ಬೆಳಗಾವಿಯಲ್ಲಿ ಬೆಳಗಿನಜಾವ ಜೇಡರ ಬಲೆಯ ಮೇಲೆ ಇಬ್ಬನಿ ಹನಿಗಳು ಹೆಣೆದ ಮುತ್ತಿನ ಸರ
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಮನೆಯ ಮೂಲೆಯಲ್ಲೆಲ್ಲೋ ಜೇಡರಬಲೆ ಕಂಡರೆ ಏನು ಮಾಡುತ್ತೀರಿ? ಪೊರಕೆಯಿಂದ ಅದನ್ನು ಜಾಡಿಸಿ ಸ್ವಚ್ಛ ಮಾಡುತ್ತೀರಿ. ಜೇಡವನ್ನು ಹುಡುಕಿ ಹೊಡೆದು ಸಾಯಿಸುತ್ತೀರಿ. ಜೇಡಗಳು ಮನೆಯ ಅಂದಗೆಡಿಸುತ್ತವೆ, ರೋಗ ಹರಡುತ್ತವೆ ಎಂದು ಭಾವಿಸಿದ್ದೇ ಇದಕ್ಕೆ ಕಾರಣ. ಆದರೆ, ಜೀವಸಂಕುಲದ ಸರಣಿಯಲ್ಲಿ ಜೇಡಗಳು ಮಾನವನಿಗೆ ಉಪಕಾರ ಮಾಡುತ್ತಲೇ ಬಂದಿವೆ ಎನ್ನುವುದು ತುಂಬಾ ಜನರಿಗೆ ಗೊತ್ತೇ ಇಲ್ಲ. ಇವು ರೋಗಕಾರಕ ಕ್ರಿಮಿಗಳನ್ನು ಕೊಂದು ತಿನ್ನುತ್ತವೆ. ಆಶ್ರಯ ನೀಡುವ ಮನೆಯ ಕುಟುಂಬದ ಆರೋಗ್ಯ ಕಾಪಾಡುವ ಹೊಣೆಯನ್ನು ಹೊತ್ತುಕೊಳ್ಳುತ್ತವೆ. ಕಾಡು, ಮನೆ, ಕಚೇರಿಗಳಲ್ಲಿ ಠಿಕಾಣಿ ಹೂಡುವ ಈ ಅತಿಥಿಗಳು ಪರಿಸರವನ್ನು ಇನ್ನಷ್ಟು ಅಂದಗೊಳಿಸುವ ಕೌಶಲ ಹೊಂದಿವೆ.
ಮನುಷ್ಯರು ಮಾತ್ರವಲ್ಲ, ಸಸ್ಯಗಳಿಗೂ, ಇತರ ಪ್ರಾಣಿಗಳಿಗೂ ತೊಂದರೆ ಕೊಡುವುದಿಲ್ಲ. ಅವು ನಮ್ಮ ರಕ್ತ ಹೀರುವುದಿಲ್ಲ. ಸಸ್ಯಗಳನ್ನು, ಕೃಷಿ ಬೆಳೆಗಳನ್ನು, ಸಂಗ್ರಹಿಸಿಟ್ಟ ಧಾನ್ಯಗಳನ್ನು ಹಾಳು ಮಾಡುವುದಿಲ್ಲ. ಮನೆಗಳಲ್ಲಿ ಸೊಳ್ಳೆ, ನೊಣ, ಜಿರಳೆ ಇತ್ಯಾದಿ ರೋಗಕಾರಕಗಳನ್ನು ತಿನ್ನುತ್ತವೆ. ಹೊಲ, ತೋಟ, ಗದ್ದೆ, ಅಡವಿಗಳಲ್ಲಿ ಸಸ್ಯಗಳ ಎಲೆಗಳನ್ನು ಭಕ್ಷಿಸುವ–ಕಾಂಡ ಕೊರೆವ ಹಾಗೂ ರಸ ಹೀರುವ ಹಾನಿಕಾರಕ ಕೀಟಗಳನ್ನು ಮತ್ತು ಅವುಗಳ ಮರಿಹುಳುಗಳನ್ನು ಜೇಡಗಳು ತಿಂದುಹಾಕುತ್ತವೆ. ಅಷ್ಟರಮಟ್ಟಿಗೆ ಅವು ಪರೋಪಕಾರಿ.
