ADVERTISEMENT

ಮೈಸೂರು ದಸರಾ | ಕಣ್ಮನ ತಣಿಸುವ ‘ಗೊಂಬೆ ಮನೆ’

ವಿಶೇಷ ಪ್ರದರ್ಶನ

ಬಾಲಚಂದ್ರ
Published 17 ಸೆಪ್ಟೆಂಬರ್ 2019, 20:15 IST
Last Updated 17 ಸೆಪ್ಟೆಂಬರ್ 2019, 20:15 IST
ನೆಹರೂ, ಮಹಾತ್ಮ ಗಾಂಧಿ, ನಾಲ್ವಡಿ ಕೃಷ್ಣರಾಜ ಒಡೆಯರ್‌, ಚಾಮರಾಜ ಒಡೆಯರ್‌ ಜನ್ಮ ವರ್ಷಾಚರಣೆ ನೆನಪಿಸುವ ಅಪರೂಪದ ಭಾವಚಿತ್ರಗಳು ಹಾಗೂ ಬೊಂಬೆಗಳು
ನೆಹರೂ, ಮಹಾತ್ಮ ಗಾಂಧಿ, ನಾಲ್ವಡಿ ಕೃಷ್ಣರಾಜ ಒಡೆಯರ್‌, ಚಾಮರಾಜ ಒಡೆಯರ್‌ ಜನ್ಮ ವರ್ಷಾಚರಣೆ ನೆನಪಿಸುವ ಅಪರೂಪದ ಭಾವಚಿತ್ರಗಳು ಹಾಗೂ ಬೊಂಬೆಗಳು   

ದಸರಾ ಎಂದರೆ ಗೊಂಬೆ ಹಬ್ಬವೂ ಹೌದು. ನವರಾತ್ರಿಯ ಮೊದಲ ದಿನವೇ ಮೈಸೂರು ಪ್ರದೇಶದ ಎಲ್ಲಾ ಮನೆಗಳಲ್ಲೂ ದಸರಾ ಗೊಂಬೆಗಳ ದೃಶ್ಯ ವೈಭವ ಕಾಣಸಿಗುತ್ತವೆ. ಈ ಕಾರಣದಿಂದ ದಸರಾ ಹಬ್ಬಕ್ಕೂ ಗೊಂಬೆಗಳಿಗೂ ಬಿಡಿಸಲಾರದ ನಂಟು.

ಮೈಸೂರು ಪ್ರಾಂತ್ಯದಲ್ಲಿ ರಾಜನೇ ಪ್ರತ್ಯಕ್ಷ ದೇವರು ಎಂಬ ಮಾತಿತ್ತು. ಈ ಕಾರಣದಿಂದಲೇ, ರಾಜ–ರಾಣಿಯರನ್ನು ದೇವರೆಂದು ಭಾವಿಸುವ ಕಾರಣ, ನವರಾತ್ರಿಯ ಉತ್ಸವದಲ್ಲಿ ರಾಜ–ರಾಣಿಯರ ಗೊಂಬೆಗಳನ್ನು ಮನೆಯಲ್ಲಿ ಇಟ್ಟು ಪೂಜಿಸುವುದು ಇಲ್ಲಿನ ವಾಡಿಕೆ. ರಾಜ ರಾಣಿಯರ ಗೊಂಬೆಗಳ ಜೊತೆಗೆ ಇನ್ನಿತರ ಪೌರಾಣಿಕ ಮತ್ತು ಜಾನಪದ ಪಾತ್ರಗಳ ಗೊಂಬೆಗಳನ್ನು ಕಲಾತ್ಮಕವಾಗಿ ಕೂರಿಸಿ ಅದಕ್ಕೆ ಚೆಂದನೆಯ ಅಲಂಕಾರ ಮಾಡಿ, ವಿದ್ಯುದ್ದೀಪಗಳನ್ನು ಅಳವಡಿಸಿ ಪೂಜೆ ಮಾಡುವುದು ದಸರಾ ಹಬ್ಬದ ಒಂದು ಭಾಗವಾಗಿದೆ.

