ADVERTISEMENT

ಕೈರಂಗಳ ಶತಮಾನದ ಶಾಲೆಗೆ ಸಿನಿತಾರೆಯ ಸ್ಪರ್ಶ

ಸಂದೀಪ್ ಕೆ.
Published 8 ಜೂನ್ 2019, 6:12 IST
Last Updated 8 ಜೂನ್ 2019, 6:12 IST
   

ಒಬ್ಬ ಸಿನಿಮಾ ನಿರ್ದೇಶಕನಿಗೆ ತನ್ನ ಶೂಟಿಂಗ್ ಲೊಕೇಷನ್‍ನ ಜೊತೆ ಭಾವನಾತ್ಮಕ ಸಂಬಂಧ ಬೆಳೆಯುವುದು ಅಸಾಧ್ಯವೇನಲ್ಲ. ಆದರೆ ಉತ್ಸಾಹಿ ಸಿನಿಮಾ ನಿರ್ದೇಶಕರೊಬ್ಬರು ತನ್ನ ಶೂಟಿಂಗ್ ಲೊಕೇಷನ್‍ ಆಗಿದ್ದ ಕನ್ನಡ ಶಾಲೆಯೊಂದನ್ನು ಉಳಿಸಲು ಶ್ರಮಿಸಿ, ಅದರಲ್ಲಿ ಯಶಸ್ವಿಯೂ ಆದ ಯಶೋಗಾಥೆ ಇದೇ ಮೊದಲನೆಯದು.

ಕನ್ನಡ ಮಾಧ್ಯಮವಾದರೂ ಇಲ್ಲಿನ ಶಿಕ್ಷಣದ ಗುಣಮಟ್ಟ ಎಷ್ಟು ಪ್ರಸಿದ್ಧವೆಂದರೆ ಇಲ್ಲಿ ಕಲಿತವರು ಎಲ್ಲಾ ಗೌರವಾನ್ವಿತ ಹುದ್ದೆಯಲ್ಲಿದ್ದು, ಐಎಎಸ್ ನಂತಹ ಸೇವೆಯಲ್ಲೂ ಇದ್ದರು. ಇಲ್ಲಿನ ಮಕ್ಕಳ ಬುದ್ಧಿಮತ್ತೆ ಎಲ್ಲಾ ಹತ್ತಿರದ ಶಾಲೆಗಳಲ್ಲಿಯೂ ಪ್ರಸಿದ್ಧಿ ಇತ್ತು. ಇಷ್ಟೆಲ್ಲಾ ಇದ್ದೂ ಕ್ರಮೇಣ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳಂತೆ ದಾಖಲಾತಿ ಕಡಿಮೆಯಾಗಿ ಹೋದ ವರ್ಷವಂತೂ ಶಾಲೆ ಇನ್ನಿಲ್ಲ ಎನ್ನುವ ಪರಿಸ್ಥಿತಿ ಎದುರಾಗಿತ್ತು. ಇದು ಕೈರಂಗಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಕಥೆ. ಪ್ರತಿಭಾವಂತ ನಿರ್ದೇಶಕ ರಿಷಭ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಸಿನಿಮಾ ಚಿತ್ರೀಕರಣಗೊಂಡಿದ್ದು ಇದೇ ಶಾಲೆಯಲ್ಲಿ. ಈ ಶಾಲೆಗೀಗ 119 ವರ್ಷ.

