ಶಿರಸಿ: ದೀಪಾವಳಿ, ಇದು ಇತರ ಕಡೆಗಳಲ್ಲಿ ಬೆಳಕಿನ ಹಬ್ಬ. ಮಲೆನಾಡಿನ ಮಡಿಲು ಶಿರಸಿ, ಸುತ್ತಮುತ್ತಲಿನ ರೈತರಿಗೆ ಇದು ಕೃಷಿ ಕಾಯಕದೊಟ್ಟಿಗೆ ಖುಷಿ ತರುವ ದೊಡ್ಡ ಹಬ್ಬ.
ಉಳಿದ ಹಬ್ಬಗಳ ಆಚರಣೆಯಲ್ಲಿ ಕಾಲಕ್ಕೆ ತಕ್ಕ ಬದಲಾವಣೆ ಉಂಟಾಗಿರಬಹುದು. ಆದರೆ ದೀಪಾವಳಿ ಮಾತ್ರ ಈ ಭಾಗದಲ್ಲಿ ಹಿಂದಿನ ಸಾಂಪ್ರದಾಯಿಕತೆ ಉಳಿಸಿಕೊಂಡು ಬಂದಿದೆ. ಜನಪದೀಯ ಶೈಲಿಯ ಜೀವನವನ್ನು ಹಬ್ಬದ ಘಳಿಗೆ ಯುವ ಪೀಳಿಗೆಯ ಎದುರು ತೆರೆದಿಡುತ್ತಿದೆ.
ಮೂರುದಿನಗಳ ಕಾಲ ನಡೆಯುವ ಹಬ್ಬದಲ್ಲಿ ಬೂರೆ ಹಬ್ಬ, ಬಲೀಂದ್ರ ಪ್ರತಿಷ್ಠಾಪನೆ, ಗೋಪೂಜೆ, ಹುಲಿದೇವರಿಗೆ ಪೂಜೆ ನಡೆಸಲಾಗುತ್ತದೆ. ಜತೆಗೆ ಚೌಲೆತ್ತು, ಹಸುವಿನ ಕೊರಳಿಗೆ ಕಟ್ಟಿದ ದಂಡೆ ಹರಿಯುವ ಸಾಹಸಮಯ ಚಟುವಟಿಕೆಯೂ ಇದೆ.
ಸಾಂಪ್ರದಾಯಿಕ ಆಚರಣೆ
ಹಬ್ಬದ ಮೊದಲ ದಿನವಾದ ನರಕ ಚತುರ್ದಶಿಯಂದು ಎಣ್ಣೆ ಸ್ನಾನ ಮಾಡಲಾಗುತ್ತದೆ. ಅಂದು ಬಲೀಂದ್ರನನ್ನು ಪ್ರತಿಷ್ಠಾಪಿಸಲಾಗುತ್ತದೆ. ಸವತೆ ಕಾಯಿ, ಮೊಗೆ ಕಾಯಿಯನ್ನು ಕಲಶದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ತೆಂಗಿನಕಾಯಿಯ ಮೇಲೆ ಅಡಿಕೆಯ ಸಿಂಗಾರ ಇಟ್ಟರೆ ಬಲೀಂದ್ರ ಪ್ರತಿಷ್ಠಾಪನೆಯಾದಂತೆ. ಅಮಾವಾಸ್ಯೆಯ ದಿನ ಲಕ್ಷ್ಮೀಪೂಜೆ ನಿಮಿತ್ತ ವಾಹನ, ಅಂಗಡಿಗಳಿಗೆ, ಯಂತ್ರೋಪಕರಣಗಳಿಗೆ ವಿಶೇಷ ಪೂಜೆ ಮಾಡಲಾಗುತ್ತದೆ.
ಗೋಪೂಜೆ ಸಂಭ್ರಮ
ಬಲಿಪಾಡ್ಯಮಿಯ ದಿನ ಗೋಪೂಜೆ ಆಚರಣೆ ನಡೆಯುತ್ತದೆ. ಪೂಜೆ ನಡೆಸುವಾಗ ಕಾಡುಬಳ್ಳಿಗೆ ಅಡಿಕೆ, ಪಚ್ಚೆತೆನೆ ಪೊಣಿಸಿ ರಚಿಸಿದ ಹಾರ (ಇದಕ್ಕೆ ದಂಡೆ ಎನ್ನುತ್ತಾರೆ) ಕಟ್ಟಲಾಗುತ್ತದೆ. ಪೂಜೆ ಮುಗಿದ ಬಳಿಕ ಗೋವುಗಳನ್ನು ಆಯಾ ಊರಿನ ದನದ ಬಯಲುಗಳಿಗೆ ಬಿಡಲಾಗುತ್ತದೆ. ಅಲ್ಲಿ ಗೋವಿನ ಕೊರಳಿಗೆ ಕಟ್ಟಿದ ದಂಡೆ ಹರಿಯಲು ಪೈಪೋಟಿಯೂ ನಡೆಯುತ್ತದೆ. ಪೂರ್ವಭಾಗ ಬನವಾಸಿ ಮತ್ತಿತರ ಕಡೆಗಳಲ್ಲಿ ಹೋರಿಗಳನ್ನು ಸಿಂಗರಿಸಿ ಅವುಗಳನ್ನು ಬೆದರಿಸುವ ಸ್ಪರ್ಧೆಯೂ ನಡೆಯುತ್ತದೆ.
ಹುಲಿದೇವರಿಗೆ ಪೂಜೆ
ದೊಡ್ಡ ಹಬ್ಬದ ವಿಶೇಷತೆಯೇ ಇದು. ಆಯಾ ಊರಿನ ಕಾಡಿನ ಅಂಚಿನಲ್ಲಿ ಸ್ಥಾಪಿತಗೊಂಡ ಹುಲಿದೇವರಿಗೆ ಈ ಹಬ್ಬದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಮನೆಯ ಒಬ್ಬ ಸದಸ್ಯನಿಗೆ ಒಂದು, ಹಸುವಿಗೆ ಒಂದು ಕಾಯಿಯಂತೆ ಆಯಾ ಕುಟುಂಬದವರು ಹಣ್ಣುಕಾಯಿ ಸಮರ್ಪಿಸಬೇಕು. ಆ ಮೂಲಕ ಕಾಡುಪ್ರಾಣಿಗಳ ಉಪಟಳ ತಡೆಯುವಂತೆ ದೇವರಿಗೆ ಬೇಡಿಕೊಳ್ಳುವ ರೂಢಿ ಇಲ್ಲಿದೆ.
ಬಗೆಬಗೆಯ ಸ್ಪರ್ಧೆ
ಪ್ರತಿ ಗ್ರಾಮಗಳಲ್ಲೂ ಹಬ್ಬದ ವೇಳೆ ವಿಶಿಷ್ಟ ಸ್ಪರ್ಧೆಗಳು ನಡೆಯುತ್ತವೆ. ಕೆಲ ಊರುಗಳಲ್ಲಿ ತೆಂಗಿನಕಾಯಿಗೆ ಗುರಿ ಇಟ್ಟು ಹೊಡೆಯುವ ಗುರಿಕಾಯಿ ಸ್ಪರ್ಧೆ ನಡೆಯುತ್ತದೆ. ಮತ್ತೆ ಕೆಲವು ಕಡೆ ಭಾರ ಹೊರುವ ಆಟ, ಹೋರಿಗೆ ಸಿಂಗರಿಸುವ ಸ್ಪರ್ಧೆ, ಹೋರಿ ಬೆದರಿಸುವ ಸ್ಪರ್ಧೆ ಕೂಡ ನಡೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.