‘ಸ್ಪೈಡರ್‌ಮ್ಯಾನ್’ ಸಿನಿಮಾ ಸರಣಿಗಳಲ್ಲಿ ಜೇಡವನ್ನು ಆವಾಹನೆ ಮಾಡಿಕೊಂಡ ನಟ ಸಮಾಜದ ರಕ್ಷಣೆ ಮಾಡುತ್ತಾನೆ. ಅಂಥದ್ದೇ ಕೆಲಸವನ್ನು ಜೇಡಗಳು ನಿಜವಾಗಿಯೂ ಮಾಡುತ್ತವೆ ಎಂಬುದನ್ನು ಸಂಶೋಧಿಸಿದ್ದಾರೆ ಜೀವ ವೈವಿಧ್ಯ ಸಂಶೋಧಕ ಮಂಜುನಾಥ ಶಾಮಸುಂದರ ನಾಯಕ.
ನರಗುಂದದ ಜ್ಞಾನಮುದ್ರಾ ಪಬ್ಲಿಕ್ ಸ್ಕೂಲ್‌ನ ಆಡಳಿತಾಧಿಕಾರಿ ಆಗಿರುವ ನಾಯಕ, ಪ್ರವೃತ್ತಿಯಲ್ಲಿ ಸಂಶೋಧಕ. ಇರುವೆಯಿಂದ ಹಿಡಿದು ಆನೆಯವರೆಗೂ ಅವರು ಮೂರು ದಶಕಗಳಿಂದ ಜೀವ ವೈವಿಧ್ಯ ಅಧ್ಯಯನ– ಸಂಶೋಧನೆ ಮಾಡಿದ್ದಾರೆ. ಎಲ್ಲಿಯೇ ಜೇಡರಬಲೆ ಕಂಡರೂ ಸಾಕು; ಅಲ್ಲಿಗೆ ಹೋಗುತ್ತಾರೆ. ಅತ್ಯಂತ ಅಪರೂಪದ ಈ ಜೀವಿಯ ಬಗ್ಗೆ ಸಾಕಷ್ಟು ಕೌತುಕದ ಸಂಗತಿಗಳನ್ನು ಅವರು ಹಂಚಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ಬೆಳಗಿನಜಾವ ಜೇಡರ ಬಲೆಯ ಮೇಲೆ ಮುತ್ತಿನ ಹನಿಗಳ ಲೀಲೆ
ಸಾಮಾನ್ಯವಾಗಿ ಭಾವಿಸಿರುವಂತೆ ಜೇಡ ಕೀಟಗಳ ಗುಂಪಿಗೆ ಸೇರಿಲ್ಲ. ಜೈವಿಕವಾಗಿ ‘ಸಂಧಿ ಪದಿ’ ವರ್ಗಕ್ಕೆ ಸೇರಿರುವ ಇದು ವಾಸ್ತವವಾಗಿ ಚೇಳುಗಳ ಅತ್ಯಂತ ನಿಕಟ ಸಂಬಂಧಿ. ‘ಎಂಟು ಕಾಲುಗಳು, ಕುಡಿಮೀಸೆಗಳ ನಾಸ್ತಿತ್ವ’ ಈ ಎರಡು ಲಕ್ಷಣಗಳು ಜೇಡವು ಇತರೆ ಕೀಟಗಳಿಂದ ಭಿನ್ನವಾಗಿಸಿವೆ.
ಜೇಡಗಳಲ್ಲಿ ಹಲವು ವಿಧಗಳಿವೆ. ತೋಟ ಜೇಡ, ತೋಳ ಜೇಡ, ಬಾಳೆ ಜೇಡ, ನವಿಲು ಜೇಡ, ಮನೆ ಜೇಡ, ನೆಗೆವ ಜೇಡ, ಕೀಲು ಕವಾಟ ಜೇಡ, ಆಲಿಕೆ ಬಲೆ ಜೇಡ, ಒಂಟೆ ಜೇಡ, ಬೋಲಾಸ್ ಜೇಡ, ವಿಧವೆ ಜೇಡ ಇತ್ಯಾದಿ. ಈವರೆಗೆ ಜೇಡಗಳ ಸುಮಾರು 45 ಸಾವಿರ ಪ್ರಭೇದಗಳನ್ನು ಗುರುತಿಸಲಾಗಿದೆ. ಸಹ್ಯಾದ್ರಿ ಶ್ರೇಣಿಗಳಲ್ಲಿ ಜೇಡಗಳನ್ನು ಗುರುತಿಸಬಹುದು. ಆದರೆ, ಅಮೆಜಾನ್‌ನಂಥ ದಟ್ಟಾರಣ್ಯದಲ್ಲಿ ಪ್ರವೇಶ ಸಾಧ್ಯವಿಲ್ಲ. ಅಲ್ಲಿನ ಜೇಡಗಳನ್ನು ಅಂದಾಜಿಸಬಹುದಷ್ಟೇ.
‘ಕೆಲವು ತಜ್ಞರ ಅಂದಾಜಿನ ಪ್ರಕಾರ, ಭೂಮಿ ಮೇಲೆ ಜೇಡಗಳ ಪ್ರಭೇದಗಳ ಒಟ್ಟು ಸಂಖ್ಯೆ ಒಂದು ಲಕ್ಷಕ್ಕೂ ಅಧಿಕ ಇರಬಹುದು! ಹಾಗಾಗಿಯೇ ಕೃಷಿ ಭೂಮಿ ಮತ್ತು ಅಡವಿಗಳಲ್ಲಿ ಜೇಡಗಳ ದಟ್ಟಣೆ ವಿಪರೀತ. ಒಂದು ಲೆಕ್ಕಾಚಾರದ ಪ್ರಕಾರ ಸಮೃದ್ಧ ಬೆಳೆ ಬೆಳೆದು ನಿಂತ ಪ್ರತಿ ಎಕರೆ ತೋಟದಲ್ಲಿ ಇರಬಹುದಾದ ಜೇಡಗಳ ಸಂಖ್ಯೆ ಸುಮಾರು 20 ಲಕ್ಷ! ಸಾಮಾನ್ಯವಾಗಿ ಹೊಲ–ಗದ್ದೆಗಳಲ್ಲಿ ನೂರೋ–ಇನ್ನೂರೋ ಬಲೆಗಳು ನೇತಾಡುವುದನ್ನು ಗಮನಿಸುತ್ತೇವೆ. ಆದರೆ, ಉದುರಿಬಿದ್ದ ಒಂದು ಎಲೆಯ ಮೇಲೂ ಜೇಡವು ಬಿಳಿಬಣ್ಣದ ಮೊಟ್ಟೆಚೀಲ (Egg case) ಕಟ್ಟುತ್ತದೆ. ಅದರಲ್ಲಿ ನೂರಾರು ಮೊಟ್ಟೆಗಳನ್ನು ಜತನ ಮಾಡಿ ಬೆಳೆಸುತ್ತದೆ. ಇಂಥ ಸಾವಿರಾರು ಮೊಟ್ಟೆಚೀಲಗಳು ಪ್ರತಿ ಗದ್ದೆಯಲ್ಲೂ ಇರುತ್ತವೆ. ಬರಿಗಣ್ಣಿಗೆ ಕಾಣದಷ್ಟು ಪುಟಾಣಿ ಜೇಡಗಳೂ ದೊಡ್ಡ ಸಂಖ್ಯೆಯಲ್ಲಿ ಇರುತ್ತವೆ’ ಎಂಬುದು ಮಂಜುನಾಥ ಅವರ ವಿವರಣೆ.