1900ರಂದು ಆರಂಭಗೊಂಡ ಕೈರಂಗಳ ಶಾಲೆಯ ಅಂಗಳದಲ್ಲಿ ಒಂದು ಕಾಲಕ್ಕೆ ಮಕ್ಕಳು ಅಸೆಂಬ್ಲಿ ಸೇರಿದರೆಂದರೆ ಇಡೀ ಕ್ರೀಡಾಂಗಣ ಭರ್ತಿಯಾಗುತ್ತಿತ್ತು. 600ಕ್ಕೂ ಹೆಚ್ಚು ಮಕ್ಕಳು ಸೇರಿದಾಗ ಉಂಟಾಗುವ ಆಹ್ಲಾದ ಇಡೀ ಊರನ್ನೇ ತುಂಬುತ್ತಿತ್ತು. ಇತರ ಸಮಯದಲ್ಲಿ ಶಾಲೆಯ ಅಂಗಣಕ್ಕೆ ಬಾಗಿರುವ ಮಾವಿನ ಮರದ ಹಣ್ಣಿಗಾಗಿ ಮಕ್ಕಳು ಕಾಯುವ ದೃಶ್ಯವೂ ಕಾಣುತ್ತಿತ್ತು. ಇಲ್ಲಿ ಬಿಡಾಡಿ ದನಗಳಿಗೆ ಆಹಾರ ಕೊಡುತ್ತಾ, ಒಂದು ಒಳ್ಳೆಯ ಬಾಳೆ ಮತ್ತು ತರಕಾರಿ ತೋಟ ಮಾಡಿ ಮಕ್ಕಳೇ ಅದರ ನಿರ್ವಹಣೆ ಮಾಡುತ್ತಿದ್ದರು.

ADVERTISEMENT

‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರದ ಲೊಕೇಶನ್‍ನ ಬೇಟೆಯಲ್ಲಿದ್ದ ರಿಷಭ್, ಈ ಚಿತ್ರ ನಿರ್ಮಾಣಗೊಂಡು ಯಶಸ್ಸು ಬಂದ ಮೇಲೆ ಇಲ್ಲಿನ ಪರಿಸ್ಥಿತಿ ಮರೆಯಲಿಲ್ಲ. ಅಂತೆಯೇ ಈ ಶಾಲೆಯ ಪೂರ್ಣ ಪುನರುಜ್ಜೀವನಕ್ಕೆ ಪಣ ತೊಟ್ಟು ದತ್ತು ತೆಗೆದುಕೊಂಡು ಶಾಲೆಯ ದುರಸ್ತಿ ಮಾಡಿಸಿ ಸುಣ್ಣ ಬಣ್ಣ ಬಳಿಸಿ ಶೃಂಗರಿಸಿದರು. ತಮ್ಮ ಚಿತ್ರದ ಕೆಲವು ನೆನಪುಗಳನ್ನು ಇಲ್ಲಿನ ಗೋಡೆಗಳಲ್ಲಿ ಭಿತ್ತರಿಸಿದರು. ಇಂಗ್ಲಿಷ್ ಶಿಕ್ಷಣವೇ ಕಾರಣವಾಗಿ ಮಕ್ಕಳು ಶಾಲೆ ಸೇರುತ್ತಿಲ್ಲ ಎಂದು ತಿಳಿದು ಎಲ್‌ಕೆಜಿ ಮತ್ತು ಯುಕೆಜಿಯನ್ನು ಪ್ರಾರಂಭಿಸಿದರು.

ಸದ್ಯ ಉಚಿತ ಎಲ್‌ಕೆಜಿ ಮತ್ತು ಯುಕೆಜಿಯನ್ನು ಮಾತ್ರ ಪ್ರಾರಂಭಿಸ
ಲಾಗಿದೆ. ಮುಂದಿನ ವರ್ಷ ಒಂದನೇ ತರಗತಿಯನ್ನು ಪ್ರಾರಂಭಿಸಲಾಗುತ್ತದೆ. ಶಾಲಾಡಳಿತದ ನಿರೀಕ್ಷೆಗೂ ಮೀರಿ 60ರಷ್ಟು ಮಕ್ಕಳು ಪ್ರವೇಶ ಪಡೆದಿದ್ದಾರೆ. ಇವರಿಗೆ ರಿಷಭ್ ಅವರೇ ಉಚಿತ ಸಮವಸ್ತ್ರ, ಊಟ ಮತ್ತು ಪುಸ್ತಕಗಳನ್ನು ನೀಡುತ್ತಿದ್ದು ಗ್ರಾಮೀಣ ಪೋಷಕರ ಹೊರೆಯನ್ನು ತಪ್ಪಿಸಿದಂತಿದೆ. ಈ ನಿಟ್ಟಿನಲ್ಲಿ ಶಾಲೆಯನ್ನೂ, ಮಕ್ಕಳ ಭವಿಷ್ಯವನ್ನೂ ಉಳಿಸುವ ಪ್ರಯತ್ನವನ್ನು ಸ್ಥಳೀಯರು ಶ್ಲಾಘಿಸುತ್ತಿದ್ದಾರೆ. ‘ಇಲ್ಲಿ ಈಗಾಗಲೇ ಇರುವ 25ರಷ್ಟು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೂ ಕೀಳರಿಮೆ ಬರದಂತೆ ಇಂಗ್ಲಿಷ್ ಭಾಷೆಯನ್ನು ಮಾತನಾಡಲು ಕಲಿಸುತ್ತೇವೆ. ಜೊತೆಗೆ ಈಗ ಕನ್ನಡ ಮಾಧ್ಯಮದ ತರಗತಿಗಳಿಗೆ 3 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು ನಮಗೆ ಸಂತಸ ನೀಡಿದೆ’ ಎನ್ನುತ್ತಾರೆ ಶಾಲಾಡಳಿತ ಮಂಡಳಿಯ ಸದಸ್ಯ ಪ್ರವೀಣ್ ಶಂಕರ್.

