ADVERTISEMENT

ಗಾಂಧಿ ಬಾಗಿಲ ಪರದೆ! ಮಾಸಿದ ಪರದೆಯಲ್ಲಿ ನೆನಪುಗಳು ಜೀವಂತ

ಸುಕೃತ ಎಸ್.
Published 1 ಅಕ್ಟೋಬರ್ 2019, 19:45 IST
Last Updated 1 ಅಕ್ಟೋಬರ್ 2019, 19:45 IST
ಶ್ರೀರಾಮ ಶೆಟ್ಟಿ ಅವರ ತಂದೆ ನೇಯ್ದ ನೆಹರೂ ಗಾಂಧೀಜಿಯ ಚಿತ್ರವಿರುವ ಬಾಗಿಲ ಪರದೆ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಶ್ರೀರಾಮ ಶೆಟ್ಟಿ ಅವರ ತಂದೆ ನೇಯ್ದ ನೆಹರೂ ಗಾಂಧೀಜಿಯ ಚಿತ್ರವಿರುವ ಬಾಗಿಲ ಪರದೆ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಮಹಾತ್ಮ ಗಾಂಧೀಜಿ ಅವರು ಅಗಲಿ ಇಷ್ಟು ವರ್ಷವಾದ ಬಳಿಕವೂ ಯಾವುದೋ ರೂಪದಲ್ಲಿ ನಮ್ಮ ಮುಂದೆ ಸಂತನಂತೆ ಬಂದು ನಿಂತು ಬಿಡುತ್ತಾರೆ!

ಈಗ ಬಾಗಿಲು ಪರದೆಯಲ್ಲಿ ನಮ್ಮ ಮುಂದೆ ನಿಂತಿದ್ದಾರೆ. ಚಿಕ್ಕಪೇಟೆಯ ಶ್ರೀರಾಮ ಶೆಟ್ಟಿ ಅವರ ಮನೆಯಲ್ಲಿ5 ಅಡಿ ಉದ್ದ 3 ಅಡಿ ಅಗಲದ ಬಾಗಿಲ ಪರದೆಯೊಂದಿದೆ. 1940ರಲ್ಲಿ ಅವರ ತಂದೆಯೇ ನೇಯ್ದ ಬಾಗಿಲು ಪರದೆ ಅದು.ಅದರಲ್ಲಿ ಗಾಂಧೀಜಿ, ನೆಹರೂ ಇನ್ನೂ ಜೀವಂತವಾಗಿದ್ದಾರೆ. ಭಾರತಾಂಬೆಯೂ ಇದ್ದಾಳೆ. ದೇಶದ ಮೇಲಿನ ಅಭಿಮಾನ ಇಲ್ಲಿ ಬಾಗಿಲು ಪರದೆ ರೂಪದಲ್ಲಿ ಮೂಡಿ ಬಂದಿದೆ.

ತುಂಬಾ ಸುಂದರವಾದ ನೇಯ್ಗೆ. ನೀಲಿ ವರ್ಣದ ಬಟ್ಟೆಯ ನಾಲ್ಕು ದಿಕ್ಕೂ ಹೂವು, ನವಿಲುಗಳಿಂದ ಸಿಂಗಾರಗೊಂಡಿದೆ. ಮಧ್ಯೆ ಧ್ವಜದೊಂದಿಗೆ ಭಾರತಾಂಬೆ ನಿಂತಿದ್ದಾಳೆ. ಕೆಳಗೆ ನೆಹರೂ ಮತ್ತು ಅವರ ಪಕ್ಕದಲ್ಲಿ ಗಾಂಧೀಜಿ ಖಾದಿ ಹೊದ್ದು, ಕೋಲು ಹಿಡಿದು ನಗು ಬೀರುತ್ತಾ ನಿಂತಿದ್ದಾರೆ!