ಬೆಳಗಾವಿಯಲ್ಲಿ ಬೆಳಗಿನಜಾವ ಜೇಡರ ಬಲೆಯ ಮೇಲೆ ಮುತ್ತಿನ ಹನಿಗಳ ಲೀಲೆ
ಸೂಜಿಮೊನೆಯಷ್ಟೇ ಚಿಕ್ಕ ಗಾತ್ರದಿಂದ ಹಿಡಿದು ಅಂಗೈ ಅಗಲ ಗಾತ್ರ ಜೇಡಗಳೂ ಪ್ರಪಂಚದ ಬೇರೆ ಬೇರೆ ಕಡೆ ಸಿಗುತ್ತವೆ. ಎಲ್ಲ ಜೇಡ ಪ್ರಭೇದಗಳೂ ‘ರೇಷ್ಮೆ’ಯನ್ನು ತಯಾರಿಸಿ ದಾರ ನೂಲುತ್ತವೆ. ಅದಕ್ಕೆಂದೇ ಅವುಗಳ ಶರೀರದೊಳಗೆ ಹಿಂಬದಿಯಲ್ಲಿ ರೇಷ್ಮೆ ಉತ್ಪಾದಿಸುವ, ಅದನ್ನು ದಾರವನ್ನಾಗಿ ನೂಲುವ ವಿಶಿಷ್ಟ ಅಂಗಗಳಿವೆ.
ಆದರೆ ಹುಳು, ಕೀಟ, ಕಪ್ಪೆ, ಹಲ್ಲಿಗಳನ್ನು ಸೆರೆಹಿಡಿಯಲು ಇತರ ನಾನಾ ವಿಧದ ಮೃತ್ಯುಪಾಶಗಳನ್ನು ನೇಯುತ್ತವೆ. ಬಲೆಯನ್ನೇ ನಿರ್ಮಿಸದೆ ಕಾದು ಕುಳಿತು ಸನಿಹ ಬಂದ ಕೀಟದ ಮೇಲೆ ಅಂಟನ್ನು ಉಗಿದು ಬಂಧಿಸುವ, ಆಹಾರ ಕೀಟದ ಬೆನ್ನು ಹತ್ತಿ ಹಿಡಿದು ವಿಷ ಚುಚ್ಚುವ ಜೇಡ ವಿಧಗಳೂ ಇವೆ. ಬೇಟೆಗಷ್ಟೇ ಅಲ್ಲದೆ ತಾವೇ ಸುರಕ್ಷಿತವಾಗಿ ಅಡಗಲು ಮೊಟ್ಟೆಗಳನ್ನು ಕಾಪಾಡಲು, ಒಂದೆಡೆಯಿಂದ ಮತ್ತೊಂದೆಡೆಗೆ ತೇಲಿ ಸಾಗಲೂ ಜೇಡಗಳು ರೇಷ್ಮೆಯನ್ನು ಬಳಸುತ್ತವೆ.
ಜೇಡಗಳು ಇಲ್ಲವಾದರೆ ಅಡವಿ, ಹುಲ್ಲು ಬಯಲು ಇತ್ಯಾದಿ ಸಕಲ ವಿಧ ಸಸ್ಯ ಪ್ರಧಾನ ಜೀವಾವಾರುಗಳು ಪಿಡುಗಿನ ಕೀಟಗಳ ಅನಿಯಂತ್ರಿತ ಹಾವಳಿಯಿಂದ ರೋಗಗ್ರಸ್ತವಾಗುತ್ತವೆ. ವಿನಾಶದ ಹಾದಿ ಹಿಡಿಯುತ್ತವೆ.
ಜೇಡಗಳು ನೂರಾರು ಪಕ್ಷಿ ಪ್ರಭೇದಗಳಿಗೆ ಆಹಾರ ಮೂಲ ಕೂಡ ಆಗಿವೆ. ಕೆಲವಾರು ಹಕ್ಕಿ ಪ್ರಭೇದಗಳು ತಮ್ಮ ಪುಟ್ಟ, ಸುಂದರ, ದೃಢ ಗೂಡುಗಳನ್ನು ನಿರ್ಮಿಸಿಕೊಳ್ಳಲು ಜೇಡರಬಲೆಯ ರೇಷ್ಮೆ ದಾರಗಳೇ ಪ್ರಧಾನ ಸಾಮಗ್ರಿ ಕೂಡ ಆಗಿವೆ.
