ADVERTISEMENT

‘ಮುನ್ನ ಶತಕೋಟಿರಾಯರುಗಳಾಳಿದ ಧರೆಯ ತನ್ನದೆಂದೆನುತ ಶಾಸನವ ಬರೆಸಿ...’

ಮಂಜುನಾಥ ಕೊಳ್ಳೇಗಾಲ
Published 17 ಜೂನ್ 2020, 20:15 IST
Last Updated 17 ಜೂನ್ 2020, 20:15 IST
ಬಾಹುಬಲಿ
ಬಾಹುಬಲಿ   
""

ಮುಂದಿನ್ನೂ ಹೇಳುತ್ತಿದ್ದಾರೆ ದಾಸರು... ಬೇಡವೆಂದಿರಾ? ಬೇಡಬಿಡಿ ಅದು ಸಾವಿನ ವಿಷಯ, ನಮಗೇಕೆ ಅಲ್ಲವೇ? ಅದೇನಿದ್ದರೂ ಸಾಯುವವರ ತಲೆನೋವು. ನಮ್ಮಲ್ಲನೇಕರು ಚಿಂತಿಸುವುದೇ ಹೀಗೆ. ಧರ್ಮರಾಜನನ್ನು ಯಕ್ಷ ಪ್ರಶ್ನಿಸಿದನಂತೆ - ‘ಜಗತ್ತಿನಲ್ಲಿ ಅತಿಸೋಜಿಗದ ಸಂಗತಿ ಯಾವುದು?‘ ಅದಕ್ಕಾತ ಉತ್ತರಿಸಿದನಂತೆ: ‘ಜನ ದಿನಬೆಳಗಾದರೆ ಸಾವನ್ನು ನೋಡುತ್ತಿದ್ದರೂ ತಾವು ಮಾತ್ರ ಸ್ಥಿರವಾಗಿರಬೇಕೆಂದು ಇಚ್ಛಿಸುತ್ತಾರೆ, ಇದಕ್ಕಿಂತ ಸೋಜಿಗವೇ?‘ ಶಾಸನ ಬರೆಸಿಕೊಳ್ಳುವವರ ಕಥೆಯೂ ಇದೇ.

ಈತ ಭರತ; ಆದಿತೀರ್ಥಂಕರವೃಷಭದೇವನ ಮಗ. ತಮ್ಮಂದಿರೊಡನೆ ಸುಖದಿಂದ ರಾಜ್ಯವಾಳಿಕೊಂಡಿದ್ದವನ ಆಯುಧಾಗಾರದಲ್ಲಿ ಇದ್ದಕ್ಕಿದ್ದಂತೆ ಚಕ್ರರತ್ನವೊಂದು ಹುಟ್ಟಿಬಿಟ್ಟಿತು - ದಿಗ್ವಿಜಯಕ್ಕೆ ಸೂಚನೆಯಾಯಿತಲ್ಲ. ಸರಿ, ದಂಡೆತ್ತಿ ಹೊರಟ; ಭೂಮಂಡಲವನ್ನೆಲ್ಲ ಜಯಿಸಿಯೇ ಬಿಟ್ಟ. ಈ ಅಪ್ರತಿಮಸಾಧನೆ ಆಚಂದ್ರಾರ್ಕವಾಗಿ ನಿಲ್ಲಬೇಕಾದ್ದಲ್ಲವೇ? ಹೀಗೆಂದುಕೊಂಡು, ವೃಷಭಾಚಲದ ಭಿತ್ತಿಯಮೇಲೆ ತನ್ನ ‘ವಿಶ್ವವಿಶ್ವಂಭರಾವಿಜಯಪ್ರಶಸ್ತಿ’ಯನ್ನು ಕೆತ್ತಿಸಲು ಹೋದರೆ, ಕಂಡದ್ದಾದರೂ ಏನು? ಆ ಮಹಾಶಿಲಾಫಲಕ ಮುನ್ನಿನ ‘ಶತಕೋಟಿರಾಯರ’ ಅಂಥದೇ ಶಾಸನಗಳಿಂದ ಕಿಕ್ಕಿರಿದು ಹೋಗಿದೆ. ಭೂಮಿಗಿಳಿದು ಹೋದ ಭರತ, ಖಿನ್ನನಾಗಿ ಅಲ್ಲಿದ್ದೊಂದು ಶಾಸನವನ್ನು ಅಳಿಸಿ ತನ್ನ ವಿಜಯಗಾಥೆಯನ್ನು ಕೆತ್ತಿಸಿ ಅಯೋಧ್ಯೆಗೆ ಮರಳಿದ.

