ADVERTISEMENT

ಒಂದು ಸರ್ಕಾರಿ ಶಾಲೆ ಉಳಿದು ಬೆಳೆದ ಕತೆ

ಹಂಗಿಲ್ಲದೆ ಹೆಮ್ಮರದತ್ತ ಹಂಗರವಳ್ಳಿ ಶಾಲೆ

ಕೆ.ಎಂ.ಸಂತೋಷಕುಮಾರ್
Published 7 ಜೂನ್ 2025, 23:49 IST
Last Updated 7 ಜೂನ್ 2025, 23:49 IST
ಹಂಗರವಳ್ಳಿ ಶಾಲೆಯಲ್ಲಿ ತರಗತಿ ಮುಗಿಸಿ ಮನೆಗೆ ಹೊರಡಲು ಬಸ್‌ ಹತ್ತುತ್ತಿರುವ ಮಕ್ಕಳು
ಹಂಗರವಳ್ಳಿ ಶಾಲೆಯಲ್ಲಿ ತರಗತಿ ಮುಗಿಸಿ ಮನೆಗೆ ಹೊರಡಲು ಬಸ್‌ ಹತ್ತುತ್ತಿರುವ ಮಕ್ಕಳು    

ಊರಿನ ಗ್ರಾಮಸ್ಥರು, ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಜೊತೆಗೂಡಿದರೆ ಒಂದು ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಯ ಮಟ್ಟಕ್ಕೆ ಕೊಂಡೊಯ್ಯಬಹುದು ಎನ್ನುವುದನ್ನು ಕಟ್ಟಿಕೊಟ್ಟಿದೆ ಈ ಲೇಖನ. ಪುನಃಶ್ಚೇತನಗೊಳಿಸಿದ ಶಾಲೆಯಲ್ಲಿ ಮೂಲಸೌಕರ್ಯಗಳಿಗಷ್ಟೇ ಅಲ್ಲ ಮಕ್ಕಳ ಶಿಕ್ಷಣಕ್ಕೂ ಒತ್ತು ನೀಡಿದ ಈ ಯಶೋಗಾಥೆ ಮಾದರಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುಡ್ಡಗಾಡು ಪ್ರದೇಶವಾಗಿರುವ ಆಲ್ದೂರು ಸಮೀಪದ ಹಂಗರವಳ್ಳಿಯು ಫರ್ಲಾಂಗಿಗೊಂದು ಮನೆಗಳಿರುವ ಕುಗ್ರಾಮ. ಈ ಊರಿನಲ್ಲಿ 75 ವರ್ಷಗಳ ಹಿಂದೆ ಮರಳ ಮೇಲೆ ಅಕ್ಷರ ತಿದ್ದಿಸುತ್ತಿದ್ದ ‘ಕೂಲಿ ಮಠ’ದಿಂದ ಆರಂಭವಾದ ಸರ್ಕಾರಿ ಕನ್ನಡ ಶಾಲೆಯು ಒಂದು ಹಂತದಲ್ಲಿ 250ಕ್ಕೂ ಹೆಚ್ಚು ಮಕ್ಕಳಿಂದ ತುಂಬಿತ್ತು. ಆದರೆ, ಪೋಷಕರ ಇಂಗ್ಲಿಷ್‌ ಮೋಹ, ಖಾಸಗಿ ಶಾಲೆಗಳು, ಬೋರ್ಡಿಂಗ್‌ ಶಾಲೆಗಳತ್ತ ಒಲವು, ಹಳ್ಳಿಗರ ವಲಸೆ, ಕನ್ನಡ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಇಲ್ಲವೆನ್ನುವ ಆರೋಪ, ಮೂಲಸೌಕರ್ಯ ಕೊರತೆಗಳ ನಡುವೆ 2002–2003ರಿಂದ ಮಕ್ಕಳ ದಾಖಲಾತಿ ಕ್ಷೀಣಿಸಲಾರಂಭಿಸಿತ್ತು. ಇದು ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಹೋಗಿತ್ತು. 2009ರ ವೇಳೆಗೆ ಏಕಾಏಕಿ ಮಕ್ಕಳ ಸಂಖ್ಯೆ 9ಕ್ಕೆ ಕುಸಿಯಿತು. ಪರಿಣಾಮ ‘ಹಂಗರವಳ್ಳಿ ಕನ್ನಡ ಶಾಲೆಯು ಆಲ್ದೂರಿನಲ್ಲಿರುವ ಸರ್ಕಾರಿ ಶಾಲೆ ಜತೆಗೆ ವಿಲೀನವಾಗಲಿದೆ’ ಎಂಬ ನೋಟಿಸ್‌ ಶಿಕ್ಷಣ ಇಲಾಖೆಯಿಂದ ಶಿಕ್ಷಕರಿಗೆ ಬಂತು. ಹತ್ತು ಕಿ.ಮೀ. ದೂರದಲ್ಲಿರುವ ಆಲ್ದೂರು ಶಾಲೆಗೆ ಹೋಗಿ ವರದಿ ಮಾಡಿಕೊಳ್ಳಲು ಶಿಕ್ಷಕರಿಗೆ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು. ಶಾಲೆಯ ಕನ್ನಡ ಶಿಕ್ಷಕ ಮಂಜುನಾಥ್‌, ಅಂದಿನ ಎಸ್‌ಡಿಎಂಸಿ ಅಧ್ಯಕ್ಷ ಶೇಖರ್‌, ಊರಿನ ಶಾಲೆ ಮುಚ್ಚಿ ಹೋದರೆ ಏನೆಲ್ಲ ಪಲ್ಲಟಗಳು ಆಗಲಿವೆ ಎನ್ನುವುದನ್ನು ಗ್ರಾಮಸ್ಥರು ಮತ್ತು ಸುತ್ತಲಿನ ಹಳ್ಳಿಗಳ ಶಿಕ್ಷಣ ಪ್ರೇಮಿಗಳಿಗೆ ಮನವರಿಕೆ ಮಾಡಿಕೊಟ್ಟರು. ಆಗ ಸ್ಥಳೀಯರು, ಸಮಾನ ಮನಸ್ಕರು, ಕೆಲವು ಪೋಷಕರು ಒಟ್ಟಿಗೆ ಸೇರಿ ಶಾಲೆಯನ್ನು ಉಳಿಸಿಕೊಳ್ಳಲು ಇರುವ ದಾರಿಗಳ ಹುಡುಕಾಟಕ್ಕೆ ಇಳಿದರು.