ಇನ್ನೂ ಒಂದು ವಿಶೇಷ ಏನೆಂದರೆ; ಕಾಂಬೋಡಿಯಾ, ಕೊಲಂಬಿಯಾ ಮತ್ತು ವೆನೆಜುವೆಲಾ ದೇಶಗಳಲ್ಲಿ ಜೇಡಗಳು ಮನುಷ್ಯರಿಗೆ ಆಹಾರವಾಗಿವೆ. ದೊಡ್ಡ ಗಾತ್ರದ ಜೇಡಗಳನ್ನು ಹಿಡಿದು, ಬಿದಿರಿನ ಕೊಳವೆಗಳಲ್ಲಿ ತುಂಬಿ, ಕೆಂಡಗಳ ಮೇಲಿಟ್ಟು ಹುರಿದು ತಿನ್ನುವ ಕ್ರಮ ಅಲ್ಲೆಲ್ಲ ವ್ಯಾಪಕವಾಗಿದೆ.
ಬೆಳಗಾವಿಯಲ್ಲಿ ಬೆಳಗಿನಜಾವ ಅಂದವಾದ ಬಲೆ ಹೆಣೆದ ಜೇಡರ
ಕೆಲವು ಜೇಡಗಳು ದೊಡ್ಡದಾದ, ಎದ್ದುಕಾಣುವ ಬಲೆಗಳನ್ನು ನಿರ್ಮಿಸುತ್ತವೆ. ಹಗಲಿನ ಪರಭಕ್ಷಕಗಳಿಂದ ಪತ್ತೆಹಚ್ಚುವುದನ್ನು ತಪ್ಪಿಸಲು ರಾತ್ರಿಯೇ ಬಲೆ ಹೆಣೆಯುತ್ತವೆ. ಜೇಡರ ಕೌಶಲ ಗುಣದಲ್ಲಿ ಇದೂ ಒಂದು. ಕೆಲವು ಜೇಡಗಳು ಶಕ್ತಿಗಾಗಿ ಮತ್ತು ವಸ್ತುಗಳನ್ನು ಮರುಬಳಕೆ ಮಾಡಲು ತಮ್ಮ ಜಾಲಗಳನ್ನೇ ತಿನ್ನುತ್ತವೆ. ರೇಷ್ಮೆ ಪ್ರೊಟೀನ್‌ಗಳನ್ನು ರೂಪಿಸುವ ‘ಅಮೈನೋ ಆಮ್ಲ’ವನ್ನು ಪಡೆಯಲು ಅವು ರೇಷ್ಮೆಯನ್ನು ಕೆಡವಿ ಸೇವಿಸುತ್ತವೆ. ಮತ್ತೆ ಅದನ್ನೇ ಬಲೆಯಾಗಿ ಹೆಣೆಯುತ್ತವೆ. ರೇಷ್ಮೆ ಪ್ರೊಟೀನ್‌ಗಳು ಜೇಡಕ್ಕೆ ಶಕ್ತಿ ಒದಗಿಸುತ್ತವೆ. ರೇಷ್ಮೆಯನ್ನು ಸೇವಿಸುವ ಮೂಲಕ ಜೇಡವು ತನ್ನ ಶಕ್ತಿಯ ಸಂಗ್ರಹವನ್ನು ಪುನಃ ತುಂಬಿಸಿಕೊಳ್ಳಬಹುದು.
