ADVERTISEMENT

ಸಾಹಿತ್ಯ ಉತ್ಸವಕ್ಕೆ ಬೆಂಗಳೂರು ಸಜ್ಜು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 12:49 IST
Last Updated 5 ನವೆಂಬರ್ 2019, 12:49 IST
ಬೆಂಗಳೂರು ಸಾಹಿತ್ಯ ಉತ್ಸವಕ್ಕೆ ಸಜ್ಜಾದ ಹೋಟೆಲ್‌ ಲಲಿತ್‌ ಅಶೋಕ 
ಬೆಂಗಳೂರು ಸಾಹಿತ್ಯ ಉತ್ಸವಕ್ಕೆ ಸಜ್ಜಾದ ಹೋಟೆಲ್‌ ಲಲಿತ್‌ ಅಶೋಕ    

ದೇಶ, ವಿದೇಶಗಳ ಹೆಸರಾಂತ ಲೇಖಕರು, ಸಾಹಿತಿಗಳು ಮತ್ತು ಕಲಾವಿದರೊಂದಿಗೆ ಮುಖಾಮುಖಿಯಾಗುವ ಅವಕಾಶ ಕಲ್ಪಿಸುವ ಬೆಂಗಳೂರು ಸಾಹಿತ್ಯ ಉತ್ಸವಕ್ಕೆ (ಬಿಎಲ್‌ಎಫ್‌) ನಗರ ಸಜ್ಜಾಗಿದೆ.

ಹೋಟೆಲ್‌ ಲಲಿತ್‌ ಅಶೋಕ್‌ನಲ್ಲಿ ನವೆಂಬರ್‌ 9 ಮತ್ತು 10ರಂದು ಬೆಂಗಳೂರು ಸಾಹಿತ್ಯ ಉತ್ಸವದ ಎಂಟನೇ ಆವೃತ್ತಿ ನಡೆಯಲಿದೆ. 230ಕ್ಕೂ ಹೆಚ್ಚು ಅಂತರರಾಷ್ಟ್ರೀಯ, ಭಾರತೀಯ ಮತ್ತು ಬೆಂಗಳೂರಿನ ಲೇಖಕರು, ಸಾಹಿತಿಗಳು, ವಾಗ್ಮಿಗಳು ಭಾಗವಹಿಸಲಿದ್ದಾರೆ.

ಸತತ ಏಳು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಬಿಎಲ್‌ಎಫ್‌ನಲ್ಲಿ ಮೂರು ವೇದಿಕೆಗಳಿದ್ದು, ಹಲವು ಪುಸ್ತಕ ಮಳಿಗೆಗಳು ತಲೆ ಎತ್ತಲಿವೆ. ಇದೇ ಮೊದಲ ಬಾರಿ ಮಕ್ಕಳಿಗೆ ಮೂರು ಪ್ರತ್ಯೇಕ ವೇದಿಕೆ ನಿರ್ಮಿಸಲಾಗಿದೆ.

ADVERTISEMENT

ಎರಡು ದಿನಗಳ ಉತ್ಸವದಲ್ಲಿ ಭಾರತೀಯ ಇತಿಹಾಸ, ಹವಾಮಾನ ವೈಪರೀತ್ಯ, ಮಾನಸಿಕ ಆರೋಗ್ಯ, ಆರ್ಥಿಕತೆ, ಕಲೆ, ಪ್ರೀತಿ, ರಿಲೇಶನ್‌ಶಿಪ್ಸ್, ಉದಾರೀಕರಣ, ಕ್ರೀಡೆ, ಕಾವ್ಯ, ವಿಜ್ಞಾನ, ಭವಿಷ್ಯ ಸೇರಿದಂತೆ ಹಲವಾರು ಸಮಕಾಲೀನ ಸಮಸ್ಯೆಗಳ ಬಗ್ಗೆ ಸಂವಾದ, ಚರ್ಚೆ ನಡೆಯಲಿವೆ.

ಆಸ್ಟ್ರೇಲಿಯಾದ ಪರಿಸರ ತಜ್ಞ ಟಿಮ್‌ ಫ್ಲಾನೆರಿ, ಹ್ಯೂಗೊ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಲೇಖಕ ಇಯಾನ್‌ ಮ್ಯಾಕ್‌ ಡೋನಾಲ್ಡ್‌, ಅಂಕಣಕಾರ ಎಡ್‌ ಲ್ಯೂಸ್‌, ಕೀನ್ಯಾದ ಪ್ರಸಿದ್ಧ ಲೇಖಕ ವಾಂಜಿರು ಕೊಯ್ನೇಜ್‌, ಶ್ರೀಲಂಕಾದ ವಿಜ್ಞಾನ ಲೇಖಕ ಯುಧಂಜಯ ವಿಜಯರತ್ನೆ, ಭಯೋತ್ಪಾದನೆ ನಿಗ್ರಹ ತಜ್ಞ ಅಮೆರಿಕದ ಕ್ರಿಸ್ಟೈನ್‌ ಫೇರ್‌, ಕ್ರಿಕೆಟ್‌ ಅಂಪೈರ್‌ ಸೈಮನ್‌ ಟೌಫೆಲ್‌, ಫೆಂಚ್‌–ಇಂಡಿಯನ್‌ ಕವಿ ಕಾರ್ತಕ್‌ ನಾಯರ್‌, ಆಸ್ಟ್ರೇಲಿಯಾದ ಕವಿ ಸಮ್ಮೇಳನದ ರೂವಾರಿ ಲೂಸಿ ನೆಲ್ಸನ್‌, ಲೇಖಕ ಜೋಡಿಯಾದ ಲೀನಾ ಇಟಾಗಾಕಿ ಮತ್ತು ಜುರ್ಗಾ ವಿಲೆ ಮುಂತಾದವರು ಈ ಉತ್ಸವದ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

ಸಾಹಿತಿ ಗಿರೀಶ ಕಾರ್ನಾಡ ಅವರ ಜೀವನ, ಕೃತಿ, ನಾಟಕ, ಬರವಣಿಗೆಗಳ ಬಗ್ಗೆ ಬಿ. ಜಯಶ್ರೀ, ಕೆ. ಮರುಳಸಿದ್ಧಪ್ಪ ಮತ್ತು ಜಯಂತ್‌ ಕಾಯ್ಕಿಣಿ ಅವರು ಮಾತನಾಡಲಿದ್ದಾರೆ.