ಮೊದಲಿಗೆ; ಶಾಲೆ ಮುಚ್ಚುವ ಸ್ಥಿತಿಗೆ ಬರಲು ಕಾರಣಗಳೇನೆಂದು ಪಟ್ಟಿ ಮಾಡಿದಾಗ...ಶಾಲೆಗೆ ಬರುವ ಮಕ್ಕಳಿಗೆ ವಾಹನ ವ್ಯವಸ್ಥೆ ಇಲ್ಲ, ಇಂಗ್ಲಿಷ್‌ ಶಿಕ್ಷಣ ಇಲ್ಲ...ಎನ್ನುವ ಕೊರಗು ನೀಗಿಸಲು ಸಜ್ಜಾದರು. ಮಕ್ಕಳು ಶಾಲೆ ಬಿಡದಂತೆ ಉಳಿಸಿಕೊಳ್ಳಲು ಮತ್ತು ಪ್ರವೇಶಾತಿ ಹೆಚ್ಚಿಸಲು ಎಲ್‌ಕೆಜಿ, ಯುಕೆಜಿ ಆರಂಭಿಸಿದರು. ಜತೆಗೆ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲು ಸಂಕಲ್ಪ ಮಾಡಿದರು.

ADVERTISEMENT

ಶಾಲೆ ಉಳಿಸುವ ಸಲುವಾಗಿಯೇ ಗ್ರಾಮದೇವತೆ ಉದ್ದಂಡೇಶ್ವರನ ಹೆಸರಿನಲ್ಲಿ ‘ಶ್ರೀ ಉದ್ದಂಡೇಶ್ವರ ಶಿಕ್ಷಣ ಸೇವಾ ಟ್ರಸ್ಟ್‌’ ಸ್ಥಾಪಿಸಿದರು. ಇದರ ಪದಾಧಿಕಾರಿಗಳೆಲ್ಲರೂ ತಲಾ ₹10 ಸಾವಿರ ಚಂದಾ ಹಾಕಿ ಶಾಲೆಯ ಕೊರತೆಗಳನ್ನು ನೀಗಿಸುವ ಕೆಲಸ ಆರಂಭಿಸಿದರು. ಟ್ರಸ್ಟ್‌ನ ಪದಾಧಿಕಾರಿಗಳು ಸುತ್ತಮುತ್ತಲ ಗ್ರಾಮಗಳಲ್ಲಿ ದಾನಿಗಳಿಂದ ದೇಣಿಗೆ ಸಂಗ್ರಹಿಸಿದರು.

ಮಾದರಿ ಶಾಲೆಯ ರೂಪುರೇಷೆ ಸಿದ್ಧಪಡಿಸುವುದು, ಶಾಲೆಗೆ ದ್ವಿಭಾಷಾ ಬೋಧನೆಗೆ ಅನುಮತಿ ಪಡೆಯುವುದು, ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನ ತರುವುದು, ಇದರ ಜತೆಗೆ ಸರ್ಕಾರದ ಕಡೆಯಿಂದ ಏನೇನು ಕೆಲಸಗಳು ಆಗಬೇಕಿತ್ತೋ ಅವುಗಳನ್ನು ತಮ್ಮ ಗ್ರಾಮದವರೇ ಆದ ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಆಪ್ತ ಕಾರ್ಯದರ್ಶಿ ಎಚ್‌.ಜಿ. ಪ್ರಭಾಕರ್‌ ಅವರ ಹೆಗಲಿಗೆ ಹಾಕಿದರು.‌

ಹಂಗರವಳ್ಳಿ ಶಾಲೆಯ ಸುಸಜ್ಜಿತ ಪೀಠೋಪಕರಣಗಳಿರುವ ಕೊಠಡಿಯಲ್ಲಿ ಕುಳಿತ ಮಕ್ಕಳು

ಶಾಲೆಯಲ್ಲಿ ದ್ವಿಭಾಷಾ ಮಾಧ್ಯಮ ಬೋಧನೆಗೆ ಅನುಮತಿಯೂ ಸಿಕ್ಕಿತು. ಕಾನ್ವೆಂಟ್ ಕನಸು ಕಾಣುತ್ತಿದ್ದ ಪೋಷಕರು ಈಗ ಈ ಶಾಲೆಗೆ ಮಕ್ಕಳನ್ನು ದಾಖಲಿಸಲು ಪೈಪೋಟಿಗೆ ಇಳಿದಿದ್ದಾರೆ. ಈಗ ಶಾಲೆಯಲ್ಲಿ ಎಲ್‌ಕೆಜಿಯಿಂದ 7ನೇ ತರಗತಿಯವರೆಗೆ 330 ಮಕ್ಕಳು ಕಲಿಯುತ್ತಿದ್ದಾರೆ. 25 ಮಕ್ಕಳಿಗೆ ಒಬ್ಬ ಶಿಕ್ಷಕರಂತೆ ಇಂಗ್ಲಿಷ್‌ ಬೋಧನೆಗೆ ಐವರು ಶಿಕ್ಷಕರನ್ನು ಟ್ರಸ್ಟ್‌ ನೇಮಿಸಿದೆ. ಆ ಶಿಕ್ಷಕರಿಗೆ ಅತಿಥಿ ಶಿಕ್ಷಕರ ವೇತನದಿಂದ ಹಾಗೂ ಟ್ರಸ್ಟ್‌ನಿಂದಲೇ ವೇತನ ನೀಡಲಾಗುತ್ತಿದೆ. ಶಾಲೆಯಲ್ಲಿ ಒಟ್ಟು ಶಿಕ್ಷಕರ ಸಂಖ್ಯೆ 10ಕ್ಕೇರಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಒಬ್ಬರು ಅತಿಥಿ ಶಿಕ್ಷಕರನ್ನು ಒದಗಿಸಿದೆ.