ಅನೇಕ ಜೇಡಗಳು ನಿಶಾಚರಿಗಳಾಗಿದ್ದು, ರಾತ್ರಿಯೇ ತಮ್ಮ ಬಲೆಗಳನ್ನು ಹೆಣೆಯುತ್ತವೆ. ಸುಲಭವಾಗಿ ಬೇಟೆ ಸೆರೆಹಿಡಿಯಲು ಮತ್ತು ಪರಭಕ್ಷಕಗಳನ್ನು ತಪ್ಪಿಸಲು ಮತ್ತು ಶಕ್ತಿಯನ್ನು ಸಂರಕ್ಷಿಸಲು ಹೀಗೆ ಮಾಡುತ್ತವೆ. ‘ಗಾರ್ಡನ್ ಆರ್ಬ್ ವೀವರ್’ನಂಥ ಜೇಡಗಳು ತಮ್ಮ ಬಲೆಯಲ್ಲೇ ಉಬ್ಬುಗಳನ್ನು ನಿರ್ಮಿಸಿಕೊಂಡು, ಅದರಲ್ಲೇ ಮರೆಮಾಚುವ ಚಾಕಚಕ್ಯತೆ ಹೊಂದಿವೆ. ಪರಭಕ್ಷಕಗಳಿಂದ ತಪ್ಪಿಸಿಕೊಳ್ಳಲು ಈ ಉಪಾಯ ಮಾಡುತ್ತವೆ. ಹೆಚ್ಚಾಗಿ, ಪಕ್ಷಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಈ ಹೆಜ್ಜೆ ಇಡುತ್ತವೆ.
ಇಷ್ಟೆಲ್ಲ ಉಪಯುಕ್ತವಾಗಿರುವ ಜೇಡ ಮತ್ತು ಅದರ ಬಲೆಯನ್ನು ಕುತೂಹಲದಿಂದ ಗಮನಿಸಿ. ಆಗ ಅದರ ಮೇಲೆ ಸ್ವಲ್ಪವಾದರೂ ಪ್ರೀತಿ ಹುಟ್ಟಬಹುದು.
ಬೆಳಗಾವಿಯಲ್ಲಿ ಬೆಳಗಿನಜಾವ ಅಂದವಾದ ಬಲೆ ಹೆಣೆದ ಜೇಡರ ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
* ಜೇಡ ರೇಷ್ಮೆ ಅತ್ಯಂತ ದೃಢ. ಜೇಡದ ರೇಷ್ಮೆ ದಾರ ಅಷ್ಟೇ ದಪ್ಪದ ಉಕ್ಕಿನ ತಂತಿಗಿಂತ ಹೆಚ್ಚು ಬಲಿಷ್ಠ; ಅದರ ಸ್ಥಿತಿಸ್ಥಾಪಕ ಬಲ ನೈಲಾನ್‌ಗಿಂತ ಅಧಿಕ. ಜೊತೆಗೆ ಅದರ ಅತ್ಯಂತ ಹಗುರ ಗುಣವೂ ಸೇರಿ ಜೇಡ ರೇಷ್ಮೆ ಹಲವಾರು ಅದ್ಭುತ ತಾಂತ್ರಿಕ ಆವಿಷ್ಕಾರಗಳಿಗೆ ಅತ್ಯುಪಯುಕ್ತವೆನಿಸಿದೆ.
* ಜೇಡ ರೇಷ್ಮೆ ಬಳಸಿ ತುಂಬ ಹಗುರವಾದ, ಸುಲಭವಾಗಿ ಬಳುಕುವ, ಸದೃಢವಾದ ಗುಂಡು ನಿರೋಧಕ ಕವಚ ನಿರ್ಮಿಸುವ, ಅತ್ಯಂತ ಸಮರ್ಥ ಹೃದಯ ಕವಾಟಗಳನ್ನು, ರಕ್ತ ನಾಳಗಳನ್ನು ತಯಾರಿಸುವುದು ಸಾಧ್ಯ ಎಂಬಂತಾಗಿದೆ; ಆ ಕುರಿತು ಶೋಧಗಳು ನಡೆದಿವೆ.