ಶ್ರೀರಾಮ ಇದೇ ಅವಧಿಯಲ್ಲಿ ರಾವಣನನ್ನು ಸಂಹರಿಸಿದ ಎನ್ನುವ ಕಾರಣದಿಂದ ರಾಮಾಯಣಕ್ಕೆ ಸಂಬಂಧಿಸಿದ ಗೊಂಬೆಗಳನ್ನು ಮನೆಮನೆಗಳಲ್ಲಿ ಇಡುವುದನ್ನು ಕಾಣಬಹುದು. ಇಡೀ ರಾಮಾಯಣದಲ್ಲಿ ನಡೆದ ಘಟನೆಗೆ ಅನುಸಾರವಾಗಿ ಅದೇ ರೀತಿಯ ಗೊಂಬೆಗಳನ್ನು ಮನೆಯಲ್ಲೇ ತಯಾರಿಸಿ ಪ್ರದರ್ಶನಕ್ಕಿಡುವ ಪದ್ಧತಿ ಇತ್ತು. ಒತ್ತಡದ ಜೀವನದಲ್ಲಿ ಗೊಂಬೆಗಳನ್ನು ಖರೀದಿಸಿ ತಂದು ಮನೆಯಲ್ಲಿ ಇಡುವವರ ಸಂಖ್ಯೆ ಕಡಿಮೆಯೇನಿಲ್ಲ.

ADVERTISEMENT

ಉಳಿದಂತೆ ಸರಸ್ವತಿ ಗೊಂಬೆಗಳ ಜೊತೆ ಜೊತೆಗೆ ಶಾರದಾದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸುವ ಪದ್ಧತಿಯಿದೆ. ಕೆಲವು ಕಡೆ ಕೋಲಾಟವೂ ನಡೆಯುತ್ತದೆ. ಅಷ್ಟರ ಮಟ್ಟಿಗೆ ಈ ಭಾಗದಲ್ಲಿ ಗೊಂಬೆಗಳೊಂದಿಗೆ ನವರಾತ್ರಿ ಸಂಭ್ರಮ ಹಾಸುಹೊಕ್ಕಾಗಿದೆ.

ಕೇವಲ ಮನೆಗಳಲ್ಲಿ ಮಾತ್ರ ಬೊಂಬೆಗಳನ್ನು ಇಡುವುದಿಲ್ಲ, ಕಳೆದ 15 ವರ್ಷಗಳಿಂದ ಇದನ್ನೇ ಪ್ರದರ್ಶನವನ್ನಾಗಿ ಆಯೋಜಿಸಿಕೊಂಡು ಬಂದಿರುವ ನಜರಬಾದ್‌ ಮುಖ್ಯರಸ್ತೆಯಲ್ಲಿರುವ ‘ಗೊಂಬೆಗಳ ಮನೆ’ ಈ ಸಲವೂ ತನ್ನದೇ ಬೊಂಬೆಗಳ ವೈಶಿಷ್ಟ್ಯತೆಯಿಂದ ಗಮನಸೆಳೆದಿದೆ. ಈ ಸಲದ ಪ್ರದರ್ಶನದಲ್ಲಿ ನಾಲ್ಕು ಅಂಕಣಗಳನ್ನು ಮಾಡಿ, ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ. ಹೊಸತಾಗಿ ಗೊಂಬೆ ಕೂರಿಸುವವರು ಕೂಡ ವಿಷಯ ಆಯ್ಕೆ ಮಾಡಿಕೊಳ್ಳಲು ಸುಲಭವಾಗುವಂತೆ ಇಲ್ಲಿ ಜೋಡಿಸಿಡಲಾಗಿದೆ.

