ADVERTISEMENT

ಬಿಸಿಬಿಸಿ ಕಾಫಿ, ಟೀ ಸಮಯ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 19:45 IST
Last Updated 28 ಜೂನ್ 2019, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಅಬ್ಬಾ ಏನು ದಾಹ... ಬಿಸಿಲ ಝಳ ತಾಳಲಾಗುತ್ತಿಲ್ಲ...‘ ಅನ್ನೋ ಮಾತು ವಾರದಿಂದೀಚೆಗೆ ಕಮ್ಮಿಯಾಗಿದೆ. ಎರಡು ದಿನಗಳ ಹಿಂದೆ ಸುರಿದ ಮಹಾಮಳೆಯ ಸ್ಪರ್ಶ ತಂಪಗಿನ ವಾತಾವರಣ ಸೃಷ್ಟಿಸಿದೆ. ಗಲ್ಲಿಗಲ್ಲಿಯಲ್ಲೂ ಕಬ್ಬಿನ ಜ್ಯೂಸ್‌, ನಿಂಬೆ ಹಣ್ಣಿನ ಜ್ಯೂಸ್ ಮುಂತಾದ ತಂಪುಪಾನೀಯಗಳ ಕೈಗಾಡಿಗಳು ಕಮ್ಮಿಯಾಗಿವೆ. ಬೇಸಿಗೆ ಬಿಸಿಲಿಗೆ ತತ್ತರಿಸಿದ ಮಂದಿ, ನಿಧಾನವಾಗಿ ನೆಮ್ಮದಿಯ ಉಸಿರು ಬಿಡುವಂತಾಗಿದೆ. ಅಲ್ಲದೆ, ತಂಪು ಪಾನೀಯಗಳ ಬದಲು ಬಿಸಿ ಬಿಸಿ ಟೀ, ಕಾಫಿ ಕುಡಿಯಲು ಆರಂಭಿಸಿದ್ದಾರೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ನಮ್ಮ ಆಹಾರ, ಉಡುಗೆ–ತೊಡುಗೆ ಎಲ್ಲವೂ ಬದಲಾಗುತ್ತವೆ. ಬಿಸಿಬಿಸಿ ಬಜ್ಜಿ, ಕುರುಕಲು ತಿಂಡಿಗಂತು ಎಲ್ಲಿಲ್ಲದ ಬೇಡಿಕೆ. ಮಳೆಗಾಲಕ್ಕೆಂದೇ ಕೆಲವರು ಮನೆಯಲ್ಲಿ ಸಂಡಿಗೆ, ಚಕ್ಕುಲಿ, ಹಪ್ಪಳ ಮುಂತಾದ ನಾನಾ ಕುರುಕಲು ತಿಂಡಿಗಳನ್ನು ಮಾಡಿ ಡಬ್ಬಗಳಲ್ಲಿ ತುಂಬಿಸಿಟ್ಟಿರುತ್ತಾರೆ. ತಣ್ಣೀರು ಸ್ನಾನ ಮಾಡುತ್ತಿದ್ದವರು ‘ಬಿಸಿ ನೀರು ಮಾಡಮ್ಮ’ ಎಂದು ಆರ್ಡರ್‌ ಮಾಡಲು ಶುರು ಮಾಡಿದ್ದಾರೆ. ಫ್ರಿಜ್‌ ನೀರು ಪದೇ ಪದೇ ಕುಡಿಯುತ್ತಿದ್ದವರು ‘ಕೋಲ್ಡ್‌ ಬೇಡ, ನಾರ್ಮಲ್‌ ನೀರು ಸಾಕಪ್ಪ‘ ಎಂದುಕೊಳ್ಳುತ್ತಾರೆ ಅಂದರೆ ಮಳೆರಾಯನ ತುಂಟಾಟಕ್ಕೆ ನಾವು ಚಿಕ್ಕವರಾಗಿಬಿಡುತ್ತೇವೆ. ಜತೆಗೆ ಆರೋಗ್ಯದ ಕುರಿತು ಕಾಳಜಿ ವಹಿಸುತ್ತೇವೆ.

ಮೈ ಬೆವರಿನಿಂದ ಗೊಬ್ಬಿಡುತ್ತಿದ್ದ ವಾತಾವರಣ ಈಗ ಮುಂಗಾರಿನ ಹನಿ ಮನಸ್ಸಿಗೆ ತಂಪೆರೆದಂತಾಗಿದೆ. ಮಳೆ ಸುರಿಯುವಾಗ ಮನಸ್ಸಿಗಾಗುವ ಮುದ ಹಾಗೆಯೇ ಮಳೆಯಲ್ಲಿ ಕಳೆದು ಹೋಗಿಬಿಡಬೇಕೆನ್ನಿಸುತ್ತದೆ. ವಾತಾವರಣ ಕೂಲ್‌ ಕೂಲ್‌ ಆಗಿ ಫೀಲ್‌ ಆಗುತ್ತಿದ್ದಂತೆ, ಮನಸ್ಸು ತಿಳಿಯಾಗುತ್ತ ಹೋಗುತ್ತದೆ. ರಿಲಾಕ್ಸ್‌ ಆಗಲು ಬಿಸಿ ಬಿಸಿಯಾಗಿ ಟೀ, ಕಾಫಿ ಕುಡಿಯಬೇಕು, ದೇಹಕ್ಕೆ ಬೆಚ್ಚಗಿನ ಹಿತ ಬೇಕೆನಿಸುತ್ತದೆ. ಮಳೆಗಾಲದಲ್ಲಿ ಬಿಸಿ ಬಿಸಿ ಕಾಫಿ, ಟೀ ಕುಡಿಯದ ಹೊರತು ಕೆಲವರಿಗೆ ಹೊರ ಪ್ರಪಂಚ ಅರಿವಿಗೆ ಬರದು. ದೇಹಕ್ಕೂ ಮನಸ್ಸಿಗೂ ಏನೋ ಜಡ. ಪುಷ್ಟಿ ನೀಡಲು ಕಾಫಿ, ಟೀ ಕುಡಿಯಲೇಬೇಕಾದ ಅನಿವಾರ್ಯ.

ADVERTISEMENT

‘ಚಾಯ್‌..ಚಾಯ್‌....’, ‘ಕಾಫಿ..ಟೀ..ಕಾಫಿ...ಟೀ...’ ಅಂತ ರೈಲ್ವೆ ಮತ್ತು ಬಸ್‌ ನಿಲ್ದಾಣಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಧ್ವನಿ. ಮಳೆಗಾಲದ ಹೊತ್ತಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಬೂಸ್ಟ್‌ ಎನರ್ಜಿ ಇದ್ದಂತೆ. ಚಾ ವಾಲಾ ಕಣ್ಣಿಗೆ ಬೀಳುತ್ತಾನೆ. ಈ ಹೊತ್ತಿಗೆ ಫೈವ್‌ಸ್ಟಾರ್‌ ಹೋಟೆಲ್‌ ಚಹಾಗಿಂತಲೂ ಗೂಡಂಗಡಿಯ ಚಾ ಲೇಸು ಅನ್ನಿಸಲಿದೆ. ಮಳೆಗಾಲದಲ್ಲಿ ಟೀ, ಕಾಫಿಗೆ ಹಾಯ್‌ ಹಾಯ್‌ ಎನ್ನದಿರಲು ಸಾಧ್ಯವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.