ADVERTISEMENT

ಆದದ್ದೆಲ್ಲ ಒಳಿತೇ ಆಯಿತು!

ಬಿಂಡಿಗನವಿಲೆ ಭಗವಾನ್
Published 28 ಜೂನ್ 2019, 19:30 IST
Last Updated 28 ಜೂನ್ 2019, 19:30 IST
   

ಸಂತ ತುಕಾರಾಂ ಹದಿನೇಳನೇ ಶತಮಾನದಲ್ಲಿದ್ದ ದಾರ್ಶನಿಕ, ತತ್ವಜ್ಞ. ಕೃಷ್ಣನ ಪರಮ ಭಕ್ತರಾಗಿದ್ದ ಅವರು ನೀತಿಪ್ರದ ಹಾಡು, ಕೀರ್ತನೆಗಳನ್ನು - ಅಭಂಗಗಳನ್ನು – ರಚಿಸಿ ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಭಜನೆಗಲೇ ಮೂಲಕ ಎಲ್ಲರನ್ನೂ ಒಗ್ಗೂಡಿಸಿ ಸಮಪಾಲು, ಸಮಬಾಳು ತತ್ವವನ್ನು ಸಾರುತ್ತಿದ್ದ ಅವರು ಅಪ್ರತಿಮ ಸಮಾಜಸುಧಾರಕರೂ ಹೌದು.ಸಂತ ತುಕಾರಾಂ ಅವರನ್ನು ಕುರಿತ ಒಂದು ಕಥೆ ಬಹಳ ಪ್ರಸಿದ್ಧವಾಗಿದೆ.

ಒಂದು ದಿನ ತುಕಾರಂ ಬೀದಿಯಲ್ಲಿ ಕೀರ್ತನೆ ಹಾಡುತ್ತಾ ಸಾಗಿದ್ದರು. ಕೆಲವು ಕಿಡಿಗೇಡಿ ಹುಡುಗರು ‘ ಅಣ್ಣಾವ್ರೇ, ಹೇಗೂ ಹೋಳಿ ಹಬ್ಬ ಹತ್ತಿರವಾಗುತ್ತಿದೆ. ನೀವು ಒಂದೆರಡು ಗೇಲಿಹಾಡುಗಳನ್ನು ಹಾಡಬಹುದಲ್ಲ’ ಎಂದು ಕಿಚಾಯಿಸಿದರು. ಸಾಮಾನ್ಯವಾಗಿ ಕಾಮಣ್ಣನ ಹಬ್ಬದ ಸಂದರ್ಭದಲ್ಲಿ ಅಶ್ಲೀಲಹಾಡುಗಳನ್ನು ಹಾಡುವುದು ರೂಢಿ. ಅದಕ್ಕೆ ತುಕಾರಾಂ ‘ಎಲ್ಲಾದ್ರು ಉಂಟೇನ್ರಪ್ಪ, ಛೇ! ನಾನು ಅಂಥ ಹಾಡುಗಳನ್ನು ಹಾಡುವುದಿಲ್ಲ’ ಎಂದು ಖಡಕ್ಕಾಗಿ ಪ್ರತಿಕ್ರಿಯಿಸಿದರು. ಹುಡುಗರು ಬಿಡಲಿಲ್ಲ. ‘ನೀವು ಹಾಡಲೇಬೇಕು’ ಎಂದು ಒತ್ತಾಯಿಸಿದರು. ತುಕಾರಾಂ ಮಾತ್ರ ಹಾಡಲು ಒಪ್ಪಲೇ ಇಲ್ಲ. ಇನ್ನು ಒತ್ತಾಯಿಸುವುದರಲ್ಲಿ ಪ್ರಯೋಜನವಿಲ್ಲ ಎಂದು ಹುಡುಗರು ನಿಶ್ಚಯಿಸಿದರು. ತುಕಾರಾಂ ಅವರನ್ನು ಅಡ್ಡಗಟ್ಟಿ ಅವರ ತಲೆಗೂದಲನ್ನು ಕತ್ತರಿಸಿದರು. ಬೋಳು ತಲೆಗೆ ಸುಣ್ಣ ಬಳಿದರು. ಅವರ ಕೊರಳಿಗೆ ತರಕಾರಿ ಹಾರವನ್ನು ಹಾಕಿದರು. ನಂತರ ಬೀದಿಯಲ್ಲಿ ಮೆರವಣಿಗೆಯನ್ನೂ ಮಾಡಿದರು. ಆದರೆ ತುಕಾರಾಂ ಮಾತ್ರ ಸಂಯಮದಿಂದಲೇ ಎಲ್ಲವನ್ನೂ ನಗುತ್ತಲೇ ತಾಳಿಕೊಂಡರು.

ಮನೆಗೆ ಈ ಅವಸ್ಥೆಯಲ್ಲಿ ಮರಳಿದ ತುಕಾರಾಂರನ್ನು ಕಂಡ ಅವರ ಪತ್ನಿ ಜೀಜಾ ಬಾಯ್ ಕಣ್ಣೀರು ಹಾಕಿದರು. ಆಕೆಯನ್ನು ಸಂತೈಸುತ್ತ ತುಕಾರಾಂ ‘ಜೀಜಾ, ನೀನು ಇಷ್ಟೊಂದು ವ್ಯಸನಪಡುವ ಅಗತ್ಯವೇನಿದೆ? ಹೇಗೂ ನನ್ನ ತಲೆಗೂದಲು ಉದ್ದ ಬೆಳೆದಿತ್ತು. ನಾಳೆಯೋ ನಾಳಿದ್ದೋ ನಾನೇ ಕತ್ತರಿಸಬೇಕೆಂದಿದ್ದೆ. ಸುಣ್ಣ ಕ್ರಿಮಿನಾಶಕ. ಬಳಿದಿದ್ದರಿಂದ ತಲೆಯಲ್ಲಿನ ಕ್ರಿಮಿ, ಕೀಟಗಳು ನಿರ್ಮೂಲವಾಗುತ್ತವೆ. ಇನ್ನು ಕೊರಳಿಗೆ ತರಕಾರಿಮಾಲೆಯನ್ನು ಹಾಕಿದ್ದರಿಂದ ಎರಡು–ಮೂರು ದಿನಗಳು ಮನೆಗೆ ತರಕಾರಿ ತರುವುದು ತಪ್ಪಿತು. ಹ್ಞಾಂ! ಹೇಗೂ ನನ್ನ ಮದುವೆಯಲ್ಲಿ ವರಪೂಜೆಯ ದಿನ ಮೆರವಣಿಗೆಯಾಗಲಿಲ್ಲ. ಈಗ ಆ ಕೊರಗೂ ಇಲ್ಲ! ಆ ಹುಡುಗರು ನನಗೆ ಯಾವುದೇ ಉಪದ್ರವ ನೀಡಿಲ್ಲ. ಒಳ್ಳೆಯದನ್ನೇ ಮಾಡಿದ್ದಾರೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.