ಆದರೆ ಚಕ್ರರತ್ನ ಪುರಪ್ರವೇಶಮಾಡದೇ ಊರಾಚೆಯೇ ನಿಂತುಬಿಡಬೇಕೇ? ವಿಚಾರಿಸಿದಾಗ ತಮ್ಮಂದಿರಿನ್ನೂ ಅಜೇಯರಾಗಿಯೇ ಉಳಿದಿದ್ದಾರಾದ್ದರಿಂದ ದಿಗ್ವಿಜಯ ಮುಗಿದಿಲ್ಲವೆಂದು ತಿಳಿದುಬರುತ್ತದೆ. ತಮ್ಮಂದಿರಷ್ಟೇ? ಬರದಿರುವರೇ ಎಂಬ ಅಸಡ್ಡೆಯಿಂದ ‘ಬನ್ನಿಂ ಎಱಗಿಂ ಚಕ್ರೇಶಪಾದಾಬ್ಜದೊಳ್’ ಎಂದು ಬರೆಸಿ ಕಳುಹಿಸಿದ ಓಲೆ ತಮ್ಮಂದಿರನ್ನು ಕೆರಳಿಸುತ್ತದೆ. ಇವನ ಕಾಲಿಗೆರಗುವುದಕ್ಕೆ ಹೇಸಿದ ಧರ್ಮಪರಾಯಣರಾದ ಅವರು, ರಾಜ್ಯಕೋಶಗಳನ್ನು ತ್ಯಜಿಸಿ ಜಿನದೀಕ್ಷೆಯನ್ನು ಪಡೆಯುತ್ತಾರೆ. ಕೊನೆಯವನಾದ ಬಾಹುಬಲಿಕುಮಾರ ಮಾತ್ರ ಅಣ್ಣನನ್ನೆದುರಿಸಲು ನಿರ್ಧರಿಸುತ್ತಾನೆ.