* ಎಲ್ಲ ಜೇಡಗಳೂ ಕೀಟಗಳನ್ನು ಕೊಲ್ಲಲು ಸಾಕಾಗುವಂಥ ಮೃದು ಸಾಮರ್ಥ್ಯದ ವಿಷವನ್ನು ಹೊಂದಿವೆ. ಜೇಡಗಳ ವಿಶಿಷ್ಟ ವಿಷವನ್ನು ಬಳಸಿ ಸಂಧಿವಾತ, ಅಪಸ್ಮಾರ, ಆಲ್ಜೈಮರ್ಸ್ ಸಿಂಡ್ರೋಮ್, ಪಾರ್ಶ್ವವಾಯು, ಅನಿಯತ ಹೃದಯ ಬಡಿತ... ಇತ್ಯಾದಿ ಗಂಭೀರ ಅನಾರೋಗ್ಯಗಳಿಗೆ ಪ್ರಭಾವಶಾಲೀ ಔಷಧಗಳನ್ನು ಸಿದ್ಧಪಡಿಸಬಹುದೆಂಬುದು ಕೂಡ ಸಂಶೋಧನೆಗಳಿಂದ ಸ್ಪಷ್ಟವಾಗಿದೆ.
ಉಫ್... ಎಂದು ಊದಿದರೆ ಹಾರಿಹೋಗುವ ಜೇಡಗಳ ಒಟ್ಟಾರೆ ತೂಕ ಎಷ್ಟಿರಬಹುದು? ಅಧ್ಯಯನದಲ್ಲಿ ಈ ಅಚ್ಚರಿ ಸಂಗತಿಯನ್ನು ಮಂಜುನಾಥ ಹೊರಹಾಕಿದ್ದಾರೆ.
ಪ್ರಕೃತಿಯಲ್ಲಿನ ಕೀಟಗಳ ನಿಯಂತ್ರಣ ಮಾಡುವುದೇ ಜೇಡಗಳ ಅತ್ಯಂತ ಪ್ರಧಾನ ಪಾತ್ರ. ಜಗತ್ತಿನಾದ್ಯಂತ ಪ್ರತಿ ದಿನ ಜೇಡಗಳು ಬೇಟೆಯಾಡುವ ಕೀಟಗಳ ಪ್ರಮಾಣ ಕಲ್ಪನಾತೀತ. ಅದು ಸ್ಪಷ್ಟವಾಗಲು ಆ ಕುರಿತ ತುಂಬ ಕುತೂಹಲದ, ಪರಮ ವಿಸ್ಮಯದ್ದೂ ಆದ ಈ ವೈಜ್ಞಾನಿಕ ಲೆಕ್ಕಾಚಾರ ಹೀಗಿದೆ...
ಭೂಮಿಯಲ್ಲಿ ಯಾವುದೇ ಸಮಯದಲ್ಲಿ ಒಟ್ಟು 30 ದಶಲಕ್ಷ ಟನ್ ತೂಗುವಷ್ಟು ಜೀವಂತ ಜೇಡಗಳಿರುತ್ತವೆ. ಪ್ರತಿ ಜೇಡವೂ ಪ್ರತಿ ದಿನ ತನ್ನ ದೇಹ ತೂಕದ ಕನಿಷ್ಠ ಶೇಕಡ 10ರಷ್ಟು ಆಹಾರವನ್ನು ಬೇಟೆಯಾಡಿ ಸೇವಿಸುತ್ತದೆ. ಪ್ರತಿ ದಿನ ಜಗತ್ತಿನಲ್ಲಿ ಜೇಡಗಳು ಕೊಲ್ಲುವ ಕೀಟಗಳ ತೂಕ ಮೂರು ದಶ ಲಕ್ಷ ಟನ್ ಎಂದಾಯಿತು!
ಇದನ್ನು ಕೀಟಗಳ ಸಂಖ್ಯೆಗೆ ಪರಿವರ್ತಿಸಿದರೆ, ಪ್ರತಿ ದಿನ ಜೇಡಗಳಿಗೆ ಬಲಿಯಾಗುವ ಕೀಟಗಳ ಸಂಖ್ಯೆ ಒಂಬತ್ತು ದಶಲಕ್ಷ ಕೋಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.