ಸರ್ಕಾರ‌ ಮಕ್ಕಳಿಗೆ ಕೊಡುವ ಸೌಲಭ್ಯಗಳ ಜತೆಗೆ ಟ್ರಸ್ಟ್‌ ಕಡೆಯಿಂದಲೂ ಒಂದೊಂದು ಜತೆ ಸಮವಸ್ತ್ರ, ಶೂ, ಸಾಕ್ಸ್‌, ಟ್ರ್ಯಾಕ್‌ ಶೂಟ್‌, ನೋಟ್ ಬುಕ್ಸ್ ಕೊಡಲಾಗುತ್ತಿದೆ. ವರ್ಷಕ್ಕೊಮ್ಮೆ ಉಚಿತವಾಗಿ ಪ್ರವಾಸಕ್ಕೆ ಕರೆದೊಯ್ಯಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟವನ್ನು ಎಸ್‌ಡಿಎಂಸಿ ಮತ್ತು ಟ್ರಸ್ಟ್‌ ನಿರ್ವಹಿಸುತ್ತಿವೆ.

ಡೊನೇಷನ್‌ ಕೊಟ್ಟು ಕಾನ್ವೆಂಟ್‌ನಲ್ಲಿ ಓದಿಸುತ್ತಿದ್ದ ಪೋಷಕರು ತಮ್ಮ ಮಕ್ಕಳನ್ನು ಅಲ್ಲಿಂದ ಬಿಡಿಸಿ, ಈ ಶಾಲೆಗೆ ಸೇರಿಸುತ್ತಿದ್ದಾರೆ. ಶಾಲೆಗೆ ಪುನಃಶ್ಚೇತನ ಸಿಕ್ಕಿದ್ದೇ ತಡ ಹತ್ತಿರದಲ್ಲಿದ್ದ ಎರಡು ಕಾನ್ವೆಂಟ್‌ಗಳಿಗೆ ಬೀಗ ಬಿದ್ದಿದೆ! ಹಂಗರವಳ್ಳಿಯಷ್ಟೇ ಅಲ್ಲ, ಅಕ್ಕಪಕ್ಕದ ಹಳ್ಳಿಗಳು ಅಷ್ಟೇ ಏಕೆ, ಹೋಬಳಿ ಕೇಂದ್ರ ಆಲ್ದೂರಿನಿಂದಲೂ ಮಕ್ಕಳು ಈ ಶಾಲೆಗೆ ಬರಲಾರಂಭಿಸಿದ್ದಾರೆ. 

ಇಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಲ್ಲಿ ಹೆಚ್ಚಿನವರು ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗದವರು.

ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡವನ್ನು ನಿರ್ಮಿಸಲು ಮುಂದಾದಾಗ, ತರಗತಿ ನಡೆಸುವುದು ಎಲ್ಲಿ ಎನ್ನುವ ತಲೆನೋವು ಶುರುವಾಯಿತು. ಆಗ ಗ್ರಾಮದ ಗಿರಿಜಮ್ಮ ಮತ್ತು ಗೋಪಾಲಗೌಡ ದಂಪತಿ ತಮ್ಮ ವಾಸದ ಮನೆಯನ್ನೇ ಶಾಲೆ ನಡೆಸಲು ತಾತ್ಕಾಲಿಕವಾಗಿ ಬಿಟ್ಟುಕೊಟ್ಟರು. ಮೂರು ವರ್ಷ ಅದೇ ಮನೆಯಲ್ಲಿ ತರಗತಿಗಳು ನಡೆದವು. ಈಗ ಖಾಸಗಿ ಹೈಟೆಕ್‌ ಶಾಲೆಗಳನ್ನು ನಾಚಿಸುವಂತೆ ಈ ಸರ್ಕಾರಿ ಶಾಲೆಯ ಸುಸಜ್ಜಿತ ಮೂರು ಅಂತಸ್ತಿನ ಕಟ್ಟಡ ಸುಮಾರು ₹4 ಕೋಟಿ ವೆಚ್ಚದಲ್ಲಿ ಸಿದ್ಧವಾಗಿದೆ.  

