರ್ಕಾರದ ಕಾರ್ಯಕ್ರಮಗಳಿಗೆ ₹20 ಸಾವಿರ ಕಲಾಧನ ಪಡೆಯುತ್ತಿದೆ ಈ ತಂಡ.

ದುರ್ಗಮ್ಮ ಈರಪ್ಪ, ಕೃಷ್ಣಮ್ಮ ದೊಡ್ಡಬಲರಾಮ ಮಟ್ಟಿ, ನರಸಮ್ಮ ಸಣ್ಣಬಲರಾಮ ಮಟ್ಟಿ, ನಾಗಮ್ಮ ದ್ಯಾವಪ್ಪ ಮುದೆಳ್ಳಿ, ನರಸಮ್ಮ ಲಕ್ಷ್ಮಪ್ಪ ಟೈಗರ್, ಸೈದಮ್ಮ ಕೃಷ್ಣಪ್ಪ ಹಲಗಿ, ನರಸಮ್ಮ ತಿಪ್ಪಣ್ಣ ಮೇಟಿ, ಮರೆಮ್ಮ ಬಲರಾಮ ಐದಮನಿ, ರುಕ್ಮಿಣಿ ಶಾಂತಪ್ಪ ಸಿಂಗನೂರ ಹಲಗೆ ಕಲಾವಿದರಾಗಿ ರೂಪುಗೊಂಡವರು. ತಂಡದಲ್ಲಿದ್ದ ಹಿರಿಯ ಸದಸ್ಯೆ ತಿಪ್ಪಮ್ಮ ಬಾಲಪ್ಪ ಸಿಂಗನೂರ ಅವರು ಆರು ತಿಂಗಳ ಹಿಂದೆ ನಿಧನರಾದರು. ಆ ಸ್ಥಾನವನ್ನು ಅವರ ಸೊಸೆ ರುಕ್ಮಿಣಿ ತುಂಬಿದ್ದಾರೆ. ವೆಂಕಟೇಶ ಎಂಬ ಯುವಕ ತಂಡದ ನೆರವಿಗೆ ಇದ್ದಾರೆ.

ಮೇಳ ಮೇಳೈಸಿದ್ದು ಹೀಗೆ

ನಾದದ ಗುಂಗಿನಲ್ಲಿ ನಾಗಮ್ಮ ದ್ಯಾವಪ್ಪ ಮುದೆಳ್ಳಿ

ಕುರಕುಂಟದ ಅಕ್ಕನಾಗಮ್ಮ ಪ್ರಾಥಮಿಕ ಅನುದಾನಿತ ಶಾಲೆಯಲ್ಲಿ ಅಕ್ಕನಾಗಮ್ಮ ಶಿಕ್ಷಕಿಯಾಗಿದ್ದರು. ಪರಿಶಿಷ್ಟ ಸಮುದಾಯದ ಮಕ್ಕಳು ಪದೇಪದೇ ಶಾಲೆ ತಪ್ಪಿಸುತ್ತಿದ್ದರು. ಅವರನ್ನು ಕರೆತರಲು ಶಿಕ್ಷಕಿ ಕಾಲೊನಿಗೆ ಹೋಗುತ್ತಿದ್ದರು. ‘ಮಕ್ಕಳನ್ನು ಶಾಲೆಗೆ ಕಳಿಸಿದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ನಮಗೆ ಏನಾದರೂ ಕೆಲಸ ಕೊಡಿಸಿ, ಮಕ್ಕಳನ್ನು ಶಾಲೆಗೆ ಕಳಿಸುತ್ತೇವೆ’ ಎಂದು ಪೋಷಕರು ಹೇಳುತ್ತಿದ್ದರು.

ಎಲ್ಲರ ಮನೆಯಲ್ಲೂ ಗೂಟಕ್ಕೆ ನೇತು ಹಾಕಿದ ಹಲಗೆ ಬಿಟ್ಟರೆ ಬೇರೇನೂ ಬಂಡವಾಳ ಇರಲಿಲ್ಲ. ಹಲಗೆಯನ್ನೇ ಅವರ ಬಂಡವಾಳ ಮಾಡಲು ಶಿಕ್ಷಕಿ ನಿರ್ಧರಿಸಿದರು. ಶಾಲೆ ಅವಧಿ ಮುಗಿದ ಬಳಿಕ ತಾಯಂದಿರಿಗೆ ‘ಹಲಗೆ ಕ್ಲಾಸ್‌’ ಶುರು ಮಾಡಿದರು. ಆರಂಭದಲ್ಲಿ ಮಹಿಳೆಯರು ಕೀಳರಿಮೆಯಿಂದ ಹಿಂಜರಿದರು. ಪುರುಷರೂ ವಿರೋಧಿಸಿದರು. ಆದರೂ ಛಲ ಬಿಡದ ಅಕ್ಕನಾಗಮ್ಮ ತಾವೇ ಹಲಗೆ ಹೆಗಲೇರಿಸಿಕೊಂಡು ನಿಂತರು. ‘ಟೀಚರ್ರು ಮುಂದೆ ಬಂದಾರಂದಮ್ಯಾಲ್‌ ನಮ್ಮದೇನೂ ತಕರಾರಿಲ್ಲ ಬಿಡ್ರಿ...’ ಎಂದು ಪುರುಷರು ಹೇಳಿದರು.