ADVERTISEMENT

‘ವಿದೇಶಿ ಬಟ್ಟೆ ತ್ಯಜಿಸಿ ಎಂದ ಗಾಂಧೀಜಿ ದೇಶದ ಜನರ ಕೈಗೆ ಚರಕ ಕೊಟ್ಟಿದ್ದರು. ನನ್ನ ತಂದೆ ನಮ್ಮ ಮನೆಗೂ ಚರಕ ತಂದಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ನಾನಾಗ ಬಹಳ ಸಣ್ಣವನಿದ್ದೆ’– ಹೀಗೆ ಹೇಳುವಾಗ ಶ್ರೀರಾಮ ಶೆಟ್ಟಿ ಅವರ ಕಣ್ಣುಗಳಲ್ಲಿ ತಮ್ಮ ತಂದೆ ಹಾಗೂ ಗಾಂಧೀಜಿಯ ಕುರಿತಾದ ಅಭಿಮಾನ, ಗೌರವ ತೋರುತ್ತಿತ್ತು.

‘ಗಾಂಧೀಜಿ ಅವರ ಮಾತಿನಂತೆ ನನ್ನ ತಂದೆ ವಂಕದಾರಿ ಮುನಿಯಪ್ಪ ಶೆಟ್ಟಿ ಕೃಷ್ಣಯ್ಯ ಶೆಟ್ಟಿ ಅವರು ದಿನಾಲೂ ಮನೆಯಲ್ಲಿ ಚರಕದಲ್ಲಿ ನೇಯುತ್ತಿದ್ದರು. ಇದನ್ನು ಕೊನೆಯವರೆಗೂ ಅವರು ವ್ರತದಂತೆ ಪಾಲಿಸಿದ್ದರು. ನಾನೂ ಸಣ್ಣನಾಗಿದ್ದ ಕಾರಣ ಈ ಬಾಗಿಲ ಪರದೆಯ ಬಗ್ಗೆ ಅಷ್ಟು ನೆನಪಿರಲಿಲ್ಲ. ಅದು ನಮ್ಮ ದೇವರ ಮನೆಯ ಬಾಗಿಲ ಪರದೆಯಾಗಿತ್ತು’ ಎಂದು ನಮ್ಮ ನೆನಪಿನ ಪುಟಗಳನ್ನು ತಿರುವಿ ಹಾಕಿದರು.

‘ಅವರು ಈ ಬಾಗಿಲ ಪರದೆಯನ್ನುನೇಯ್ದದ್ದು 1940ರ ಆಸುಪಾಸಿನಲ್ಲಿ. ನನ್ನ ಅಕ್ಕ ಸುಬ್ಬಲಕ್ಷ್ಮಮ್ಮ ಅವರ ಮದುವೆಯಲ್ಲಿ ಈ ಪರದೆಯನ್ನು ಉಡುಗೊರೆಯಾಗಿ ನೀಡಿದ್ದರು. ಆಕೆ ಅದನ್ನು ಬಹಳ ಜತನದಿಂದ ಇಟ್ಟುಕೊಂಡಿದ್ದರು. ತೀರಾ ಇತ್ತೀಚೆಗೆ ಇದನ್ನುನನಗೆ ನೀಡಿದರು’ ಎಂದು ಶ್ರೀರಾಮ ಶೆಟ್ಟಿ ಹೆಮ್ಮೆಯಿಂದ ವಿವರಿಸಿದರು.

‘ಗಾಂಧೀಜಿ 150 ಜಯಂತಿಯ ಈ ಸಂದರ್ಭದಲ್ಲಿ ಪರದೆ ನನಗೆ ಸಿಕ್ಕಿದ್ದು ಪುಣ್ಯ. ಇದು ಕೇವಲ ನನ್ನೊಂದಿಗೆ ಅಳಿಯಬಾರದು. ಗಾಂಧೀಜಿ ಅವರ ಬಗ್ಗೆ ಪ್ರೀತಿ, ಅಭಿಮಾನ ಇರುವವರೂ ಇನ್ನೂ ನಮ್ಮ ನಡುವೆ ಇದ್ದಾರೆ. ಮುಂದಿನ ಪೀಳಿಗೆಗೆ ಇಂಥ ನೆನಪುಗಳನ್ನು ದಾಟಿಸುವುದು ನಮ್ಮ ಕರ್ತವ್ಯ ಎಂದು ನಂಬಿದ್ದೇನೆ’ ಎಂದರು.

ಸ್ಥಳ: ವಾಸವಾಂಬ ಜುವೆಲರಿ ಮಾರ್ಟ್‌, 823, ಚಿಕ್ಕಪೇಟೆ, ರಾಜಾ ಮಾರ್ಕೆಟ್‌ ಹತ್ತಿರ, ಬೆಳಿಗ್ಗೆ 12.30ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.