ಬಾರ್ಬಿ ಡಾಲ್ 60ನೇ ವಾರ್ಷಿಕೋತ್ಸವ: ಬೊಂಬೆ ಮನೆಯ 15 ನೇ ಆವೃತ್ತಿ ನಡೆಯುತ್ತಿದ್ದು, ಇದೇ ವೇಳೆ ಬಾರ್ಬಿ ಗೊಂಬೆಯ 60ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ (ಅಮೆರಿಕದ ಮ್ಯಾಟೆಲ್ ಟಾಯ್ ಕಂಪನಿ ಈ ಗೊಂಬೆಯ ಅನ್ವೇಷಕರು) ವಿವಿಧ ಅವತಾರಗಳಲ್ಲಿ ಬಾರ್ಬಿ ಗೊಂಬೆಗಳಿವೆ. ಇದರ ಜೊತೆಗೆ ಉಜ್ಬೇಕಿಸ್ತಾನ್, ಥಾಯ್ಲೆಂಡ್, ವಿಯೆಟ್ನಾಂ, ಫ್ರಾನ್ಸ್, ಜರ್ಮನಿ, ಬ್ರಿಟನ್ ಮುಂತಾದ ದೇಶದ ಬೊಂಬೆಗಳನ್ನು ಇಲ್ಲಿ ಕಾಣಬಹುದು.

ಮಹಾತ್ಮರಿಗೆ ನಮನ: ದೇಶ ಕಟ್ಟಿ ಬೆಳೆಸಿದ ಸಾಧಕರ ದಾಖಲೆಯ ಜನ್ಮಶತಮಾನಕ್ಕೆ ಈ ವರ್ಷ ಸಾಕ್ಷಿಯಾಗಿದೆ. ಮಹಾತ್ಮ ಗಾಂಧಿ (150), 14ನೇ ನಾಲ್ವಡಿ ಕೃಷ್ಣರಾಜ ಒಡೆಯರ್‌ (135), ಪಂಡಿತ್ ಜವಾಹರಲಾಲ್ ನೆಹರೂ (130) ಮತ್ತು ಶ್ರೀ ಜಯಚಾಮರಾಜ ಒಡೆಯರ್‌ (100) ಅವರಿಗೆ ಸಂಬಂಧಿಸಿದ ಅಪರೂಪದ ಛಾಯಾಚಿತ್ರಗಳು, ಗೊಂಬೆಗಳನ್ನು ಈ ವಸ್ತುಪ್ರದರ್ಶನದಲ್ಲಿ ಕಾಣಬಹುದು.

ಸಂಸ್ಕೃತಿ ಬಿಂಬಿಸುವ ವರ್ಣಾಂಕಿತ: ನಾಮ ಮತ್ತು ತಿಲಕದ ಮೂಲಕ ಹಿಂದೂ ಧರ್ಮದ ಮನೆಮೂಲ, ವಿವಿಧ ಪ್ರಬೇಧಗಳ ಅಲಂಕರಣ ಭಾಷೆಗಳ ಆಯಾಯ ಪಂಗಡಗಳನ್ನು ಗುರುತಿಸುವ ಪದ್ಧತಿಯಿದೆ. ನೂರಾರು ಜನಾಂಗದ ವೈಶಿಷ್ಟ್ಯತೆ ಬಿಂಬಿಸುವ ವಿವಿಧ ನಾಮಾವಳಿಗಳು, ತಿಲಕ, ಅಂಗಾರಕ, ಭಂಡಾರ, ಬುಕ್ಕ, ಗಂಧಾಕ್ಷತೆ ಬಿಂಬಿಸುವ ವಿವಿಧ ಗೊಂಬೆಗಳು ಇಲ್ಲಿವೆ.

ಲೀಲಾ ಶುಕ: ಶೃಂಗಾರ–ಮೈಥುನಗಳ ಅಧಿದೇವತೆ ದೇವದಂಪತಿ ರತಿ– ಮನ್ಮಥ, ಮಾತಂಗಿ ರಾಜರಾಜೇಶ್ವರಿ, ಲಲಿತಾ, ಮೀನಾಕ್ಷಿ, ಕಾಮಾಕ್ಷಿ, ಆಂಡಾಳ್‌ ಅವರೊಡನೆ ಕೂತು ಸಲ್ಲಾಪ ನಡೆಸುವಂತೆ ಕಾಣುವ ‘ಲೀಲಾ ಶುಕ’ವನ್ನು ಇಲ್ಲಿ ಕಾಣಬಹುದು.