ತಮ್ಮ ಬದುಕು ನಾಲ್ಕು ಗೋಡೆಗಳ ಒಳಗೇ ಮುಗಿದಿದೆ ಎಂದು ನಿರ್ಧರಿಸಿಬಿಟ್ಟಿದ್ದ ಮಹಿಳೆಯರನ್ನು ಬೆಳಕಿಗೆ ಎಳೆತಂದರು ಅಕ್ಕನಾಗಮ್ಮ. ಒಬ್ಬ ಶಿಕ್ಷಕಿ ಮನಸ್ಸು ಮಾಡಿದ್ದಕ್ಕೆ ಹತ್ತು ಕುಟುಂಬಗಳು ಸ್ವಾವಲಂಬಿಯಾದವು. ಹತ್ತು ಹೆಣ್ಣುಮಕ್ಕಳು ಹೊಸ್ತಿಲ ದಾಟಿದ್ದಕ್ಕೆ ಒಂದು ಊರಿಗೆ ಹಿರಿಮೆ ಬಂತು.

ಮೊಮ್ಮಕ್ಕಳನ್ನು ಆಡಿಸುವ ವಯಸ್ಸಿನಲ್ಲಿಯೂ ಇವರು ಹಲಗೆ ಹಿಡಿದುಕೊಂಡರು. ಸಂಕೋಚ, ಸಂಕೋಲೆಗಳನ್ನು ಮೀರಿ ಉತ್ತಮ ಕಲಾವಿದೆಯರು ಅನ್ನಿಸಿಕೊಂಡರು. ಊರೂರು ಸುತ್ತಿ, ಹಾಡಿ, ಕುಣಿದು, ಹಲಗೆ ನುಡಿಸಿ ತಮ್ಮ ಛಾಪು ಮೂಡಿಸಿದರು.

ತಂಡದಲ್ಲಿ ಶಿಸ್ತು ತಂದಿರುವ ಅಕ್ಕನಾಗಮ್ಮ, ಎಲ್ಲರಿಗೂ ತಮ್ಮದೇ ಹಣದಿಂದ ಸಮವಸ್ತ್ರ ಕೊಡಿಸಿದ್ದಾರೆ. ಕಾರ್ಯಕ್ರಮಕ್ಕೆ ಸ್ವಂತ ಖರ್ಚಿನಲ್ಲಿ ಕರೆದುಕೊಂಡು ಹೋಗಿ–ಬರುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಮೇಳದ ನೋಂದಣಿ ಮಾಡಿಸಿದ್ದಾರೆ. ಎರಡು ವರ್ಷಗಳ ಹಿಂದೆ ಅವರು ನಿವೃತ್ತರಾದರು. ಆದರೂ ಹಲಗೆ ಸದ್ದು ಕೇಳುತ್ತಲೇ ಇದೆ.

ಹಲಗೆ ಸದ್ದಿಗೆ ಹೆಜ್ಜೆ ಹಾಕಿದ ಶಿಕ್ಷಕಿ ಅಕ್ಕನಾಗಮ್ಮ

ಕನಸು ಹಲವು

ಮಹಿಳಾ ಕೋಲಾಟ ತಂಡ ಕೀಲುಕುದುರೆ ತಂಡ ಮುಖವಾಡದ ತಂಡ ಯುವತಿಯರ ತಂಡ ಕಟ್ಟುವ ಕನಸಿದೆ. ಈಗಾಗಲೇ ಹದಿನೈದು ಹೆಣ್ಣುಮಕ್ಕಳ ಭಜನಾ ಮೇಳ ಸಿದ್ಧವಾಗಿದೆ. ಪುರಾಣ ಪ್ರವಚನ ಜಾತ್ರೆ ಮದುವೆ ಕಾರ್ಯಕ್ರಮಗಳಲ್ಲೂ ಈ ತಂಡ ಭಜನೆ ಮಾಡಿ ಹೆಸರು ಗಳಿಸುತ್ತಿದೆ. ಒಂದೇ ಊರಿನಲ್ಲಿ ಎಲ್ಲ ಪ್ರಕಾರದ ಕಲಾವಿದೆಯರ ತಂಡ ಇರಬೇಕು ಎಂಬುದು ನನ್ನ ಕನಸು
ಅಕ್ಕನಾಗಮ್ಮ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.