ವಿಶಾಲ ಬೋಧನಾ ಕೊಠಡಿಗಳು, ಗ್ರಂಥಾಲಯ, ಕಂಪ್ಯೂಟರ್‌ ಲ್ಯಾಬ್‌, ಸಿಬ್ಬಂದಿ ಕೊಠಡಿ, ಅಡುಗೆ ಕೋಣೆ, ಭೋಜನಾಲಯ, ಕ್ರೀಡಾ ಸಾಮಗ್ರಿಗಳ ಕೊಠಡಿ ...ಹೀಗೆ ಎಲ್ಲದಕ್ಕೂ ಪ್ರತ್ಯೇಕ ಕೊಠಡಿಗಳಿವೆ. 500 ಆಸನ ಸಾಮರ್ಥ್ಯದ ಸಭಾಂಗಣವೂ ಇದೆ! ಸುಸಜ್ಜಿತ ಶೌಚಾಲಯಗಳಿವೆ.  ಶಾಲೆಯ ಪಕ್ಕದಲ್ಲಿ ಮೂರು ಗುಂಟೆ ಜಾಗ ಖರೀದಿಸಿ, ಆಟದ ಮೈದಾನ ನಿರ್ಮಿಸಲಾಗಿದೆ. ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೂ ಯೋಜನೆ ಸಿದ್ದವಾಗಿದ್ದು, ಇದಕ್ಕಾಗಿ ಕಂದಾಯ ಇಲಾಖೆ 5 ಎಕರೆ ಭೂಮಿಯನ್ನು ಗುರುತು ಮಾಡಿದೆ.

ಬಸ್‌ಗಳು ಬಂದವು!: ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಕರೆತಂದು, ಮನೆ ತಲುಪಿಸಲು ಹಂಗರವಳ್ಳಿಯ ಗೋಪಾಲಗೌಡ ಒಂದು ಬಸ್‌  ಕೊಟ್ಟರು. ಇದು ಸಾಕಾಗದೇ ಇದ್ದಾಗ ವಿಧಾನ ಪರಿಷತ್‌ ಉಪಸಭಾಪತಿ ಎಂ.ಕೆ. ಪ್ರಾಣೇಶ್‌ ಅವರಿಂದಲೂ ತಮ್ಮ ಅನುದಾನದಲ್ಲಿ ಒಂದು ಬಸ್‌ ಖರೀದಿಸಿ ಶಾಲೆಗೆ ನೀಡುವಂತೆ ಪ್ರೇರೇಪಿಸಿದರು. ಸದ್ಯ, ಶಾಲೆಯಲ್ಲಿ ಎರಡು ಬಸ್‌ಗಳಿದ್ದು, ಬಸ್‌ ಚಾಲಕ, ನಿರ್ವಾಹಕರ ಸಂಬಳ ಮತ್ತು ಡೀಸೆಲ್‌ ವೆಚ್ಚವನ್ನು ಮಾತ್ರ ಮಕ್ಕಳ ಪೋಷಕರು ಪ್ರತಿ ತಿಂಗಳು ಹಂಚಿಕೊಳ್ಳುತ್ತಿದ್ದಾರೆ.

ಇಷ್ಟೆಲ್ಲ ಮಾಡಿದ ಮೇಲೆ ಉತ್ತಮ ಶೈಕ್ಷಣಿಕ ವಾತಾವರಣದಲ್ಲಿ ಉತ್ತಮ ಫಲಿತಾಂಶ ಬರಬೇಕಲ್ಲವೇ? ಅದಕ್ಕಾಗಿ ಟ್ರಸ್ಟ್‌ ಪದಾಧಿಕಾರಿಗಳು ಎರಡು ವಾರಗಳಿಗೊಮ್ಮೆ ಶಾಲೆಯ ಪ್ರಗತಿ ಮತ್ತು ಚಟುವಟಿಕೆಗಳ ಪರಾಮರ್ಶೆ ನಡೆಸುತ್ತಾರೆ. ‘ನಮ್ಮ  ಶಾಲೆಯ ಮಕ್ಕಳು ಇಂಗ್ಲಿಷ್‌ ಅನ್ನು ಸರಾಗವಾಗಿ ಮಾತನಾಡುತ್ತವೆ. ಇಲ್ಲಿ ಕಲಿತವರು ಯುಪಿಎಸ್‌ಸಿ, ಕೆಪಿಎಸ್‌ಸಿ, ನೀಟ್‌, ಸಿಇಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡುವ ಸಾಮರ್ಥ್ಯಕ್ಕೇರಬೇಕು, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ನಿಲ್ಲಬೇಕು ಎನ್ನುವ ಕನಸು ನಮ್ಮದು’ ಎನ್ನುತ್ತಾರೆ ಟ್ರಸ್ಟಿನ ಅಧ್ಯಕ್ಷ ಎಚ್‌.ಜಿ.ಪ್ರದೀಶ್.

