ಪ್ರತಿ ವರ್ಷ ಜೂನ್ ತಿಂಗಳಲ್ಲಿ ನಮ್ಮೂರಿನ ಗ್ರಾಮ ದೇವತೆಯ ಜಾತ್ರೆ ನಡೆಯುತ್ತದೆ. ಪ್ರತಿ ವರ್ಷಕ್ಕಿಂತ ಈ ವರ್ಷ ನಮ್ಮ ಮನೆಯಲ್ಲಿ ಹೆಚ್ಚಿನ ಸಡಗರ ಇತ್ತು. ಕಾರಣ, ನಮ್ಮ ಅಜ್ಜಿ ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಹೊತ್ತಿದ್ದ ಹರಕೆಯ ತೀರಿಸುವುದಿತ್ತು.
ಜಾತ್ರಿ ದಿನ ಮನೆಯಲ್ಲಿ ಎಲ್ಲರೂ ಮದುವೆ ಸಂಭ್ರಮಕ್ಕಿಂತ ಹೆಚ್ಚಿನ ಸಂಭ್ರಮದಲ್ಲಿದ್ದರು. ನನಗೆ ನೌಕರಿ ದೊರೆತು ಮೂರು ತಿಂಗಳಾಗಿತ್ತು. ನಮ್ಮ ಅಜ್ಜಿಯ ಹರಕೆ ತೀರಿಸುವುದಕ್ಕೆ ಒಂದು ಕಾರಣ ನನಗೆ ನೌಕರಿ ಸಿಕ್ಕಿದ್ದು ಕೂಡ ಆಗಿತ್ತು. ಅಜ್ಜಿಯ ಬಹುದಿನಗಳ ಆಸೆ ನೆರವೇರಿಸಿದೆನೆಂಬ ಹೆಮ್ಮೆ ನನ್ನಲ್ಲಿ ಮೂಡಿತ್ತು.
ನಾನು ನಮ್ಮಜ್ಜಿಯ ಮೊದಲ ಮೊಮ್ಮಗ ಆಗಿರುವುದರಿಂದ ನನ್ನ ಹತ್ತಿರ ಅವಳು ಹಲವು ಸಲ ಮನಸ್ಸು ಬಿಚ್ಚಿ ಮಾತನಾಡುತ್ತಿದ್ದಳು. ತಾನು ಅನುಭವಿಸಿದ್ದ ಕಷ್ಟಗಳೆಲ್ಲವನ್ನೂ ಆಗಾಗ ಹೇಳುತ್ತಿದ್ದಳು. ಜಾತ್ರೆಯ ದಿನ ಮನೆಯಲ್ಲಿ ಮೂಡಿದ್ದ ಸಂಭ್ರಮ ಹಾಗೂ ಅಜ್ಜಿಯ ಖುಷಿ ನೋಡಿ ನನ್ನ ಮನಸ್ಸು ಹಿಂದಕ್ಕೆ ಓಡಿತು.
ನಮ್ಮ ಅಜ್ಜಿಗೆ ಬಹಳ ವರ್ಷಗಳವರೆಗೂ ಮಕ್ಕಳಾಗಿರಲಿಲ್ಲ. ಮದುವೆ ಆಗಿ 15 ವರ್ಷಗಳ ನಂತರ ಒಂದು ಮಗುವಾಯಿತು. ಆದರೆ, ಅದು ಹುಟ್ಟಿದ ಎರಡು ತಾಸಿನೊಳಗೆ ತೀರಿಹೋಯಿತು. ಹತಾಶೆಯಿಂದ ಬಳಲಿದ ನಮ್ಮ ಅಜ್ಜಿ ಆಗ ನಮ್ಮೂರಿನ ಗ್ರಾಮ ದೇವತೆಗೆ ಹರಕೆ ಹೊತ್ತಳು. ಹರಕೆಯ ಫಲವಾಗಿ ವರ್ಷದೊಳಗೆ ಮತ್ತೊಂದು ಮಗು ಜನಿಸಿತು. ಆದರೆ ಆ ಮಗುವಿನ ಆರೋಗ್ಯದಲ್ಲಿ ಸಹ ಏರುಪೇರಾಗಿತ್ತು. ನಮ್ಮದು ಬಡ ಕುಟುಂಬವಾಗಿದ್ದರಿಂದ ಹಾಗೂ ಹೀಗೂ ಹಣ ಹೊಂದಿಸಿ, ಆಸ್ಪತ್ರೆಗಳೇ ವಿರಳವಾಗಿದ್ದ ಆಗಿನ ಕಾಲದಲ್ಲಿ ದೂರದೂರಿನ ಆಸ್ಪತ್ರೆಗೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ, ಎತ್ತಿನ ಬಂಡಿಯಲ್ಲಿ ನಮ್ಮ ಅಜ್ಜಿ ತನ್ನ ಅಣ್ಣನ ಜೊತೆ ಆಸ್ಪತ್ರೆಗೆ ಬಂದಳು.