‘ಶಾಲೆಯಲ್ಲಿ ಈಗಾಗಲೇ ಇರುವ ಕನ್ನಡ ಮಾಧ್ಯಮದ ಶಿಕ್ಷಕರ ಜೊತೆ ಇಂಗ್ಲಿಷ್ ಮಾಧ್ಯಮದ ಶಿಕ್ಷಕರು ಹೊಸತಾಗಿ ಸೇರ್ಪಡೆಗೊಂಡಿದ್ದು ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ರಿಷಭ್ ಶೆಟ್ಟಿಯವರು ಬಂದರೆ ನಮಗೆ ಖುಷಿ’ ಎನ್ನುತ್ತಾರೆ ಮುಖ್ಯ ಶಿಕ್ಷಕ ದೇವದಾಸ್.

‘ಶಾಲೆಯ ಪರಿಸ್ಥಿತಿ ನಮ್ಮಂಥ ಹಳೇ ವಿದ್ಯಾರ್ಥಿಗಳಿಗೆ ಬೇಸರ ತಂದಿತ್ತು.
ಅಸಹಾಯಕತೆಯಲ್ಲಿದ್ದ ಶಾಲೆ ರಿಷಭ್
ಶೆಟ್ಟಿಯವರಿಂದ ಉಳಿದಿದ್ದು ನೆಮ್ಮದಿ ನೀಡಿದೆ. ಮಂದೆಯೂ ಶಾಲೆಯಲ್ಲಿ
ಪ್ರತಿಭಾವಂತ ಮಕ್ಕಳು ಸೇರ್ಪಡೆ
ಗೊಂಡು ಶೈಕ್ಷಣಿಕ ವೈಭವ ಮರುಕಳಿಸ
ಬೇಕಿದೆ’ ಎಂದು ಆಶಿಸುತ್ತಾರೆ ಶಾಲೆಯ ಹಳೆ ವಿದ್ಯಾರ್ಥಿ ಗುರುರಾಜ್ ಕೈರಂಗಳ.

ಕನ್ನಡ ಮಾಧ್ಯಮದ ತರಗತಿಗಳು ಈಗಾಗಲೇ ಆರಂಭಗೊಂಡಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿಗಳು ಆರಂಭವಾಗಲಿವೆ. ಇನ್ನು 3 ವರ್ಷಗಳಲ್ಲಿ ಶಾಲೆಯ ಚಿತ್ರಣ ಬದಲಾಗಿ ಹಳೆಯ ವೈಭವ ಮತ್ತೆ ತುಂಬಿಕೊಳ್ಳಲು ಕ್ಷಣಗಣನೆ ಶುರುವಾಗಿದೆ. ಒಬ್ಬ ಸಹೃದಯಿ ನಿರ್ದೇಶಕನ ಪ್ರಯತ್ನಕ್ಕೆ ಈ ಮಟ್ಟಿನ ಯಶಸ್ಸು ದೊರೆತಿದ್ದು, ಅದರೊಂದಿಗೆ ಶತಮಾನ ದಾಟಿದ ಕನ್ನಡ ಶಾಲೆಯೊಂದು ಉಳಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.