‘ಅತಿಥಿ ಶಿಕ್ಷಕರೊಂದಿಗೆ ಕಾಯಂ ಶಿಕ್ಷಕರು ಹೊಂದಾಣಿಕೆಯಿಂದ ಶ್ರಮವಹಿಸಿ ಮಕ್ಕಳ ಕಲಿಕೆಗೆ ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ. ನಮ್ಮ ಶಾಲೆಯನ್ನು ಜಿಲ್ಲೆಯಲ್ಲಿಯೇ ಮಾದರಿಯನ್ನಾಗಿ ಮಾಡಬೇಕೆಂಬ ಕನಸಿದೆ’ ಎಂದು ಪ್ರಭಾರಿ ಮುಖ್ಯ ಶಿಕ್ಷಕಿ ರಾಜೇಶ್ವರಿ ಹೇಳಿದರು.

‘ಆರಂಭದಲ್ಲಿ ಒಂದೊಂದು ತರಗತಿಗೆ 30 ಮಕ್ಕಳ ಸಂಖ್ಯೆಗೆ ಮುಟ್ಟಿಸುವ ಗುರಿ ಇತ್ತು. ಈಗ ಅದನ್ನು ಮೀರಿ ಹೋಗುತ್ತಿದೆ. ಇನ್ನು ಎರಡು ವರ್ಷಗಳಲ್ಲಿ 8 ರಿಂದ 10ನೇ ತರಗತಿಯವರೆಗೆ ಶುರುವಾಗಲಿದೆ. ಗ್ರಾಮಸ್ಥರು, ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತದಿಂದ ನಮಗೆ ಸಂಪೂರ್ಣ ಸಹಕಾರ ಸಿಗುತ್ತಿದೆ’ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ರುದ್ರೇಗೌಡ. 

ಈ ಶಾಲೆಯ ಹಳೆಯ ವಿದ್ಯಾರ್ಥಿ ಎಂಬ ಹೆಮ್ಮೆ ನನ್ನದು. ನಾನು ಕಲಿತ ಶಾಲೆಯ ಬಾಗಿಲು ಮುಚ್ಚುತ್ತಿದೆ ಎಂದಾಗ ಸುಮ್ಮನೆ ಕೂರುವುದಾದರೂ ಹೇಗೆ? ಹುಟ್ಟಿದ ಊರು ಕಲಿತ ಶಾಲೆ ಬೆಳೆಸಿದ ಸಮಾಜಕ್ಕೆ ವಾಪಸ್‌ ಏನು ಕೊಟ್ಟೆವು ಎನ್ನುವ ಪ್ರಶ್ನೆ ಕೇಳಿಕೊಂಡಾಗ ಆತ್ಮತೃಪ್ತಿ ಸಿಗಬೇಕಲ್ಲ? ಅದಕ್ಕಾಗಿ ನಮ್ಮೂರ ಕನ್ನಡ ಶಾಲೆ ಉಳಿಸುವ ಕೆಲಸಕ್ಕೆ ಒಂದಿಷ್ಟು ಅಳಿಲು ಸೇವೆ ಮಾಡಿದ್ದೇನೆ
-ಎಚ್‌.ಜಿ. ಪ್ರಭಾಕರ್‌ ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಅವರ ಆಪ್ತ ಕಾರ್ಯದರ್ಶಿ
ಹಂಗರವಳ್ಳಿ ಶಾಲೆಯ ಭೋಜನಾಲಯದಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಸಾಲಾಗಿ ಕುಳಿತಿರುವ ಮಕ್ಕಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.