ADVERTISEMENT

ನಿರಪರಾಧಿಗಳಾದ ಸೈನಿಕರು ಸಾಯುವುದು ಬೇಡವೆಂದು ನಿರ್ಧರಿಸಿ ಇಬ್ಬರೂ ಕೇವಲ ಪರಸ್ಪರಯುದ್ಧದಲ್ಲಿ ತೊಡಗುತ್ತಾರೆ - ಜಲಯುದ್ಧ ದೃಷ್ಟಿಯುದ್ಧಗಳೆರಡರಲ್ಲೂ ಗೆದ್ದ ಬಾಹುಬಲಿ, ಕೊನೆಯದಾದ ಮಲ್ಲಯುದ್ಧದಲ್ಲೂ ಗೆಲುವು ಸಾಧಿಸಿ, ಸೋತ ಅಣ್ಣನನ್ನು ಅಪ್ಪಳಿಸಿಬಿಡಲು ಮೇಲೆತ್ತುತ್ತಾನೆ. ಇನ್ನೇನು ನೆಲಕ್ಕಪ್ಪಳಿಸಬೇಕು, ತಾನು ಮಾಡಲಿದ್ದ ಘೋರವನ್ನರಿತು, ಅವನನ್ನು ಮೆಲ್ಲಗೆ ಕೆಳಗಿಳಿಸುತ್ತಾನೆ; ಕ್ರೋಧದಿಂದ ಭರತ ಚಕ್ರವನ್ನು ಪ್ರಯೋಗಿಸಿದರೆ ಅದು ಬಾಹುಬಲಿಗೆ ಪ್ರದಕ್ಷಿಣೆ ಬಂದು ಅವನ ಪಕ್ಕವೇ ನಿಂತುಬಿಡುತ್ತದೆ. ಈ ವಿಜಯದಿಂದ ಗರ್ವವುಂಟಾಗುವ ಬದಲು, ಬಾಹುಬಲಿಗೆ ವಿರಕ್ತಿ ಹುಟ್ಟುತ್ತದೆ. ‘ವೀರರ ಕತ್ತಿಯ ಮೊನೆಯಮೇಲೇ ವಿಹರಿಸುವ ಈ ರಾಜ್ಯಲಕ್ಷ್ಮಿ ನಿನ್ನ ವಕ್ಷದಲ್ಲೇ ಇರಲಿ’ ಎಂದು ತಾನು ಗೆದ್ದ ರಾಜ್ಯವನ್ನು ಅಣ್ಣನಿಗೊಪ್ಪಿಸಿ, ತನ್ನ ಅಕಾರ್ಯಕ್ಕಾಗಿ ಕ್ಷಮೆಯಾಚಿಸಿ, ಕೇವಲಜ್ಞಾನದ ಸಿದ್ಧಿಗಾಗಿ ಘೋರ ತಪಸ್ಸಿಗೆ ನಿಲ್ಲುತ್ತಾನೆ.

ಘೋರತಪಸ್ವಿಯ ಮೈಮೇಲೆ ಹುತ್ತ ಬೆಳೆಯುತ್ತದೆ, ಹಾವು ಹರಿಯುತ್ತದೆ, ಬಳ್ಳಿ ಹಬ್ಬುತ್ತದೆ, ಆದರೆ ವರ್ಷ ಕಳೆದರೂ ಕೇವಲಜ್ಞಾನ ಮಾತ್ರ ಸಿದ್ಧಿಸುವುದಿಲ್ಲ. ಇನ್ನೂ ತನ್ನಣ್ಣನ ನೆಲದ ಮೇಲೇ ನಿಂತಿರುವೆನೆಂಬ ‘ಮಾನಕಷಾಯ’ವನ್ನು ಬಾಹುಬಲಿಮುನಿಯ ಮನದಲ್ಲಿ ಗುರುತಿಸಿದ ಭರತ ಬಂದು, ಪೂಜಿಸಿ, ಈ ನೆಲ ತನ್ನದಲ್ಲವೆಂದೂ ಆತನದೇ ಭಿಕ್ಷೆಯೆಂದೂ ನಿವೇದಿಸಿಕೊಳ್ಳುತ್ತಾನೆ. ಆಗ ಬಾಹುಬಲಿಯ ಮನವು ಶುಭ್ರವಾಗಿ ಆತ ಕೇವಲಜ್ಞಾನವನ್ನು ಪಡೆಯುತ್ತಾನೆ. ಭರತನೂ ಹಲಕಾಲ ರಾಜ್ಯವನ್ನಾಳಿದನಂತರ, ವಿರಕ್ತಿಹೊಂದಿ ಕೇವಲಜ್ಞಾನವನ್ನು ಪಡೆಯುತ್ತಾನೆ.

ಒಂದರ್ಥದಲ್ಲಿ ಗೆದ್ದು ಸೋತ, ಮತ್ತೊಂದರ್ಥದಲ್ಲಿ ಸೋತು ಗೆದ್ದ ಕಥೆಯಿದು. ಅಂದಹಾಗೆ ಮನೆ-ಸೈಟು ಕೊಳ್ಳುವಾಗ, ಕ್ರಯಪತ್ರಕ್ಕೆ ಸಹಿ ಹಾಕುವಾಗೇನಾದರೂ ಈ ವೈರಾಗ್ಯಲಕ್ಷ್ಮಿ ಕೈಹಿಡಿದರೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.