ADVERTISEMENT

ನಾವೆಲ್ಲರೂ ಒಳ್ಳೆಯವರಾಗಿಯೇ ಇರುವುದು ಎಲ್ಲಿಯ ತನಕ?

ಛಾಯಾಪತಿ
Published 20 ಸೆಪ್ಟೆಂಬರ್ 2019, 19:30 IST
Last Updated 20 ಸೆಪ್ಟೆಂಬರ್ 2019, 19:30 IST
   

ನಾವೆಲ್ಲರೂ ಕೂಡ ಮೊದಲಿಗೆ ಒಳ್ಳೆಯವರಾಗಿಯೇ ಇರುತ್ತೇವೆ! ಇದು ಎಲ್ಲಿಯ ತನಕ? ನಮ್ಮಲ್ಲಿ ಹಣದ ರಾಶಿ ಸೇರದಿರುವಾಗ; ಅಧಿಕಾರದ ಪೀಠ ಇಲ್ಲದಿರುವಾಗ; ದೇಹವು ಬಲದ ಬೆಂಬಲವನ್ನು ಕಳೆದುಕೊಂಡಿರುವಾಗ. ಎಂದರೆ ನಮ್ಮಲ್ಲಿ ಸಂಪತ್ತು–ಶಕ್ತಿಗಳು ಇಲ್ಲದಿ ದ್ದಾಗ ಸುಮ್ಮನಿರುತ್ತೇವೆ; ಅವು ಸೇರಿಕೊಂಡಾಗ ಮಾತ್ರ ನಮ್ಮ ಪಿತ್ತ ನೆತ್ತಿಗೇರುತ್ತದೆ. ಇದನ್ನೇ ಸುಭಾಷಿತವೊಂದು ಹೀಗೆಂದಿದೆ:

ಧನಿನೋsಪಿ ನಿರುನ್ಮಾದಾಃ ಯುವಾನೋsಪಿ ನ ಚಂಚಲಾಃ |
ಪ್ರಭವೋsಪ್ಯಪ್ರಮತ್ತಾಸ್ತೇ ಮಹಾಮಹಿಮಶಾಲಿನಃ ||

ಇದರ ತಾತ್ಪರ್ಯ ಹೀಗೆ: ‘ಸತ್ಪುರುಷರು ಹೆಚ್ಚು ಮಹಿಮೆಯುಳ್ಳವರು. ಅವರು ಶ್ರೀಮಂತರಾಗಿದ್ದರೂ ಅವರಲ್ಲಿ ಮದ ಇರುವುದಿಲ್ಲ; ತಾರುಣ್ಯದಲ್ಲಿದ್ದರೂ ಅವರು ಚಪಲರಲ್ಲ; ಅಧಿಕಾರದಲ್ಲಿದ್ದರೂ ಅವರು ಎಚ್ಚರವನ್ನು ತಪ್ಪುವುದಿಲ್ಲ.’

ADVERTISEMENT

ನಮ್ಮ ಹಲವು ಆಕರ್ಷಣೆಗಳು ದಿಕ್ಕನ್ನು ತಪ್ಪಿಸುತ್ತಿರುತ್ತವೆ. ಹಣ, ಅಧಿಕಾರ, ಯೌವನ, ರೂಪ – ಹೀಗೆ ಹಲವು ಸಂಗತಿಗಳು ನಮ್ಮ ಸ್ವಭಾವವನ್ನೇ ಬದಲಿಸಬಲ್ಲವು. ನಮ್ಮ ಜೇಬು ಖಾಲಿ ಇರುವಾಗ ಸ್ವಲ್ಪ ತಗ್ಗಿ ಬಗ್ಗಿ ನಡೆಯುತ್ತೇವೆ; ಜೇಬಿಗೆ ನಾಲ್ಕಾರು ನೋಟುಗಳು ಬಂದು ಬೀಳುತ್ತಿದ್ದಂತೆ ನಮ್ಮ ಗತ್ತು ಇದ್ದಕ್ಕಿಂದ್ದಂತೆ ಬದಲಾಗಿಬಿಡುತ್ತದೆ! ಅಂತೆಯೇ ಅಧಿಕಾರದ ಖುರ್ಚಿಯೂ ನಮ್ಮನ್ನು ತಲೆ ತಿರುಗುವಂತೆ ಮಾಡಿಬಿಡುತ್ತದೆ.

ಆದರೆ ಸಜ್ಜನಿಕೆ ಎನ್ನುವುದು ಯಾರ ದಿಟವಾದ ಸ್ವಭಾವವೋ ಅವರು ಎಂಥ ಸಮಯದಲ್ಲೂ ಒಂದೇ ರೀತಿಯಲ್ಲಿ ಇರುತ್ತಾರೆ. ಅವರಿಗೆ ಬಡತನವಿರಲಿ, ಸಿರಿತನವಿರಲಿ; ಅಧಿಕಾರದಲ್ಲಿರಲಿ, ಏಕಾಂತದಲ್ಲಿರಲಿ; ಆರೋಗ್ಯವಾಗಿರಲಿ, ಅನಾರೋಗ್ಯದಲ್ಲಿರಲಿ – ಅವರ ಅಂತಃಸತ್ವ ಮಾತ್ರ ಒಂದೇ ವಿಧದಲ್ಲಿ ಇರುತ್ತದೆ. ಸಿರಿ ಬಂದಾಗ ಅವರು ಕುಗ್ಗುವುದೂ ಇಲ್ಲ, ಸಿರಿ ಹೋದಾಗ ಹಿಗ್ಗುವುದೂ ಇಲ್ಲ. ಪ್ರೀತಿ, ಆತ್ಮೀಯತೆ, ಸಹನೆ, ಸಹಾನುಭೂತಿ, ಕರುಣೆ, ಮಾನವೀಯ ಮೌಲ್ಯ – ಇವು ಹೀಗೆ ಬಂದು ಹಾಗೆ ಹೋಗುವಂಥ ಗುಣಗಳು ಅಲ್ಲ. ಇವು ನಮ್ಮಲ್ಲಿ ನಿಜವಾಗಿಯೂ ಮನೆ ಮಾಡಿದ್ದರೆ, ಹೊರಗಿನ ಏರುಪೇರುಗಳು ಅವನ್ನು ಏನೂ ಬದಲಿಸಲಾರವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.