ಉತ್ಸವದಲ್ಲಿ ಯಾರೆಲ್ಲ ಇರಲಿದ್ದಾರೆ?

ಪರಿಸರ ತಜ್ಞ ಮಾಧವ್‌ ಗಾಡ್ಗೀಳ್‌,ನಟ ಪಂಕಜ್ ಕಪೂರ್‌, ನಟಿಯರಾದ ಸುಪ್ರೀಯಾ ಪಾಠಕ್, ಲೀಸಾ ರೇ, ಇಂಡಿಯನ್‌ ಸ್ಕೂಲ್‌ ಆಫ್‌ ಬ್ಯುಸಿನೆಸ್‌ ಸಹ ಸಂಸ್ಥಾಪಕ ರಜತ್‌ ಗುಪ್ತಾ, ಲೇಖಕರಾದ ವಿಕ್ರಂ ಸಂಪತ್‌, ದೇವದತ್ತ ಪಟ್ನಾಯಕ್‌, ಜೆರ್ರಿ ಪಿಂಟೊ, ಇತಿಹಾಸ ತಜ್ಞರಾದ ವಿಲ್ಲಿಯಂ ಡಾಲ್‌ರಿಂಪಲ್‌, ಮುಕೇಶ್‌ ಕೇಶವನ್‌, ಚಿಂತಕಜ ಅಗ್ನಿ ಶ್ರೀಧರ್‌, ಕವಯತ್ರಿ ಅರುಂಧತಿ ಸುಬ್ರಮಣ್ಯಂ, ಪತ್ರಕರ್ತೆ ಶಾಂತಾ ಗೋಖಲೆ, ಅಶೋಕ್‌ ಅಲೆಂಗ್ಸಾಂಡರ್‌, ರೋಹಿಣಿ ನಿಲೇಕಣಿ,ಲೆಫ್ಟಿನೆಂಟ್‌ ಜನರಲ್‌ ಸೈಯದ್‌ ಅತಾ ಹಸ್ನೇನ್‌ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಲೇಖಕರು ಮತ್ತು ಪತ್ರಕರ್ತರಾದ ಎಚ್‌.ಎಸ್‌. ಶಿವಪ್ರಕಾಶ್‌, ಪ್ರತಿಭಾ ನಂದಕುಮಾರ್‌, ಮೃದುಲಾ ಗರ್ಗ್‌, ಪರಮಿತಾ ಸತ್ಪತಿ, ಉನ್ನಿ ಆರ್‌., ಜಾನಿ ಮಿರಾಂಡಾ,ಟೋನಿ ಜೋಸೆಫ್‌, ಆರ್‌. ಜಗನ್ನಾಥನ್‌, ಪ್ರಿಯಾಂಕಾ ದುಬೆ, ವರ್ಗೀಸ್‌ ಕೆ. ಜಾರ್ಜ್‌, ಮಾರ್ಕ್‌ ಟಲ್ಲಿ, ಸುನಂದಾ ಮೆಹ್ತಾ, ಭಾವನಾ ಸೋಮಯ್ಯ ಜತೆಗಿರಲಿದ್ದಾರೆ.

ಮಕ್ಕಳಿಗೂ ಆದ್ಯತೆ

ಈ ಬಾರಿ ಉತ್ಸವದಲ್ಲಿ ವಿಭಿನ್ನ ವಯೋಮಾನದ ಮಕ್ಕಳಿಗಾಗಿಯೇ ಅಬ್ರಕಡಬ್ರ, ಖುಲ್‌ ಜಾ ಸಿಮ್‌, ಸಿಮ್‌ ಮತ್ತು ಶಾಜಾಮ್ ಎಂಬ ಮೂರು ವೇದಿಕೆ ಮತ್ತು ಪುಸ್ತಕ ಮಳಿಗೆಗಳನ್ನು ನಿರ್ಮಿಸಲಾಗಿದೆ. ಮಕ್ಕಳಿಗಾಗಿ ಬರವಣಿಗೆ ಮತ್ತು ಕತೆ ಹೇಳುವಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ರಚನಾತ್ಮಕ ಆಟೋಟ, ಸಂಗೀತ ಸ್ಪರ್ಧೆಗಳೂ ಇರಲಿವೆ.

ಎಲ್ಲರಿಗೂ ಮುಕ್ತ ಪ್ರವೇಶ

ಎರಡೂ ದಿನ ಬೆಳಗ್ಗೆ 10ರಿಂದ ಆರಂಭವಾಗುವಕಾರ್ಯಕ್ರಮ ರಾತ್ರಿಯವರೆಗೆ ನಡೆಯಲಿವೆ. ಪ್ರವೇಶ ಉಚಿತವಾಗಿದ್ದು ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದು.

ಹೆಸರು ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ www.bangaloreliteraturefestival.org ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.