ಈ ಸಲದ ಗೊಂಬೆಗಳ ಪ್ರದರ್ಶನದಲ್ಲಿ ಅಪ್ಪಾಜಿ ಅಮ್ಮಣ್ಣಿ ಗೊಂಬೆ ಜೋಡಿ (ಮೈಸೂರು-ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಮತ್ತು ತ್ರಿಶಿಕಾ ಕುಮಾರಿ ಒಡೆಯರ್‌ ಅವರನ್ನು ಪ್ರತಿನಿಧಿಸುವ ಗೊಂಬೆಗಳು), ಮುದ್ದಾದ ವಧು-ವರ ಜೋಡಿಗಳು, ನವ ನಟರಾಜ, ಸಪ್ತಿ ನಾಡಿ, ಗಜೇಂದ್ರ ಮೋಕ್ಷ, ರಾಮ್ ಗುಹ ಅಲಿಂಗನ, ದಶವಾತರ ವಿಠಲ ಗಮನಸೆಳೆಯುತ್ತವೆ.

ಸ್ಥಳ: ಬೊಂಬೆ ಮನೆ– ಪ್ರತಿಮಾ ಗ್ಯಾಲರಿ, ನಜರಬಾದ್‌ ಮುಖ್ಯರಸ್ತೆ.
ಗೊಂಬೆಗಳ ಪ್ರದರ್ಶನ: ಸೆ.11ರಿಂದ ಅ.10ರವರೆಗೆ ಬೆ.10ರಿಂದ ರಾತ್ರಿ 7.30ರವರೆಗೆ

ಗೊಂಬೆ ಮನೆಯ ವೈಶಿಷ್ಟ್ಯವೇನು?
ಮೈಸೂರಿನ ಮನೆಗಳಲ್ಲಿ ದಸರಾ ವೇಳೆ ಗೊಂಬೆಗಳನ್ನು ಕೂಡಿಸುವುದು ವಾಡಿಕೆ. ಪ್ರತಿ ವರ್ಷವೂ ಒಂದು ಜೊತೆಯಾದರೂ ಹೊಸ ಗೊಂಬೆ ಕೂರಿಸಬೇಕು ಎಂಬುದು ಸಂಪ್ರದಾಯ.

ಸಾಮಾನ್ಯವಾಗಿ ಗೊಂಬೆ ಕೂರಿಸುವವರು ಒಂದು ವಿಷಯ ಆಯ್ದುಕೊಳ್ಳುತ್ತಾರೆ. ಆದರೆ, ಎಲ್ಲ ಗೊಂಬೆಗಳು ಸಿಗುವುದಿಲ್ಲ, ಅಂತಹವರು ನಮ್ಮ ಅಂಗಡಿಗೆ ಬಂದು ನೋಡಿ ಖರೀದಿಸಬಹುದು. ಗೊಂಬೆಗಳನ್ನು ಮಾರುವ ರಾಜ್ಯದ ಏಕೈಕ ಅತಿ ದೊಡ್ಡ ಅಂಗಡಿ ಎಂಬುದು ನಮ್ಮ ಹೆಗ್ಗಳಿಕೆ ಎಂದು ವಿವರಿಸುತ್ತಾರೆ ರಾಮ್‌ಸನ್ಸ್‌ ಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಆರ್‌.ಜಿ.ಸಿಂಗ್‌.

ಕನಿಷ್ಠ ₹50 ರೂಪಾಯಿಂದ ಹಿಡಿದು ₹5ಸಾವಿರ ರೂಪಾಯಿವರೆಗಿನ ಗೊಂಬೆಗಳು ಇಲ್ಲಿವೆ. ಪುದುಚೇರಿ, ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಆಂಧ್ರಪ್ರದೇಶ ಸೇರಿದಂತೆ, ಏಳೆಂಟು ರಾಜ್ಯಗಳಿಂದ ಗೊಂಬೆಗಳನ್ನು ತರಿಸಿಕೊಳ್ಳುತ್ತೇವೆ. ನವರಾತ್ರಿಯಿಂದ ದೀಪಾವಳಿಯವರೆಗೂ ವಿಶೇಷವಾಗಿ ಗೊಂಬೆಗಳನ್ನು ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡುತ್ತೇವೆ ಎಂದು ವಿವರಿಸುತ್ತಾರೆ. ಪ್ರದರ್ಶನ ವೀಕ್ಷಿಸಲು ಪ್ರವೇಶ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.