ಅಲ್ಲಿ ವೈದ್ಯರು ಮಗುವಿನ ತಪಾಸಣೆ ನಡೆಸಿ, ಮಗು ಸತ್ತಿದೆ ಎಂದು ಅಜ್ಜಿಯ ಅಣ್ಣನಿಗೆ ಹೇಳಿದರು. ಇದನ್ನು ಕೇಳಿ ಅವನಿಗೆ ದುಃಖ ಉಮ್ಮಳಿಸಿ ಬಂತು. ತನ್ನ ತಂಗಿಯ ಬಗ್ಗೆ ಯೋಚನೆ ಮಾಡಿದನು.ಮಗು ಬದುಕಿಲ್ಲ ಎಂಬ ವಿಷಯವನ್ನು ಕೇಳಿ ಎಲ್ಲಿ ತನ್ನ ತಂಗಿ ಆಘಾತಕ್ಕೊಳಗಾಗಿ ಹುಚ್ಚಿಯಾಗಿಬಿಡುತ್ತಾಳೋ ಎಂದು ಹೆದರಿದನು. ಅಜ್ಜಿಗೆ ತಿಳಿಯದಂತೆ ಮಗುವನ್ನು ಮಣ್ಣು ಮಾಡಲು ಗುಂಡಿ ತೋಡಿಸಿದನು.
ನಮ್ಮ ಅಜ್ಜಿ ತನ್ನ ಮಗುವನ್ನು ಎತ್ತಿನ ಬಂಡಿಯಲ್ಲಿ ಎತ್ತಿಕೊಂಡು ಕೂತಿದ್ದಳು. ಅಜ್ಜಿಯ ಅಣ್ಣನಿಗೆ ಆಗ ವಿಷಯ ಹೇಳದೆ ಬೇರೆ ದಾರಿಯಿರಲಿಲ್ಲ. ವೈದ್ಯರು ಹೇಳಿದ ವಿಷಯವನ್ನು ಅಜ್ಜಿಯ ಅಣ್ಣ ಆಕೆಗೆ ಹೇಳಿ ಮಗುವನ್ನು ಅವಳ ಕೈಯಿಂದ ಕಸಿದುಕೊಂಡು ಇನ್ನೇನು ಹೂಳುವವನ ಕೈಗೆ ಕೊಡಬೇಕಿತ್ತು. ಆ ಹೊತ್ತಿನಲ್ಲಿ ಅವನು (ಅಜ್ಜಿಯ ಅಣ್ಣ) ಅಳುತ್ತ ಮಗುವನ್ನು ಅಪ್ಪಿಕೊಂಡಾಗ ಮಗುವಿನ ಬಿಸಿ ಉಸಿರು ಅವನ ಎದೆಗೆ ಬಡಿಯಿತು. ಇದನ್ನು ಕಂಡು ಆಶ್ಚರ್ಯದಿಂದ ಆ ಮಗುವನ್ನು ಒಮ್ಮೆ ಚಿವುಟಿದನು. ಆಗ ಮಗು ಜೋರಾಗಿ ಅಳಲು ಶುರುಮಾಡಿತು. ಅಜ್ಜಿ ಹಾಗೂ ಅವಳ ಅಣ್ಣನ ಖುಷಿಗೆ ಪಾರವೇ ಇರಲಿಲ್ಲ.
ಅದೃಷ್ಟವಶಾತ್ ಬದುಕುಳಿದ ಆ ಮಗುವನ್ನು ನಮ್ಮ ಅಜ್ಜಿ ಕಷ್ಟಪಟ್ಟು ಸಾಕಿ, ಬೆಳೆಸಿ, ವಿದ್ಯಾವಂತನನ್ನಾಗಿ ಮಾಡಿದಳು. ನಮ್ಮ ಊರಿನಲ್ಲಿ ಸರ್ಕಾರಿ ನೌಕರಿ ಪಡೆದ ಮೊದಲಿಗನನ್ನಾಗಿ (ಕಾಲೇಜು ಉಪನ್ಯಾಸಕ) ಮಾಡಿದಳು. ಆ ಮಗು ನಮ್ಮ ತಂದೆ.
ತೀರಾ ಹಿಂದಿನ ಕಾಲದಲ್ಲಿದ್ದ ನನ್ನ ಮನಸ್ಸು ವಾಸ್ತವ ಲೋಕಕ್ಕೆ ಮರಳಲು ಯಾರೋ ಬಂದು ಬಡಿದಹಾಗೆ ಆಯಿತು. ತೇವಗಣ್ಣು ತೆರೆದು ನೋಡಿದರೆ ನನ್ನ ತಂಗಿ. ‘ಎಲ್ಲರೂ ದೇವಸ್ಥಾನಕ್ಕೆ ಹೊರಡಲು ಸಿದ್ಧರಾಗಿದ್ದಾರೆ. ನಿನಗಾಗಿ ಕಾಯುತ್ತಿದ್ದಾರೆ ಬೇಗ ಬಾ...’ ಎಂದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.